ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲದ ನಡುವೆ ರಸ್ತೆ ವಿಸ್ತರಣೆಗೆ ಚಾಲನೆ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಇಲ್ಲಿನ ರಸ್ತೆಗಳ ವಿಸ್ತರಣೆ ಕಾಮಗಾರಿಗೆ ಸೋಮವಾರ ನಗರಸಭೆ ಅಧಿಕೃತ ಚಾಲನೆ ನೀಡಿದೆ.

ಈ ವೇಳೆ ನಗರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆಯಿತು. ರಸ್ತೆ ವಿಸ್ತರಣೆ ಕುರಿತ ಭಿನ್ನಾಭಿಪ್ರಾಯ ಉಂಟಾಗಿ ಎರಡು ಗುಂಪುಗಳ ನಡುವೆ ಜಗಳ ನಡೆದು ಪೊಲೀಸರ ಮಧ್ಯ ಪ್ರವೇಶದಿಂದ ತಣ್ಣಗಾಯಿತು. ಪೊಲೀಸರು ಗಲಭೆಗೆ ಕಾರಣರಾದವರನ್ನು ವಶಕ್ಕೆ ತೆಗೆದುಕೊಂಡರು.

ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸೋಮವಾರ 11 ಗಂಟೆಗೆ ನಗರದ ರುಮಾಲೆ ಛತ್ರದ ಹಳೆ ಪುರಭವನ ಕಟ್ಟಡ ಹಾಗೂ ಜಿಲ್ಲಾ ಗಂಥಾಲಯ ಕೇಂದ್ರವನ್ನು ಕೆಡುವುದರ ಮೂಲಕ ವಿಸ್ತರಣೆ ಕಾಮಗಾರಿ ಆರಂಭಗೊಂಡಿತು. ಈ ನಡುವೆ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ರಸ್ತೆ ವಿಸ್ತರಣೆಗೆ ಹಣ ಮಂಜೂರಾಗುವ ತನಕ ಕಾಮಗಾರಿ ಆರಂಭಿಸುವುದು ಸರಿಯಲ್ಲ. ಈ ಬಗ್ಗೆ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಬೇಕು. ಈ ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಪಟ್ಟು ಹಿಡಿದರು.

ರಸ್ತೆ ವಿಸ್ತರಣೆಗೆ ಯಾವುದೇ ವಿರೋಧ ಇಲ್ಲ. ಆದರೆ ನಗರಸಭೆಯ ಎಸ್‌ಎಫ್‌ಸಿ 13ನೇ ಹಣಕಾಸು ಯೋಜನೆಯಲ್ಲಿ ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಬಾರದು. ಈ ಅನುದಾನದಲ್ಲಿ ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಾಗಬೇಕಿವೆ.

ಈ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಬೇಕಿದೆ ಎಂದರು. ಈ ಹಂತದಲ್ಲಿ ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡೀಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಈಗಾಗಲೇ ನಗರದ ಮುಖ್ಯ ರಸ್ತೆಯಲ್ಲಿರುವ ಬಹುತೇಕರು ರಸ್ತೆ ವಿಸ್ತರಣೆಗೆ ಸ್ಪಂದಿಸಿ ಸ್ವ ಪ್ರೇರಣೆಯಿಂದ ತೆರವು ಕಾರ್ಯ ಆರಂಭಿಸಿದ್ದಾರೆ.  ರಸ್ತೆ ವಿಸ್ತರಣೆಯಿಂದ ಕಟ್ಟಡಗಳನ್ನು ಕಳೆದುಕೊಳ್ಳುವ 540 ಮಂದಿ ಖಾತೆದಾರರ ಪೈಕಿ 69 ಜನ ಮಾತ್ರ ರಾಜ್ಯ ಹೈಕೋರ್ಟ್ ನಿಂದ ತಮ್ಮ ಕಟ್ಟಡಗಳನ್ನು ತೆರವುಗೊಳಿಸದಂತೆ ತಡೆಯಾಜ್ಞೆ ತಂದಿದ್ದಾರೆ.

ಈ ಕಟ್ಟಡಗಳನ್ನು ಹೊರತು ಪಡಿಸಿ ಬೇರೆ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಆದರೆ ರಸ್ತೆ ವಿಸ್ತರಣೆ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಇದಲ್ಲದೆ ರಸ್ತೆ ಬದಿಯಲ್ಲಿನ ಕೆಲ ಕಟ್ಟಡ ಮಾಲೀಕರು ಕಾಲಾವಕಾಶ ನೀಡುವಂತೆ ನಗರಸಭೆಗೆ ಮನವಿ ಮಾಡಿದ್ದು, ಒಂದು ವಾರ ಕಾಲಾವಕಾಶ ನೀಡಲಾಗಿದೆ.

ಸೋಮವಾರ ಅಳತೆಗೆ ತಕ್ಕಂತೆ ಭಾಗ ಮಾಡಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಕಾಲಾವಕಾಶ ತೆಗೆದುಕೊಂಡಿರುವವರಿಗೆ ಅಂತಿಮ ಗಡುವು ನೀಡಿ ತೆರವುಗೊಳಿಸಲು ಮುಂದಾಗಲಾಗುವುದು.
ಹಂತ ಹಂತವಾಗಿ, ರಸ್ತೆಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಂ.ಜಗದೀಶ್‌ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT