ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ತತ್ವ ಅಳವಡಿಕೆ ಪಾಪು ಸಲಹೆ

Last Updated 27 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಸಕ್ತ ವರ್ಷದಲ್ಲಿ ವಿ.ಎಸ್.ಕೃಷ್ಣ ಅಯ್ಯರ್, ಜಿ. ನಾರಾಯಣ, ಮತ್ತೂರು ಕೃಷ್ಣಮೂರ್ತಿ, ಎಚ್.ಆರ್.ದಾಸೇಗೌಡರಂತಹ ಗಾಂಧಿ ಅನುಯಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ಅವರ ವಿಚಾರ ಮತ್ತು ವ್ಯಕ್ತಿತ್ವವನ್ನು ಕೇವಲ ಸ್ತುತಿಸುವುದಕ್ಕೆ ಮಾತ್ರ ಸೀಮಿತಗೊಳಿಸದೇ ಆಳವಡಿಕೊಳ್ಳಬೇಕು~ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸಲಹೆ ನೀಡಿದರು.

ಪ್ರೊ.ಎಚ್.ಆರ್.ದಾಸೇಗೌಡ ಅವರಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ನಗರದ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ  ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

`ನೆಲ್ಸೇನ್ ಮಂಡೇಲಾ ಮತ್ತು ಬರಾಕ್ ಒಬಾಮ ಅವರು  ಗಾಂಧಿಯ ವ್ಯಕ್ತಿತ್ವ ಮತ್ತು ಆದರ್ಶದಿಂದ ಪ್ರೇರಿತರಾಗಿದ್ದಾರೆ. ಆದರ ಭಾರತದಲ್ಲಿಯೇ ಜನಿಸಿರುವ ಗಾಂಧೀಜಿಯ ತತ್ವಗಳು ನಮಗೆ ರುಚಿಸುವುದಿಲ್ಲ. ಗಾಂಧೀಜಿ ಬೋಧಿಸಿದ ಹಳ್ಳಿಗಳ ಪರಿಕಲ್ಪನೆ, ಸ್ವದೇಶಿ ವಸ್ತುಗಳ ಮಾರಾಟ, ಖಾದಿ ಮತ್ತು ಇತರೆ ಕುಲ ಕಸುಬುಗಳು ನಶಿಸಿದಂತೆ ಸರ್ಕಾರ ಎಚ್ಚರವಹಿಸಬೇಕು~ ಎಂದು ಹೇಳಿದರು.

`ವಿದೇಶದಲ್ಲಿ ಗಾಂಧೀಜಿ ಮತ್ತು ಅವರ ವಿಚಾರಗಳು ಪ್ರಾಮುಖ್ಯತೆ ಪಡೆಯುತ್ತಿವೆ. ವಿದ್ಯಾವಂತರೆಲ್ಲರೂ ತಮ್ಮನ್ನು ಸತ್ಯ ಮತ್ತು ನ್ಯಾಯಕ್ಕೆ ಅರ್ಪಿಸಿಕೊಳ್ಳುವ ಮೂಲಕ ಗಾಂಧಿ ತತ್ವವನ್ನು  ಪುನರ್‌ಸ್ಥಾಪಿಸಬೇಕಿದೆ~ ಎಂದರು.

ಮಾಜಿ ಸಂಸದ ಎಚ್.ಹನುಮಂತಪ್ಪ, `ಯುವ ಜನರಿಗೆ ಒಂದು ನಿರ್ದಿಷ್ಟ ಗುರಿ ತೋರಿಸಿ, ಅಗತ್ಯವಿರುವ ಮಾರ್ಗದರ್ಶನವನ್ನು ನೀಡುವ ಮೂಲಕ ದಾಸೇಗೌಡರು ಉತ್ತಮ ಶಿಕ್ಷಕರಾಗಿ ಗೋಚರಿಸಿದ್ದರು.

ಅವರ ಕ್ರಿಯಾಶೀಲತೆ ಮತ್ತು ನಿಸ್ಪೃಹ ಸ್ನೇಹಪರತೆಯನ್ನು ಪ್ರತಿಯೊಬ್ಬರು ಆಳವಡಿಸಿಕೊಳ್ಳುವ ಅಗತ್ಯವಿದೆ~ ಎಂದು ಹೇಳಿದರು. ಶೇಷಾದ್ರಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ` ದಾಸೇಗೌಡರು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವ್ಯವಸ್ಥೆಯಲ್ಲಿರುವ ದೋಷವನ್ನು ಪ್ರತಿಭಟಿಸುತ್ತಿದ್ದರು. ಅವರ ನೆನಪು ಅಜರಾಮರ~ ಎಂದು ಬಣ್ಣಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ, ಜಂಟಿ ಕಾರ್ಯದರ್ಶಿ ಡಿ.ಕೆ.ಕೋದಂಡರಾಮು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT