ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಾರ್ಗಸೂತ್ರ

ಶಾಂತಿ- ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ಇಲಾಖೆ ಮನವಿ
Last Updated 5 ಸೆಪ್ಟೆಂಬರ್ 2013, 9:37 IST
ಅಕ್ಷರ ಗಾತ್ರ

ಚಾಮರಾಜನಗರ: ಗೌರಿ- ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯಾಗುವವರೆಗೆ ಜಿಲ್ಲೆಯ ಎಲ್ಲ ನಾಗರಿಕರು ಕಾನೂನು- ಸುವ್ಯವಸ್ಥೆ ಕಾಪಾಡಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.

ಸೆ. 8 ಮತ್ತು 9ರಂದು ಗೌರಿ- ಗಣೇಶನ ಹಬ್ಬ ನಡೆಯಲಿದೆ. ವಿಗ್ರಹ ಪ್ರತಿಷ್ಠಾಪಿಸುವವರು ಹಾಗೂ ಈ ಸಂಬಂಧ ಕಾರ್ಯಕ್ರಮ ಹಮ್ಮಿಕೊಳ್ಳುವ ನಾಗರಿಕರು ಸಂಬಂಧಪಟ್ಟ ಸರಹದ್ದಿನ ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಸೆ. 7ರೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಸೂಚಿಸಿದೆ.

ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಮೂರ್ತಿ ಸ್ಥಾಪಿಸುವ ಮೊದಲು ಸಂಬಂಧಪಟ್ಟ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಖಾಸಗಿ ಸ್ಥಳವಾದರೆ ಆ ಸ್ಥಳದ ಮಾಲೀಕರಿಂದ ಅನುಮತಿ ಪತ್ರ ಪಡೆದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರುಪಡಿಸುವುದು ಕಡ್ಡಾಯ.

ಕಾರ್ಯಕ್ರಮಕ್ಕೆ ಧ್ವನಿವರ್ಧಕ ಬಳಸಬೇಕಾದರೆ ಸೆಸ್ಕ್, ಅಗ್ನಿಶಾಮಕ ಮತ್ತು ತುರ್ತುಸೇವಾ ವಿಭಾಗದಿಂದ ನಿರಾಪೇಕ್ಷಣಾ ಪತ್ರ ಪಡೆದು ಲಗತ್ತಿಸಬೇಕು. ಸಂಬಂಧಪಟ್ಟ ಠಾಣೆಯ ಪೊಲೀಸ್ ನಿರೀಕ್ಷಕರಿಂದ ಅನುಮತಿ ಪಡೆಯಬೇಕು. ಧ್ವನಿವರ್ಧಕ ಬಳಕೆಯನ್ನು ನಿಯಾಮಾನುಸಾರ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಉಪಯೋಗಿಬಾರದು.

ವ್ಯವಸ್ಥಾಪಕರು ಅಥವಾ ಕಾರ್ಯಕರ್ತರು ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಬಾರದು. ಲಾಟರಿ ಇತ್ಯಾದಿ ಯೋಜನೆ ಮೂಲಕ ಹಣ ಸಂಗ್ರಹಣೆ ನಿಷಿದ್ಧ. ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಆಯೋಜಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ಪರಿಸರ ಸ್ನೇಹಿಯಾದ ಮಣ್ಣಿನಿಂದ ಮಾಡಿದ, ಬಣ್ಣರಹಿತ  ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಗಣಪತಿಯ ಅಲಂಕಾರಕ್ಕೆ ನೈಸರ್ಗಿಕ ಸಾಮಗ್ರಿ ಬಳಸಬೇಕು. ಸಾರ್ವಜನಿಕ ಸ್ಥಳ, ರಸ್ತೆಗಳು, ಪಾದಚಾರಿಗಳು ತಿರುಗಾಡುವ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಬಾರದು.

ಗಣಪತಿ ಮೂರ್ತಿಯನ್ನು ಸಾಧ್ಯವಾದಷ್ಟು ಮನೆಯ ಬಕೆಟ್‌ಗಳಲ್ಲಿ ನೀರು ತುಂಬಿಸಿ ಅದರಲ್ಲಿ ವಿಸರ್ಜಿಸಬೇಕು. ಆನಂತರ ಗಿಡಗಳಿಗೆ ಆ ನೀರು ಹಾಕಬೇಕು. ಲಭ್ಯವಿರುವೆಡೆ ಸಂಚಾರಿ ವಿಸರ್ಜನಾ ವಾಹನ ಬಳಸಿ ಅಥವಾ ಕೆರೆಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವಿಸರ್ಜಿಸಬೇಕು. ವಿಸರ್ಜಿಸುವ ಮೊದಲು ಅಲಂಕಾರಿಕ ವಸ್ತುಗಳನ್ನು ತೆಗೆದು ವಿಸರ್ಜನೆ ಮಾಡಬೇಕು.

ಗಣಪತಿ ಮಂಡಳಿಯ ವ್ಯವಸ್ಥಾಪಕರು ಗಣಪತಿ ಇರುವ ಜಾಗದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗೆ ಅವಕಾಶ ಇರುವಂತೆ ನಿರ್ಮಾಣ ಮಾಡಿರಬೇಕು. ಯಾವುದೇ, ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆವಹಿಸಬೇಕು. ಕಾರ್ಯಕ್ರಮ ನಡೆಸುವುದು ಹಾಗೂ ಇತರೇ ವಿಚಾರದ ಬಗ್ಗೆ ಜವಾಬ್ದಾರಿ ಹೊರುವುದಾಗಿ ಮಂಡಳಿಯ ಪದಾಧಿಕಾರಿಗಳು, ಸ್ವಯಂ ಸೇವಕರ ಹೆಸರು ಹಾಗೂ ವಿಳಾಸ ನೀಡಿ ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದೆ.

ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತೆವಹಿಸಬೇಕು. ಮಂಡಳಿಯ ಸ್ವಯಂ ಸೇವಕರ ಕಾವಲು ಏರ್ಪಡಿಸಬೇಕು. ಕಾವಲುಗಾರರ ಹೆಸರು, ವಿಳಾಸವನ್ನು ಠಾಣೆಗೆ ಸಲ್ಲಿಸಬೇಕು. ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಒಂದು ರಿಜಿಸ್ಟರ್ ಇಟ್ಟು ದೈನಂದಿನ ಕಾವಲಿನ ವಿವರ ನಮೂದಿಬೇಕು.

ಗಣಪತಿ ಮಂಡಳಿಯ ವ್ಯವಸ್ಥಾಪಕರು ಆಯಾ ದಿನದ ಕಾರ್ಯಕ್ರಮ ಮತ್ತು ಗಣಪತಿ ವಿಸರ್ಜನೆ ಬಗ್ಗೆ ಮುಂಚಿತವಾಗಿಯೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತಿಳಿಸಬೇಕು. ಮೆರವಣಿಗೆ ಮಾರ್ಗದ ಪೂರ್ವಾನುಮತಿ ಪಡೆದ ನಂತರ ಪೊಲೀಸ್ ಬಂದೋಬಸ್ತ್ ಪಡೆದುಕೊಳ್ಳಬೇಕು.

ವಿಸರ್ಜನೆ ವೇಳೆ ಮೆರವಣಿಗೆ ಮೂಲಕ ಸಾಗುವ ಮಾರ್ಗಗಳಲ್ಲಿ ಸಾರ್ವಜನಿಕರು, ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಶಾಂತವಾಗಿ ಮೆರವಣಿಗೆ ನಡೆಸಬೇಕು. ವಿಸರ್ಜನಾ ಸ್ಥಳದಲ್ಲಿ ಮುನ್ನೆಚ್ಚರಿಕೆಯಿಂದ ಶಾಂತ ರೀತಿಯಲ್ಲಿ ವಿಗ್ರಹ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.

ನಿಯಮ ಉಲ್ಲಂಘಿಸಿ ಶಾಂತಿ ಭಂಗ ಉಂಟು ಮಾಡುವುದು ಕಂಡುಬಂದರೆ ಕೂಡಲೇ ನಾಗರಿಕರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹುದು. ದೂರವಾಣಿ ಮೂಲಕ ಕೂಡ ಮಾಹಿತಿ ನೀಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ.

ದೂರವಾಣಿ ಸಂಖ್ಯೆ
*ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ- ದೂರವಾಣಿ ಸಂಖ್ಯೆ 08226-222243, ಮೊಬೈಲ್ 94808 04601.
*ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ- ದೂರವಾಣಿ ಸಂಖ್ಯೆ 08226-225979, ಮೊಬೈಲ್ 94808 04602.
*ಡಿವೈಎಸ್‌ಪಿ- ಚಾಮರಾಜನಗರ, ದೂರವಾಣಿ ಸಂಖ್ಯೆ 08226-222090, ಮೊಬೈಲ್ 94808 04620.
*ಡಿವೈಎಸ್‌ಪಿ- ಕೊಳ್ಳೇಗಾಲ, ದೂರವಾಣಿ ಸಂಖ್ಯೆ 08224-252840, ಮೊಬೈಲ್ 94808 04621.
*ಜಿಲ್ಲಾ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ), ದೂರವಾಣಿ ಸಂಖ್ಯೆ 08226- 222383.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT