ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿ ಹೆಣೆವವರ ಹಾಡು ಪಾಡು

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ತೆಂಗು ಕಲ್ಪವೃಕ್ಷ. ಅದರ ಗರಿಗಳನ್ನು ಹೆಣೆಯುತ್ತಾ ಕುಳಿತ ಕೈಗಳಲ್ಲಿ ಆದ ಗಾಯಗಳು ಬೇರೆ ಕತೆಯನ್ನೇ ಹೇಳುತ್ತವಾದರೂ ಅವರ ತುತ್ತಿನಚೀಲವನ್ನು ತುಂಬಿಸುತ್ತಿರುವುದು ಅದೇ ಕಲ್ಪವೃಕ್ಷ ಎಂಬುದು ಸತ್ಯ.

ಮಲ್ಲೇಶ್ವರದ ಬಿಗ್‌ಬಜಾರ್‌ನಂಥ ದೊಡ್ಡ ಮಳಿಗೆಯ ಹತ್ತಿರದಲ್ಲೇ ಹೆಂಗಳೆಯರ ಗುಂಪು. ದೃಢಕಾಯದ ಈ ಮಹಿಳೆಯರೆಲ್ಲ ತಲೆತಗ್ಗಿಸಿ ಕುಳಿತಿದ್ದರು. ಎಲ್ಲರ ಕೈಗಳಿಗೆ ಬಿಡುವಿರಲಿಲ್ಲ.

ಹಸಿರು ಗರಿಗಳ ನಡುವೆ ಅವರ ಬೆರಳುಗಳು ಚಕಚಕನೇ ಆಡುತ್ತಿದ್ದವು. ಉದ್ದಾನುದ್ದ ಗರಿಗಳು ವಿವಿಧ ಆಕಾರ ಪಡೆಯುತ್ತಲೇ ಚಪ್ಪರವನ್ನು ಸಿಂಗಾರಗೊಳಿಸಲು ಸಜ್ಜಾಗುತ್ತಿದ್ದವು. ಗರಿಯನ್ನು ಬೇರ್ಪಡಿಸುವುದು, ಅವನ್ನು ಚಕಚಕನೆ ಆಕಾರಕ್ಕೆ ಹೆಣೆಯುವುದು, ಒಂದು ಗರಿ ಸಿದ್ಧವಾದದ್ದೇ ಇನ್ನೊಂದರತ್ತ ಕೈಚಾಚುವುದು... ಅಲ್ಲಿದ್ದವರು ಕೆಲಸ ಮಾಡುತ್ತಲೇ ಇದ್ದರು.

ಶುಭ ಸಂದರ್ಭವಿರಲಿ, ಅಂತಿಮ ಯಾತ್ರೆಯೇ ಇರಲಿ, ತೆಂಗಿನ ಗರಿ ಬೇಕೇಬೇಕು. ಗರಿ ಚಪ್ಪರದ ನೆರಳಲ್ಲಿ ನಿಂತು ಸಂಭ್ರಮದಲ್ಲಿ ಮುಳುಗುವ ಅನೇಕರಿಗೆ ಈ ಮಹಾನಗರಿಯಲ್ಲಿ ಗರಿಹೆಣೆಯುವವರ ಬದುಕು ಹೇಗಿದೆ ಎಂಬುದು ಗೊತ್ತಿರಲಿಕ್ಕಿಲ್ಲ.

ಗರಿ ಹೆಣೆಯುತ್ತಿದ್ದವರ ಗುಂಪಿನಲ್ಲಿ ಹಿರಿಯರೆಂಬಂತೆ ಕಾಣಿಸುತ್ತಿದ್ದ ಮಣಿ ಮಾತಿಗೆ ತೊಡಗಿದರು.`ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಯಿತು. ಮನೆಯಲ್ಲಿ ವಿದ್ಯಾಭ್ಯಾಸ ನೀಡುವಷ್ಟು ಅನುಕೂಲವಿರಲಿಲ್ಲ. ಪತಿಯ ಜತೆ ಕೋಲಾರದಿಂದ ಬೆಂಗಳೂರಿಗೆ ಬಂದೆ.

ಈಗ ಐವತ್ತು ವರ್ಷವಾಯಿತು ಚಪ್ಪರಗಳನ್ನು ಕಟ್ಟುತ್ತಲೇ ದಿನ ದೂಡಿದ್ದೇವೆ~ ಎಂದು  ಕೈಯಲ್ಲಿ ಹಿಡಿದ ತೆಂಗಿನ ಗರಿಗಳನ್ನು ಒಟ್ಟು ಸೇರಿಸಿ ಗಂಟು ಹಾಕಿದರು. ಆ ಐದು ದಶಕಗಳ ಶ್ರಮದ ಪ್ರತೀಕದಂತಿತ್ತು ಅವರನ್ನು ಮೀರಿ ಬಂದ ನಿಟ್ಟುಸಿರು.

`ನನಗೆ ನಾಲ್ಕು ಜನ ಮಕ್ಕಳು, ಆದರೆ ಯಾರಿಗೂ ವಿದ್ಯಾಭ್ಯಾಸ ನೀಡುವುದಕ್ಕೆ ಆಗಲಿಲ್ಲ ಎಂಬ ಕೊರಗು ಕಾಡುತ್ತಿದೆ. ಈ ಗರಿ ಕಟ್ಟುವುದರಿಂದ ಬದುಕು ಕಟ್ಟಿಕೊಳ್ಳುವುದು ಆಗುವುದೇ ಇಲ್ಲ. ಹೊಟ್ಟೆ ಹೊರೆಯುತ್ತಿದ್ದೇನೆ ಎಂಬ ಸಮಾಧಾನವೊಂದೇ ಸಿಗುತ್ತದೆ.

ಮತ್ತೇನೂ ನೀಡಲಾಗುವುದಿಲ್ಲ. ಎಲ್ಲ ಗೃಹಪ್ರವೇಶಗಳಿಗೂ ನಾವು ಹೆಣೆಯುವ ಚಪ್ಪರ ಬೇಕು. ದುರಂತ ಎಂದರೆ ನಮಗೇ ಒಂದು ಸೂರಿಲ್ಲ~ ಎನ್ನುವಾಗ ಬದುಕಿನ ವ್ಯಂಗ್ಯ ಗರಿಗಳ ಸದ್ದಿನಲ್ಲಿ ನಕ್ಕಂತಾಗಿತ್ತು.

`ತಮಿಳುನಾಡಿನಿಂದ ಗರಿಗಳು ಬರುತ್ತವೆ. ಒಂದು ಗರಿಗೆ 30 ರೂಪಾಯಿ ಕೊಟ್ಟು ತೆಗೆದುಕೊಳ್ಳುತ್ತೇನೆ. ನಲವತ್ತು ರೂಪಾಯಿಗೆ ಮಾರುತ್ತೇನೆ. ಇಂದಿನ ಬೆಲೆ ಏರಿಕೆಯ ದಿನದಲ್ಲಿ ಈ ಹಣದಲ್ಲಿ ಜೀವನ ನಡೆಸುವುದು ದುಸ್ತರ. ಆಷಾಢದಲ್ಲಿ ಚಪ್ಪರಗಳು ಏಳುವುದೇ ಅಪರೂಪ. ಗರಿಗಳಿಗೆ ಬೇಡಿಕೆ ಇಲ್ಲ.
 
ಹಾಗಾಗಿ ಚಿಕ್ಕದೊಂದು ಚಪ್ಪಲಿ ರಿಪೇರಿ ಅಂಗಡಿ ಇಟ್ಟುಕೊಂಡಿದ್ದೇನೆ. ಕೇವಲ ಗರಿಯನ್ನೇ ನಂಬಿಕೊಂಡು ಕುಳಿತರೆ ಹೊಟ್ಟೆಗೆ ತಣ್ಣೀರೇ ಗತಿ~ ಎನ್ನುವುದು ಮಣಿ ಅಳಲು. ಅವರೊಂದಿಗಿದ್ದ ಅಂಗಮ್ಮ ಮಣಿ ಕತೆ ಮುಗಿಯುವವರೆಗೂ ಸುಮ್ಮನಿದ್ದರು. ನಂತರ ತಮ್ಮ ಕತೆ ಆರಂಭಿಸಿದರು. ಮದುವೆಗೂ, ಮಸಣಕೂ ಹೋಗುವ ಗರಿಯಷ್ಟೇ ನಿರ್ಲಿಪ್ತವಾಗಿತ್ತು ಅವರ ಧ್ವನಿ.

`ನಾನು ಆಡುವ ವಯಸ್ಸಿನಲ್ಲಿ ಗರಿ ಹೆಣೆಯುತ್ತಿದ್ದೆ. ಅದು ಕೇವಲ ಮಕ್ಕಳಾಟವಾಗಿತ್ತು. ಆದರೆ ಈಗ ಅದೇ ಬದುಕು ಕೊಟ್ಟಿದೆ. ಮಂಡ್ಯದಿಂದ ಬೆಂಗಳೂರಿಗೆ ಬಂದು ಸುಮಾರು ಇಪ್ಪತ್ತು ವರ್ಷವಾಯಿತು. ಅಂದಿನಿಂದ ಇಂದಿನವರೆಗೆ ಇದನ್ನೇ ನೆಚ್ಚಿಕೊಂಡಿದ್ದೇನೆ. ಮೂವರು ಮಕ್ಕಳಿದ್ದಾರೆ. ಬಂದ ಹಣದಲ್ಲಿ ಹಾಗೂ ಹೀಗೂ ಸರಿದೂಗಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದೇನೆ. ಆಂಧ್ರ, ತಮಿಳುನಾಡಿನಿಂದ ಗರಿ ತಂದು ಕೊಡುತ್ತಾರೆ.

ಹಬ್ಬಹರಿದಿನಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ. ಗಣಪತಿ ಹಬ್ಬದಲ್ಲಿ ನೂರು ರೂಪಾಯಿಗೆ ಒಂದು ಗರಿ ಮಾರಿದರೂ ಕೊಳ್ಳಲು ಸಿದ್ಧರಿರುತ್ತಾರೆ. ನಮಗೆ ಆಗ ಕೈತುಂಬಾ ಕೆಲಸ. ಮಳೆಗಾಲದಲ್ಲಿ ಮಾತ್ರ ಜೀವನ ನಡೆಸುವುದು ಕಷ್ಟ. ಮನೆ ಕೆಲಸಕ್ಕೆ ಹೋಗಿ ಅಭ್ಯಾಸವಿಲ್ಲ.
 
ಹಾಗಾಗಿ ತುತ್ತಿನಚೀಲ ತುಂಬಿಸಿಕೊಳ್ಳುವುದಕ್ಕೆ ಪರದಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿಯಂತೂ ನೆಮ್ಮದಿಯಾಗಿ ಫುಟ್‌ಪಾತ್ ಮೇಲೆ ಹೆಣೆಯುವುದಕ್ಕೂ ಅಸಾಧ್ಯವಾಗುತ್ತಿದೆ~ ಎನ್ನುತ್ತ ಒಂದರೆ ಗಳಿಗೆ ಸುಮ್ಮನಾದರು. ಚೂಪಾದ ಗರಿಯೊಂದು ಬೆರಳಿಗೆ ನಾಟಿತ್ತು.

ಹೆಣೆಯುವಾಗ ಕೈಗೆ ಕಡ್ಡಿ ಚುಚ್ಚಿ ಕೀವಾಗಿದ್ದ ಗಾಯದ ಗುರುತು ನೋಡುತ್ತಾ, `ಕಾಲಕ್ರಮೇಣ ಇದೆಲ್ಲ ಅಭ್ಯಾಸವಾಗಿಬಿಟ್ಟಿತು, ನೋಡಿ  ಮೊದಮೊದಲು ತುಂಬಾನೆ ಕಷ್ಟವಾಗುತ್ತಿತ್ತು. ಊಟ ಮಾಡುವುದಕ್ಕೂ ಆಗುತ್ತಿರಲಿಲ್ಲ. ಕೈಯಲ್ಲಿ ಕಡ್ಡಿ ಚುಚ್ಚಿ ಖಾರ ತಾಕಿದರೆ ಉರಿಯುತ್ತಿತ್ತು. ಆದರೆ ಇದನ್ನು ಬಿಟ್ಟು ನನಗೆ ಬೇರೆ ಕೆಲಸ ಗೊತ್ತಿಲ್ಲ~ ಎಂದು ಮೌನಕ್ಕೆ ಸರಿದರು.

ಎರಡು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡ ಚಿನ್ನಮ್ಮನವರಿಗೆ ಮನೆಯಲ್ಲಿ ವಯಸ್ಸಿಗೆ ಬಂದ ಮಗಳಿದ್ದಾಳೆ ಎಂಬ ಚಿಂತೆ. `ಅವಳಿಗೆ ಮದುವೆ ಮಾಡಿಸುವವರೆಗೂ ನನಗೆ ನೆಮ್ಮದಿ ಇಲ್ಲ. ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಈ ಗರಿ ಹೆಣೆಯುವುದನ್ನೆ ವೃತ್ತಿಯಾಗಿಸಿಕೊಂಡೆ. ಬೇಡಿಕೆ ಇದ್ದಾಗ ಹೆಣೆಯದಿದ್ದ ಗರಿ ಕೂಡ ತೆಗೆದುಕೊಂಡು ಹೋಗುತ್ತಾರೆ. ತಿಂಗಳಾಂತ್ಯಕ್ಕೆ ಪಗಾರ ನೀಡುವ ಕಂಪೆನಿ ಇದಲ್ಲ.

ಒಂದು ತಿಂಗಳು ಲಾಭ ಬಂದರೆ ಇನ್ನೊಂದು ತಿಂಗಳು ಒಪ್ಪೊತ್ತು ಊಟಕ್ಕೂ ಗತಿ ಇರದ ಬದುಕು ನಮ್ಮದು ಎನ್ನುವಾಗ ಅಪ್ರಯತ್ನವಾಗಿಯೇ ಕಣ್ತುಂಬಿಕೊಂಡಿದ್ದವು ಗರಿ ಹೆಣೆಯುತ್ತಿದ್ದ ಚಿನ್ನಮ್ಮನಿಗೆ.

`ಮಲ್ಲೇಶ್ವರದ ಈ ರಸ್ತೆ ಬದಿ ನನಗೆ ಉದ್ಯೋಗ ನೀಡಿದ ತಾಣ. ಹೆಣೆಯುವುದು ಸ್ವಲ್ಪ ಓರೆಕೋರೆ ಆದರೂ ಅದಕ್ಕೆ ಬೆಲೆ ನೀಡುವವರು ಕಿರಿಕಿರಿ ಮಾಡುತ್ತಾರೆ. ಅವರದೇನು ತಪ್ಪಿಲ್ಲ. ಎಷ್ಟಾದರೂ ಹಣಕೊಟ್ಟು ತೆಗೆದುಕೊಳ್ಳುವವರು ಚೆನ್ನಾಗಿ ಇರಲಿ ಎಂಬ ಆಸೆ ಅವರದು. ಆದರೆ ನಮಗೆ ಆದಷ್ಟು ಬೇಗ ಕೆಲಸ ಮುಗಿಸಿ ಹತ್ತು ರೂಪಾಯಿ ಹೆಚ್ಚು ಗಳಿಸುವ ತವಕ~ ಎನ್ನುತ್ತಾರೆ.

ಗರಿ ಹೆಣೆಯುವ ಮೂಲಕ ಬದುಕಿನ ದಾರಿ ಕಂಡುಕೊಂಡಿರುವ ಈ ಕುಟುಂಬಗಳ ವಾಸಕ್ಕೆ ಫುಟ್‌ಪಾತ್‌ಗಳೇ ದಿಕ್ಕು. ಬದುಕಿನದ್ದು ಹೀಗೇ ನಾನಾ ಗತಿ, ನಾನಾ ರೀತಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT