ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಕೊಳೆಯುತ್ತಿರುವ ಈರುಳ್ಳಿ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಗದಗ:  ಇಲ್ಲಿನ ಎಪಿಎಂಸಿ ಆವರಣದಲ್ಲೆಗ ಕೊಳೆತ ಉಳ್ಳಾಗಡ್ಡಿ ಅರ್ಥಾತ್ ಈರುಳ್ಳಿಯ ರಾಶಿಯದ್ದೇ ಸಾಮ್ರಾಜ್ಯ. ಖಾಲಿ ಮೈದಾನದಲ್ಲಿ ರಾಶಿಯಾಗಿ ಸುರಿದಿರುವ ಈರುಳ್ಳಿ ಗುಡ್ಡೆಗಳಲ್ಲಿ ಅರ್ಧದಷ್ಟು ಮೊಳಕೆಯೊಡೆದಿದ್ದರೆ, ಮಿಕ್ಕ ರಾಶಿ ಕೊಳೆತು ನಾರುತ್ತಿದೆ. ಈ ಪೈಕಿ ಇದ್ದುದ್ದರಲ್ಲಿ ಚೆನ್ನಾಗಿರುವುದನ್ನು ಆಯ್ದು ಚೀಲಗಳಿಗೆ ತುಂಬುವ ಕೆಲಸದಲ್ಲಿ ಕೂಲಿ ಕಾರ್ಮಿಕರು ನಿರತರಾಗಿದ್ದಾರೆ.

ಸರ್ಕಾರ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಿದ ಈರುಳ್ಳಿಗೆ ಈಗ ಈ ಸ್ಥಿತಿ ಬಂದೊದಗಿದೆ. ಎ ಮತ್ತು ಬಿ ದರ್ಜೆಯ ಉಳ್ಳಾಗಡ್ಡಿ ಬಹುತೇಕ ಖರೀದಿಯಾಗಿದ್ದು, ಸಿ ದರ್ಜೆಯ ನೂರಾರು ಕ್ವಿಂಟಲ್ ಇನ್ನೂ ಮೈದಾನದಲ್ಲೇ ಉಳಿದಿದೆ.

ಇವುಗಳ ಮಾರಾಟಕ್ಕೆ ಜಿಲ್ಲಾಡಳಿತ ಗುತ್ತಿಗೆ ನೀಡಿದ್ದರೂ ಕೊಳೆತ ಈರುಳ್ಳಿ ಕೊಂಡೊಯ್ಯಲು ಗುತ್ತಿಗೆದಾರರು ಮನಸ್ಸು ಮಾಡಿಲ್ಲ. ಅರ್ಧದಷ್ಟು ಈಗಾಗಲೇ ಕೊಳೆತಿದ್ದು, ಉಳಿದದ್ದರಲ್ಲಿ ಉತ್ತಮವಾದ ಈರುಳ್ಳಿಯನ್ನು ಕಾರ್ಮಿಕರು ಆರಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಆರಿಸಲಾದ ಉಳ್ಳಾಗಡ್ಡಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚೀಲವೊಂದಕ್ಕೆ ಕೇವಲ ರೂ50   ಬೆಲೆ ಇದ್ದು, ಕೂಲಿ ಸಾಗಾಟಕ್ಕೆ ವೆಚ್ಚ ಹೆಚ್ಚಿರುವುದು ಗುತ್ತಿಗೆದಾರರ ಚಿಂತೆಗೆ ಕಾರಣವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಬರದ ನಡುವೆಯೂ ಭಾರಿ ಪ್ರಮಾಣದಲ್ಲಿ ಈರುಳ್ಳಿ ಬೆಳೆದ ರೈತರು ಉತ್ತಮ ಬೆಲೆ ಸಿಗದೇ ಕಂಗಾಲಾಗಿದ್ದರು. ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಗದಗದಲ್ಲಿ  ರೈತರ ಪ್ರತಿಭಟನೆ ತಾರಕಕ್ಕೇರಿ ಲಾಠಿ ಪ್ರಹಾರ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಖರೀದಿ ಕೇಂದ್ರ ತೆರೆದು ರೈತರಿಂದ ಈರುಳ್ಳಿ ಖರೀದಿ ಮಾಡಿತ್ತು.

ಎ ದರ್ಜೆ ಈರುಳ್ಳಿಗೆ ಕ್ವಿಂಟಲ್ ಒಂದಕ್ಕೆ ರೂ760  ಹಾಗೂ ಬಿ ಮತ್ತು ಸಿ ದರ್ಜೆಯ ಈರುಳ್ಳಿಗೆ ಕ್ರಮವಾಗಿ ರೂ560 ಹಾಗೂ ರೂ360  ನೀಡಿ ರೈತರಿಂದ ಉತ್ಪನ್ನ ಖರೀದಿಸಲಾಗಿತ್ತು. ಹೀಗೆ ಖರೀದಿಯಾದ ಈರುಳ್ಳಿಯನ್ನು ಸಗಟು ಮಾರಾಟದ ಜೊತೆಗೆ ನ್ಯಾಯಬೆಲೆ ಅಂಗಡಿಯಲ್ಲೂ ಮಾರಾಟ ಮಾಡುವ ವಿನೂತನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿತ್ತು.

ಆದರೆ ಎ ಮತ್ತು ಬಿ ದರ್ಜೆಯ ಈರುಳ್ಳಿ ಖರೀದಿಯಾದರೆ ಸಿ ದರ್ಜೆಯ ಅರ್ಧದಷ್ಟು ಈರುಳ್ಳಿ ಇನ್ನೂ ಹಾಗೆಯೇ ಉಳಿದಿದೆ. ನಗರದ ಎಪಿಎಂಸಿ ಆವರಣ ಹಾಗೂ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಹೀಗೆ ಸುರಿಯಲಾಗಿರುವ ಬಹುತೇಕ ಈರುಳ್ಳಿ ಕೊಳೆಯುತ್ತಿದೆ.

`ಜಿಲ್ಲಾಡಳಿತವು ಬೆಂಬಲ ಬೆಲೆಯಲ್ಲಿ ರೈತರಿಂದ ಒಟ್ಟು 5.60 ಲಕ್ಷ ಕ್ವಿಂಟಲ್ ಈರುಳ್ಳಿ ಖರೀದಿ ಮಾಡಿತ್ತು. ಈ ಪೈಕಿ ಉತ್ತಮ ಗುಣಮಟ್ಟದ ಈರುಳ್ಳಿ ಬಹುತೇಕ ಮಾರಾಟವಾಗಿದೆ. ಸಿ ದರ್ಜೆಯ ಈರುಳ್ಳಿ ಮಾರಾಟಕ್ಕೂ ಗುತ್ತಿಗೆ ನೀಡಲಾಗಿದೆ~ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT