ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗಳ ಭಾನುವಾರ

Last Updated 15 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಒಂದು ಭಾನುವಾರದಂದು ಕ್ರೈಸ್ತ ಬಾಂಧವರು ಕೈಯಲ್ಲಿ ತೆಂಗಿನ ಗರಿಗಳನ್ನು ಹಿಡಿದುಕೊಂಡು ಹೋಗುವುದನ್ನು ಕಂಡು ನೀವು ಆಶ್ಚರ್ಯ ಪಟ್ಟಿರಬಹುದು. ಆ ಗರಿಗಳು ಹಿರಿಯರಿಗೆ ಭಕ್ತಿಯ ಸಂಕೇತವಾದರೆ ಪುಟ್ಟಮಕ್ಕಳಿಗೆ ಅದನ್ನು ಆಡಿಸುತ್ತಾ ನಿಲ್ಲುವ ಸಂಭ್ರಮ. ಬೆಳೆದ ಮಕ್ಕಳಿಗಂತೂ ಅದರಲ್ಲೆೀ ಶಿಲುಬೆ ಅಥವಾ ಇತರ ಆಕಾರಗಳನ್ನು ಮಾಡಿಕೊಂಡು ತಮ್ಮ ಕಲಾ ನೈಪುಣ್ಯವನ್ನು ವ್ಯಕ್ತಗೊಳಿಸುವ ತವಕ. ಇದೆಲ್ಲ ನಡೆಯುವುದು ಗರಿಗಳ ಹಬ್ಬ ಅಥವಾ ಗರಿಗಳ ಭಾನುವಾರದಂದು.

ಏನಿದು ಗರಿಗಳ ಭಾನುವಾರ?
ಇದನ್ನು ಶುಭ ಶುಕ್ರವಾರಕ್ಕೆ ಮುಂಚಿನ ಭಾನುವಾರ ಅಂದರೆ, ಕ್ರೈಸ್ತರ 40 ದಿನಗಳ ತಪಸ್ಸು ಕಾಲದ (ಲೆಂಟ್) ಕೊನೆಯ ಭಾನುವಾರ ಅಚರಿಸಲಾಗುತ್ತದೆ. ಅಂದು ಚರ್ಚಿನಲ್ಲಿ ಸೇರುವ ಕ್ರೈಸ್ತ ಬಾಂಧವರೆಲ್ಲರ ಬಳಿಯಲ್ಲಿ ಗರಿಗಳನ್ನು ಕಾಣಬಹುದು.

ಚರ್ಚ್ ಆವರಣದಲ್ಲಿ ಪೂಜಾವಸ್ತ್ರಗಳನ್ನು ಧರಿಸಿದ ಗುರುಗಳು ಪವಿತ್ರ ಗ್ರಂಥವನ್ನು ಪಠಿಸಿ ಗರಿಗಳನ್ನು ಮಂತ್ರಿಸಿದ ನಂತರ ಎಲ್ಲರೂ ಒಂದೊಂದು ಗರಿಯನ್ನು ಕೈಯಲ್ಲಿ ಹಿಡಿದು ಶಿಸ್ತಾಗಿ ಮೆರವಣಿಗೆಯಲ್ಲಿ ಯೇಸುವಿನ ಸ್ತುತಿಗೀತೆಯನ್ನು ಹಾಡುತ್ತಾ ದೇವಾಲಯದ ಒಳಗೆ ಹೋಗುವ ದೃಶ್ಯ ಮನಮೋಹಕ.
 
ಆಬಾಲವೃದ್ಧರಾದಿಯಾಗಿ ಎಲ್ಲರೂ ಪಾಲ್ಗೊಳ್ಳುವ ಈ ಆಚರಣೆಯಿಂದ ಪವಿತ್ರ ವಾರಕ್ಕೆ ಚಾಲನೆ ದೊರೆತು ಅದು ಗುಡ್ ಫ್ರೈಡೆ ಹಾಗೂ ಈಸ್ಟರ್ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಅಂದು ನಳನಳಿಸುವ ಹರಿದ್ವರ್ಣದ ಗರಿಗಳು ಶಿಲುಬೆಯಾಕಾರ ತಳೆದು ಮನೆಗಳ ಬಾಗಿಲನ್ನು ಅಲಂಕರಿಸುತ್ತವೆ. ಮುಂದಿನ ವರ್ಷದ ಬೂದಿ ಬುಧವಾರದಂದು ಅವು ಬೆಂಕಿಗೆ ಆಹುತಿಯಾಗುವುದರಲ್ಲಿ ಏನೋ ಒಂದು ಸಾರ್ಥಕತೆ ಇದೆ.

ಹಿನ್ನೆಲೆ: 2000 ವರ್ಷಗಳ ಹಿಂದೆ ಯೇಸುಕ್ರಿಸ್ತನ ನಾಡಿನಲ್ಲಿ ಸ್ವದೇಶಿಯರು ಪರಕೀಯರ ದಬ್ಬಾಳಿಕೆಯಿಂದ ನಲುಗಿದ್ದರು. ರೋಮನ್ ಚಕ್ರಾಧಿಪತ್ಯದ ಸಿಕ್ಕಾಪಟ್ಟೆ ಸುಂಕ, ದರ್ಪ ಮತ್ತು  ಶೋಷಣೆ ಒಂದೆಡೆಯಾದರೆ ತಮ್ಮ ದೇಶಸ್ಥರೇ ಆದ ಪುರೋಹಿತ ವರ್ಗದವರಿಂದ ಗೊಡ್ಡು ಸಂಪ್ರದಾಯಗಳ ಬಲವಂತ ಹೇರಿಕೆ, ಸಾಮಾಜಿಕ ಬಹಿಷ್ಕಾರ, ಭ್ರಷ್ಟಾಚಾರಗಳಿಂದ ಅಮಾಯಕ ಜನ ಬಲು ನೊಂದಿದ್ದರು.

ತಮ್ಮನ್ನು ಈ ಸಂಕೋಲೆಗಳಿಂದ ಬಿಡಿಸುವ ಒಬ್ಬ ವಿಮೋಚಕನಿಗಾಗಿ ಕಾದಿದ್ದ ಅವರಿಗೆ ಯೇಸುಕ್ರಿಸ್ತ ಆಶಾಕಿರಣವಾಗಿ ಕಂಡುದರಲ್ಲಿ ಅಚ್ಚರಿಯಿಲ್ಲ. ಒಮ್ಮೆ ಯೇಸು ಜೆರುಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಭಾರೀ ಜನಸಾಗರವೇ ಸೇರಿತ್ತು. ಆ ಜನರೆಲ್ಲ ಕೈಯಲ್ಲಿ ಗರಿಗಳನ್ನು ಹಿಡಿದದ್ದು ಮಾತ್ರವಲ್ಲದೆ ದಾರಿಯಲ್ಲಿ ಮಡಿ ಹಾಸಿ ಸಂಭ್ರಮ, ಹರ್ಷೋದ್ಗಾರದ ಗೀತೆಗಳೊಂದಿಗೆ ಯೇಸುವನ್ನು ಮೆರವಣಿಗೆಯಲ್ಲಿ ಕರೆದೊಯ್ದಿದ್ದರು ಎಂಬ ಉಲ್ಲೆೀಖ ಬೈಬಲ್ ಗ್ರಂಥದಲ್ಲಿ ಇದೆ. ಆದರೆ ಜೆರುಸಲೆಂ ಒಳಹೊಕ್ಕ ಮೇಲೆ ನಡೆದುದೇ ಬೇರೆ. ಯಾವ ಜನ ಜಯಕಾರ ಹಾಕಿ ಯೇಸುವನ್ನು ಸ್ವಾಗತಿಸಿದರೋ ಅದೇ ಜನ ಧಿಕ್ಕಾರ ಹಾಕಿ ಶಿಲುಬೆಗೆ ಏರಿಸಿದರು.

ಈ ಹಿನ್ನೆಲೆಯಲ್ಲಿ ನಡೆಯುವುದೇ ಗರಿಗಳ ಹಬ್ಬ. ಈ ವರ್ಷ ಇದನ್ನು  ಭಾನುವಾರ (ಏಪ್ರಿಲ್ 17) ಆಚರಿಸಲಾಗುತ್ತದೆ. ಈ ಆಚರಣೆಯು ದೊಡ್ಡ ಗುರುವಾರ, ಶುಭ ಶುಕ್ರವಾರ, ಪವಿತ್ರ ಶನಿವಾರಗಳ ಶೋಕ ಭರಿತ ಸಪ್ತಾಹಕ್ಕೆ ನಾಂದಿ ಹಾಡುತ್ತದೆ. ಮೃತ್ಯುಂಜಯ ಯೇಸುವಿನ ಪಾಸ್ಕ ಭಾನುವಾರದ ಶುಭೋದಯಕ್ಕೆ ಮತ್ತು ಎಲ್ಲಕ್ಕೂ ಮಿಗಿಲಾದ ಸಂತಸ ಸಂಭ್ರಮಕ್ಕೆ ಕಾಯುವಂತೆ ಪ್ರೇರೇಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT