ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಅಡಿಗಲ್ಲು ಹಾಕಿದ ಧರ್ಮಶಾಲೆ ಅನಾಥ!

Last Updated 2 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಹಾವೇರಿ: ಮಹಾತ್ಮಾ ಗಾಂಧೀಜಿ  ನಡೆದಾಡಿದ ಪ್ರದೇಶಗಳು, ತಂಗಿರುವ ಕಟ್ಟಡಗಳು, ಬಳಸಿದ ವಸ್ತುಗಳು ಐತಿಹಾಸಿಕ ಮನ್ನಣೆ ಪಡೆದಿವೆ. ಬಹುತೇಕ ಸ್ಥಳಗಳು ಸ್ಮಾರಕಗಳಾಗಿವೆ. ಆದರೆ, ಗಾಂಧೀಜಿ ಅವರೇ ಅಡಿಗಲ್ಲು ನೆರವೇರಿಸಿದ ಕಟ್ಟಡವೊಂದು ಐತಿಹಾಸಿಕ ಸ್ಮಾರಕವಾಗುವ ಬದಲು ಅನಾಥ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಹೌದು, ಗಾಂಧೀಜಿ  ಅಡಿಗಲ್ಲು ಇಟ್ಟ ಹಾಗೂ ಸತತ ಐವತ್ತು ವರ್ಷಗಳ ಕಾಲ ಜನರಿಗೆ ಆಶ್ರಯ ನೀಡಿ ಇಂತಹ ದುಸ್ಥಿತಿಗೆ ತಲುಪಿದ ಕಟ್ಟಡವೇ ನಗರದ `ಧರ್ಮಶಾಲಾ~ ಕಟ್ಟಡ.

ಹಾವೇರಿ ನಗರದ ರೈಲು ನಿಲ್ದಾಣದ ಪಕ್ಕದಲ್ಲಿ ಪುರಾತನ ಪಳಿಯುಳಿಕೆಯಂತೆ ನಿಂತಿರುವ ಈ ಕಟ್ಟಡದ ಪರಿಚಯ ಬಹುತೇಕ ಜನರಿಗೆ ಇಲ್ಲ. ಜಿಲ್ಲಾ ಕೇಂದ್ರವಾದ ನಂತರ ಪ್ರಾದೇಶಿಕ ಸಾರಿಗೆ ಕಚೇರಿ ಅಲ್ಲಿ ಕಾರ್ಯ ನಿರ್ವಹಿಸುತ್ತ್ದ್ದಿದುದರಿಂದ ಇಂದಿಗೂ ಜನರು ಅದನ್ನು ಆರ್‌ಟಿಓ ಕಟ್ಟಡ ಎಂದೇ ತಿಳಿದಿದ್ದಾರೆ.

ಧರ್ಮಶಾಲೆ: ಇಂದಿನ ದಿನಗಳಂತೆ ಸ್ವಾತಂತ್ರ್ಯ ಪೂರ್ವದಲ್ಲಿ ಲಾಡ್ಜ್‌ಗಳಾಗಲಿ, ಹೊಟೆಲ್‌ಗಳಾಗಲಿ ಇದ್ದಿರಲಿಲ್ಲ. ಆ ಸಂದರ್ಭದಲ್ಲಿ ಪರ ಊರಿನಿಂದ ಬಂದವರು ತಂಗಲು ಧರ್ಮಶಾಲೆಗಳನ್ನು ನಿರ್ಮಿಸಲಾಗುತ್ತಿತ್ತು. ನಗರದ ನರಸಿಂಗರಾವ್ ರಾಮಚಂದ್ರರಾವ್ ನಾಡಿಗೇರ ಅವರು ಧರ್ಮಶಾಲಾ ನಿರ್ಮಾಣಕ್ಕಾಗಿ ರೈಲು ನಿಲ್ದಾಣದ ಎದುರಿನಲ್ಲಿರುವ ಸುಮಾರು 30 ಗುಂಟೆ ಜಾಗೆಯಲ್ಲಿ ಮಹಾತ್ಮಾ ಗಾಂಧೀಜಿ ಅವರು 1934 ಮಾ.1 ರಂದು ಧರ್ಮಶಾಲಾ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದರು. ಆ ಸಂದರ್ಭದ ಶಿಲಾನ್ಯಾಸದ ಕಲ್ಲುಗಳು ಇಂದಿಗೂ ಕಟ್ಟಡದ ಮಧ್ಯದ ಕೋಣೆಯ ಮೇಲ್ಭಾಗದಲ್ಲಿ ಹಾಗೂ ಕಟ್ಟಡದ ಹೊರ ಭಾಗದಲ್ಲಿವೆ.

ನಗರಸಭೆ ನಿರ್ಲಕ್ಷ್ಯ: ಸ್ವಾತಂತ್ರ್ಯ ನಂತರವೂ ಧರ್ಮಶಾಲೆಯಾಗಿ ಉಳಿದ ಈ ಕಟ್ಟಡ ಊರು ಬೆಳೆದಂತೆ ಆಡಳಿತ ನಡೆಸುವ ಆಗಿನ ಸ್ಥಳೀಯ ಸಂಸ್ಥೆಯಿಂದ ಸರಿಯಾದ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೊಳಗಾಗುತ್ತಾ ಬಂದಿದೆ.

ಕಳೆದ ಕೆಲವು ವರ್ಷ ಪ್ರಾದೇಶಿಕ ಸಾರಿಗೆ ಕಚೇರಿಯಾಗಿದ್ದ ಈ ಕಟ್ಟಡವು, ಈಗಿನ ನಗರಸಭೆ ಆಡಳಿತ ಮಂಡಳಿ ಖಾಸಗಿ ಶಿಕ್ಷಣ ಸಂಸ್ಥೆಗೆ ಬಾಡಿಗೆ ನೀಡಿದೆ. ಆದರೆ, ಆ ಸಂಸ್ಥೆ ಮುಖ್ಯ ಕಟ್ಟಡವನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದು, ಅದರ ಆವರಣ ಹಾಗೂ ಹಿಂದಿರುವ ಕೋಣೆಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಅನೈತಿಕ ಚಟುವಟಿಕೆ ತಾಣ: ಧರ್ಮಶಾಲಾ ಕಟ್ಟಡದ ಆವರಣ ವಿಶಾಲವಾಗಿದ್ದು, ಅದರಲ್ಲಿ ಮೂರು ಸುಸಜ್ಜಿತ ಕೋಣೆಗಳಿವೆ. ಆದರೆ, ಬಾಡಿಗೆ ಪಡೆದ ಶಿಕ್ಷಣ ಸಂಸ್ಥೆ ಈ ಕೊಠಡಿಯನ್ನು ಬಳಸಿಕೊಳ್ಳುತ್ತಿಲ್ಲ. ಇದರಿಂದ ಈಗ ಸಂಜೆಯಾಗುತ್ತಿದ್ದಂತೆ ಧರ್ಮಶಾಲೆ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎನ್ನುವುದಕ್ಕೆ ಅಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳೂ, ಸಿಗರೇಟ್ ಪ್ಯಾಕೇಟ್‌ಗಳು, ಕಾಂಡೋಮ್‌ಗಳೇ ಸಾಕ್ಷಿಯಾಗಿವೆ.

`ಇಡೀ ಜೀವನ ಸಾರಾಯಿ ವಿರುದ್ಧ ಹೋರಾಟ ಮಾಡುತ್ತಾ ಸಾರಾಯಿ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂಬ ಕನಸು ಕಂಡಿದ್ದ ಮಹಾತ್ಮಾ ಗಾಂಧೀಜಿ ಅವರ ಆಶಯಕ್ಕೆ ವಿರುದ್ಧವಾಗಿ ಅವರೇ ಅಡಿಗಲ್ಲು ಇಟ್ಟ ಕಟ್ಟಡದಲ್ಲಿ ಇಂತಹ ಚಟುವಟಿಕೆಗಳು ನಡೆಯಲು ಅವಕಾಶ ಮಾಡಿಕೊಟ್ಟಿರುವುದು ನಗರಸಭೆ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ~ ಎಂದು ಆರೋಪಿಸುತ್ತಾರೆ ವಕೀಲ ಪರಶುರಾಮ ಅಗಡಿ.

ಕೂಡಲೇ ನಗರಸಭೆ ಅದಕ್ಕೊಂದು ಸುಸಜ್ಜಿತ ಕಾಂಪೌಂಡ್ ನಿರ್ಮಿಸಿ, ಹಾಳಾಗಿ ಹೋಗುತ್ತಿರುವ ಕೋಣೆಗಳನ್ನು ದುರಸ್ತಿಗೊಳಿಸಿ ಅದನ್ನೊಂದು ಸ್ಮಾರಕದ ರೀತಿಯಲ್ಲಿ ಸಂರಕ್ಷಣೆ ಮಾಡುವ ಮೂಲಕ ಗಾಂಧೀಜಿ ಅವರ ಗೌರವವನ್ನು ಕಾಪಾಡಬೇಕೆಂದು ಹಾವೇರಿ ನಾಗರಿಕೆ ವೇದಿಕೆ ಅಧ್ಯಕ್ಷ ಎಂ. ಎಸ್. ಕೋರಿಶೆಟ್ಟರ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT