ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ-ಶಾಸ್ತ್ರಿ ಸ್ಮರಣೆ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಮಂಗಳವಾರ ದೇಶದಾದ್ಯಂತ ಶ್ರದ್ಧೆಯಿಂದ ಆಚರಿಸಲಾಯಿತು.

ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಸೇರಿದಂತೆ ಅನೇಕ ಗಣ್ಯರು ರಾಜ್‌ಘಾಟ್‌ಗೆ ತೆರಳಿ ಗಾಂಧೀಜಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಇಬ್ಬರೂ ನಾಯಕರ ಭಾವಚಿತ್ರಗಳಿಗೆ ಗೌರವ ಸಲ್ಲಿಸಲಾಯಿತು.

ಗಾಂಧೀಜಿಯವರ 143ನೇ ಮತ್ತು ಶಾಸ್ತ್ರಿಯವರ 108ನೇ ಜಯಂತಿ ಅಂಗವಾಗಿ ಸರ್ವ ಧರ್ಮಗಳ ಗುರುಗಳು ಪ್ರಾರ್ಥನೆ ಸಲ್ಲಿಸಿದರು. ಗಾಂಧೀಜಿ ಸಮಾಧಿ ಬಳಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಿಯವಾದ ಭಜನೆಗಳನ್ನು ಹಾಡಲಾಯಿತು. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ರಕ್ಷಣಾ ಸಚಿವ ಎ.ಕೆ. ಆಂಟನಿ, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೇರಿದಂತೆ ಅನೇಕ ಸಂಸದರು, ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಗೌರವ ಅರ್ಪಿಸಿದರು.

ಗಾಂಧಿ ಜಯಂತಿ ಅಂಗವಾಗಿ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯವು ರಾಜ್‌ಘಾಟ್‌ನಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಿತ್ತು. ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪುಸ್ತಕ ಪ್ರದರ್ಶನ ಮಳಿಗೆಗೆ ಭೇಟಿ ನೀಡಿದ್ದರು. ಗಾಂಧೀಜಿ ಕುರಿತಾದ ಹಲವು ವಿಭಿನ್ನ ಬಗೆಯ ಪುಸ್ತಕಗಳು ಗಮನ ಸೆಳೆದವು. ಗಾಂಧಿ ಜಯಂತಿಯನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿಯೂ ಆಚರಿಸಲಾಗುತ್ತಿದೆ. 

ಧರ್ಮಶಾಲಾದಲ್ಲಿ ಟಿಬೆಟನ್ನರು ಗಾಂಧಿ ಜಯಂತಿಯನ್ನು ಆಚರಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೇಂದ್ರೀಯ ಟಿಬೆಟ್ ಆಡಳಿತ ಗಾಂಧಿ ಜಯಂತಿಯಂದು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಶಾಂತಿ ಮತ್ತು ಅಹಿಂಸೆಗಳ ಬಗ್ಗೆ ಗಾಂಧೀಜಿ ಅವರಿಗಿದ್ದ ಬದ್ಧತೆ ವಿಶ್ವವ್ಯಾಪಿ ಮನ್ನಣೆ ಗಳಿಸಿವೆ ಎಂದು ಟಿಬೆಟನ್ನರ ರಾಜಕೀಯ ನಾಯಕ ಲೊಬ್‌ಸ್ಯಾಂಗ್ ಸಾಂಗೆ ಹೇಳಿದರು. `ದಲೈ ಲಾಮಾ ಅವರ ಪ್ರಕಾರ ಭಾರತ ನಮ್ಮ ಗುರು, ಟಿಬೆಟ್ ಅದರ ಶಿಷ್ಯ. ಅಹಿಂಸೆಗೆ ಸಂಬಂಧಿಸಿದಂತೆ ಗಾಂಧೀಜಿ ನಮ್ಮ ಪ್ರಮುಖ ಗುರು~ ಎಂದು ಸಾಂಗೆ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT