ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಸ್ಮಾರಕ ನಿಧಿಗೆ 50 ಲಕ್ಷ ಅನುದಾನ

Last Updated 2 ಅಕ್ಟೋಬರ್ 2012, 18:45 IST
ಅಕ್ಷರ ಗಾತ್ರ

ಬೆಂಗಳೂರು: `ಶಾಲಾ- ಕಾಲೇಜು ಸೇರಿದಂತೆ ವಿವಿಧ ಕಡೆಗಳಲ್ಲಿ ಗಾಂಧಿ ವಿಚಾರಧಾರೆಯನ್ನು ಪಸರಿಸಲು ಗಾಂಧಿ ಸ್ಮಾರಕ ನಿಧಿಗೆ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ವಾರ್ತಾ ಇಲಾಖೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಗಾಂಧಿ ಶಾಂತಿ ಪ್ರತಿಷ್ಠಾನ, ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಜಯಂತಿ, ವಿಶ್ವ ಅಹಿಂಸಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಖಾದಿ-ಗ್ರಾಮೋದ್ಯೋಗಗಳಲ್ಲಿ ದುಡಿಯುತ್ತಿರುವ 37 ಸಾವಿರ ಕೆಲಸಗಾರರ ಕ್ಷೇಮಾಭಿವೃದ್ಧಿಗೆ ಏಳು ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ. ರಾಷ್ಟ್ರ ಧ್ವಜವನ್ನು ತಯಾರಿಸುವ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘಕ್ಕೂ ಒಂದು ಕೋಟಿ ಆರ್ಥಿಕ ನೆರವು ನೀಡಲಾಗುವುದು~ ಎಂದು ಅವರು ಭರವಸೆ ನೀಡಿದರು.  

`ಗಾಂಧೀಜಿ ಅವರ ತತ್ವ, ವಿಚಾರಧಾರೆಗಳು ಪುಸ್ತಕ, ಭಾಷಣ, ಉಪನ್ಯಾಸಕ್ಕೆ ಸೀಮಿತವಾಗಬಾರದು. ನಮ್ಮ ಆಚಾರದಲ್ಲೂ ಅವರ ವಿಚಾರಧಾರೆ ಅನುಷ್ಠಾನ ಅಗತ್ಯ. ಹುಬ್ಬಳ್ಳಿಯಲ್ಲಿ ಗಾಂಧೀ ಗ್ರಾಮ ನಿರ್ಮಾಣಕ್ಕೆ ಸರ್ಕಾರ ಉದ್ದೇಶಿಸಿದ್ದು, ಇದಕ್ಕೆ ಪೂರ್ವ ಸಿದ್ಧತೆ ನಡೆಯುತ್ತಿದೆ~ ಎಂದರು.

ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ, `ಯುವಕರಿಗೆ ಗಾಂಧಿ ವಿಚಾರಧಾರೆಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ. ಆದರೆ, ಈ ಬಗ್ಗೆ ಮಾರ್ಗದರ್ಶನ ಮಾಡುವವರ ಕೊರತೆ ಇದೆ. ಈ ನಿಟ್ಟಿನಲ್ಲಿ ಗಾಂಧಿ ವಿಚಾರಧಾರೆಗಳನ್ನು ಪಸರಿಸುವ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡಬೇಕು~ ಎಂದು ಆಗ್ರಹಿಸಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, `ಶಾಲಾ ಕ್ಯಾಂಪಸ್‌ಗಳ ಆಸುಪಾಸಿನಲ್ಲಿ ಮದ್ಯ ಹಾಗೂ ಮಾದಕವಸ್ತುಗಳ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಠ್ಯಪುಸ್ತಕಗಳಲ್ಲಿ ಗಾಂಧಿ ಪಠ್ಯವನ್ನು ಅಳವಡಿಸಬೇಕು~ ಎಂದು ಒತ್ತಾಯಿಸಿದರು.

ಶಿಲ್ಪಾ ಜಗದೀಶ ಶೆಟ್ಟರ್, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ವೂಡೆ ಪಿ.ಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ.ಹೊ.ಶ್ರೀನಿವಾಸಯ್ಯ ಸಂಪಾದಿಸಿದ `ಮದ್ಯಪಾನದ ವಿರುದ್ಧ ಗಾಂಧಿ~, ವಾರ್ತಾ ಇಲಾಖೆ ಪ್ರಕಟಿಸಿದ `ನಮ್ಮ ಗಾಂಧಿ ತಾತ~ ಪುಸ್ತಕ ಹಾಗೂ `ಜನಪದ~ ಗಾಂಧಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ರಾಜಶೇಖರ ಮಠಪತಿ ಅವರ `ಗಾಂಧೀಜಿ ಅಂತಿಮ ದಿನಗಳು~ ಪುಸ್ತಕಕ್ಕೆ ಜಯಶ್ರೀ ಟ್ರಸ್ಟ್ ದತ್ತಿ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾವೇರಿ: ಸಿಎಂ ವಿರುದ್ಧ ಘೋಷಣೆ
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ನಡೆದ ಗಾಂಧಿ ಭವನದ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಘೋಷಣೆ ಕೂಗಿದರು.

ಗಾಂಧಿ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ 20ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಹಿರಿಯರ ಗಾಂಧಿ ಸ್ಮೃತಿ
`ದೇಶದ ಸಾಕ್ಷರತೆ ಪ್ರಮಾಣ ಶೇ 74ರಷ್ಟಾಗಿದ್ದರೂ ಅನ್ಯಾಯದ ವಿರುದ್ಧ ದನಿಯೆತ್ತುವವರ ಸಂಖ್ಯೆ ಕಡಿಮೆಯಾಗಿದೆ. ಶಾಸಕರು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆಯ ಮಾಹಿತಿ ಪಡೆದು ತಮ್ಮ ಮತ ಕ್ಷೇತ್ರದಾಚೆಗಿನ ಸಮಸ್ಯೆಗಳಿಗೂ ಸ್ಪಂದಿಸಬೇಕು~ ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಸಲಹೆ ನೀಡಿದರು. 

`ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ಹೀನಾಯವಾಗಿ ನೋಡುವುದು ನಾಗರಿಕತೆಯ ಬಹು ದೊಡ್ಡ ಕಳಂಕ. ಅವರನ್ನು ಪ್ರಾಣಿಗಳಂತೆ ನೋಡುತ್ತಿದ್ದೇವೆ. ಅವರು ಪ್ರತ್ಯೇಕ ಕಾಲೋನಿಗಳಲ್ಲಿ ವಾಸಿಸದೆ ನಮ್ಮಡನೆಯೇ ಬದುಕಬೇಕು. ನಾವೆಲ್ಲ ಜಾತಿಯನ್ನು ಮೀರಿ ಬೆಳೆಯಬೇಕು~ ಎಂದು ಅವರು ತಿಳಿಸಿದರು.

ಸದ್ಭಾವನಾ ಪಾದಯಾತ್ರೆ
ನಗರದ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆಯ ಬಳಿಯಿಂದ ಕುಮಾರ ಪಾರ್ಕ್ ಗಾಂಧೀಭವನದವರೆಗೆ ಮಂಗಳವಾರ ಸದ್ಭಾವನಾ ಪಾದಯಾತ್ರೆ ಆಯೋಜಿಸಲಾಗಿತ್ತು.

ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಏರ್ಪಡಿಸಲಾಗಿದ್ದ ಪಾದಯಾತ್ರೆಯನ್ನು ಶಿಲ್ಪಾ ಜಗದೀಶ ಶೆಟ್ಟರ್ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು. ಅಲ್ಲದೆ ಶಿಲ್ಪಾ ಶೆಟ್ಟರ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶೇಷಾದ್ರಿಪುರ ಶಿಕ್ಷಣ ಸಂಸ್ಥೆ, ಆಚಾರ್ಯ ನರ್ಸಿಂಗ್ ಕಾಲೇಜು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿವಿಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳು 30 ನಿಮಿಷದಲ್ಲಿ ಮೂರು ಕಿ.ಮೀ. ದೂರ ಕ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT