ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿವನದಿಂದ ಎಂ.ಬಿ.ರಸ್ತೆವರೆಗೆ ಏಕಮುಖ ಸಂಚಾರ

Last Updated 5 ಅಕ್ಟೋಬರ್ 2012, 3:30 IST
ಅಕ್ಷರ ಗಾತ್ರ

ಕೋಲಾರ: ನಗರದ ಗಾಂಧಿವನದಿಂದ ಎಂ.ಬಿ.ರಸ್ತೆವರೆಗೆ, ಕಾಳಮ್ಮಗುಡಿ ರಸ್ತೆಯಿಂದ ಹೊಸ ಬಸ್ ನಿಲ್ದಾಣದವರೆಗೆ, ಎಂ.ಜಿ. ಚೌಕದಿಂದ ಶಾರದಾ ಟಾಕೀಸ್ ವೃತ್ತದವರೆಗೆ ಏಕಮುಖ ವಾಹನ ಸಂಚಾರ ನಿಯಮ ಜಾರಿಗೆ ತರುವುದು, ನಗರ ಸಾರಿಗೆಗೆ `ಅಂತರಗಂಗೆ~ ಹೆಸರಿಡುವುದು, ಎಂ.ಜಿ. ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳು ಮತ್ತು ಭಾರಿ ವಾಹನಗಳನ್ನು ನಿಷೇಧಿಸುವುದೂ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ನಗರದಲ್ಲಿ ಗುರುವಾರ ನಡೆದ ಸಾರಿಗೆ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಯಿತು.

ನಗರ ಹೊರವಲಯದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಸಮಿತಿ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲಿ ಮುಕ್ತವಾಗಿ ಚರ್ಚಿಸಿ, ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ನಿರ್ಧಾರಗಳನ್ನು ಪ್ರಕಟಿಸಿದರು.

ಸಾರ್ವಜನಿಕರ ಆಗ್ರಹದ ಮೇರೆಗೆ, ಮೆಕ್ಕೆ ವೃತ್ತದಿಂದ ಬಸ್ ನಿಲ್ದಾಣದವರೆಗೆ ರಾಜ್ಯ ಸಾರಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ಹೊಸ ಬಸ್ ನಿಲ್ದಾಣದಿಂದ ಮೆಕ್ಕೆ ವೃತ್ತದ ಕಡೆಗೆ ಬಸ್‌ಗಳು ಬರಲು ಮಾತ್ರ ಅವಕಾಶವಿದೆ. ಇದೇ ರಸ್ತೆಯಲ್ಲಿ ಮತ್ತೆ ಬಸ್‌ನಿಲ್ದಾಣಕ್ಕೆ ತೆರಳಲು ಅವಕಾಶವಿಲ್ಲ.

ಬಸ್ ಶೆಲ್ಟರ್:
ನಗರದ 13 ಸ್ಥಳಗಳಲ್ಲಿ ಪ್ರಯಾಣಿಕರ ಇಳಿದಾಣ (ಬಸ್ ಶೆಲ್ಟರ್) ಗಳನ್ನು ನಿರ್ಮಿಸಲು ಸಭೆ ನಿರ್ಧರಿಸಿತು. ಪವನ್ ಕಾಲೇಜಿನ ಎದುರು, ಎಪಿಎಂಸಿ ಮಾರುಕಟ್ಟೆಯ ಎರಡೂ ಬದಿಯ ರಸ್ತೆಯಲ್ಲಿ, ಕ್ಲಾಕ್ ಟವರ್ ವೃತ್ತ, ಜಿಲ್ಲಾ ಕ್ರೀಡಾಂಗಣದ ಮುಂಭಾಗ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮುಂದೆ, ಪೊಲೀಸ್ ವಸತಿಗೃಹದ ಮುಂಭಾಗ, ಬೃಂದಾವನ ವೃತ್ತವೂ ಸೇರಿದಂತೆ ನಗರದ 13 ಸ್ಥಳಗಳಲ್ಲಿ, ಅದರಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗುವುದು. ಡೂಂಲೈಟ್ ವೃತ್ತದ ಬಳಿ, ಇಟಿಸಿಎಂ ಆಸ್ಪತ್ರೆ ಮುಂಭಾಗ ಸೇರಿದಂತೆ ಈಗ ಇರುವ ಬಸ್ ಶೆಲ್ಟರ್‌ಗಳನ್ನು ನವೀಕರಿಸುವ ಕುರಿತೂ ನಿರ್ಧಾರ ಕೈಗೊಳ್ಳಲಾಯಿತು.

ವೃತ್ತಗಳು ಮತ್ತು ಸಂಚಾರ ನಿಯಂತ್ರಣ ದೀಪದ ವ್ಯವಸ್ಥೆ ಇರುವ ಸ್ಥಳದಿಂದ ಕನಿಷ್ಠ 200 ಮೀಟರ್ ದೂರದಲ್ಲಿ ಶೆಲ್ಟರ್‌ಗಳನ್ನು ನಿರ್ಮಿಸಬೇಕು. ಶೆಲ್ಟರ್‌ಗಳು ಇರುವ ಸ್ಥಳಕ್ಕಿಂತಲೂ ಹಿಂದೆಯೇ ಬಸ್‌ಗಳು ನಿಲ್ಲುವುದರಿಂದ ಕೆಲವು ಪ್ರಮುಖ ವೃತ್ತಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಸ್ಥಗಿತಗೊಳ್ಳುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದರು.


ಏಕಮುಖ ಸಂಚಾರ: ನಗರದ ಗಾಂಧಿವನದಿಂದ ಎಂ.ಬಿ. ರಸ್ತೆವರೆಗೆ, ಕಾಳಮ್ಮಗುಡಿ ರಸ್ತೆಯಿಂದ ಹೊಸ ಬಸ್ ನಿಲ್ದಾಣದವರೆಗೆ, ಎಂ.ಜಿ. ಚೌಕದಿಂದ ಶಾರದಾ ಟಾಕೀಸ್ ವೃತ್ತದವರೆಗೆ ಏಕಮುಖ ವಾಹನ ಸಂಚಾರ ನಿಯಮ ಜಾರಿಗೆ ತರುವ ಕುರಿತು ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಗಾಂಧಿವನದಿಂದ ಗಾಂಧಿಚೌಕದವರೆಗೆ ಏಕಮುಖ ಸಂಚಾರ ಜಾರಿಗೆ ತಂದು, ಅಲ್ಲಿಂದ ಕಾಳಮ್ಮಗುಡಿ ಬೀದಿವರೆಗೆ ಏಕಮುಖ ಸಂಚಾರ ಜಾರಿಗೆ ತರಬೇಕು. ಇಲ್ಲವಾದರೆ ದ್ವಿಚಕ್ರ ವಾಹನ ನಿಲುಗಡೆ ನಿಷೇಧಿಸಬೇಕು ಎಂಬ ಪೊಲೀಸರ ಸಲಹೆಗೆ ಕೆಲವರು ವಿರೋಧ ವ್ಯಕ್ತಪಡಿಸಿದರು.
 
ಎಲೆಪೇಟೆಯಿಂದ ಎಂ.ಬಿ.ರಸ್ತೆವರೆಗೆ ಏಕಮುಖ ಸಂಚಾರ ಜಾರಿಗೆ ತಂದರೆ, ಎಂ.ಬಿ. ರಸ್ತೆಯಿಂದ ಬರುವವರಿಗೆ ಪರ್ಯಾಯ ರಸ್ತೆ ಯಾವುದು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಎಂ.ಜಿ. ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳನ್ನು ನಿಷೇಧಿಸಿ ಅವುಗಳ ನಿಲುಗಡೆ ಇಟಿಸಿಎಂ ಆಸ್ಪತ್ರೆ ಎದುರು ಮತ್ತು ಪಕ್ಕದಲ್ಲಿ ವ್ಯವಸ್ಥೆ ಮಾಡಲು ಸಭೆ ನಿರ್ಧರಿಸಿತು.

ಸಿಸಿ ಟಿವಿ: ರಾತ್ರಿ 9ರಿಂದ ಬೆಳಿಗ್ಗೆ 8ರವರೆಗೆ ಎಂ.ಜಿ. ರಸ್ತೆಯಲ್ಲಿ ಭಾರಿ ವಾಹನಗಳನ್ನು ನಿಷೇಧಿಸುವ ಹಿನ್ನೆಲೆಯಲ್ಲಿ ಈ ರಸ್ತೆಯ ಎರಡು ತುದಿಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಶ್ವನಾಥ್, ನಗರಸಭೆ ಆಯುಕ್ತ ಎಂ.ಮಹೇಂದ್ರಕುಮಾರ್ ಅವರಿಗೆ ಸೂಚಿಸಿದರು. ನಗರಸಭೆ ಮನಸ್ಸು ಮಾಡಿದರೆ ನಗರವನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ರೂಪಿಸಲು ಸಾಧ್ಯವಿದೆ. ಅದಕ್ಕೆ ಎಲ್ಲ ಬಗೆಯ ಸಹಕಾರ ನೀಡಲು ತಾವು ಸಿದ್ಧ ಎಂದು ಅವರು ಭರವಸೆಯನ್ನೂ ನೀಡಿದರು.

ವಿಸ್ತರಣೆ: ನಗರ ಸಾರಿಗೆ ಬಸ್‌ಗಳ ಸಂಚಾರವನ್ನು ಜನರ ಬೇಡಿಕೆ ಮೇರೆಗೆ ಇನ್ನಷ್ಟು ದೂರದವರೆಗೆ ವಿಸ್ತರಿಸಬೇಕು. ನಗರದ ಹೊಸ ಬಸ್ ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಬೇಕು. ನಿಲ್ದಾಣದಲ್ಲಿ ಗಿಡಗಳನ್ನು ನೆಡಬೇಕು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ್ ಅವರಿಗೆ ಡಿಸಿ ಸೂಚಿಸಿದರು.

ಶ್ರೀನಿವಾಸಪುರ ರಸ್ತೆಯಲ್ಲಿ ರೋಜೇನಹಳ್ಳಿ ಕ್ರಾಸ್‌ವರೆಗೂ ವಿಸ್ತರಿಸಬೇಕು ಎಂದು ನಾಗರಿಕ ತ್ಯಾಗರಾಜ್ ಕೋರಿದರು. ಹೊಸ ಬಸ್ ನಿಲ್ದಾಣದ ಎರಡೂ ಬದಿಯಲ್ಲಿ ಬಾರ್‌ಗಳಿಗೆ ಅನುಮತಿ ನೀಡಿರುವುದರಿಂದ ಪ್ರಯಾಣಿಕರಿಗೆ ಕುಡುಕರಿಂದ ತೊಂದರೆಯಾಗಿದೆ ಎಂದು ರೈತ ಸಂಘದ ಕೆ.ಶ್ರೀನಿವಾಸಗೌಡ ದೂರಿದರು.

ಸಾರಿಗೆ ಸಂಸ್ಥೆ ಅಧಿಕಾರಿಗಳು ಜನರಿಂದ ದೂರುಗಳನ್ನು ಸ್ವೀಕರಿಸಲು ಲಭ್ಯವಾಗುವುದಿಲ್ಲ ಎಂಬ ದೂರುಗಳೂ ಕೇಳಿಬಂದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ಬಸವರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT