ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಮಠ ಜಾತ್ರೆಯಲ್ಲಿ ಕಿರುಚಿತ್ರ ಪ್ರದರ್ಶನ

Last Updated 6 ಜನವರಿ 2012, 6:15 IST
ಅಕ್ಷರ ಗಾತ್ರ

ಕೊಪ್ಪಳ: ದೃಶ್ಯ-1:ಇಬ್ಬರು ಮಹಿಳೆಯರು ಹೋಗುತ್ತಿದ್ದಾರೆ. ಸ್ವಲ್ಪ ದೂರ ಕ್ರಮಿಸಿದ ನಂತರ ವ್ಯಕ್ತಿಯೊಬ್ಬ ಎದುರಿನಿಂದ ಬಂದವನೇ ಒಬ್ಬ ಮಹಿಳೆಯ ಮಂಗಳಸೂತ್ರವನ್ನು ಕಿತ್ತುಕೊಳ್ಳುತ್ತಾನೆ. ಅಷ್ಟರಲ್ಲಿಯೇ ಪಕ್ಕದಲ್ಲಿ ಬೈಕ್ ನಿಲ್ಲುತ್ತದೆ. ಕಳ್ಳ ಕುಳಿತ ತಕ್ಷಣ ಬೈಕ್ ವೇಗವಾಗಿ ಚಲಿಸಿ ಮಾಯವಾಗುತ್ತದೆ. 

ದೃಶ್ಯ-2: ಬ್ಯಾಂಕ್‌ನ ಶಾಖೆಯೊಂದರಿಂದ ಹಣ ಪಡೆಯುವ ಗ್ರಾಹಕ ಹಣ ಇರುವ ಬ್ಯಾಗನ್ನು ದ್ವಿಚಕ್ರ ವಾಹನದ ಸೀಟಿನ ಕೆಳಗೆ ಇಡುತ್ತಾನೆ. ಸೀಟಿಗೆ ಬೀಗ ಹಾಕಿ ಭದ್ರಪಡಿಸಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ವ್ಯಕ್ತಿಯೊಬ್ಬ ಬಂದು ಚೀಟಿ ತೋರಿಸಿ ವಿಳಾಸ ಹೇಳುವಂತೆ ಮನವಿ ಮಾಡುತ್ತಾನೆ. ಗ್ರಾಹಕ ಬ್ಯಾಗನ್ನು ಸೀಟಿನಡಿ ಅಷ್ಟೇ ಬಿಟ್ಟು ವಿಳಾಸ ಕೇಳಿದ ವ್ಯಕ್ತಿಯತ್ತ ಹೊರಳುತ್ತಾನೆ. ಇದೇ ಅವಕಾಶ ಕಾಯುತ್ತಿದ್ದ ಯುವಕನೊಬ್ಬ ಓಡಿ ಬಂದವನೇ ಹಣ ಇರುವ ಬ್ಯಾಗ್‌ನೊಂದಿಗೆ ಕ್ಷಣಾರ್ಧದಲ್ಲಿ ಜಾಗ ಖಾಲಿ ಮಾಡುತ್ತಾನೆ.

- ಇವು ಸರ್ವೇಸಾಮಾನ್ಯವಾಗಿ ಎಲ್ಲೆಡೆ ನಡೆಯುವ ಅಪರಾಧ ಕೃತ್ಯಗಳು. ಅದರಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಜನರು ಸಮಾವೇಶಗೊಳ್ಳುವ ಜಾತ್ರೆ, ಉತ್ಸವ, ಸಮ್ಮೇಳನದಂತಹ ಸ್ಥಳಗಳಲ್ಲಿ ಈ ರೀತಿ ಆಭರಣ, ಹಣ ಕಳ್ಳತನ ಮಾಡುವವರು ಇರುತ್ತಾರೆ. ಇಂತಹ ಅಪರಾಧ ಕೃತ್ಯಗಳನ್ನು ಹೇಗೆ ಮಾಡುತ್ತಾರೆ. ಯಾವ ರೀತಿ ಮುಂಜಾಗ್ರತೆ ಕೈಗೊಳ್ಳಬೇಕು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಪ್ರಚಾರ ಕಾರ್ಯ ಕೈಗೊಂಡಿದೆ.

ಮೇಲೆ ವಿವರಿಸಿದಂತಹ ಅಪರಾಧ ಕೃತ್ಯಗಳನ್ನು ಪರಿಣಾಮಕಾರಿಯಾಗಿ ಹೇಳುವಂತಹ ದೃಶ್ಯಗಳನ್ನು ಒಳಗೊಂಡಿರುವ 1-2 ನಿಮಿಷಗಳ ಅವಧಿಯ ಚಿತ್ರಗಳನ್ನು ಸಿದ್ಧಪಡಿಸಿರುವ ಇಲಾಖೆ ಸಾರ್ವಜನಿಕರಿಗೆ ಪ್ರದರ್ಶಿಸಲು ಸಜ್ಜಾಗಿದೆ.

ಅದರಲ್ಲೂ, ಈ ಭಾಗದ ಪ್ರತಿಷ್ಠಿತ ಗವಿಮಠದ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿಯೇ ಈ ಕಿರು ಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಲು ಇಲಾಖೆ ನಿರ್ಧರಿಸಿದೆ.

ಈ ಕುರಿತಂತೆ ಗುರುವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಸರಗಳ್ಳತನ, ಗಮನ ಬೇರೆಡೆ ಸೆಳೆದು ದೋಚುವುದು ಹಾಗೂ ವಾಹನಗಳನ್ನು ಕಳ್ಳತನ ಮಾಡುವವರ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಈ ಕಿರುಚಿತ್ರಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಗವಿಮಠ ಆವರಣ ಹಾಗೂ ಇತರ ಆಯ್ದ ಸ್ಥಳಗಳಲ್ಲಿ ದೊಡ್ಡದಾದ ಪರದೆಗಳನ್ನು ಅಳವಡಿಸಿ ಈ ದೃಶ್ಯಗಳನ್ನು ನಿರಂತರವಾಗಿ ಪ್ರದರ್ಶಿಸಲಾಗುವುದು ಎಂದು ಡಿವೈಎಸ್‌ಪಿ ವಿಜಯ ಡಂಬಳ ಹೇಳುತ್ತಾರೆ.

ಜಾತ್ರಾ ಮಹೋತ್ಸವ ಮುಗಿದ ನಂತರ ಜಿಲ್ಲೆಯ ಆಯ್ದ ಬಸ್ ನಿಲ್ದಾಣ, ಶಾಲಾ-ಕಾಲೇಜುಗಳಲ್ಲಿ ಸಹ ಈ ಕಿರುಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿದಾಗ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT