ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಪಠ್ಯ: ಆಗಬೇಕು ವಿದ್ಯಾರ್ಥಿ ಸ್ನೇಹಿ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಕಲಿಯಬೇಕಾಗಿರುವ ಆರು ವಿಷಯಗಳಲ್ಲಿ ಬಹುತೇಕರಿಗೆ ಅತ್ಯಂತ ಕಠಿಣ ಎನಿಸುವುದೇ ಗಣಿತ. ಅದು ಹೆಚ್ಚಿನವರಿಗೆ ಕಬ್ಬಿಣದ ಕಡಲೆ-. ತಿನ್ನಲು ಯತ್ನಿಸಿದರೆ ಹಲ್ಲೇ ಮುರಿಯುತ್ತದೆ! ಹೀಗಾಗಿ ಗಣಿತವನ್ನು ವಿದ್ಯಾರ್ಥಿಗಳ ಪ್ರಥಮ ವೈರಿ ಎನ್ನಲಾಗುತ್ತದೆ! ಪ್ರತಿ ವರ್ಷ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಫೇಲಾಗುವ ವಿಷಯವೆಂದರೆ ಗಣಿತ.

ಈ ಕಾರಣದಿಂದಾಗಿ ಗಣಿತ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡಲು ವಿವಿಧೋಪಾಯಗಳನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳು ಗಣಿತದಲ್ಲಿ ಕನಿಷ್ಠ ತೇರ್ಗಡೆಯ ಅಂಕಗಳನ್ನು ಪಡೆಯಲು ಏನು ಮಾಡಬಹುದು ಎಂಬ ವಿಷಯವಾಗಿ ಶಿಕ್ಷಕರಿಗೆ ಮಾರ್ಗದರ್ಶಿ ತರಬೇತಿ ನೀಡಲಾಗುತ್ತದೆ. 2004ಕ್ಕೆ ಮೊದಲಿನ 10ನೇ ತರಗತಿಯ ಗಣಿತದ ಪಠ್ಯ ಸ್ವಲ್ಪ ಕಠಿಣವಾಗಿಯೇ ಇತ್ತು. ಇದನ್ನು ಮನಗಂಡು, ತೇರ್ಗಡೆಯ ಪ್ರಮಾಣವನ್ನು ಹೆಚ್ಚಿಸಲು 2004ರ ನಂತರದ ಗಣಿತದ ಪಠ್ಯವನ್ನು ಮತ್ತಷ್ಟು ಸರಳಗೊಳಿಸಲಾಯಿತು.

ರೇಖಾ ಗಣಿತದಲ್ಲಿದ್ದ 15 ಪ್ರಮೇಯಗಳನ್ನು ಕಡಿತಗೊಳಿಸಿ ಕೇವಲ 5 ಪ್ರಮೇಯಗಳನ್ನಷ್ಟೇ ಉಳಿಸಿಕೊಳ್ಳಲಾಯಿತು. ನಿಬಂಧಿತ ನಿತ್ಯ ಸಮೀಕರಣದಲ್ಲಿ ಕೇವಲ ಎರಡು ನಿಬಂಧನೆಗಳು ಮಾತ್ರ ಉಳಿದವು. ಇದರ ಉದ್ದೇಶ ಗ್ರಾಮೀಣ ಭಾಗದ ಕನಿಷ್ಠ ಕಲಿಕಾ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳ ಹಿತ ಕಾಯುವುದಾಗಿತ್ತು. ಈಗ, ಕಳೆದ ವರ್ಷವೇ ನಮ್ಮ ರಾಜ್ಯದಲ್ಲಿ 8ನೇ ತರಗತಿಯ ಪಠ್ಯಗಳು ಬದಲಾಗಿವೆ.

ಈ ವರ್ಷ 9ನೇ ತರಗತಿಯ ಪಠ್ಯವೂ ಬದಲಾಗಿದೆ. ಈಗಿನ ಪಠ್ಯಕ್ರಮದಲ್ಲಿ, 2005ರಲ್ಲಿ ಅಂಗೀಕಾರಗೊಂಡ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ನ್ಯಾಷನಲ್ ಕರಿಕ್ಯುಲಮ್ ಫ್ರೇಮ್‌ವರ್ಕ್) ಅನುಸರಿಸಲಾಗಿದೆ. ಕೇಂದ್ರೀಯ ಪಠ್ಯಕ್ರಮ ಜಾರಿಗೆ ಬಂದಿದೆ. ಈ ಬದಲಾವಣೆಯ ಹಿಂದಿನ ಉದ್ದೇಶ, ಮುಂದೆ ಜಾರಿಗೆ ಬರಲಿರುವ ರಾಷ್ಟ್ರ ಮಟ್ಟದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಹಿತ ಕಾಪಾಡುವುದು. ಕೆಲವೇ ವರ್ಷಗಳ ಹಿಂದೆ ಇದ್ದ ಉದ್ದೇಶಕ್ಕೆ ಇದು ವ್ಯತಿರಿಕ್ತವಾಗಿದೆ.

ಈಗಿನ ಪಠ್ಯವು ಹಿಂದಿನ ಪಠ್ಯಕ್ಕಿಂತ ಹೆಚ್ಚು ವಿಸ್ತಾರವೂ ಗಹನವೂ ಆಗಿದೆ. ಗಣಿತ ಪಠ್ಯದ ಪುಟಗಳ ಸಂಖ್ಯೆಯೇ ಸಾಕಷ್ಟು ಹೆಚ್ಚಾಗಿದೆ. ಇದು ಸಾಧಾರಣ ವಿದ್ಯಾರ್ಥಿಗಳಿಗೆ ಕಠಿಣವಾಗಿರುವುದಷ್ಟೇ ಅಲ್ಲ, ಶಿಕ್ಷಕರಿಗೂ ಅದರ ಬಿಸಿ ಮುಟ್ಟಿದೆ. ಕನಿಷ್ಠ ಕಲಿಕಾ ಸಾಮರ್ಥ್ಯವುಳ್ಳ ಗ್ರಾಮೀಣ ವಿದ್ಯಾರ್ಥಿಗಳ ಹಿತಕ್ಕೆ ಇದು ಮಾರಕವಾಗಿದೆ. ಶಿಕ್ಷಕರಿಗೇ ಅರ್ಥವಾಗ­ದ್ದನ್ನು ಅವರು ವಿದ್ಯಾರ್ಥಿ­ಗಳಿಗೆ ಕಲಿಸುವುದು ಹೇಗೆ? ಗ್ರಾಮೀಣ ಭಾಗದ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳ ಹಾಗೂ ಪುಸ್ತಕಗಳ ನೆರವೂ ತಕ್ಷಣ ಲಭಿಸುವುದಿಲ್ಲ. ಈ ಪಠ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಲೇಬೇಕಾದ ಶಿಕ್ಷಕರಿಗೆ `ಇದನ್ನು ಇನ್ನೂ ಸರಳಗೊಳಿಸಬಹು­ದಾ­ಗಿತ್ತು' ಎಂಬ ಅಂಶ ಪ್ರಮುಖವಾಗಿ ಗೋಚರಿಸುತ್ತದೆ.

ಶಿಕ್ಷಕರಿಗೇ ಹೆಣಗಾಟ
ಇಂಗ್ಲಿಷ್ ಮಾಧ್ಯಮವೂ ಸೇರಿದಂತೆ ಈಗ ಬದಲಾಗಿರುವ 8 ಮತ್ತು 9ನೇ ತರಗತಿಗಳ ಗಣಿತದ ಪಠ್ಯವು ವಿದ್ಯಾರ್ಥಿ ಹಾಗೂ ಶಿಕ್ಷಕ ಸ್ನೇಹಿ ಆಗದಿರುವುದು ವಿಷಾದನೀಯ. 8ನೇ ತರಗತಿಯ ರೇಖಾ ಗಣಿತದಲ್ಲಂತೂ ಸರಳತೆಯ ಸೂತ್ರವನ್ನು ತೀವ್ರವಾಗಿ ಅಲಕ್ಷಿಸಲಾಗಿದೆ. ಪಠ್ಯದಲ್ಲಿ ಕೊಟ್ಟಿರುವ ಸಾಧನೆಯನ್ನು ಅನುಸರಿಸಿ, ಅರ್ಥ ಮಾಡಿಕೊಳ್ಳಲು ಶಿಕ್ಷಕರೇ ಹೆಣಗಾಡಬೇಕಾಗುತ್ತದೆ! ಇದರಿಂದ, ಶಿಕ್ಷಕರು ಕೆಲವು ಭಾಗಗಳನ್ನು ಕಲಿಸುವ ತೊಂದರೆಯನ್ನೇ ತೆಗೆದುಕೊಳ್ಳದೆ ನಿರಾಳರಾಗಿದ್ದಾರೆ.

ಗೈಡುಗಳನ್ನು ಪ್ರಕಾಶಿಸುವ ಕೆಲವು ಖಾಸಗಿ ಪ್ರಕಾಶಕರು ಕಡಿಮೆ ಪುಟಗಳಲ್ಲಿ ಹೆಚ್ಚಿನ ವಿಷಯವನ್ನು ಅಗ್ಗದ ದರದಲ್ಲಿ ಕೊಡಲು ಒತ್ತೊತ್ತಾಗಿ ತುರುಕಿರುತ್ತಾರೆ. ಈಗಿನ ಪಠ್ಯಪುಸ್ತಕದ ಕೆಲವು ಭಾಗಗಳು ಅಂತಹ ಗೈಡನ್ನು ನೆನಪಿಸುತ್ತವೆ. ಪಠ್ಯಪುಸ್ತಕದಲ್ಲಿ ಬಿಡಿಸಿ ತೋರಿಸಿರುವ ಮಾದರಿ ಲೆಕ್ಕಗಳು ಅಭ್ಯಾಸದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಮಾದರಿ ಆಗಿರಬೇಕು. ಆದರೆ ಈ ಪಠ್ಯದಲ್ಲಿ ಕೆಲವು ಕಡೆ ಬಿಡಿಸಿರುವ ಮಾದರಿ ಲೆಕ್ಕಗಳಿಗೂ, ಅಭ್ಯಾಸದಲ್ಲಿ ನೀಡಿರುವ ಲೆಕ್ಕಗಳಿಗೂ ತಾಳಮೇಳವೇ ಇಲ್ಲ.

ಗಣಿತ ಒಂದು ವಿಶಿಷ್ಟವಾದ ಮುಖ್ಯ ವಿಷಯ. ಇದೊಂದು ವ್ಯವಸ್ಥಿತವಾದ ಜ್ಞಾನ. ಇಲ್ಲಿ ಅವ್ಯವಸ್ಥೆ, ಅಶಿಸ್ತಿಗೆ ಅವಕಾಶವಿಲ್ಲ. ಗಣಿತದ ಸಮಸ್ಯೆಗಳನ್ನು ಬಿಡಿಸಿದಾಗ ಕೇವಲ ಉತ್ತರ ಸರಿ ಇದ್ದರೆ ಸಾಲದು. ಅದನ್ನು ಕ್ರಮಬದ್ಧವಾಗಿಯೂ, ಅಚ್ಚುಕಟ್ಟಾಗಿಯೂ ಮಂಡಿಸಿರಬೇಕೆಂದು  ಅಪೇಕ್ಷಿಸಲಾಗುತ್ತದೆ.
ಬೇರೆಲ್ಲ ವಿಷಯಗಳಿಗಿಂತ ಅತಿ ಮುಖ್ಯವಾಗಿ ಮಂಡನೆಯ ಕಲೆ ಅವಶ್ಯವಾಗಿರುವುದು ಗಣಿತದಲ್ಲೇ.

ಆದ್ದರಿಂದಲೇ ಕೆಲವು ವರ್ಷಗಳ ಹಿಂದೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಒಂದು ಪುಸ್ತಕವನ್ನು ಪ್ರಕಟಿಸಿತು. ಅದರಲ್ಲಿ ರಾಜ್ಯಕ್ಕೆ ಪ್ರಥಮ 5 ರ‍್ಯಾಂಕ್  ಪಡೆದ, ಗಣಿತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಯಥಾವತ್ತಾಗಿ ಮುದ್ರಿಸಲಾಗಿತ್ತು. ಆ ಪುಸ್ತಕವನ್ನು ರಾಜ್ಯದ ಎಲ್ಲ ಶಾಲೆಗಳಿಗೂ ಕಳುಹಿಸಿ­ಕೊಡಲಾಗಿತ್ತು. ಗಣಿತದ ಉತ್ತರಗಳನ್ನು ಹೇಗೆ ಮಂಡಿಸಬೇಕು ಎಂಬುದನ್ನು ಎಲ್ಲ ವಿದ್ಯಾರ್ಥಿಗಳೂ ತಿಳಿಯಲಿ ಎಂಬುದೇ ಇದರ ಉದ್ದೇಶವಾಗಿತ್ತು.

ರೇಖಾ ಗಣಿತಕ್ಕಂತೂ ತನ್ನದೇ ವಿಶಿಷ್ಟ ಭಾಷೆ  ಹಾಗೂ ವಿನ್ಯಾಸ ಇರುತ್ತದೆ. ರೇಖಾ ಗಣಿತದ ಸಾಧನೆಗಳನ್ನು ಬರೆಯುವಾಗ ಉದ್ದಕ್ಕೆ ಗದ್ಯವನ್ನು ಬರೆದಂತೆ ಬರೆದುಕೊಂಡು ಹೋಗಲಾಗದು. ಒಂದೊಂದು ಅಂಶಕ್ಕೂ ಪ್ರತ್ಯೇಕ ಸಾಲಿರಬೇಕು. ಈಗಿನ ಪಠ್ಯದ ಕೆಲವು ಭಾಗಗಳಲ್ಲಿ ಈ ತತ್ವವನ್ನು ಅನುಸರಿಸಿಲ್ಲ. ಪಠ್ಯದಲ್ಲಿ ಬಿಡಿಸಿ ತೋರಿಸಿರುವ ಮಾದರಿ ಲೆಕ್ಕಗಳು ಪರಿಣತರು ಮಾಡಿ ಬಿಸಾಕಿದಂತೆ ಇರಬಾರದು. ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು, ಅವರಿಗೂ ಸುಲಭವಾಗಿ ಅರ್ಥವಾಗುವಂತೆ ಹಂತ ಹಂತವಾಗಿ ಬಿಡಿಸಿರಬೇಕು. ಯಾವುದೇ ಹಂತವನ್ನು `ಇದು ಹೇಗೆ ಬಂತು?' ಎಂದು ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳುವಂತೆ ಇರಬಾರದು. ಅದು ತನ್ನಷ್ಟಕ್ಕೆ ತಾನೇ ವಿವರಿಸುವಂತೆ ಇರಬೇಕು.

8, 9 ಮತ್ತು 10ನೇ ತರಗತಿಯ ಪ್ರತಿಯೊಂದರಲ್ಲೂ ತಲಾ ಸುಮಾರು 9 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳ ಕೈಸೇರುವ ಪಠ್ಯಗಳು ನಿಜವಾಗಿಯೂ ವಿದ್ಯಾರ್ಥಿ ಸ್ನೇಹಿ, ಮಾರ್ಗದರ್ಶಿ ಆಗಿರಬೇಕು. ಅದು ಅವರ ಶಿಕ್ಷಣ ನೌಕೆಯ `ಲೈಟ್ ಹೌಸ್'  ಆಗಬೇಕು. ಪಠ್ಯಪುಸ್ತಕವನ್ನು ಪ್ರವೇಶಿಸಿದರೆ `ಗೊಂದಲಪುರ'ದ ಒಳಹೊಕ್ಕಂತೆ ಅನಿಸಬಾರದು.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಸರ್ಕಾರ ಉಚಿತವಾಗಿಯೇ ಪಠ್ಯಪುಸ್ತಕಗಳನ್ನು ಪೂರೈಸುತ್ತದೆ. ಇದು ಸ್ತುತ್ಯರ್ಹ. ಆದರೆ  ಗೋ ದಾನದ ಲೆಕ್ಕಕ್ಕೆ ಸೇರಿದರೆ ಸಾಕು ಎಂದು ಗೊಡ್ಡು ದನವನ್ನು ದಾನ ಮಾಡಿದರೆ? ಪಠ್ಯಪುಸ್ತಕದ ಪುಟಗಳನ್ನು ಮಿತಿಗೊಳಿಸಲು ಯೋಚಿಸಿದರೆ ಅದು `ಪೈಸೆ ಉಳಿಸಲು ಹೋಗಿ ರೂಪಾಯಿ ಕಳೆದುಕೊಂಡಂತೆ' ಆಗುತ್ತದೆ. ಶಿಕ್ಷಣ ಇಲಾಖೆಯು ಶಿಕ್ಷಕರ ಮಾರ್ಗದರ್ಶಿ ತರಬೇತಿಗೆ ಮಾಡುವ ಖರ್ಚನ್ನು ಕಡಿಮೆ ಮಾಡಿ, ಪಠ್ಯಪುಸ್ತಕದ ಗುಣಮಟ್ಟವನ್ನು ಸುಧಾರಿಸಿದರೆ ಅದೇ ದೊಡ್ಡ ಸೇವೆಯಾಗುತ್ತದೆ.

ಮುಂದಿನ ವರ್ಷ 10ನೇ ತರಗತಿಯ ಪಠ್ಯಗಳು ಬದಲಾಗುತ್ತವೆ. 8 ಮತ್ತು 9ರ ಪಠ್ಯಗಳು ಪರಿಷ್ಕರಣಗೊಂಡು ಮರುಮುದ್ರಣ ಆಗಬಹುದು. ಆಗ ಮೇಲಿನ ಎಲ್ಲ ಸಂಗತಿಗಳನ್ನೂ ಶಿಕ್ಷಣ ಇಲಾಖೆ, ಪಠ್ಯಪುಸ್ತಕ ಸಮಿತಿ ಹಾಗೂ ಸರ್ಕಾರಗಳು ಗಮನಿಸಬೇಕು. ಇದಾಗದಿದ್ದರೆ ನಗರಗಳ ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ನಡುವಿನ ಕಂದಕ ಮತ್ತಷ್ಟು ಹಿಗ್ಗುವುದರಲ್ಲಿ ಸಂಶಯವಿಲ್ಲ.

ಸಾಮಾನ್ಯ ಶಿಕ್ಷಕರಿಗೆ ಅರ್ಥವಾಗುವ ಈ ಎಲ್ಲ ವಿಷಯಗಳು ಪರಿಣತರಿಗೆ ಏಕೆ ಅರ್ಥವಾಗುವುದಿಲ್ಲ? ನೂರಾರು ಶಿಕ್ಷಕರ ಇಂತಹ ತಳಮಳ ಹಾಗೂ ಗೊಂದಲಗಳನ್ನು ಕೂಡಲೇ ನಿವಾರಿಸಬೇಕು. ಅದಿಲ್ಲದೆ ಕಾಯಿಲೆಗೆ ಶೀಘ್ರ ಇಲಾಜು ಮಾಡದಿದ್ದರೆ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT