ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮ್ಮತ್ತಿನ ಗೋಟುವಾದ್ಯ

Last Updated 29 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತಂತೀವಾದ್ಯಗಳಲ್ಲಿ ಒಂದಾದ ಗೋಟುವಾದ್ಯವು ವೀಣೆ ವಿಕಾಸಗೊಂಡ ಹಂತಗಳಲ್ಲಿ ಒಂದು ಎಂದು ಹೇಳಬಹುದು. ವೀಣೆಯ ಮೆಟ್ಟಲುಗಳನ್ನು ಕಳಚಿದರೆ ಗೋಟುವಾದ್ಯವಾಗುತ್ತದೆ. ಪ್ರಾಚೀನ ಕಾವ್ಯಗಳಲ್ಲಿ ಇದಕ್ಕೆ `ಮಹಾನಾಟಕ ವೀಣಾ~ ಎಂದೂ ಕರೆಯಲಾಗಿದೆ. ವಾದ್ಯವನ್ನು ನೆಲದ ಮೇಲಿಟ್ಟು, ವೀಣೆಯಂತೆಯೇ ಶ್ರುತಿ ಮಾಡಲಾದ ತಂತಿಗಳ ಮೇಲೆ, ಎಡಗೈಯಲ್ಲಿ ಮರದ ತುಂಡನ್ನು ಹಿಡಿದು, ಅದನ್ನು ಸ್ವರಸ್ಥಾನಗಳ ಮೇಲೆ ಜರುಗಿಸಿ, ಬಲಗೈ ಬೆರಳುಗಳಿಂದ ಮೀಟುಹಾಕಿ ಈ ವಾದ್ಯ ನುಡಿಸುತ್ತಾರೆ. ಸ್ವರಸ್ಥಾನ ಶುದ್ಧಿಯಿಂದ ಈ ವಾದ್ಯವನ್ನು ನುಡಿಸಲು ಅಪಾರ ಸಾಧನೆ ಬೇಕು. ಇಂಥ ಕಷ್ಟಸಾಧ್ಯ ವಾದ್ಯ `ಗೋಟುವಾದ್ಯ~. ಇದರ ಇಂದಿನ ವಾದಕರಲ್ಲಿ ಕನ್ನಡಿತಿ ಡಾ. ಗಾಯತ್ರಿ ರಾಜಾಪುರೆ ಕಸೆಬಾಂ ಒಬ್ಬರು. ಮದ್ರಾಸಿನ ಕರ್ನಾಟಿಕ್ ಮ್ಯೂಸಿಕ್ ಕಾಲೇಜಿನಿಂದ ವಿದ್ವಾನ್ ಪರೀಕ್ಷೆ, ವಾಷಿಂಗ್ಟನ್ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ, ಹವಾಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. ಮಾಡಿರುವ ಗಾಯತ್ರಿ ಬೋಧಕಿಯಾಗಿ ಸೇವೆ ಸಲ್ಲಿಸಿರುವರಲ್ಲದೆ, ಪ್ರಪಂಚದ ಅನೇಕ ಕಡೆ ಪ್ರಾತ್ಯಕ್ಷಿಕೆಗಳನ್ನೂ ನೀಡಿ ಮಾನಿತರಾಗಿದ್ದಾರೆ.

ಹಾಲಿ ಕಛೇರಿಯಲ್ಲಿ ಗಾಯತ್ರಿ ಕೆಲ ಭಾವಪೂರ್ಣ ಕೃತಿ-ರಾಗಗಳನ್ನು ಗೋಟುವಾದ್ಯದಲ್ಲಿ ಸಾದರಪಡಿಸಿದರು. ನಾಟ ರಾಗದ ಕೃತಿ ಹಸನಾಗಿ ಮೇಳೈಸಿತು. `ಸರಸೀರುಹಾಸನೆ ಪ್ರಿಯೆ~ ಕಛೇರಿಗೆ ಉತ್ತಮ ಚಾಲನೆ ಕೊಟ್ಟಿತು. ಕಲ್ಯಾಣಿಯನ್ನು ಹಿತಮಿತವಾಗಿ ವಿಸ್ತರಿಸಿ ಕಛೇರಿಯ ವ್ಯಾಪ್ತಿ ವಿಸ್ತರಿಸಿದರು. `ಕಮಲಾಂಬಾ ಭಜರೇ~ ಒಂದು ಘನವಾದ ಕೃತಿ. ಇನ್ನೊಂದು ಸತ್ವಪೂರ್ಣ ಕೃತಿ `ನಾದುಪೈ~ನೊಂದಿಗೆ ಕಿರು ಕಛೇರಿ ಮುಕ್ತಾಯವಾಯಿತು. ಎಂ. ವಾಸುದೇವರಾವ್ ಮತ್ತು ದಯಾನಂದ ಮೋಹಿತೆ ಲಯ ವಾದ್ಯಗಳ ಹೊಣೆ ಹೊತ್ತಿದ್ದರು.

ಸೊಬಗಿನ `ಸಂಹಾರ~
ನೃತ್ಯಗ್ರಾಮದ ನವನವೀನ ಸೃಷ್ಟಿ `ಸಂಹಾರ~ ಮೊನ್ನೆ ಶುಕ್ರವಾರ ಚೌಡಯ್ಯ ಸಭಾಂಗಣದಲ್ಲಿ ಪ್ರದರ್ಶಿತವಾಯಿತು. ನೃತ್ಯಗ್ರಾಮದ ನರ್ತಕಿಯರು (ಸುರೂಪ ಸೇನ್, ಬಿಜಯಾನಿ ಸತ್ಪತಿ ಮತ್ತು ಪವಿತ್ರಾ ರೆಡ್ಡಿ) ಹಾಗೂ ಶ್ರೀಲಂಕಾದ ಚಿತ್ರಾಸೆನ್ ಡಾನ್ಸ್ (ತಾಜಿ ಡಯಾಸ್ ಮತ್ತು ಮಿಥಿಲಾನಿ ಮುನಸಿಂಘ) ಒಟ್ಟಿಗೇ ಕೂಡಿ `ಸಂಹಾರ~ ನರ್ತಿಸಿದರು. ನಮ್ಮ ಪುರಾತನ ನೃತ್ಯ ಶೈಲಿಗಳಲ್ಲಿ ಒಡಿಸ್ಸಿ ಸಹ ಒಂದು. ಮಧುರ ಸಂಗೀತವುಳ್ಳ ಒಡಿಸ್ಸಿ ಪ್ರೀತಿ, ಮಿಲನಗಳ ಭಾವದಿಂದ ಜಗನ್ನಾಥನಿಗೆ ಅರ್ಪಿತವಾದುದು.

ಶ್ರೀಲಂಕಾದ ಕ್ಯಾಂಡಿಯ `ದಂತ ದೇವಸ್ಥಾನ~ದ ಸಾಂಪ್ರದಾಯಿಕ ನೃತ್ಯದಿಂದ ಬಂದುದೇ ಕಾಂಡ್ಯನ್ ನೃತ್ಯ. ಶ್ರೀಲಂಕಾದ ಓರ್ವ ದೊರೆಯ ಕಾಯಿಲೆಯನ್ನು ಗುಣಪಡಿಸಲು ಭಾರತದಿಂದ ಬಂದ ಕೆಲವರು ಮಾಡಿದ ಒಂದು ದೈವೀಕ ವಿಧಿಯ ಭಾಗವೇ ಈ ನೃತ್ಯ. ಈ ನೃತ್ಯವನ್ನು ಕಳೆದ ಶತಮಾನದಲ್ಲಿ ಚಿತ್ರಾಸೇನಾ ರಂಗಭೂಮಿಗೆ ಅಳವಡಿಸಿದರು ಹಾಗೂ ಅವರ ಪತ್ನಿ ವಜಿರಾ ಅವರೇ ಈ ಪದ್ಧತಿಯ ಮೊದಲ ಗಣ್ಯ ಕಲಾವಿದೆ.

`ಸಂಹಾರ~ವು ಪ್ರಫುಲ್ಲವಾಗಿ ಪ್ರಾರಂಭವಾಯಿತು. ನೃತ್ಯಗ್ರಾಮದ ಶಿಸ್ತು ಹಾಗೂ ಸಾಧನೆಗಳು ಸುಲಭವಾಗಿ ಮೇಲ್ಮೆಗೆ ಬಂದವು. ನರ್ತಕರಲ್ಲಿ ಪರಸ್ಪರ ಹೊಂದಾಣಿಕೆ, ಗರಿಗರಿಯಾದ ಚಲನೆ, ಲಾವಣ್ಯಪೂರ್ಣ ನಡಿಗೆಗಳು ಗಮನ ಸೆಳೆದವು. ಎರಡು ಪದ್ಧತಿಗಳ ಸಾಮ್ಯ ಹಾಗೂ ಪ್ರತ್ಯೇಕತೆಗಳು ಪ್ರಖರವಾಗಿ ಮೂಡುತ್ತಾ ನೃತ್ಯ ಪಸರಿಸತೊಡಗಿತು! ತಾಳ ಕಾಲವನ್ನು ಬದಲಾಯಿಸುತ್ತಾ ಪಾದಚಲನೆಗೆ ಕಾವು ತುಂಬುತ್ತಾ ಬೆಡಗಿನಿಂದ ನರ್ತಿಸಿದರು. ಒಡಿಸ್ಸಿಯ ಸೌಕುಮಾರ್ಯ, ಹಾವಭಾವ ಹಾಗೂ ಕ್ಯಾಂಡಿಯನ್ ನೃತ್ಯದ ವೀರ‌್ಯವತ್ತಾದ ಭಾವಭಂಗಿಗಳು ನೃತ್ಯಕ್ಕೆ ಸೊಬಗು ತುಂಬಿದವು. ಉತ್ತರಾರ್ಧದಲ್ಲಿ ಜಯದೇವನ ಅಷ್ಟಪದಿಯಲ್ಲಿ ಅಭಿನಯ ಪ್ರಭಾವಕಾರಿಯಾಗಿ ಹೊಮ್ಮಿತು. ಚುರುಕು ನಡೆ, ಬೆಡಗು, ಸುಂದರ ಅಭಿನಯಗಳಿಂದ `ಸಂಹಾರ~ ಒಂದು ಸ್ವಾಗತಾರ್ಹ ಪ್ರಯತ್ನವಾಗಿ ಪ್ರದರ್ಶಿತವಾಯಿತು. ಗಾಯನದಲ್ಲಿ ಜತೀನ್ ಸಾಹು, ಮದ್ದಳದಲ್ಲಿ ಶಿಬಶಂಕರ್ ಸತ್ಪತಿ, ಕೊಳಲಿನಲ್ಲಿ ಶ್ರೀನಿಬಾಸ್ ಸತ್ಪತಿ, ಪಿಟೀಲಿನಲ್ಲಿ ಸನಿಬ್ ಕುಂಡಾ ಹಾಗೂ ಕಾಂಡ್ಯನ್ ಡ್ರಮ್ಸನಲ್ಲಿ ಉದಯ್‌ಕುಮಾರ - ಸ್ಫೂರ್ತಿದಾಯಕ ಬೆಂಬಲ ನೀಡಿದರು.

ಮಹಾಗಣಪತಿ ಸಂಗೀತ ಸಭೆ
ಕೃಷ್ಣರಾಜಪುರದ ಶ್ರೀಮಹಾಗಣಪತಿ ಸಂಗೀತ ಸಭಾ ಮೂರು ದಿನಗಳ ಆರಾಧನಾ ಮಹೋತ್ಸವವನ್ನು ಶ್ರದ್ಧೆ-ಉತ್ಸಾಹಗಳಿಂದ ಆಚರಿಸಿತು. ತದಂಗವಾಗಿ ದೇವಸಂದ್ರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿದ್ಯಾರ್ಥಿಗಳು ಹಾಗೂ ಆಹ್ವಾನಿತ ಕಲಾವಿದರುಗಳಿಂದ `ಸಂಗೀತ ಸೇವೆ~ ನಡೆಯಿತು. ಹಿರಿಯ ಗಾಯಕ ಎಚ್. ರಾಮಚಂದ್ರರಾವ್ ಅವರು ಕಮಲಮ್ಮ ಮತ್ತು ಗಂಜಿಗುಂಟೆ ನರಸಿಂಹಮೂರ್ತಿ ಸ್ಮಾರಕ `ಗಾನಕಮಲ~ ಪ್ರಶಸ್ತಿಯನ್ನು ಸ್ವೀಕರಿಸಿದರು.

ಗೋಷ್ಠಿಗಾಯನದಲ್ಲಿ ಮೊದಲಿಗೆ ಪಿಳ್ಳಾರಿ ಗೀತೆಗಳನ್ನು - ಲಂಬೋದರ, ಕುಂದಗೌರ, ಕೆರೆಯ ನೀರನು, ಪದಮನಾಭ - ಹಾಡಿ ಪುರಂದರದಾಸರ ನಮರತ್ನ ಮಾಲಿಕೆಗೆ ಸರಿದರು. ನಾಟ ರಾಗದಲ್ಲಿ ಜಯ ಜಾನಕೀ ಕಾಂತ, ಆರಭಿಯಲ್ಲಿ ಆಡಿದನೊ ರಂಗ, ಕಲ್ಯಾಣಿಯಲ್ಲಿ ಕಲ್ಲುಸಕ್ಕರೆ ಕೊಳ್ಳಿರೋ, ಭೈರವಿಯಲ್ಲಿ ಓಡಿಬಾರಯ್ಯ, ಅಠಾಣದಲ್ಲಿ ಸಕಲ ಗ್ರಹಬಲ ನೀನೆ, ಶಂಕರಾಭರಣದಲ್ಲಿ ಪೋಗದಿರಲೊ ರಂಗ, ಕಾನಡದಲ್ಲಿ ನಾನಿನ್ನ ಧ್ಯಾನದೊಳಿರಲು, ಕಾಂಬೋಧಿಯಲ್ಲಿ ಕಷ್ಣಮೂರ್ತಿ ಕಣ್ಣಮುಂದೆ, ಶ್ರೀ ರಾಗದಲ್ಲಿ ಬಂದನೇನೆ ರಂಗ ಬಂದನೇನೆ ಮತ್ತು ಸುರುಟಿಯಲ್ಲಿ ಇಂದಿನ ದಿನವೇ ಶುಭದಿನವು ಎಲ್ಲರೂ ಕೂಡಿ ಹಾಡಿದಾಗ ಕೃಷ್ಣನ ಮೂರುತಿ ಕಣ್ಣಮುಂದೆ ಬಂದು ನಿಂತಂತಾಯಿತು.

ನಂತರ ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಹಾಡತೊಡಗಿದರು. ಜಗದಾನಂದಕಾರಕ (ನಾಟ ರಾಗ), ದುಡುಕುಗಲ (ಗೌಳ), ಸಾಧಿಂಚೆನೆ (ಆರಭಿ), ಕನಕನರುಚಿರಾ (ವರಾಳಿ) ಮತ್ತು ಎಂದರೋ ಮಹಾನುಭಾವುಲು (ಶ್ರೀ) ಒಂದಾದ ಮೇಲೊಂದರಂತೆ ಭಕ್ತಿ ಭಾವದಿಂದ ಹಾಡಿದರು. ಗಾಯನದಲ್ಲಿ ಎಚ್. ರಾಮಚಂದ್ರರಾವ್, ಹರಿಹರನ್, ಜಿ.ಎನ್.ಎಲ್. ಪ್ರಸಾದ್, ಮಂಜುನಾಥ್, ಆನಂದತೀರ್ಥ, ಸೀತಾಲಕ್ಷ್ಮೀ, ರೂಪಶ್ರೀ, ನಾಗರತ್ನ, ಲಕ್ಷ್ಮೀ, ವೈದೇಹಿ ಕೇಶವಮೂರ್ತಿ, ಜಯಸಿಂಹ ಮತ್ತು ಮುರಳೀಕೃಷ್ಣ; ಪಿಟೀಲಿನಲ್ಲಿ ಟಿ.ಎಸ್. ಕೃಷ್ಣಮೂರ್ತಿ, ತರುಣ್, ವಿಭುದೇಂದ್ರಸಿಂಹ ಹಾಗೂ ಜಯರಾಂ ನೆರವಾದರು. ಲಯವಾದ್ಯಗಳಲ್ಲಿ ನಂದಕುಮಾರ್, ಗಣೇಶ್ ಮತ್ತು ಸಾಗರ್ ಇಂಬು ತುಂಬಿದರು. ವೀಣೆಯಲ್ಲಿ ಸಹವಾದನ ಮಾಡಿದವರು ಶ್ರೀಕಾಂತ್.

ಪ್ರೌಢ ಗಾಯನ
ತನ್ನ 16ನೇ ವಾರ್ಷಿಕ ಸಂಗೀತೋತ್ಸವ ನಿಮಿತ್ತ ರಾಜಮಹಲ್ ವಿಲಾಸ ಸಂಗೀತ ಸಭಾ ಎರಡು ದಿನಗಳ ಸಂಗೀತ ಕಾರ್ಯಕ್ರಮವನ್ನು ನಡೆಸಿತು. ಹಿರಿಯ ಗಾಯಕಿ ಟಿ.ಎಸ್. ವಸಂತ ಮಾಧವಿ ಅವರು ಸಭೆಯ ಗೌರವವನ್ನು ಸ್ವೀಕರಿಸಿದರು.

ಭಾನುವಾರ ಸಂಜೆ ಇಲ್ಲಿ ಹಾಡಿದ ಪ್ರೊ. ಮೈಸೂರು ನಾಗಮಣಿ ಶ್ರೀನಾಥ್ ಅವರು ಗಾಯಕಿಯಾಗಲ್ಲದೆ ಬೋಧಕಿ, ವಾಗ್ಗೇಯಕಾರರಾಗೂ ಪರಿಚಿತರು. ತಮ್ಮ ಪ್ರಸ್ತುತ ಕಾರ್ಯಕ್ರಮದಲ್ಲಿ ಭಾವಪೂರ್ಣ ರಾಗಗಳನ್ನು, ಅರ್ಥಪೂರ್ಣ ಕೃತಿಗಳ ಮೂಲಕ ಪ್ರೌಢವಾಗಿ ನಿರೂಪಿಸಿದರು. ಪಿಟೀಲನ್ನು ನಳಿನಾ ಮೋಹನ್, ಮೃದಂಗವನ್ನು ಆನೂರು ಅನಂತಕಷ್ಣ ಶರ್ಮ ಹಾಗೂ ಖಂಜರಿಯಲ್ಲಿ ಸಿ.ಪಿ. ವ್ಯಾಸವಿಠಲ ಉತ್ತಮ ಹೊಂದಾಣಿಕೆಯಿಂದ ಪಕ್ಕವಾದ್ಯಗಳನ್ನು ನುಡಿಸಿದರು. ಕಾನಡ ರಾಗ ಹಸನಾಗಿ ಹಾಡಿ ಒಂದು ನಾದಪೂರ್ಣ ವಾತಾವರಣ ಸೃಷ್ಟಿಸಿದರು. `ಸುಖಿ ಎವರೊ~ ಎಂದೂ ಪ್ರಿಯವಾದ ಕೀರ್ತನೆ. ಒಂದು ಕಾಲದಲ್ಲಿ ಅತಿ ಜನಪ್ರಿಯವಾಗಿದ್ದ `ಮರುಗೇಲರಾ~ ದ್ರುತಕಾಲದಲ್ಲಿ ಹಾಡಿ, ಧರ್ಮವತಿ ರಾಗವನ್ನು ಹಿತಮಿತವಾಗಿ ವಿಸ್ತರಿಸಿದರು. ದಾಸರ ಹೆಚ್ಚು ಬಳಕೆಯಲ್ಲಿಲ್ಲದ ಒಂದು ದೇವರನಾಮ `ಹರಿಯೇ ಸರ್ವೋತ್ತಮ~ ಆಲಾಪನೆ, ನೆರವಲ್, ಸ್ವರಗಳಿಂದ ಪ್ರೌಢವಾಗಿ ಹಾಡಿದರು. ಇನ್ನೊಂದು ಅಪರಿಚಿತ ಪದ `ಬಂದೆ ಹೋಯಿತು ನರಜನ್ಮ~ ಹಾಡಿ, ಕೊನೆಗೆ `ಇಂದಿನ ದಿನವೇ ಶುಭದಿನವು~ ತೆಗೆದುಕೊಂಡರು. ಕಛೇರಿಯ ಕೊನೆಯಲ್ಲಿ ಅದರ ರಾಗಮಾಲಿಕೆ ನಿರೂಪಣೆ ಬೇಕಿತ್ತೇ? ಕೇಳುಗರು ಎದ್ದೇಳುವ ಸಮಯದಲ್ಲಿ ಹ್ರಸ್ವವಾಗಿ ಹಾಡಿದ್ದರೆ ಚೆನ್ನಿತ್ತು ಎಂದೆನಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT