ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಗ ಗ್ರಂಥಾಲಯಕ್ಕೆ ಹೊಸ ಕಳೆ

Last Updated 24 ಮಾರ್ಚ್ 2011, 10:40 IST
ಅಕ್ಷರ ಗಾತ್ರ

ಧಾರವಾಡ: “ನಗರದ ಹೃದಯಭಾಗದಲ್ಲಿರುವ ಗರಗ ಸಿದ್ಧಲಿಂಗಪ್ಪ ನಗರ ಶಾಖಾ ಗ್ರಂಥಾಲಯವನ್ನು ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಮಾ. 28 ರಂದು ಇದರ ಲೋಕಾರ್ಪಣೆ ನಡೆಯಲಿದೆ” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದರು.

ಬುಧವಾರ ಜಿಲ್ಲಾಧಿಕಾರಿಗಳು ಗ್ರಂಥಾಲಯದ ನವೀಕರಣ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, 1958ರಲ್ಲಿ ಸ್ಥಾಪನೆಯಾದ ಈ ಗ್ರಂಥಾಲಯವನ್ನು ಸರ್ಕಾರದಿಂದ ಮೊದಲ ಹಂತದಲ್ಲಿ ಬಿಡುಗಡೆಯಾದ 20 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾರ್ಯವನ್ನು 2009ರಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಆರಂಭಿಸಲಾಯಿತು. ಗ್ರಂಥಾಲಯ ಕಟ್ಟಡಕ್ಕೆ ಫ್ಲೋರಿಂಗ್, ಹೊಸ ಕೋಣೆ, ಶೌಚಾಲಯ ನಿರ್ಮಾಣ, ವಿದ್ಯುತ್. ಸಿಸಿ ಕ್ಯಾಮರಾ ಮತ್ತು 80 ಸೋಲಾರ ದೀಪಗಳನ್ನು ಅಳವಡಿಸಲಾಗಿದೆ ಎಂದರು.

ಎರಡನೇ ಹಂತದಲ್ಲಿ ಮಹಾನಗರ ಪಾಲಿಕೆಯ ಗ್ರಂಥಾಲಯ ನಿಧಿಯಿಂದ 30 ಲಕ್ಷ ರೂ. ಪಡೆದುಕೊಂಡು ಒಟ್ಟು 50 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಇದರಲ್ಲಿ 30 ಲಕ್ಷ ರೂ. ಗಳನ್ನು ಸಿವಿಲ್ ಕೆಲಸಕ್ಕಾಗಿ, 15 ಲಕ್ಷ ರೂ. ರ್ಯಾಕ್ಸ್ ಮತ್ತು ಫರ್ನಿಚರ್ ಅಳವಡಿಕೆಗಾಗಿ, 5 ಲಕ್ಷ ರೂ. ಮೊತ್ತದಲ್ಲಿ 3500 ಹೊಸ ಪುಸ್ತಕಗಳನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.

ಈ ಗ್ರಂಥಾಲಯದಲ್ಲಿ 35000 ಪುಸ್ತಕಗಳಿದ್ದು, ಒಟ್ಟು 38500 ಪುಸ್ತಕಗಳು ಓದುಗರಿಗೆ ಲಭ್ಯ ಇವೆ. ಗ್ರಂಥಾಲಯ ಮೇಲುಸ್ತುವಾರಿಗಾಗಿ ಗ್ರಂಥಾಲಯ ಸಿಬ್ಬಂದಿಯನ್ನು ಉಪಯೋಗಿಸಿಕೊಳ್ಳಲಾಗುವುದು. ಈಗಿದ್ದ ಪುಸ್ತಕಗಳನ್ನು ಗಣಕೀಕರಣಗೊಳಿಸಲು ಕ್ರಮಕೈಗೊಳ್ಳಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳು ಅನುಕೂಲವಾಗಲಿವೆ ಎಂದರು.

ಧಾರವಾಡದಲ್ಲಿ 11 ಹಾಗೂ ಹುಬ್ಬಳ್ಳಿಯಲ್ಲಿ 13 ಸೇರಿದಂತೆ ಒಟ್ಟು 24 ನಗರ ಶಾಖಾ ಗ್ರಂಥಾಲಯಗಳಿದ್ದು, ಅವುಗಳನ್ನು ಹಂತ ಹಂತವಾಗಿ ಪ್ರಾಧಿಕಾರ ಮತ್ತು ಸ್ಥಳೀಯ ಅನುದಾನದಲ್ಲಿ ನವೀಕರಿಸಲಾಗುವುದು. ಇದಲ್ಲದೆ ಈಗಾಗಲೇ ನಗರದ ಸಪ್ತಾಪುರ ಹಾಗೂ ಭೈರಿದೇವರಕೊಪ್ಪದಲ್ಲಿ ಗ್ರಂಥಾಲಯ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಜೈನ್ ತಿಳಿಸಿದರು.

ಈ ಗ್ರಂಥಾಲಯವನ್ನು 28 ರಂದು ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಲೋಕಾರ್ಪಣೆ ಮಾಡುವರು ಎಂದು ಹೇಳಿದರು. ನಿರ್ಮಿತಿ ಕೇಂದ್ರೆದ ಎಂಜಿನಿಯರ್ ಸುರೇಂದ್ರಕುಮಾರ ಕಳಸಾ ಹಾಗೂ ಗ್ರಂಥಾಲಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT