ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಮಾರ್ಗದ ಹೊಸ ಹೀರೊ

Last Updated 9 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

‘ಜನಲೋಕಪಾಲ್ ಮಸೂದೆ’ಯ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ನಾಗರಿಕರ ಸಹಭಾಗಿತ್ವಕ್ಕೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸುತ್ತಿದ್ದ ನಿರಶನ ಯಶಸ್ವಿಯಾಗಿ ಕೊನೆಗೊಳ್ಳುವುದರೊಂದಿಗೆ ಕೆಲವು ವಿಷಯ ಸ್ಪಷ್ಟವಾಗಿವೆ: ಕ್ರಿಕೆಟ್ ಹೆಸರಲ್ಲಿ ಒಗ್ಗಟ್ಟಾಗುವ ದೇಶ ನಮ್ಮದು. ಆದರೆ ಒಗ್ಗಟ್ಟಾಗಲಿಕ್ಕೆ ರಂಜನೆಯೇತರ ವಿಷಯಗಳು ಸಾಕಷ್ಟಿವೆ ಎನ್ನುವುದೀಗ ಕೆಲವರಿಗಾದರೂ ಮನದಟ್ಟಾಗಿರುವುದು ಮೊದಲನೆಯದು. ಗಾಂಧಿ ಮಾರ್ಗದಲ್ಲಿ ನಂಬಿಕೆ ಮೂಡಿಸುವ ಹಜಾರೆ ಅವರಂಥ ಹಿರಿಯರು ನಮ್ಮ ನಡುವೆ ಇನ್ನೂ ಇದ್ದಾರೆ ಎನ್ನುವ ನೆಮ್ಮದಿ ಮೂಡಿಸುವ ಸಂಗತಿ ಎರಡನೆಯದು. ಜನಸಾಮಾನ್ಯರ ಪಾಲಿಗೆ ‘ಅಣ್ಣಾ ಹಜಾರೆ’ ಎನ್ನುವ ಹೊಸ ಹೀರೊ ದೊರೆತಿರುವುದು ಎಲ್ಲಕ್ಕಿಂತಲೂ ಮುಖ್ಯವಾದದ್ದು.
ಬೆಳ್ಳಿತೆರೆಯ ಮೇಲೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಿನಿಮಾರಂಗದ ನಾಯಕರು ಕೂಡ ನಿಜ ಜೀವನದ ಹೀರೊ ಬೆಂಬಲಕ್ಕೆ ನಿಂತಿದ್ದಾರೆ. ‘ಗಾಂಧಿಗಿರಿ’ ಎನ್ನುವುದು ಸಿನಿಮಾದ ಪರಿಕಲ್ಪನೆ. ಅವರ ಪಾಲಿಗದು ಸಂಭ್ರಮ - ಮಾರುಕಟ್ಟೆ ತಂತ್ರ. ಹಜಾರೆ ಅವರದು ‘ಗಾಂಧಿಮಾರ್ಗ’; ಅವರ ಪಾಲಿಗದು ಬದುಕುವ ವಿಧಾನ.

ಎಪ್ಪತ್ತಮೂರರ ಇಳಿವಯಸ್ಸಿನಲ್ಲಿ ಭ್ರಷ್ಟಾಚಾರದ ವಿರುದ್ಧ ಯೌವನದ ಹುಮ್ಮಸ್ಸಿನಲ್ಲಿ ದನಿಯೆತ್ತಿರುವ ಅಣ್ಣಾ ಹಜಾರೆ ಅವರ ಪೂರ್ಣ ಹೆಸರು ಕಿಸನ್ ಬಾಬುರಾವ್ ಹಜಾರೆ. ಮಹಾರಾಷ್ಟ್ರದ ಭಿಂಗಾರ್ ಅವರ ಹುಟ್ಟೂರು. ಅವರ ತಂದೆ ಕೃಷಿಯನ್ನೇ ನೆಚ್ಚಿಕೊಂಡ ರೈತ. ಬಡತನದ ದವಡೆಗೀಡಾದ ಕುಟುಂಬ ರಾಳೇಗಾಂವ್ ಸಿದ್ದಿ ಎನ್ನುವ ಮತ್ತೊಂದು ಗ್ರಾಮಕ್ಕೆ ವಲಸೆ ಬಂತು. ಅದವರ ಪಿತೃಪಿತಾಮಹರು ಬದುಕಿದ ಊರು. ಹೊಟ್ಟೆ ತುಂಬಿಸಿಕೊಳ್ಳಲು ಬಾಲಕ ಹಜಾರೆ ಹೂವು ಮಾರಬೇಕಾಯಿತು. ಏಳನೇ ತರಗತಿಗೆ ಶಾಲೆಗೆ ನಮಸ್ಕಾರ ಹೇಳಿದ ಅವರು, ನಂತರ ಕಲಿತದ್ದೆಲ್ಲ ಬದುಕಿನ ಅನುಭವ ಮಂಟಪದಲ್ಲಿ.

ಚೀನಾದೊಂದಿಗಿನ ಯುದ್ಧದ ಸಮಯದಲ್ಲಿ ‘ಸೇನೆಗೆ ಸೇರಿ’ ಎನ್ನುವ ಸರ್ಕಾರದ ಕರೆಗೆ ಓಗೊಟ್ಟ (1963) ಅವರಿಗೆ ಸೇನೆಯಲ್ಲಿ  ದೊರೆತದ್ದು ಟ್ರಕ್ ಚಾಲಕನ ಕೆಲಸ. ಸೈನ್ಯದಲ್ಲಿನ ಸೇವಾವಧಿಯಲ್ಲಿ ದೇಶದ ಹಲವು ಭಾಗಗಳನ್ನು ಸುತ್ತಿದರು. ಓದುವ ಹವ್ಯಾಸವೂ ಅವರಿಗಿತ್ತು. ದೇಶ ಸುತ್ತುವ, ಕೋಶ ಓದುವ ಅವಕಾಶಗಳು ಅವರ ವ್ಯಕ್ತಿತ್ವವನ್ನು ಮಾಗಿಸಿದವು.

ಮನುಷ್ಯ ಜೀವನದ ಅಸ್ತಿತ್ವದ ಜಿಜ್ಞಾಸೆ ಸೇನೆಯಲ್ಲಿದ್ದಾಗ ಹಜಾರೆ ಅವರನ್ನು ಕಂಗೆಡಿಸಿದ್ದುಂಟು. ಇದು ಹತಾಶೆಯ ಮಟ್ಟಕ್ಕೆ ತಿರುಗಿ ಅವರು ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಮನಸ್ಸು ತರಗೆಲೆಯಂತಿದ್ದ ದಿನಗಳಲ್ಲಿ, ದೆಹಲಿಯ ರೈಲ್ವೆನಿಲ್ದಾಣವೊಂದರಲ್ಲಿನ ಪುಸ್ತಕದ ಅಂಗಡಿಯೊಂದರಲ್ಲಿ ಕಣ್ಣಿಗೆ ಬಿದ್ದ ಪುಸ್ತಕವೊಂದು ಅವರಿಗೆ ಬೆಳಕಿನಂತೆ ಕಾಣಿಸಿತು. ವಿವೇಕಾನಂದರ ಚಿಂತನೆಗಳ ಆ ಪುಸ್ತಕ ಹಜಾರೆಯವರ ಗೊಂದಲಗಳನ್ನು ತಿಳಿಗೊಳಿಸಿ ಬದುಕಿನ ಉದ್ದೇಶವನ್ನೂ ಸ್ಪಷ್ಟಪಡಿಸಿತು. ಮಾನವೀಯತೆಯ ಉಪಾಸನೆಗೆ ಜೀವನ ಮುಡುಪಿಡುವ ಅವರ ಸಂಕಲ್ಪಕ್ಕೆ ಆ ಪುಸ್ತಕ ಮುನ್ನುಡಿಯಾಯಿತು. ಗಾಂಧೀಜಿಯವರ ಬದುಕು ಕೂಡ ಅವರನ್ನು ಪ್ರಭಾವಿಸಿತು.

1965, ನವೆಂಬರ್ 12ರಂದು ಭಾರತೀಯ ನೆಲೆಯ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಹಜಾರೆ ಜೊತೆಗಿದ್ದ ಯೋಧರು ಸಾವಿಗೀಡಾದರು. ಗುಂಡೊಂದು ಹಜಾರೆಯವರ ತಲೆಗೆ ಸಮೀಪದಲ್ಲೇ ಹಾದುಹೋಯಿತು. ‘ತನ್ನ ಬದುಕಿಗೊಂದು ಉದ್ದೇಶವಿದೆ’ ಎಂದು ಅವರಿಗೆ ಸ್ಪಷ್ಟವಾಗಿ ಅನ್ನಿಸಿದ್ದು ಆಗಲೇ, ಕಳಿಂಗದ ರಣರಂಗದಲ್ಲಿ ಅಶೋಕನಿಗೆ ಜ್ಞಾನೋದಯವಾದಂತೆ. ಆಗವರ ವಯಸ್ಸು ಇಪ್ಪತ್ತಾರು. (ಕುಟುಂಬದ ಹೊಟ್ಟೆ ತುಂಬಿಸಲು ದುಡಿಯುವುದರಲ್ಲಿ ಬದುಕಿನ ಯಾವ ಸಾರ್ಥಕತೆಯೂ ಇಲ್ಲ ಎಂದು ಅವರಿಗನ್ನಿಸಿ, ಅವಿವಾಹಿತರಾಗಿಯೇ ಉಳಿಯುವ ತೀರ್ಮಾನಕ್ಕೆ ಬಂದರು).

ಸೇನೆಯಿಂದ ಸ್ವಯಂನಿವೃತ್ತಿ ಹೊಂದಿದ ಹಜಾರೆ ರಾಳೇಗಾಂವ್ ಸಿದ್ದಿಗೆ ವಾಪಸ್ಸಾದ ಸಂದರ್ಭದಲ್ಲಿ ರಾಳೇಗಾಂವ್ ಸಿದ್ದಿ ಬಡತನ, ವ್ಯಸನಗಳಿಂದ ಜರ್ಜರಗೊಂಡಿತ್ತು. ಊರಿನ ದೆಸೆ ಬದಲಿಸುವ ಸಂಕಲ್ಪ ತಳೆದ ಅವರು ತಮ್ಮ ಕೆಲಸ ಆರಂಭಿಸಿದ್ದು, ಊರಿನ ದೇಗುಲವೊಂದರ ಜೀರ್ಣೋದ್ಧಾರದ ಮೂಲಕ. ಬದಲಾವಣೆಯ ಮಾರ್ಗದಲ್ಲಿ ಧರ್ಮ ಬಹುದೊಡ್ಡ ಸಲಕರಣೆ ಎನ್ನುವುದವರ ನಂಬಿಕೆ. ‘ಗ್ರಾಮವೇ ಒಂದು ದೇಗುಲವಾಗಿದ್ದು, ಆ ಮಂದಿರದಲ್ಲಿ ಜನರು ತಮ್ಮ ಸೇವೆ ಸಲ್ಲಿಸುವ ಹಾಗೂ ಪ್ರಾರ್ಥಿಸುವ ಮೂಲಕ ಬದುಕಿನ ಅರ್ಥವನ್ನು ಕಂಡುಕೊಳ್ಳುತ್ತಾರೆ’ ಎನ್ನುವುದವರ ಅನುಭವದ ಮಾತು. ರಾಳೇಗಾಂವ್ ಸಿದ್ದಿಯನ್ನು ಅಮಲುಮುಕ್ತಗೊಳಿಸುವ ಹಜಾರೆ ಅವರ ಕಾರ್ಯಾಚರಣೆಗೂ ದೇಗುಲವೇ ವೇದಿಕೆಯಾಯಿತು. ಅಣ್ಣನ ಆಗ್ರಹಕ್ಕೆ ಮಣಿದು, ಮದ್ಯ ಸೇವಿಸದಿರಲು ಹಾಗೂ ಊರಿನಲ್ಲಿನ ಮದ್ಯದ ಗಡಂಗುಗಳನ್ನು ತೆರವುಗೊಳಿಸುವುದಾಗಿ ಊರವರು ಮಾತುಕೊಟ್ಟರು. ದೇವರ ಮುಂದೆ ಆದ ಮಾತನ್ನು ಮುರಿಯುವ ಧೈರ್ಯವನ್ನು ಯಾರು ಮಾಡಿಯಾರು?

ಊರು ಬಲಗೊಳಿಸುವ ನಿಟ್ಟಿನಲ್ಲಿ ಹಜಾರೆ ಅವರಿಗೆ ಊರುಗೋಲಾದದ್ದು ಗಾಂಧಿಮಾರ್ಗ. ಮಹಾತ್ಮ ಹೇಳಿಕೊಟ್ಟ ಸ್ವಾವಲಂಬನೆಯ ಮಂತ್ರವನ್ನು ಮಂದಿಗೆ ತಲುಪಿಸುವ ಕೆಲಸ ಮಾಡಿದರು. ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಕೆಲಸಕ್ಕೆ ಮುಂದಾದರು. ಊರಿನಲ್ಲಿ ನೀರು ಯಾವಾಗ ನೆಲೆನಿಲ್ಲತೊಡಗಿತೋ, ರೈತರ ಮುಖದಲ್ಲಿ ನಗು ಮರಳತೊಡಗಿತು. ಜೈವಿಕ ಅನಿಲ ಉತ್ಪಾದಿಸಿ ಬಳಸತೊಡಗಿದರು. ಹೈನುಗಾರಿಕೆಗೆ ಒತ್ತುನೀಡಿದರು. ಸಾಕ್ಷರತೆ ಹೆಚ್ಚಿಸಲು ಪ್ರಯತ್ನಿಸಿದರು. ಹೆಣ್ಣುಮಕ್ಕಳ ಕಲಿಕೆಗೆ ಒತ್ತು ನೀಡಿದರು. ಸಹಕಾರಿ ಸಂಘ ಆರಂಭಿಸಿದರು. ಸಾಮೂಹಿಕ ವಿವಾಹಗಳನ್ನು ನಡೆಸತೊಡಗಿದರು. ನೋಡನೋಡುತ್ತಿದ್ದಂತೆ ಕುಗ್ರಾಮವೊಂದು ದೇಶದ ಗಮನವನ್ನು ತನ್ನೆಡೆಗೆ ಸೆಳೆಯುವಂತೆ ಲಕಲಕಿಸತೊಡಗಿತು. ಹಜಾರೆ ಎನ್ನುವ ವ್ಯಕ್ತಿ ಊರಿನವರಿಂದ ‘ಅಣ್ಣಾ’ ಅನ್ನಿಸಿಕೊಂಡರು. ಅಂದಹಾಗೆ, ಅವರ ಸಾಧನೆಗೆ ಪದ್ಮಭೂಷಣ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಮಹಾರಾಷ್ಟ್ರ ಸರ್ಕಾರದ ಕೃಷಿಭೂಷಣ ಸೇರಿದಂತೆ ಹಲವು ಗೌರವಗಳು ಸಂದಿವೆ.
1991ರಲ್ಲಿ ಹಜಾರೆ ಹಮ್ಮಿಕೊಂಡ ‘ಭ್ರಷ್ಟಾಚಾರ ವಿರೋಧಿ ಜನಾಂದೋಲನ’ ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲಕಲ್ಲೋಲ ಉಂಟುಮಾಡುವಷ್ಟು ಪರಿಣಾಮಕಾರಿಯಾಗಿತ್ತು. ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದ ಅಧಿಕಾರಿಗಳ ವಿರುದ್ಧ ಸಾಕ್ಷ್ಯಾಧಾರ ಸಲ್ಲಿಸಿದರೂ ಸರ್ಕಾರ ಸ್ಪಂದಿಸದಿದ್ದಾಗ, ಹತಾಶರಾದ ಹಜಾರೆ ತಮಗೆ ಸಂದಿದ್ದ ಪದ್ಮಶ್ರೀ ಮತ್ತು ವೃಕ್ಷಮಿತ್ರ ಗೌರವಗಳನ್ನು ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಿದರು. ಅಂತಿಮ ಕ್ರಮವಾಗಿ, ಅನಿರ್ದಿಷ್ಟಾವಧಿ ಉಪವಾಸದಲ್ಲಿ ತೊಡಗಿಕೊಂಡರು. ಸಾರ್ವಜನಿಕ ಒತ್ತಡಕ್ಕೆ ಸರ್ಕಾರ ಮಣಿಯಲೇಬೇಕಾಯಿತು. ಈ ಆಂದೋಲನದಿಂದಾಗಿ ಆರು ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಾಯಿತು. ನಾಲ್ಕುನೂರಕ್ಕೂ ಹೆಚ್ಚು ಅಧಿಕಾರಿಗಳು ಕೆಲಸ ಕಳೆದುಕೊಂಡರು.

ವ್ಯವಸ್ಥೆಯನ್ನು ಸರಿಪಡಿಸುವ ಜರೂರಿನತ್ತ ಹಜಾರೆ ಅವರ ಗಮನಹರಿದಾಗ, ಅವರಿಗೆ ಭರವಸೆಯಂತೆ ಕಾಣಿಸಿದ್ದು ಮಾಹಿತಿ ಹಕ್ಕಿನ ಸಾಧ್ಯತೆ. ‘ಮಾಹಿತಿ ಹಕ್ಕು ಕಾಯ್ದೆ’ ಜಾರಿಗೊಳಿಸುವಂತೆ ಮಾಡಿಕೊಂಡ ಹಲವು ಮನವಿಗಳಿಗೆ ಸರ್ಕಾರ ಕಿವುಡಾದಾಗ, ಅವರು ರಾಜ್ಯದೆಲ್ಲೆಡೆ ಸಂಚರಿಸಿದರು. ಮಾಹಿತಿ ಹಕ್ಕಿನ ಅಗತ್ಯದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಮುಂಬಯಿಯ ಆಜಾದ್ ಮೈದಾನದಲ್ಲಿ ಧರಣಿ ನಡೆಸಿದರು. ತನ್ನೆಲ್ಲ ಪ್ರಯತ್ನ - ಮನವಿಗಳಿಗೆ ಸರ್ಕಾರದಿಂದ ಭರವಸೆಯ ಹೊರತು ಬೇರೇನೂ ಫಲ ದೊರೆಯದೆ ಹೋದಾಗ ಅವರು ಕೈಗೆತ್ತಿಕೊಂಡಿದ್ದು ನಿರಶನದ ಮಂತ್ರವನ್ನು. 2003ರ ಜುಲೈನಲ್ಲಿ ಆಜಾದ್ ಮೈದಾನದಲ್ಲಿಯೇ ಉಪವಾಸ ಕೂತರು.ಹನ್ನೆರಡು ದಿನಗಳ ಈ ಸತ್ಯಾಗ್ರಹದ ಕಾವು ದೆಹಲಿಯನ್ನೂ ತಾಕಿತು. ‘ಮಾಹಿತಿ ಹಕ್ಕು ಕಾಯ್ದೆ’ಗೆ ಅಂಕಿತ ಬಿತ್ತು.

‘ಸ್ವಾತಂತ್ರ್ಯ ಹೋರಾಟವಿನ್ನೂ ಮುಗಿದಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ನಾವೀಗ, ರಾಜಕಾರಣವನ್ನು ಭ್ರಷ್ಟಾಚಾರದ ಹಾಸಿಗೆಯನ್ನಾಗಿ ಮಾಡಿಕೊಂಡಿರುವ ನಮ್ಮವರ ವಿರುದ್ಧವೇ ಸೆಣಸಬೇಕಾಗಿದೆ’ ಎನ್ನುವುದು ‘ಜನಲೋಕಪಾಲ್’ ಹಾದಿಯಲ್ಲಿ ನಡೆದಿರುವ ಹಜಾರೆ ಅನಿಸಿಕೆ. ‘ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಿಂತ ಮನುಷ್ಯತ್ವದ ಮೂರ್ತಿಯ ಸಾಕಾರ ಮುಖ್ಯವಾದುದು’ ಎನ್ನುವ ಅವರ ಇನ್ನೊಂದು ಮಾತು ‘ಪ್ರತಿಮಾವಿಲಾಸ’ದಲ್ಲಿ ಮುಳುಗಿರುವ ನಾಯಕರನ್ನು ಉದ್ದೇಶಿಸಿಯೇ ಆಡಿದಂತಿದೆ.

ತಮ್ಮ ಬದುಕಿನ ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ: “ಕೋಟ್ಯಂತರ ರೂಪಾಯಿ ಯೋಜನೆಗಳನ್ನು ಮುಂದೆನಿಂತು ಜಾರಿಗೊಳಿಸಿದ್ದೇನೆ. ಆದರೆ ನನ್ನ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ. ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭಿಸಿ ದಶಕದ ಮೇಲಾಯಿತು. ಇದಕ್ಕಾಗಿ ಯಾವುದೇ ಅನುದಾನ ಅಥವಾ ಪ್ರಾಯೋಜಕತ್ವ ಪಡೆದಿಲ್ಲ. ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದಾಗಲೂ ‘ನೆರವು ನೀಡುವಂತೆ’ ಜನರಲ್ಲಿ ಮನವಿ ಮಾಡುತ್ತೇನೆ. ಜನ ಉದಾರವಾಗಿ ನೀಡಿದ ಹಣವನ್ನೇ ಎಲ್ಲ ಆಂದೋಲನಗಳಿಗೆ ಬಳಸುತ್ತೇನೆ. ಸಾರ್ವಜನಿಕವಾಗಿ ಸಂಗ್ರಹಿಸಿದ ಹಣವನ್ನು ಹಳ್ಳಿಗರು ಮತ್ತು ಸ್ವಯಂಸೇವಕರ ಸಮ್ಮುಖದಲ್ಲಿ ಲೆಕ್ಕಮಾಡಿ, ಸ್ಥಳದಲ್ಲೇ ರಸೀತಿ ನೀಡಲಾಗುತ್ತದೆ”.

ಜನಸಾಮಾನ್ಯರ ಪ್ರತಿರೋಧದ ಸೆಲೆ ಜಡ್ಡುಗಟ್ಟುತ್ತಿದ್ದು, ಚಳವಳಿಗಳು ನಶಿಸುತ್ತಿವೆ ಎನ್ನುವ ಆತಂಕದ ದಿನಗಳಲ್ಲಿ ಹಜಾರೆಯವರ ಯಶಸ್ವಿ ನಿರಶನ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ. ವ್ಯವಸ್ಥೆ ಬದಲಾಗುತ್ತದೆ ಎನ್ನುವ ಆಶಾವಾದ ಇದಲ್ಲ; ನೈತಿಕತೆಯ ಪರವಾದ ದನಿಗೆ ಇನ್ನಷ್ಟು ದನಿಗಳು ಸೇರುವ ಸಾಧ್ಯತೆಗಳು ನಮ್ಮಲ್ಲಿನ್ನೂ ಜೀವಂತವಾಗಿವೆ ಎನ್ನುವ ನೆಮ್ಮದಿಯದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT