ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರ ವಾರ್ಡ್ ಉಪಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಗಾಂಧಿನಗರ ವಾರ್ಡ್‌ಗೆ (94) ಇದೇ ತಿಂಗಳ 26ರಂದು ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬುಧವಾರ ಕೊನೆಗೊಂಡಿದೆ. ಅದರ ಬೆನ್ನಲ್ಲಿಯೇ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರ ಮನೆ ಬಾಗಿಲು ತಟ್ಟುವ ಮೂಲಕ ಬಹಿರಂಗ ಪ್ರಚಾರವನ್ನೂ ಆರಂಭಿಸಿದ್ದಾರೆ.

ಇದರೊಂದಿಗೆ ನಗರದ ಹೃದಯ ಭಾಗದಲ್ಲಿನ `ಕಾಸ್ಮೋಪಾಲಿಟನ್ ವಾರ್ಡ್~ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್ ಸದಸ್ಯ ನಟರಾಜ್ ಹತ್ಯೆಯಿಂದ ತೆರವಾದ ಸ್ಥಾನಕ್ಕೆ ಈ ಉಪ ಚುನಾವಣೆ ನಡೆಯುತ್ತಿದೆ.

ಪ್ರಮುಖ ಐದು ರಾಜಕೀಯ ಪಕ್ಷಗಳ ಪರವಾಗಿ ಅಂದರೆ, ಕಾಂಗ್ರೆಸ್‌ನಿಂದ ಟಿ. ಗೋಪಾಲಕೃಷ್ಣ, ಬಿಜೆಪಿಯಿಂದ ಜಿ. ರಾಮಚಂದ್ರ, ಜೆಡಿಎಸ್‌ನಿಂದ ಪಿ.ಕೆ. ಸುರೇಶ್, ಎಐಎಡಿಎಂಕೆಯಿಂದ ಎಂ.ಪಿ. ಯುವರಾಜ್, ಜೆಡಿಯುನಿಂದ ಎಸ್. ಅಶ್ವತ್ಥನಾರಾಯಣ ಕಣಕ್ಕಿಳಿದಿದ್ದಾರೆ.

ವಾರ್ಡ್‌ನಲ್ಲಿ ಅಧಿಕ ಸಂಖ್ಯೆಯಲ್ಲಿರುವ ತಮಿಳು ಮತದಾರರೇ ಚುನಾವಣೆಯಲ್ಲಿ `ನಿರ್ಣಾಯಕ~ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ಎಲ್ಲ ಪಕ್ಷಗಳು ಈ ಮತದಾರರನ್ನು ಒಲಿಸಿಕೊಳ್ಳಲು ಇನ್ನಿಲ್ಲದ `ಕಸರತ್ತು~ ನಡೆಸಿವೆ.

ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಶನಿವಾರದಿಂದ ಪ್ರಚಾರಕ್ಕಿಳಿಯಲು ಬಿಜೆಪಿ ನಿರ್ಧರಿಸಿದೆ. ಬಿಬಿಎಂಪಿಯಲ್ಲಿಯೂ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ವಾರ್ಡ್‌ನಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ ಎನ್ನುವ ಆಶ್ವಾಸನೆ ನೀಡಿ ಅದು ಮತದಾರರ ಮನವೊಲಿಸಿಕೊಳ್ಳಲು ಮುಂದಾಗಲಿದೆ.

ಇನ್ನು, ಗಾಂಧಿನಗರ ವಾರ್ಡ್ `ಕಾಂಗ್ರೆಸ್‌ನ ಭದ್ರಕೋಟೆ~ ಎಂದೇ ಬಿಂಬಿಸಲಾಗುತ್ತಿದೆ. ಶಾಸಕ ದಿನೇಶ್ ಗುಂಡೂರಾವ್ ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಚಾರದಲ್ಲಿ ತೊಡಗಿದೆ. ಜೆಡಿಎಸ್ ಕೂಡ ಕಾಂಗ್ರೆಸ್ ಹಾಗೂ ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ಹವಣಿಸುತ್ತಿದೆ.
 
ತಮಿಳು ಮತದಾರರ ಪ್ರಾಬಲ್ಯವಿರುವ ಕೊಳೆಗೇರಿ ಕಾಲೋನಿಗಳನ್ನು ಗುರಿಯಿಟ್ಟಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಈಗಾಗಲೇ ಮನೆ-ಮನೆ ಪ್ರಚಾರ ಕೈಗೊಳ್ಳುವ ಮೂಲಕ ಮತಯಾಚನೆಯಲ್ಲಿ ತೊಡಗಿದ್ದಾರೆ.

ಎಐಎಡಿಎಂಕೆ ಅಭ್ಯರ್ಥಿ ಎಂ.ಪಿ. ಯುವರಾಜ್ ತಮಿಳುನಾಡಿನ `ಅಮ್ಮ~ ಜಯಲಲಿತಾ ಹೆಸರು ಹೇಳಿಕೊಂಡು ಕೊಳೆಗೇರಿಗಳ ಮತಗಳನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಜೆಡಿಯು ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಕುಡಿಯುವ ನೀರು, ಹಕ್ಕುಪತ್ರಗಳ್ದ್ದದೇ ಪ್ರಮುಖ ಸಮಸ್ಯೆ: ತಮಿಳು ಮತದಾರರೇ ಹೆಚ್ಚಿರುವ ಕೊಳೆಗೇರಿಗಳಲ್ಲಿ ಕುಡಿಯುವ ನೀರು ಹಾಗೂ ಹಕ್ಕುಪತ್ರಗಳದ್ದೇ ಪ್ರಮುಖ ಸಮಸ್ಯೆ. ಅನೇಕ ಕುಟುಂಬಗಳು ದಶಕಗಳಿಂದಲೂ ಈ ಕೊಳೆಗೇರಿಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರೂ ಇದುವರೆಗೆ ಹಕ್ಕುಪತ್ರ ಸಿಕ್ಕಿಲ್ಲ. ಕುಡಿಯುವ ನೀರು ಕೂಡ ಪ್ರಮುಖ ಸಮಸ್ಯೆಯಾಗಿ ಉಳಿದಿದೆ.

`ಸುಮಾರು 120 ವರ್ಷಗಳಿಂದಲೂ ನಮ್ಮ ಜನ ಇಲ್ಲಿ ವಾಸವಾಗಿದ್ದಾರೆ. ಆದರೆ, ಕಂದಾಯ ಪಾವತಿಸದಿರುವುದರಿಂದ ಹಕ್ಕುಪತ್ರ ಸಿಕ್ಕಿಲ್ಲ. ಚುನಾವಣೆ ಸಂದರ್ಭದಲ್ಲಿ ಮನೆ ಬಾಗಿಲಿಗೆ ಬರುವ ಎಲ್ಲ ಅಭ್ಯರ್ಥಿಗಳು ಈ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಾರೆ. ಆದರೆ, ಗೆದ್ದ ನಂತರ ಅವರನ್ನು ಹಿಡಿಯುವುದೇ ಕಷ್ಟ~ ಎನ್ನುತ್ತಾರೆ ಶೇಷಾದ್ರಿಪುರದ ರಿಸಾಲ್ದಾರ್ ಕಾಲೋನಿಯ ಬಾಲನ್.

`ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಆದರೆ, ಕುಡಿಯುವ ನೀರಿನಲ್ಲಿ ಕೊಳಚೆ ನೀರು ಸೇರುತ್ತಿರುವುದರಿಂದ ಜನ ವಾಂತಿ-ಭೇದಿಯಿಂದ ನಿರಂತರವಾಗಿ ಬಳಲುತ್ತಿದ್ದಾರೆ. ಕುಡಿಯುವ ನೀರು ಹಾಗೂ ಕೊಳಚೆ ನೀರಿನ ಪೈಪುಗಳು ಒಂದೇ ಚೇಂಬರ್‌ನಲ್ಲಿ ಹಾದು ಹೋಗಿರುವುದು ಈ ಸಮಸ್ಯೆಗೆ ಕಾರಣ. ಹೀಗಾಗಿ, ಪ್ರತ್ಯೇಕ ಕೊಳವೆ ಅಳವಡಿಸುವ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಲ್ಲೊಂದು~ ಎನ್ನುತ್ತಾರೆ ಇದೇ ಕಾಲೋನಿಯ ಬಾಲಕೃಷ್ಣ.

ಹಕ್ಕುಪತ್ರದ್ದೇ ಸಮಸ್ಯೆ: ಮೆಜೆಸ್ಟಿಕ್‌ಗೆ ಹೊಂದಿಕೊಂಡಂತಿರುವ ಲಕ್ಷ್ಮಣಪುರಿ ಕಾಲೋನಿಯಲ್ಲಿಯೂ ಹಕ್ಕುಪತ್ರದ್ದೇ ಪ್ರಮುಖ ಸಮಸ್ಯೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಹಕ್ಕುಪತ್ರದ್ದು ಕೂಡ ಅಷ್ಟೇ ಮುಖ್ಯ ಸಮಸ್ಯೆ.

`ನಾವು 50 ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ಕಂದಾಯ ಪಾವತಿಸದ ಕಾರಣ ಕೊಳಚೆ ನಿರ್ಮೂಲನಾ ಮಂಡಳಿ ಹಕ್ಕುಪತ್ರ ನೀಡಿಲ್ಲ. ನಮಗೂ ಹಕ್ಕುಪತ್ರಕ್ಕಾಗಿ ಅಲೆದು ಅಲೆದು ಸಾಕಾಗಿದೆ~ ಎಂದು ಕಾಲೋನಿಯ ಎ. ವಿಶ್ವನಾಥ್ ಪ್ರತಿಕ್ರಿಯಿಸಿದರು.

ಇತ್ತೀಚೆಗೆ ರೈಲ್ವೆ ಮಾರ್ಗದ ವಿಸ್ತರಣೆಗಾಗಿ ಒಂದೆರಡು ಕೊಳೆಗೇರಿಗಳ ಜನರನ್ನು ಒಕ್ಕಲೆಬ್ಬಿಸಿರುವುದರಿಂದ ಹಕ್ಕುಪತ್ರಗಳಿಲ್ಲದ ಜನ ಭಯದ ನೆರಳಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದಕ್ಕಾಗಿ ಹಕ್ಕುಪತ್ರದ ಸಮಸ್ಯೆಯನ್ನೇ ಈ ಬಾರಿಯೂ ಅಭ್ಯರ್ಥಿಗಳ ಮುಂದೆ ಪ್ರಮುಖವಾಗಿ ಬಿಂಬಿಸುತ್ತಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿರುವ ಅಭ್ಯರ್ಥಿಗಳು ನಂತರ ಸಮಸ್ಯೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದಂತಿಲ್ಲ.

`ಹಣ-ಹೆಂಡದ ಹೊಳೆಯಲ್ಲಿ ಕೊಚ್ಚಿ ಹೋಗುವ ಮತದಾರರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕುಡಿಯುವ ನೀರು ಹಾಗೂ ಹಕ್ಕುಪತ್ರ ವಿಷಯ ಚುನಾವಣೆ ಸಂದರ್ಭದಲ್ಲಿ ನಗಣ್ಯವಾಗುತ್ತಿದೆ~ ಎಂದು ಇದೇ ವಾರ್ಡ್‌ನ ಹೆಸರು ಹೇಳಲಿಚ್ಛಿಸಿದ ಮತದಾರರೊಬ್ಬರು ವಿಷಾದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT