ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದಲ್ಲೊಂದು ಅಯೋಧ್ಯೆ!

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮಗಳ ಪ್ರಕಾರ ಚಿತ್ರವೊಂದಕ್ಕೆ ನೀಡಿದ ಶೀರ್ಷಿಕೆಯನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ಮೊದಲ ಅಕ್ಷರ ಚಿಕ್ಕದು ಮಾಡಿ ಎರಡನೇ ಅಕ್ಷರ ದೊಡ್ಡದು ಮಾಡುವಂತಿಲ್ಲ.
 
ಆದರೆ ಆ ತಪ್ಪನ್ನು `ಕರ್ನಾಟಕ ಅಯೋಧ್ಯೆಪುರಂ~ ಚಿತ್ರದ ನಿರ್ದೇಶಕ ವಿ.ಲವ ಅದಾಗಲೇ ಮಾಡಿದ್ದರು. ಕರ್ನಾಟಕ ಎಂಬ ಹೆಸರು ಚಿಕ್ಕದಾಗಿತ್ತು. ಆ ಬಗ್ಗೆಯೇ ಪತ್ರಕರ್ತರ ತಕರಾರು ಇದ್ದದ್ದು. ಚಿತ್ರ ಬಿಡುಗಡೆಯ ವೇಳೆಗೆ ಮಂಡಳಿಯ ನಿಯಮದ ಪ್ರಕಾರವೇ ಶೀರ್ಷಿಕೆ ಬರೆಸುವುದಾಗಿ ಹೇಳುವುದರೊಂದಿಗೆ ನಿರ್ದೇಶಕರು ಪ್ರಶ್ನೆಗಳಿಂದ ನುಣುಚಿಕೊಂಡರು.

`ಅಯೋಧ್ಯೆಪುರಂ~ ನಿರ್ದೇಶಕರ ಕಾಲ್ಪನಿಕ ಊರಂತೆ. ಕತೆ, ಚಿತ್ರಕತೆ ಅವರದೇ. ತಮ್ಮ ಕಾಲ್ಪನಿಕ ಊರಿನಲ್ಲಿ ಅವರು ಹೇಳಲು ಹೊರಟಿರುವುದು ಸತ್ಯಕತೆಯೊಂದನ್ನು. ಎರಡು ಸಮುದಾಯಗಳ ಸುತ್ತ ಚಿತ್ರ ಇರಲಿದೆಯಂತೆ.
 
ಅಯೋಧ್ಯೆಪುರಂಗೂ ಅಯೋಧ್ಯೆಗೂ ಯಾವುದೇ ಸಂಬಂಧ ಇಲ್ಲವಂತೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರು, ತುಮಕೂರು, ಕನಕಪುರದಲ್ಲಿ ನಡೆದಿದೆ. ಉಳಿದ ಭಾಗವನ್ನು ಕುಣಿಗಲ್, ಹಾಸನ ಹಾಗೂ ಅಯೋಧ್ಯೆಯಲ್ಲಿ ನಡೆಯಲಿದೆಯಂತೆ. ಬೇರೆ ಬೇರೆ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳಲ್ಲಿ ಅರಳುವ ಪ್ರೇಮ ಚಿತ್ರದ ಕಥಾವಸ್ತುವಂತೆ.

ಈ ಮಧ್ಯೆ ಮಾತು ಅಡಿಶೀರ್ಷಿಕೆಯ ಕಡೆ ಹೊರಳಿತು. `ಫೈಟಿಂಗ್ ಫಾರ್...~ ಎಂಬುದು ಚಿತ್ರದ ಅಡಿ ಶೀರ್ಷಿಕೆ. ಯಾವುದಕ್ಕಾಗಿ ಹೊಡೆದಾಟ? ನಿರ್ಮಾಪಕರಿಗಾಗಿ ಹೊಡೆದಾಟವೇ? ಎಂದೂ ಕೇಳಲಾಯಿತು. `ಚಿತ್ರ ನೋಡಿದ ಮೇಲೆ ಎಲ್ಲ ತಿಳಿಯುತ್ತದೆ~ ಎಂದರು ಲವ.

ಚಿತ್ರದ ಹೆಸರು `...ಅಯೋಧ್ಯೆಪುರಂ~, ನಿರ್ದೇಶಕರ ಹೆಸರು ಲವ. ಇವೆರಡು ಹೆಸರುಗಳಿಗೂ ಸಂಬಂಧವಿದೆಯೇ ಎಂದಾಗ ಲವ ತಮ್ಮ ಕುಟುಂಬದ ಪರಿಚಯ ಮಾಡಿಕೊಟ್ಟರು. ಅವರ ತಂದೆಯ ಹೆಸರು ರಾಮನ ಹೆಸರನ್ನು ಹೋಲುತ್ತದಂತೆ.
 
ಅಲ್ಲಿಗೆ ಚಿತ್ರದ ಶೀರ್ಷಿಕೆಯ ಬಗ್ಗೆ ಅವರ ಒಲವು ನಿಲುವು ಸ್ಪಷ್ಟವಾಯಿತು.ಅಷ್ಟರಲ್ಲಿ ನಾಯಕ ರಾಕೇಶ್ ಅಡಿಗ ಮಾತಿಗಿಳಿದರು. `ಚಿತ್ರದಲ್ಲಿ ನಾಯಕನ ಶೇಡ್ ಬದಲಾಗುತ್ತಾ ಹೋಗುತ್ತದೆ. ಮಧ್ಯಮವರ್ಗದ ಹುಡುಗನೊಬ್ಬನ ಚಿತ್ರಣ ಬದಲಾಗುತ್ತಲೇ ಇರುವುದು ಆಸಕ್ತಿದಾಯಕವಾಗಿದೆ ಎಂದರು. `ಚಿತ್ರ ಸಮಾಜದ ಮೇಲೆ ಮಾರಕ ಪರಿಣಾಮ ಬೀರದು~ ಎಂಬ ಭರವಸೆಯನ್ನೂ ಅವರು ನೀಡಿದರು.

`ನನ್ನದು ಮುಸ್ಲಿಂ ಹುಡುಗಿಯ ಪಾತ್ರ~ ಎಂದರು ನಟಿ ನಯನ. ಪಾತ್ರಕ್ಕೆ ತಕ್ಕ ಭಾಷಾ ಬದಲಾವಣೆ, ಆಂಗಿಕ ಬದಲಾವಣೆಯನ್ನು ಅವರು ಮಾಡಿಕೊಂಡಿದ್ದಾರಂತೆ. `ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ವಾಣಿ ಹರಿಕೃಷ್ಣ ಅವರ ಹಾಡು ತುಂಬಾ ಚೆನ್ನಾಗಿದೆ~ ಎಂದು ಮೆಚ್ಚಿಕೊಂಡರು ಅವರು. ನಟನೆಯ ವೇಳೆ ಮಾರ್ಗದರ್ಶನ ಮಾಡಿದ ರಾಕೇಶ್ ಅವರನ್ನೂ ಸ್ಮರಿಸಿದರು.

ಹಾಡುಗಳಲ್ಲಿ ಭಾಷಾ ಪ್ರಯೋಗವೇನೂ ನಡೆದಿಲ್ಲ ಎಂಬ ಉತ್ತರ ಚಿತ್ರದ ಸಂಗೀತ ನಿರ್ದೇಶಕ ಸಾಗರ ನಾಗಭೂಷಣ್ ಅವರಿಂದ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆಯಂತೆ. ಅದರಲ್ಲಿ ಎರಡು ಮೆಲೋಡಿಯಸ್ ಆಗಿವೆಯಂತೆ. ಟಪೋರಿ, ಟಪ್ಪಾಂಗುಚ್ಚಿ ಹಾಡುಗಳೂ ಸೇರಿಕೊಂಡಿವೆಯಂತೆ.

ತಾರಾಗಣದಲ್ಲಿ ಅಚ್ಯುತರಾವ್, ಸಾಧುಕೋಕಿಲ, ರಾಜು ತಾಳಿಕೋಟೆ, ಹರೀಶ್ ರೈ ಮುಂತಾದವರು ಇದ್ದಾರೆ. ಫೆಬ್ರುವರಿ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳಲಿದ್ದು ಏಪ್ರಿಲ್‌ಗೆ ಬಿಡುಗಡೆಗೆ ಸಿದ್ಧವಾಗಲಿದೆಯಂತೆ. ನಿರ್ಮಾಪಕ ಕೆ.ವಿ.ಮಧುಸೂದನ್, ಹಾಸ್ಯನಟನಾಗಿ ಕಾಣಿಸಿಕೊಂಡಿರುವ ಅಕ್ಷಯ್ ಚುಟುಕಾಗಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT