ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದಲ್ಲಿ ಬಿಲ್‌ ಗೇಟ್ಸ್!

Last Updated 11 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಮೈಕ್ರೋಸಾಫ್ಟ್’ ಸಂಸ್ಥಾಪಕ ಬಿಲ್‌ಗೇಟ್ಸ್ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಕನ್ನಡದಲ್ಲೊಬ್ಬ ‘ಬಿಲ್‌ ಗೇಟ್ಸ್’ ಬರುತ್ತಿದ್ದಾನೆ!
‘ಬಿಲ್‌ಗೇಟ್ಸ್’ ಕನ್ನಡದ ಹೊಸ ಸಿನಿಮಾ. ವರಮಹಾಲಕ್ಷ್ಮಿ ಹಬ್ಬವಾದ ಇಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ತನ್ನ ಬರುವಿಕೆಯನ್ನು ಚಿತ್ರ ರಸಿಕರಿಗೆ ತಿಳಿಸಲೆಂದು ‘ಬಿಲ್‌ ಗೇಟ್ಸ್’ ತಂಡ ಹಬ್ಬಕ್ಕೆ ಮೊದಲೇ ಸುದ್ದಿಗೋಷ್ಠಿಯಲ್ಲಿ ಹಾಜರಿತ್ತು.

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ಗೂ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲವಂತೆ. ಬಿಲ್‌ಗೇಟ್ಸ್ ರೀತಿ ಸಾಧನೆ ಮಾಡಬೇಕೆಂದು ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರ ಕಥೆ ಇದು. ಅವರಿಗೆ ಬಿಲ್‌ಗೇಟ್ಸ್ ಸ್ಫೂರ್ತಿಯಷ್ಟೆ. ಇಬ್ಬರು ನಾಯಕರು ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಕಥೆಯ ತಿರುಳು. ಒಂದೊಮ್ಮೆ ಶೀರ್ಷಿಕೆಗೆ ಸಂಬಂಧಿಸಿ ತಕರಾರು ಬಂದರೆ ಏನು ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ತಂಡ ಚಿಂತೆ ಮಾಡಿಲ್ಲ.

ಸಂಕಲನಕಾರನಾಗಿ, ಸಹಾಯಕ–ಸಹ ನಿರ್ದೇಶಕನಾಗಿ ಎಂಟು ವರ್ಷಗಳ ಅನುಭವವಿರುವ ಸಿ. ಶ್ರೀನಿವಾಸ ಸ್ವತಂತ್ರವಾಗಿ ನಿರ್ದೇಶನಕ್ಕಿಳಿದಿದ್ದಾರೆ. ಇದೊಂದು ಪಕ್ಕಾ ಕೌಟುಂಬಿಕ ಮನರಂಜನಾ ಚಿತ್ರ ಎಂಬುದು ಅವರ ವ್ಯಾಖ್ಯಾನ. ‘ಇಂದಿನ ಪೀಳಿಗೆಗೆ ಅತ್ಯವಶ್ಯವೆನ್ನುವ ಈ ಚಿತ್ರದ ಕಥೆಯಲ್ಲಿ ಒಳ್ಳೆಯ ಸಂದೇಶವೂ ಇದೆ’ ಎನ್ನುತ್ತಾರೆ ಅವರು.

‘ಸೊಸೆ’, ‘ಕುಲವಧು’ ಧಾರಾವಾಹಿಗಳಿಂದ ಪರಿಚಿತರಾದ ಶಿಶಿರ ಶರ್ಮ ಚಿತ್ರದ ನಾಯಕ. ಕಿರುತೆರೆ ಪಯಣ ತುಂಬಾ ಚೆನ್ನಾಗಿತ್ತು ಎಂದ ಅವರು, ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರದಲ್ಲಿ ಸಾಕಷ್ಟು ಅಲೆದಟ ನಡೆಸಿದ್ದಾರಂತೆ. ಒಂದಷ್ಟು ಕಥೆಗಳನ್ನೂ ಕೇಳಿದ ಅವರು, ತಾನು ಸಿನಿಮಾ ನಾಯಕನಾಗಿ ಪರಿಚಯವಾಗಲು ‘ಬಿಲ್‌ಗೇಟ್ಸ್’ ಒಳ್ಳೆಯ ಕಥೆ ಎಂದು ನಂಬಿದ್ದಾರೆ.

ಬಿಲ್‌ಗೇಟ್ಸ್‌ನಷ್ಟೇ ತಮ್ಮ ಚಿತ್ರವೂ ಯಶಸ್ವಿವಾಗಲಿ ಎಂಬುದು ಅವರ ಆಶಯ. ಶಿಶಿರ ಜೊತೆ ಚಿಕ್ಕಣ್ಣ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಜಾ ಮತ್ತು ಮೇಘನಾ ಅಪ್ಪಯ್ಯ ನಾಯಕಿಯರು. ರೋಜಾಗೆ ಇದು ನಾಲ್ಕನೇ ಚಿತ್ರವಾದರೆ ಮೇಘನಾಗೆ ಮೂರನೇ ಚಿತ್ರ. ಮೇಘನಾ ಅಭಿನಯದ ‘ಲೈಫ್ ಸೂಪರ್’ ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ.

ನೋಬಿನ್ ಪಾಲ್ ಸಂಗೀತದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಜಯ ಮಲ್ಲಿಕಾರ್ಜುನ ಸಂಭಾಷಣೆ ಚಿತ್ರಕ್ಕಿದೆ. ನಿರ್ದೇಶಕರ ಎಂಟು ಸ್ನೇಹಿತರು ಸೇರಿ ಬಂಡವಾಳ ಹೂಡಿದ್ದಾರೆ. ಕುರಿಪ್ರತಾಪ, ಯತಿರಾಜ್ ಮತ್ತು ವಿದೇಶಿ ಹುಡುಗ–ಹುಡುಗಿ ತಾರಾಗಣದಲ್ಲಿದ್ದಾರೆ.

ಮೈಸೂರು, ಬೆಂಗಳೂರು, ಶ್ರೀರಂಗಪಟ್ಟಣದ ಸುತ್ತಮುತ್ತ ಇಪ್ಪತ್ತೈದು ದಿನಗಳ ಚಿತ್ರೀಕರಣಕ್ಕೆ ಸಿದ್ಧವಾಗಿರುವ ತಂಡ ಎರಡು ಹಾಡುಗಳ ದೃಶ್ಯಗಳನ್ನು ಸೆರೆಹಿಡಿಯಲು ದುಬೈಗೆ ತೆರಳುವ ಯೋಜನೆಯನ್ನೂ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT