ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಪ್ರೀತಿಯ ಮಕ್ಕಳು

Last Updated 1 ಅಕ್ಟೋಬರ್ 2018, 19:43 IST
ಅಕ್ಷರ ಗಾತ್ರ

ಒಮ್ಮೆ ಮಗುವೊಂದು ಮಹಾತ್ಮಾ ಗಾಂಧಿಯನ್ನು `ಹುಚ್ಚ' ಎಂದು ಕರೆಯಿತು. ಹಣ್ಣು ತಿನ್ನುತ್ತಿದ್ದ ಗಾಂಧೀಜಿ ಅದನ್ನು ಕೇಳಿ ಚಕಿತರಾದರು. `ನಾನ್ಯಾಕೆ ಹುಚ್ಚ ಮಗೂ' ಎಂದು ಕೇಳಿದರು. ಅದಕ್ಕೆ ಆ ಮಗು: `ನಾನು ಏನನ್ನೋ ತಿನ್ನುತ್ತಿದ್ದಾಗ ಅಮ್ಮ ಕೂಡ ಹೀಗೆಯೇ ಬೈಯ್ದಿದ್ದಳು.

ನಾವು ಹಂಚಿಕೊಂಡು ತಿನ್ನದೆ ಇದ್ದರೆ ಹುಚ್ಚರೇ ಅಲ್ಲವೇ?'- ಮುಗ್ಧ ಮಗುವಿನ ಮಾತಿನಲ್ಲಿದ್ದ ಸತ್ಯ ಅರಿತ ಗಾಂಧೀಜಿ ತಾವು ತಿನ್ನುತ್ತಿದ್ದ ಹಣ್ಣನ್ನು ಆ ಮಗುವಿನೊಡನೆ ಹಂಚಿಕೊಂಡರು. ಗಾಂಧೀಜಿಗೆ ಮಕ್ಕಳೆಂದರೆ ಬಲು ಇಷ್ಟ. `ಮಕ್ಕಳು ದೇವರ ತೋಟದ ಹೂವುಗಳು' ಎಂದೇ ಅವರು ಹೇಳುತ್ತಿದ್ದರು. ಮಕ್ಕಳು ಅವರನ್ನು ಹುಚ್ಚ, ತಲೆಯಿಲ್ಲದವ ಎಂದು ಆಡಿಕೊಂಡರೂ ಆ ಮಾತನ್ನೆಲ್ಲಾ ತಮಾಷೆಯಾಗಿಯೇ ಸ್ವೀಕರಿಸುತ್ತಿದ್ದರು. ಅವರೊಂದಿಗೆ ಆಟವಾಡುತ್ತಿದ್ದರು. ಮಕ್ಕಳು ಕಿವಿಹಿಡಿದು ಎಳೆದರಾಗಲೀ, ಭುಜಗಳ ಹಿಡಿದು ಜಗ್ಗಿದರಾಗಲೀ ಬೇಸರಪಟ್ಟುಕೊಳ್ಳುತ್ತಿರಲಿಲ್ಲ.

ಲಂಡನ್‌ನ ಕಿಂಗ್ಸ್‌ಲೇ ಹಾಲ್‌ನಲ್ಲಿ ಒಂದು ದಿನ ಕೆಲವು ಬ್ರಿಟಿಷ್ ಮಕ್ಕಳು ಅವರನ್ನು `ಅಂಕಲ್ ಗಾಂಧಿ' ಎಂದು ಕರೆದರು. ಆ ಮಕ್ಕಳಿಗೆ ಗಾಂಧೀಜಿ ಸಹವಾಸ ಖುಷಿ ಕೊಟ್ಟಿತ್ತು. ನೆನಪಿನ ಕಾಣಿಕೆಯಾಗಿ ಸಿಹಿ ಹಾಗೂ ಗೊಂಬೆಗಳನ್ನು ಮಕ್ಕಳು ಕೊಟ್ಟರು. ಭಾರತಕ್ಕೆ ಹೋಗುವ ತರಾತುರಿಯಲ್ಲಿದ್ದ ಗಾಂಧೀಜಿಗೆ ಆ ಮಕ್ಕಳಿಗೆ ಧನ್ಯವಾದ ಅರ್ಪಿಸಲೂ ಪುರುಸೊತ್ತಾಗಲಿಲ್ಲ. ಭಾರತಕ್ಕೆ ಬಂದ ತಕ್ಷಣ ಅವರನ್ನು ಬಂಧಿಸಲಾಯಿತು. ಆಗ ಅವರು ಜೈಲಿನಿಂದಲೇ ಪತ್ರ ಬರೆದರು:
`ನನ್ನ ಪುಟ್ಟ ಸ್ನೇಹಿತರೇ,
ನಾನು ಪದೇಪದೇ ನಿಮ್ಮನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. ಆ ಮಧ್ಯಾಹ್ನ ನಾನು ಕೇಳಿದ ಪ್ರಶ್ನೆಗಳಿಗೆ ನೀವು ಕೊಟ್ಟ ಉತ್ತರಗಳು ಎಷ್ಟು ಸಮಂಜಸವಾಗಿದ್ದವು. ನೀವು ನನ್ನ ಆಶ್ರಮದ ಮಕ್ಕಳಿಗೆಂದು ಆಟಿಕೆಗಳನ್ನು ಕೊಟ್ಟಿರಿ. ಸಿಹಿ ಕೊಟ್ಟಿರಿ. ಆ ದಿನ ನಿಮಗೆ ಧನ್ಯವಾದ ಅರ್ಪಿಸಲೂ ನನಗೆ ಸಮಯವಾಗಲಿಲ್ಲ. ನೀವು ಕೊಟ್ಟ ಉಡುಗೊರೆಗಳನ್ನು ಆಶ್ರಮದ ಮಕ್ಕಳಿಗೆ ತಲುಪಿಸಲು ಆಗಲೇ ಇಲ್ಲ.

ನಿಮ್ಮ ಪ್ರೀತಿಯ,
ಗಾಂಧಿ ಎಂದು ನೀವೆಲ್ಲಾ ಕರೆಯುವ ನಿಮ್ಮವ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT