ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯರಿಂದ ಗಾಂಧಿವಾದಿ ಅಂತಿಮ ದರ್ಶನ

Last Updated 13 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಗಾಂಧಿವಾದಿ ಹಾಗೂ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಪ್ರೊ. ಎಚ್.ಆರ್. ದಾಸೇಗೌಡ (77) ಶನಿವಾರ ಮಧ್ಯರಾತ್ರಿ 1.30ರಲ್ಲಿ ನಗರದಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಾರ್ಥಿವ ಶರೀರವನ್ನು ಭಾನುವಾರ ಗಾಂಧಿ ಸ್ಮಾರಕ ನಿಧಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.

ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹಿರೆತುರುಪ್ಪೆ ಗ್ರಾಮದವರಾದ ದಾಸೇಗೌಡ ಗಾಂಧಿ ತತ್ವಗಳ ಅನುಯಾಯಿಯಾಗಿದ್ದರು. ಗೋವಾ ಚಳವಳಿಯಲ್ಲಿಯೂ ಪಾತ್ರವಹಿಸಿದ್ದರು.

ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಇವರು, ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ 1959ರಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಎ.ಪಿ.ಎಸ್ ಪದವಿ ಕಾಲೇಜಿನಲ್ಲಿ 1960ರಿಂದ 63ರವರೆಗೆ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು.

1966ರಿಂದ 1973ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಉಪ ನಿಯಂತ್ರಕರಾಗಿ ಸೇವೆ ಸಲ್ಲಿಸಿದರು. 1973ರಿಂದ 76ರವರೆಗೆ ಪರೀಕ್ಷಾಂಗ ಕುಲಸಚಿವರಾಗಿದ್ದರು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ 1976ರಿಂದ 80ರವರೆಗೆ ಕಾರ್ಯನಿರ್ವಹಿಸಿದ್ದರು.

ಗಾಂಧಿ ಪ್ರತಿಷ್ಠಾನದ ಉಪಾಧ್ಯಕ್ಷರಾಗಿಯೂ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿಯಾಗಿ 2004ರಿಂದ ಈವರೆಗೆ ಕಾರ್ಯನಿರ್ವಹಿಸಿದರು. ಗಾಂಧಿ ಸ್ಮಾರಕ  ನಿಧಿಯಿಂದ ಹಮ್ಮಿಕೊಳ್ಳುವ ಎಲ್ಲಾ ಚಟುವಟಿಕೆಗಳಲ್ಲೂ  ಪಾಲ್ಗೊಳ್ಳುತ್ತಿದ್ದರು.

ಪುಸ್ತಕ ಪ್ರಕಟಣೆ: ರಾಜ್ಯಶಾಸ್ತ್ರ ಉಪನ್ಯಾಸಕರಾಗಿದ್ದ ಇವರು, `ರಾಜ್ಯಶಾಸ್ತ್ರ ಪರಿಚಯ~, `ಸರ್ಕಾರದ ಸ್ವರೂಪ ಪರಿಚಯ~, `ಭಾರತದ ಸಂವಿಧಾನ~ ಹಾಗೂ `ಆಚಾರ್ಯ ತುಳಸಿ ಜೀವನಚರಿತ್ರೆ~ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT