ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭದಿಂದ ಗೋರಿವರೆಗೂ ಹೆಣ್ಣಿನ ಶೋಷಣೆ

Last Updated 1 ಏಪ್ರಿಲ್ 2013, 7:09 IST
ಅಕ್ಷರ ಗಾತ್ರ

ದಾವಣಗೆರೆ: ಹೆಣ್ಣನ್ನು ಭೂಮಿ, ಪ್ರಕೃತಿ, ನದಿಗೆ ಹೋಲಿಸಲಾಗುತ್ತದೆ. ಆದರೆ ವಾಸ್ತವವಾಗಿ ಗರ್ಭದಿಂದ ಗೋರಿಯವರೆಗೂ ಆಕೆಯ ಮೇಲೆ ನಿರಂತರ ಶೋಷಣೆ  ನಡೆಯುತ್ತಿದೆ ಎಂದು ಉಪನ್ಯಾಸಕಿ ಸುಮತಿ ಜಯಪ್ಪ ಅಭಿಪ್ರಾಯಪಟ್ಟರು.

ನಗರದ ರೇಣುಕ ಮಂದಿರದಲ್ಲಿ ಭಾನುವಾರ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಹೆಣ್ಣು ಶೋಷಣೆ ವಿರುದ್ಧ ಸಿಡಿದೆದ್ದರೆ ಆಕೆಗೆ ಬಜಾರಿ ಎಂಬ ಪಟ್ಟ ಕಟ್ಟಿ ಸದ್ದನ್ನು ಅಡಗಿಸಲಾಗುತ್ತಿದೆ. ಬಸ್, ರೈಲ್ವೆ ನಿಲ್ದಾಣ, ಕಚೇರಿಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳಗಳು ಹೆಚ್ಚಾಗುತ್ತಲೇ ಇವೆ. ಇಂಥಹ ವಿಕೃತ ಪ್ರವೃತ್ತಿಗೆ ಮೊದಲು ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.

ಹೆಣ್ಣಿನ ಶೋಷಣೆ ನಿಲ್ಲಬೇಕಾದರೆ ಅವರಿಗೆ ಉನ್ನತ ಶಿಕ್ಷಣ ಸಿಗಬೇಕು. ನೈತಿಕ ಸ್ಥೈರ್ಯ ತುಂಬಬೇಕು. ಸಮಾಜದ ಎಲ್ಲ ಸ್ಥರಗಳಲ್ಲೂ ಸಮಾನ ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿದರು.

ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ಗಿರಿಜಾ ಎನ್. ಕಾಡಯ್ಯನ ಮಠ, ಹೆಣ್ಣಿನ ಶೋಷಣೆ ಇಂದಿನದಲ್ಲ. ಹಿಂದಿನಿಂದಲೂ ಮಹಿಳೆಯರ ಮೇಲಿನ ಶೋಷಣೆ ನಡೆಯುತ್ತಾ ಬಂದಿದೆ. ಗರ್ಭದಲ್ಲೇ ಹೆಣ್ಣು ಭ್ರೂಣ ಹತ್ಯೆ ಮಾಡುವಂತಹ ವಿಕೃತ ಸಮಾಜ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮಹಿಳೆಯರು ನಿರ್ಭೀತಿಯಿಂದ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸ್ತ್ರೀಯರ ಮೇಲಿನ ದೌರ್ಜನ್ಯದ ವಿರುದ್ಧ ಎಲ್ಲ ಮಹಿಳೆಯರು ಸಂಘಟಿತರಾಗಬೇಕು. ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕರೆನೀಡಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಮದಿಹ ಅಫ್‌ಸಾಹನ್ ಮಾತನಾಡಿ, ಮಹಿಳೆ ಪುರುಷರಿಗಿಂತ ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ. ಆದರೆ, ಪುರುಷ ಪ್ರಧಾನ ಸಮಾಜ ಆಕೆಗೆ ಏನೂ ಗೊತ್ತಿಲ್ಲದ ಹಾಗೆ ನಾಲ್ಕು ಗೋಡೆಯ ಮಧ್ಯೆ ಬಂಧಿಸಿದೆ ಎಂದರು.

ದೇಶದಲ್ಲಿ ಪ್ರತಿದಿನ 200 ಯುವತಿಯರು ವೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ. ಈ ಪ್ರಮಾಣ ದಕ್ಷಿಣ ಭಾರತದ ರಾಜ್ಯಗಳಲ್ಲೇ ಹೆಚ್ಚು. ಅದರಲ್ಲೂ ದೇಶದಲ್ಲೇ ವೇಶ್ಯಾವಾಟಿಕೆ ಜಾಲಕ್ಕೆ ಯುವತಿಯರು ಬಲಿಯಾಗುತ್ತಿರುವುದು ಬೆಂಗಳೂರಿನಲ್ಲಿ ಎಂದು ಅವರು ಕಳವಳ ವ್ಯಕ್ತಪಡಿಸಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾತೆ ಇಸ್ಲಾಂ ಹಿಂದ್ ಮಹಿಳಾ ವಿಭಾಗದ ಉಪ ಸಂಚಾಲಕಿ ಶಮೀರಾ ಜಹಾನ್, ಆಧುನಿಕ ಸಿದ್ಧಾಂತ, ಪಾಶ್ಚಾತ್ಯ ಸಂಸ್ಕೃತಿ ಹೆಣ್ಣನ್ನು ಅಸಭ್ಯವಾಗಿ ಬಿಂಬಿಸುತ್ತಿದೆ. ಜಾಹೀರಾತುಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಹೆಣ್ಣನ್ನು ಕೀಳಾಗಿ ಕಾಣಲಾಗುತ್ತಿದೆ. ಸಮಾನತೆ ಹೆಸರಲ್ಲಿ ಮಹಿಳೆಯರನ್ನು ಬೀದಿಗೆ ತರಲಾಗುತ್ತಿದೆ ಎಂದರು. ನಜ್‌ಮುಸ್ ಸಹರ್, ಫರ್‌ಫಂದ್ ಬಾನು ಕುರ್‌ಆನ್ ಪಠಿಸಿದರು. ಆಸ್ಮಾಬಾನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT