ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರ ಬಿಇಒ ವಿರುದ್ಧ ದೂರು

ಸಕಾರಣವಿಲ್ಲದೆ ಎಲ್‌ಕೆಜಿ ಸೀಟು ನಿರಾಕರಣೆ ಆರೋಪ
Last Updated 6 ಏಪ್ರಿಲ್ 2013, 19:36 IST
ಅಕ್ಷರ ಗಾತ್ರ

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಎಲ್‌ಕೆಜಿ ಸೇರ್ಪಡೆಗೆ ಅರ್ಹತೆ ಇದ್ದರೂ ಗಾಂಧಿನಗರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸಕಾರಣವಿಲ್ಲದೆ ಮಗಳಿಗೆ ಸೀಟು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಪೋಷಕರೊಬ್ಬರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

`ಗಾಂಧಿನಗರದ ವ್ಯಾಪ್ತಿಗೆ ಬರುವ ಸಿಂಧಿ ಶಾಲೆ ಹಾಗೂ ಶೇಷಾದ್ರಿಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಗಳನ್ನು ಎಲ್‌ಕೆಜಿಗೆ ಸೇರಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಆಂಜಿನಪ್ಪ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ವಯೋಮಿತಿ ಹೆಚ್ಚಿದೆ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಕಾಯ್ದೆ ಪ್ರಕಾರ ಒಂದನೇ ತರಗತಿಗೆ ಸೇರ್ಪಡೆಗೆ ಮಗುವಿಗೆ ಆರು ವರ್ಷ ಆಗಿರಬೇಕು. ಎಲ್ಲಿಯೂ ಎಲ್‌ಕೆಜಿ ಸೇರ್ಪಡೆಯ ಬಗ್ಗೆ ಉಲ್ಲೇಖ ಮಾಡಿಲ್ಲ. ಸಕಾರಣವಿಲ್ಲದೆ ಅರ್ಜಿ ನಿರಾಕರಿಸಿ ಅನ್ಯಾಯ ಮಾಡಿದ್ದಾರೆ' ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
`ನನ್ನ ಮಗಳು ಹುಟ್ಟಿದ್ದು 2008ರ ಅಕ್ಟೋಬರ್ 11ರಂದು. 2009ರಲ್ಲಿ ಹುಟ್ಟಿದ ಮಕ್ಕಳಿಗೆ ಮಾತ್ರ ಎಲ್‌ಕೆಜಿ ಪ್ರವೇಶ ನೀಡಲಾಗುತ್ತದೆ ಎಂದು ಅವರು ಸಮಜಾಯಿಷಿ ನೀಡುತ್ತಿದ್ದಾರೆ. ನಾಲ್ಕು ಬಾರಿ ಭೇಟಿ ಮಾಡಿ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ. ಇನ್ನೊಮ್ಮೆ ಬಂದರೆ ಠಾಣೆಯಲ್ಲಿ ನಿನ್ನ ವಿರುದ್ಧ ದೂರು ದಾಖಲಿಸುತ್ತೇನೆ ಎಂಬ ಎಚ್ಚರಿಕೆ ನೀಡಿದ್ದಾರೆ' ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

`ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 2006, 2007ರಲ್ಲಿ ಹುಟ್ಟಿದ ಮಕ್ಕಳಿಗೂ ಎಲ್‌ಕೆಜಿಗೆ ಪ್ರವೇಶ ನೀಡಲಾಗಿದೆ. ಗಾಂಧಿನಗರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ಇಂತಹ ತಾರತಮ್ಯ ಮಾಡಲಾಗುತ್ತಿದೆ. ಈ ಎರಡೂ ಶಾಲೆಗಳಲ್ಲಿ ಶೇ 25 ಮೀಸಲಾತಿಯಡಿ 24 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇದೆ. ಆದರೆ, ಇಲ್ಲಿ 6 ಹಾಗೂ 8 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇದ್ದರೂ ಅವಕಾಶ ನಿರಾಕರಣೆ ಮಾಡಿರುವುದು ಅನ್ಯಾಯ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT