ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ಉಪ್ಪಿನಂಗಡಿ ಪಟ್ಟಣ ಪಂಚಾಯಿತಿ ಬೇಡಿಕೆ

Last Updated 9 ಜುಲೈ 2013, 13:39 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಉಪ್ಪಿನಂಗಡಿ ಪಟ್ಟಣ ಪಂಚಾಯಿತಿ ಆಗಬೇಕು ಎನ್ನುವ ಬೇಡಿಕೆ 20 ವರ್ಷ ಹಳೆಯದು. ಪುತ್ತೂರಿನವರೇ ಆಗಿರುವ ವಿನಯಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರಾದುದರಿಂದ ಈ ಬೇಡಿಕೆ ಮತ್ತೆ ಗರಿಕೆದರಿದೆ. ಉಪ್ಪಿನಂಗಡಿ ಮತ್ತು 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿಯನ್ನು ಸೇರಿಸಿಕೊಂಡು ಉಪ್ಪಿನಂಗಡಿ ಪಟ್ಟಣ ಪಂಚಾಯಿತಿ ಮಾಡುವಂತೆ ಬೇಡಿಕೆ ವ್ಯಕ್ತವಾಗಿದೆ.

ಇವೆರಡೂ ಗ್ರಾಪಂಗಳು ಸಾಮಾನ್ಯ ಸಭೆಯಲ್ಲಿ ಎರಡೂ ಗ್ರಾಪಂ ಸೇರಿಸಿ ಉಪ್ಪಿನಂಗಡಿ ಪಟ್ಟಣ ಪಂಚಾಯಿತಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ವಾರದ ಹಿಂದೆ ನಡೆದ ಉಪ್ಪಿನಂಗಡಿ ಗ್ರಾಮ ಸಭೆಯಲ್ಲೂ ಉಪ್ಪಿನಂಗಡಿಯನ್ನು ಪಟ್ಟಣ ಪಂಚಾಯಿತಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಗಿದೆ.

2011ರ ಜನಗಣತಿ ಪ್ರಕಾರ ಉಪ್ಪಿನಂಗಡಿ ಗ್ರಾಮ ವ್ಯಾಪ್ತಿಯಲ್ಲಿ 8,456 ಜನಸಂಖ್ಯೆ ಇದ್ದುದು ಇದೀಗ 9 ಸಾವಿರಕ್ಕೆ ಏರಿದೆ. 34-ನೆಕ್ಕಿಲಾಡಿ ಗ್ರಾಮದಲ್ಲಿ 2011ರ ಜನಗಣತಿ ಪ್ರಕಾರ 4,600 ಇದ್ದುದು ಇದೀಗ 5,100ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಎರಡೂ ಗ್ರಾಮಗಳನ್ನು ಸೇರಿಸಿ ಉಪ್ಪಿನಂಗಡಿಯನ್ನು ಪಟ್ಟಣ ಪಂಚಾಯಿತಿ ಮಾಡಬೇಕೆಂಬ ಒಕ್ಕೊರಲ ಆಗ್ರಹ ಕೇಳಿಸಿದೆ.

ಪಟ್ಟಣ ಪಂಚಾಯಿತಿ ಆಗಬೇಕಾದರೆ ಕನಿಷ್ಠ 10 ಸಾವಿರ ಜನಸಂಖ್ಯೆ ಇರಬೇಕು ಎನ್ನುವುದು ನಿಯಮ. 2 ಗ್ರಾಮಗಳನ್ನು ಸೇರಿಸಿದರೆ 15 ಸಾವಿಕ್ಕೂ ಮಿಕ್ಕಿ ಜನಸಂಖ್ಯೆ ಇರುತ್ತದೆ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಧೀನದ ಅಂಗಡಿ ಕಟ್ಟಡ, ವಾಣಿಜ್ಯ ಸಂಕೀರ್ಣ, ಎಪಿಎಂಸಿ ಉಪ ಮಾರುಕಟ್ಟೆ ಇವೆ. ಖಾಸಗಿ ವಾಣಿಜ್ಯ ಕಟ್ಟಡ,  ವಾಣಿಜ್ಯ ವ್ಯವಹಾರದಿಂದ ಗ್ರಾಪಂಗೆ ವರ್ಷಕ್ಕೆ 1 ಕೋಟಿ ರೂಪಾಯಿಗೂ ಅಧಿಕ ಸಂಪನ್ಮೂಲ ಕ್ರೋಡೀಕರಿಸಲಾಗುತ್ತಿದೆ. 34-ನೆಕ್ಕಿಲಾಡಿಯಲ್ಲೂ ವಾರದ ಸಂತೆ, ಪಂಚಾಯಿತಿ ವತಿಯಿಂದ ವಸತಿ ಸಮುಚ್ಚಯವಿದೆ.

ಮೂಲ ಸೌಕರ್ಯಗಳು: ಉಪ್ಪಿನಂಗಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಇದೆ. ಭಾರತೀಯ ಸ್ಟೇಟ್ ಬ್ಯಾಂಕ್, ಸಿಂಡಿಕೇಟ್, ವಿಜಯ, ಕಾರ್ಪೋರೇಷನ್, ಕರ್ಣಾಟಕ ಬ್ಯಾಂಕ್ ಶಾಖೆಗಳಿವೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸ್ಥಳೀಯ ಸಹಕಾರಿ ಪತ್ತಿನ ಬ್ಯಾಂಕ್, ನೇತ್ರಾವತಿ ಗ್ರಾಮೀಣ ಬ್ಯಾಂಕ್ ಶಾಖೆಗಳೂ ಇವೆ. ಈ ಎಲ್ಲಾ ಮೂಲ ಸೌಕರ್ಯಗಳು ಉಪ್ಪಿನಂಗಡಿ ಪಟ್ಟಣ ಪಂಚಾಯಿತಿ ಆಗುವುದಕ್ಕೆ ಪೂರಕವಾದ ವ್ಯವಸ್ಥೆಯನ್ನು ಹೊಂದಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಕೇಂದ್ರ ಸ್ಥಾನ: ದ.ಕ. ಜಿಲ್ಲೆ ಮತ್ತು ಪುತ್ತೂರು ತಾಲ್ಲೂಕಿನ ಅತ್ಯಂತ ದೊಡ್ಡ ಪಟ್ಟಣಗಳ ಪೈಕಿ ಉಪ್ಪಿನಂಗಡಿಯೂ ಒಂದಾಗಿದೆ. ಹಲವು ಗ್ರಾಮಗಳಿಗೆ ಉಪ್ಪಿನಂಗಡಿ ಕೇಂದ್ರ ಸ್ಥಾನವಾಗಿದೆ. ಆದ್ದರಿಂದ ಇದನ್ನು ಪಟ್ಟಣ ಪಂಚಾಯಿತಿ ಮಾಡಬೇಕೆಂಬ ಒತ್ತಾಸೆ ಜನರದು.

1994ರಲ್ಲಿ ಪುತ್ತೂರಿನಲ್ಲಿ ವಿನಯಕುಮಾರ್ ಸೊರಕೆ ಶಾಸಕರಾಗಿದ್ದ ಕೊನೆ ದಿನಗಳಲ್ಲಿ 34-ನೆಕ್ಕಿಲಾಡಿಯಲ್ಲಿ ಅಲಿಮಾರ ರಘುನಾಥ ರೈ ಅವರು ಅಧ್ಯಕ್ಷರಾಗಿದ್ದಾಗ ನೆಕ್ಕಿಲಾಡಿ ಮತ್ತು ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಉಪ್ಪಿನಂಗಡಿಯನ್ನು ಪಟ್ಟಣ ಪಂಚಾಯಿತಿ ಮಾಡುವಂತೆ ನಿರ್ಣಯಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಎರಡೂ ಗ್ರಾಮಗಳ ಜನಸಂಖ್ಯೆ 10 ಸಾವಿರಕ್ಕೆ ಕಡಿಮೆ ಇದೆ ಎಂದು ಸೂಚಿಸಿದ್ದರಿಂದ ಹಿರೇಬಂಡಾಡಿ ಗ್ರಾಮದ ಸ್ವಲ್ಪ ಭಾಗವನ್ನು ಸೇರಿಸಲು ಸಿದ್ಧತೆಗಳು ನಡೆದಿದ್ದವು.

1999ರಲ್ಲಿ ಪುತ್ತೂರಿನಲ್ಲಿ ಡಿ.ವಿ. ಸದಾನಂದ ಗೌಡ ಶಾಸಕರಾಗಿದ್ದಾಗ, ಪುತ್ತೂರು ತಾಲ್ಲೂಕು ಪಂಚಾಯಿತಿಯಲ್ಲಿ ರಘುನಾಥ ರೈ ಉಪಾಧ್ಯಕ್ಷರಾಗಿದ್ದಾಗ ತಾಲ್ಲೂಕು ಪಂಚಾಯಿತಿ, ದ.ಕ. ಜಿಲ್ಲಾ ಪಂಚಾಯಿತಿಯಲ್ಲೂ ನಿರ್ಣಯ ಅಂಗೀಕರಿಸಲಾಗಿತ್ತು. ಡಿ.ವಿ. ಸದಾನಂದ ಗೌಡರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆರ್ಥಿಕ ಮುಗ್ಗಟ್ಟು ಕಾರಣಕ್ಕೆ ಮತ್ತೆ ತಡೆ ಹಿಡಿಯಲ್ಪಟ್ಟಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT