ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತಶಾಸ್ತ್ರ: ಬೆಂಗಳೂರಿನಲ್ಲಿ ಸಂಶೋಧನಾ ಘಟಕ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆನ್ವಯಿಕ ಗಣಿತಶಾಸ್ತ್ರ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಉದ್ದೇಶದಿಂದ ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಸಂಶೋಧನಾ ಸಂಸ್ಥೆಯೊಂದನ್ನು  ಸ್ಥಾಪಿಸಲಿದೆ.

ಈ ಸಂಸ್ಥೆಯ ಸ್ಥಾಪನೆ ಸಂಬಂಧ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಫ್ರಾನ್ಸ್‌ನ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಸಂಸ್ಥೆ (ಸಿಎನ್‌ಆರ್‌ಎಸ್) ಒಪ್ಪಂದಕ್ಕೆ ಸಹಿ ಹಾಕಿವೆ.

ಹೊಸ ಸಂಸ್ಥೆಯು ಬೆಂಗಳೂರಿನಲ್ಲಿ ಸ್ಥಾಪನೆಗೊಳ್ಳಲಿದ್ದು, ಈ ಯೋಜನೆಯ ನೇತೃತ್ವವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಹಿಸಿಕೊಂಡಿದೆ. ಯೋಜನೆಯ ಅನುಷ್ಠಾನಕ್ಕೆ ದೇಶದ ಇತರ ಐದು ಸಂಸ್ಥೆಗಳು ಐಐಎಸ್‌ಸಿನೊಂದಿಗೆ ಕೈ ಜೋಡಿಸಲಿವೆ. ಫ್ರಾನ್ಸ್‌ನಲ್ಲಿ ಟೌಲೌಸ್ ವಿಶ್ವವಿದ್ಯಾಲಯವು ಈ ಯೋಜನೆಯ ನೇತೃತ್ವ ವಹಿಸಿವೆ.

ಗಣಿತಶಾಸ್ತ್ರ ಹೊರತಾಗಿ, ಇಮ್ಯುನಾಲಜಿ (ರೋಗರಕ್ಷಾ ಶಾಸ್ತ್ರ) ಮತ್ತು ಇನ್‌ಫಾರ್ಮೆಟಿಕ್ಸ್ ಕ್ಷೇತ್ರಗಳಲ್ಲಿನ ಸಹಭಾಗಿತ್ವಗಳನ್ನು ನವೀಕರಿಸುವ ಸಂಬಂಧವೂ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ.

`ಬೆಂಗಳೂರಿನಲ್ಲಿ ಜಂಟಿಯಾಗಿ ಗಣಿತಶಾಸ್ತ್ರ ಸಂಶೋಧನೆ/ಅಧ್ಯಯನ ಘಟಕವೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ನಾವು ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಇದಲ್ಲದೇ ಎರಡೂ ರಾಷ್ಟ್ರಗಳ ನಡುವಿನ ವೈಜ್ಞಾನಿಕ ಸಹಭಾಗಿತ್ವಗಳನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಇಮ್ಯುನಾಲಜಿ ಮತ್ತು ಇನ್‌ಫಾರ್ಮೆಟಿಕ್ಸ್ ವಿಷಯಗಳಿಗೆ ಸಂಬಂಧಿಸಿದ ಎರಡು ಅಂತರರಾಷ್ಟ್ರೀಯ ಪ್ರಯೋಗಾಲಯಗಳನ್ನು ಸ್ಥಾಪಿಸಲಿದ್ದೇವೆ~ ಎಂದು ಸಿಎನ್‌ಆರ್‌ಎಸ್‌ನ ಮಹಾ ನಿರ್ದೇಶಕ ಜೋಯಲ್ ಬೆರ್ಟ್ರಾಂಡ್ ಹೇಳಿದ್ದಾರೆ.

ಈ ಮೂರೂ ಯೋಜನೆಗಳಿಗೆ ಪ್ಯಾರಿಸ್ ಮೂಲದ  ಸಿಎನ್‌ಆರ್‌ಎಸ್ ಮತ್ತು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಮನಾಗಿ ಧನಸಹಾಯ ಮಾಡಲಿವೆ.

`ಈ ಯೋಜನೆಗಾಗಿ ಎರಡೂ ಸಂಸ್ಥೆಗಳು ತಲಾ ಐದು ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿವೆ~ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಮಸ್ವಾಮಿ ಹೇಳಿದ್ದಾರೆ.

ಮುಂದಿನ ನಾಲ್ಕು ವರ್ಷಗಳ ಕಾಲ ಎರಡೂ ರಾಷ್ಟ್ರಗಳ ತಲಾ 30 ಗಣಿತಶಾಸ್ತ್ರಜ್ಞರು ಜಂಟಿಯಾಗಿ ಹಲವು ಸಂಶೋಧನೆ/ಅಧ್ಯಯನಗಳನ್ನು ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT