ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ-ವಾಡಿ ರೈಲ್ವೆ ಮಾರ್ಗ ನನಸಾದೀತೆ?

Last Updated 23 ಜನವರಿ 2011, 9:30 IST
ಅಕ್ಷರ ಗಾತ್ರ

ಲಿಂಗಸುಗೂರ: ಗದಗ-ವಾಡಿ ರೈಲ್ವೆ ಮಾರ್ಗ ಕರ್ನಾಟಕ ರಾಜ್ಯದಲ್ಲಿಯೆ ಅತ್ಯಂತ ಪ್ರಮುಖ ಮಾರ್ಗವಾಗಿ ಮಾರ್ಪಡುತ್ತದೆ ಎಂಬ ಕನಸು ಇಂದಿಗೂ ನನಸಾಗಿಲ್ಲ. ರಾಜಕೀಯ ಇಚ್ಛಾ ಶಕ್ತಿ ಕೊರತೆಯೊ?, ಅನಕ್ಷರತೆ ಶಾಪವೊ? ಗೊತ್ತಿಲ್ಲ. ಸ್ವಾತಂತ್ರ್ಯ ನಂತರದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಅಷ್ಟೆನು ಆಸಕ್ತಿ ತೋರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

1997-98ನೇ ಸಾಲಿನಲ್ಲಿ ಸಂಚಾರ ಮತ್ತು ಎಂಜಿನಿಯರಿಂಗ್ ಸರ್ವೇ ಕಾರ್ಯಗತ ಮಾಡ ಲಾಯಿತು. 253ಕಿ.ಮೀ ರೈಲ್ವೆ ಮಾರ್ಗಕ್ಕೆ ಅಂದಾಜು ರೂ. 410ಕೋಟಿ ಹಣ ಬೇಕಾಗಬಹುದು ಎಂದು ಅಂದಾಜು ಮಾಡಲಾಯಿತು. 1997-98ರ ನಂತರದಲ್ಲಿ  ಕೇಂದ್ರ ಸರ್ಕಾರದ ರೈಲ್ವೆ ಬಜೆಟ್‌ನಲ್ಲಿ ಸೇರ್ಪಡೆ ಮಾಡುವ ಇಚ್ಛಾಶಕ್ತಿ ಕೊರತೆಯಿಂದ ರೈಲ್ವೆ ಮಾರ್ಗ ಮಂಜೂರಾತಿ ವಿಳಂಬವಾಗುತ್ತ ಬಂದಿತು. 2010-11ರಲ್ಲಿ ಪುನಃ ಗದಗ-ವಾಡಿ ರೈಲ್ವೆ ಮಾರ್ಗದ ಮಂಜೂರಾತಿಗೆ ರೈಲ್ವೆ ಬಜೆಟ್‌ನಲ್ಲಿ ಸೇರ್ಪಡೆ ಮಾಡಲು ಹಲವು ಬಾರಿ ಒತ್ತಾಯ ಮಾಡಲಾಯಿತು. ಹೀಗಾಗಿ ಗದಗ-ವಾಡಿ ರೈಲ್ವೆ ಮಾರ್ಗದ ಸರ್ವೇ ಮಾಡಲು ಪುನಃ ರೈಲ್ವೆ ಮಂತ್ರಾಲಯ ಆದೇಶ ನೀಡಿತು.

ಗದಗ ವಾಡಿ ರೈಲ್ವೆ ಮಾರ್ಗ ಯಲಬುರ್ಗ, ಕುಷ್ಟಗಿ, ಲಿಂಗಸುಗೂರ, ಸುರಪುರ, ಶಹಾಪುರ ಮಾರ್ಗವಾಗಿ ವಿಸ್ತರಣೆ ಮಾಡುವ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಸಂಚಾರ ಮತ್ತು ಎಂಜಿನಿಯರಿಂಗ್ ಸರ್ವೇ ವಿಭಾಗದ ಪ್ರಕಾರ 253ಕಿ.ಮೀ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಂದಾಜು ರೂ. 1117ಕೋಟಿ ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈ ರೈಲ್ವೆ ಮಾರ್ಗ ವಿಸ್ತರಣೆಗೊಳ್ಳುವುದರಿಂದ ಹೈಕ ಪ್ರದೇಶದ ಅಭಿವೃದ್ಧಿಗೆ ಸಾಥ್ ನೀಡಲಿದೆ ಎಂಬುದು ತಜ್ಞರ ಅಭಿತಮ.

ಗದಗ ದಿಂದ ಆರಂಭಗೊಳ್ಳುವ ಈ ರೈಲ್ವೆ ಮಾರ್ಗ  ಕನಿಗಿನಹಾಳ, ಹರ್ಲಾಪುರ, ಸೋಂಪುರ ರೋಡ, ಮಂಡಲಗೆರಿ, ಕುಕನೂರು, ಸಂಗನಾಳ, ಯಲಬುರ್ಗ, ಹನುಮಾಪುರ, ಹಿಂಗಲಬಂಡಿ, ಕುಷ್ಟಗಿ, ಗುಡದೂರು, ಜಮಲಾಪುರರೋಡ, ಕಿಡದೂರ ರೋಡ, ಬನ್ನಿಗೋಳ, ಮುದಗಲ್ಲ, ಲಿಂಗಸುಗೂರ ದಕ್ಷಿಣ, ಲಿಂಗಸುಗೂರ, ಹೊನ್ನಳ್ಳಿ, ಗುರುಗುಂಟಾ, ಐದಭಾವಿ, ಯದಲಭಾವಿ, ಕಕ್ಕೇರಿ, ಶಾಂತಪುರ, ದೆವಾಪುರ, ಆನಂದಪುರ, ಸುರಪುರ. ತೊಂಗಂಡಿ, ವಿಭೂತಿಹಳ್ಳಿ, ಶಹಾಪುರ, ಮುದ್ಬಾಳ, ಬಿರಾಳ ಬ್ರಿಡ್ಜ್, ನರಿಬೊಳ ಮಾರ್ಗವಾಗಿ ವಾಡಿ ತಲುಪುತ್ತದೆ ಎಂದು ಹೇಳಲಾಗುತ್ತದೆ. ಈ ರೈಲ್ವೆ ಮಾರ್ಗದಿಂದ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ನೇರ ಸಂಪರ್ಕ ಒದಗುವುದು. ಗೋವಾ, ಹುಬ್ಬಳ್ಳಿ, ಹೈದರಬಾದ್‌ಗೆ ನೇರ ಸಂಪರ್ಕ ಕಲ್ಪಿಸದಂತಾಗುತ್ತದೆ ಎಂಬಿತ್ಯಾದಿ ಅಂಶಗಳ ಆಧಾರದ ಮೇಲೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಮಾಜಿ ಸಂಸದ ಬಸವರಾಜ ರಾಯರೆಡ್ಡಿ ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯಲು ನಿರ್ಧರಿಸಿದ್ದಾರೆ.

ಜ-24ರಂದು ವಿಶೇಷ ಸಭೆ: ಈ ಎಲ್ಲಾ ದಾಖಲೆ ಆಧರಿಸಿ 2011-12ನೇ ಸಾಲಿನ ರೈಲ್ವೆ ಮುಂಗಡ ಪತ್ರದಲ್ಲಿ ಗದಗ ವಾಡಿ ರೈಲ್ವೆ ಮಾರ್ಗಕ್ಕೆ ಅನುದಾನ ಕಾಯ್ದಿರಿಸುವ ಉದ್ದೇಶದಿಂದ ಫೆಬ್ರುವರಿ ತಿಂಗಳಲ್ಲಿ ದೆಹಲಿಗೆ ನಿಯೋಗ ಕೊಂಡೊಯ್ಯಲು ನಿರ್ಧರಿಸ ಲಾಗಿದೆ.

ಅಂತೆಯೆ ಲಿಂಗಸುಗೂರ ಪಟ್ಟಣದ ಐಎಂಎ ಹಾಲ್‌ನಲ್ಲಿ ಜನವರಿ 24ರಂದು ಮಧ್ಯಾಹ್ನ 2ಗಂಟೆಗೆ ವಿಶೇಷ ಸಭೆ ಕರೆಯಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ ರಫಿ. ಜಿಪಂ ಸದಸ್ಯ ಭೂಪನಗೌಡ ಕರಡಕಲ್ಲ. ಮುಖಂಡರಾದ ಪಾಮಯ್ಯ ಮುರಾರಿ, ಮಾಧವ ನೆಲಗಿ, ಮಲ್ಲಣ್ಣ ವಾರದ, ಖಾದರಪಾಷ, ಮಹಾಂತಯ್ಯಸ್ವಾಮಿ, ಶಿವಪ್ಪ ಮಾಚನೂರ, ಶರಣಯ್ಯ ಗೊರೆಬಾಳ, ಚೆನ್ನಾರೆಡ್ಡಿ, ವಿರೇಶ ಸಕ್ರಿ, ಬಾಲಪ್ಪ ಕುಪ್ಪಿಗುಡ್ಡ ಮತ್ತಿತರು ಉಪಸ್ಥಿತರಿದ್ದರು.
ಬಿ.ಎ ನಂದಿಕೋಲಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT