ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ‘ದೇಶದ ಏಕತೆಗಾಗಿ ಓಟ’

Last Updated 16 ಡಿಸೆಂಬರ್ 2013, 6:15 IST
ಅಕ್ಷರ ಗಾತ್ರ

ಬೆಳಗಾವಿ/ಚಿಕ್ಕೋಡಿ: ಉಕ್ಕಿನ ಮನುಷ್ಯ ಎನಿಸಿಕೊಂಡ ಸರದಾರ ವಲ್ಲಭಭಾಯಿ ಪಟೇಲ್‌ ಅವರ ಪುಣ್ಯತಿಥಿ ಅಂಗವಾಗಿ ಬೆಳಗಾವಿ ನಗರದ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ದೇಶದ ಏಕತೆಗಾಗಿ ಮ್ಯಾರಾಥಾನ್‌ ಓಟ’ದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಬೆಳಗಾವಿ ನಗರದಲ್ಲಿ ಶಿವಾಜಿ ಉದ್ಯಾನದಿಂದ ಆರಂಭವಾದ ಓಟವು, ಕಪಿಲೇಶ್ವರ ಮಂದಿರ ರಸ್ತೆ, ಪಾಟೀಲ ಗಲ್ಲಿ, ಗಣಪತಿ ಗಲ್ಲಿ, ಕಾಕತಿವೇಸ್‌, ಚನ್ನಮ್ಮ ವೃತ್ತ ಮಾರ್ಗವಾಗಿ ಸರ್ದಾರ್‌ ಮೈದಾನದಲ್ಲಿ ಸಭೆಯಾಗಿ ಮಾರ್ಪಟ್ಟಿತು.

ಗುಜರಾತಿ ಸಮಾಜದ ಮುಖಂಡರಾದ ಸೇವಂತಿಲಾಲ್‌ ಶಹಾ, ಮುಖ್ಯ ವಕ್ತಾರರಾಗಿ ವಿಜಯಕುಮಾರ ಮಹೇಂದ್ರಕರ ಮಾತನಾಡಿ, ವಲ್ಲಭಭಾಯಿ ಪಟೇಲ್‌ ಅವರ ಕೊಡುಗೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಓಟದಲ್ಲಿ ಸಂಸದ ಸುರೇಶ ಅಂಗಡಿ, ಮಾಜಿ ಶಾಸಕ ಅಭಯ ಪಾಟೀಲ, ಮುಖಂಡರಾದ ಕಿರಣ ಜಾಧವ, ಅನಿಲ ಬೆನಕೆ, ಬಿಜೆಪಿ ಯುವ ರಾಜ್ಯ ಘಟಕದ ಉಪಾಧ್ಯಕ್ಷ ರಾಜು ಚಿಕ್ಕನಗೌಡರ, ಪ್ರಕಾಶ ಹೊಂಗಲ, ಶಶಿಕಾಂತ ಪಾಟೀಲ, ತೇಜಸ್ವಿನಿ ದಾಖಲೂಚೆ, ಮಲ್ಲಿಕಾರ್ಜುನ ತುಬಾಕಿ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

ಚಿಕ್ಕೋಡಿ ವರದಿ: ‘ಕೆಲಸ ಮಾಡುವ ನಮ್ಮ ಕೈಗಳಿಗೆ ಕೆಲಸ ಬೇಕೇ ಹೊರತು ಭಿಕ್ಷೆಯಲ್ಲ. ಯುವಕರಿಗೆ ಉದ್ಯೋಗ ಸಿಗಬೇಕು ಎಂಬ ತತ್ವದಡಿ ಮುನ್ನಡೆಯುತ್ತಿರುವ ನರೇಂದ್ರ ಮೋದಿಯಂತಹ ದಕ್ಷ ನಾಯಕತ್ವ ನಮ್ಮ ದೇಶಕ್ಕೆ ಬೇಕಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಪಟ್ಟಣದಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಪುಣ್ಯತಿಥಿ ಅಂಗವಾಗಿ ಪಟ್ಟಣದಲ್ಲಿ ನಡೆದ ‘ದೇಶದ ಏಕತೆಗಾಗಿ ಓಟ’ದ ಬಳಿಕ ಕುಂದಕುಂದಾಚಾರ್ಯ ಶಾಲೆ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಗುವುದರಲ್ಲಿ ಯಾವುದೆ ಸಂದೇಹವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಪ್ರಾಂತ ಮತ್ತು ಭಾಷಾ ಆಧಾರದ ಮೇಲೆ ಭಾರತವನ್ನು ನಿರ್ಮಿಸಿದ ಶ್ರೇಯಸ್ಸು ಉಕ್ಕಿನ ಮನುಷ್ಯ ಪಟೇಲರಿಗೆ ಸಲ್ಲುತ್ತದೆ’ ಎಂದರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ‘ಕಾಂಗ್ರೆಸ್ಸಿಗರು ಬ್ರಿಟಿಷರಿಗಿಂತಲೂ ಹೆಚ್ಚು ನಮಗೆ ಅನ್ಯಾಯ ಮಾಡಿದ್ದಾರೆ. ಅಂತಹ ಭ್ರಷ್ಟ ಸರ್ಕಾರವನ್ನು ನಮ್ಮ ದೇಶದಿಂದ ಕಿತ್ತಾಕುವ ನಿಟ್ಟಿನಲ್ಲಿ ಯುವ ಪಡೆ ಮುಂದಾಗಬೇಕು’ ಎಂದರು.

‘ಒಂದೆಡೆ ಬೆಲೆ ಏರಿಕೆ ಮತ್ತೊಂದೆಡೆ ವಿದೇಶಿಗರಿಂದ ದೇಶದೊಳ ನುಗ್ಗುವಿಕೆ ಇದ್ಯಾವುದನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೆ ಸುಮ್ಮನೆ ಕುಳಿತಿದೆ. ಹೀಗಾಗಿ ದೇಶ ಉಳಿಸುವ ನಿಟ್ಟಿನಲ್ಲಿ ಮತ್ತು ದೇಶದ ಏಕತೆಗಾಗಿ ನರೇಂದ್ರ ಮೋದಿ ಹೋರಾಡುತ್ತಿದ್ದಾರೆ. ಸದೃಢ ಭಾರತ ನಿರ್ಮಾಣಕ್ಕಾಗಿ ಮೋದಿಗೆ ಅಧಿಕಾರ ಕಲ್ಪಿಸಿಕೊಡಲು ಯುವ ಪಡೆ ಸಂಕಲ್ಪ ತೊಡಬೇಕು’ ಎಂದು ಹೇಳಿದರು.

ಹಿರಿಯ ಬಿಜೆಪಿ ಧುರೀಣ ಬಿ.ಆರ್.ಸಂಗಪ್ಪಗೋಳ ಮಾತ­ನಾಡಿ, ‘ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕಾದರೆ ಮೋದಿ ನಾಯಕತ್ವ ದೇಶಕ್ಕೆ ಅನಿವಾರ್ಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಡಿ.ಜೆ. ಗುಂಡೆ, ಜಿ.ಪಂ. ಸದಸ್ಯ ಮಹೇಶ ಭಾತೆ, ರಾಮಚಂದ್ರ ಜೋಶಿ, ಮಾರುತಿ ಅಷ್ಟಗಿ, ಆಕಾಶ ಶೆಟ್ಟಿ, ಅಪ್ಪಾಸಾಹೇಬ ಚೌಗಲಾ, ಸತೀಶ ಅಪ್ಪಾಜಿಗೋಳ, ರವಿ ಹಿರೇಮಠ, ಮಹಾವೀರ ಭಾಗಿ, ಸಂಜು ಬಸ್ತವಾಡ, ಸುರೇಶ ಬ್ಯಾಕೂಡೆ, ಬಿ.ಎ. ಪೂಜಾರಿ, ಸಂಜು ಅರಗೆ ಹಾಜರಿದ್ದರು. ರಾಜು ಐತವಾಡೆ ಸ್ವಾಗತಿಸಿದರು. ದುಂಡಪ್ಪಾ ಬೆಂಡವಾಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT