ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗರ್ಭಪಾತ ಮಾಡೊಲ್ಲ' ಐರ್ಲೆಂಡ್‌ ವೈದ್ಯರ ಸಂಘದ ನಿರ್ಣಯ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ):  ವೈದ್ಯರು ಗರ್ಭಪಾತಕ್ಕೆ ನಿರಾಕರಿಸಿದ್ದರಿಂದ ನಂಜು ಏರಿ ಕರ್ನಾಟಕ ಮೂಲದ ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ ಮೃತಪಟ್ಟ ಬಳಿಕ ವಿಶ್ವದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಐರ್ಲೆಂಡ್‌ನಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಯತ್ನಗಳಿಗೆ ಮತ್ತೆ ಸೋಲುಂಟಾಗಿದೆ.

ಗರ್ಭಿಣಿ ಜೀವಕ್ಕೆ ಅಪಾಯ ಇರುವ ಸಂದರ್ಭದಲ್ಲಿ ಗರ್ಭಪಾತ ನಡೆಸಲು ಕಾನೂನುಬದ್ಧ ಅವಕಾಶ ನೀಡುವ ನಿರ್ಣಯವನ್ನು ಐರ್ಲೆಂಡ್‌ನ ವೈದ್ಯಕೀಯ ಸಂಸ್ಥೆ ತಿರಸ್ಕರಿಸಿದೆ. ಕಿಲ್ಲಾರ್ನಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಕುರಿತು ಮಂಡಿಸಲಾದ ಮೂರೂ ನಿರ್ಣಯಗಳು 42 ಮತಗಳಿಂದ ಬಿದ್ದು ಹೋಗಿವೆ.

ಗರ್ಭಪಾತಕ್ಕೆ ಕಾನೂನಿನ ಮಾನ್ಯತೆ ನೀಡುವ ಸಾಧಕ- ಬಾಧಕಗಳ ಕುರಿತಂತೆ ಕಾವೇರಿದ ಚರ್ಚೆಯ ನಂತರ ಬಹುತೇಕ ವೈದ್ಯರು ನಿರ್ಣಯದ ವಿರುದ್ಧ ಮತ ಚಲಾಯಿಸಿದರು. ಕ್ಯಾಥೋಲಿಕ್ ರಾಷ್ಟ್ರವಾಗಿರುವ ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧಿಸಿದ್ದು, ಐರೋಪ್ಯ ಒಕ್ಕೂಟದಲ್ಲಿಯೇ ಅತ್ಯಂತ ಕಠಿಣ ಎನ್ನಲಾದ ಕಾನೂನು ಜಾರಿಯಲ್ಲಿದೆ.

ನಾಳೆಯಿಂದ ವಿಚಾರಣೆ: ಐರ್ಲೆಂಡ್‌ನಲ್ಲಿ ಸವಿತಾ ಹಾಲಪ್ಪನವರ ಸಾವಿಗೆ ಸಂಬಂಧಿಸಿದಂತೆ ಸೋಮವಾರದಿಂದ ಸಮಗ್ರ            ವಿಚಾರಣೆ ಆರಂಭವಾಗಲಿದೆ. ಪೊಲೀಸ್ ತನಿಖೆ ವೇಳೆ ಹೇಳಿಕೆ ನೀಡಿದ್ದ ಒಟ್ಟು 60 ಜನರ ಪೈಕಿ 16 ಜನರಿಗೆ ಮಾತ್ರ ವಿಚಾರಣೆಗೆ ಹಾಜರಾಗಿ ಸಾಕ್ಷ್ಯ ನುಡಿಯುವಂತೆ ತಿಳಿಸಲಾಗಿದೆ.

ಜನವರಿಯಲ್ಲೇ ಆರಂಭವಾಗಿದ್ದ ವಿಚಾರಣೆಯನ್ನು ಕೇವಲ ಒಂದು ದಿನದ ನಂತರ ಏಪ್ರಿಲ್ 8ಕ್ಕೆ ಮುಂದೂಡಲಾಗಿತ್ತು.
ಸವಿತಾ ಹಾಲಪ್ಪನವರ ಅವರನ್ನು ಪರೀಕ್ಷಿಸಿದ ಗಾಲ್‌ವೇ ವಿಶ್ವವಿದ್ಯಾಲಯ ಆಸ್ಪತ್ರೆಯ ವೈದ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ವಿಚಾರಣೆ ವೇಳೆ ಅಗತ್ಯ ನೆರವಿಗಾಗಿ ವಿಚಾರಣಾಧಿಕಾರಿ ಸಿರನ್ ಮ್ಯಾಕ್ ಲೌಫ್‌ಲಿನ್ ಅವರು ಐವರು ತಜ್ಞ ವೈದ್ಯರನ್ನು ನೇಮಕ ಮಾಡಿಕೊಂಡಿದ್ದಾರೆ.

ವಿಚಾರಣೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಸವಿತಾ ಪತಿ ಪ್ರವೀಣ್ ಹಾಲಪ್ಪನವರ ಮತ್ತು ಅವರ ವಕೀಲ ಗೆರಾರ್ಡ್ ಓ'ಡೊನೆಲ್‌ಲ್, ವಾರಾಂತ್ಯದಲ್ಲಿ ತಮ್ಮ ಪರ ವಾದ ಮಂಡಿಸುತ್ತಿರುವ ಇಬ್ಬರು ಹಿರಿಯ ವಕೀಲರನ್ನು ಭೇಟಿಯಾಗಲಿದ್ದಾರೆ. ವೈದ್ಯಕೀಯ ನೆರವು ವಿಭಾಗದ ಅಧ್ಯಕ್ಷ ಸರ್ ಸಬರತ್ನಂ ಅರುಳ್ ಕುಮಾರನ್ ಅವರನ್ನೂ ಇನ್ನೊಂದು ವಾರದೊಳಗೆ ಭೇಟಿಯಾಗಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT