ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಸ್ಮಾರಕಕ್ಕೆ ಕೊನೆಗೂ ಮುಕ್ತಿ!

Last Updated 1 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಹಾವೇರಿ: ಎರಡೂವರೆ ವರ್ಷಗಳಿಂದ ನಗರದ ಜಿಲ್ಲಾ ಖಜಾನೆಯಲ್ಲಿ ಇಡಲಾಗಿದ್ದ ಗಾಂಧೀಜಿ ಚಿತಾಭಸ್ಮಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ತಾಲ್ಲೂಕಿನ ಕರ್ಜಗಿ ಗ್ರಾಮದ ವರದಾ ನದಿ ದಂಡೆಯ ಮೇಲೆ ಗಾಂಧಿ ಚಿತಾಭಸ್ಮದ ಕಟ್ಟೆಯನ್ನು ಅಭಿವೃದ್ಧಿಗೊಳಿಸಲು ಕಟ್ಟೆಯೊಳಗಿದ್ದ ಚಿತಾಭಸ್ಮವನ್ನು ಹೊರ ತೆಗೆದು ಪಕ್ಕದ ಶಾಲೆಯಲ್ಲಿ ಯಾವುದೇ ಭದ್ರತೆ ಇಲ್ಲದೇ ಒಂದು ಸಣ್ಣ ಕಪಾಟಿನಲ್ಲಿ ಇಡಲಾಗಿತ್ತು.

ಮಾಧ್ಯಮಗಳು ಚಿತಾಭಸ್ಮದ ಬಗ್ಗೆ ಜಿಲ್ಲಾಡಳಿತ ತಾಳಿದ ನಿರ್ಲಕ್ಷ್ಯದ ಬಗ್ಗೆ ವರದಿ ಮಾಡಿದಾಗ, ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ತಾಮ್ರದ ತಂಬಿಗೆಯಲ್ಲಿ ಚಿತಾಭಸ್ಮವನ್ನು ಸಂಗ್ರಹಿಸಿ ನಗರದ ಜಿಲ್ಲಾ ಖಚಾನೆಯಲ್ಲಿ ಭದ್ರವಾಗಿ ಇಟ್ಟಿತ್ತು.

ಅಭಿವೃದ್ಧಿ ಪಡಿಸಿ ಚಿತಾಭಸ್ಮವನ್ನು ಅಲ್ಲಿಯೇ ಮರುಸ್ಥಾಪನೆ ಮಾಡುವ ಉದ್ದೇಶವನ್ನು ಜಿಲ್ಲಾಡಳಿತ ಇಟ್ಟುಕೊಂಡಿತ್ತು. ಆದರೆ, ಅದಕ್ಕೆ ಪೂರಕವಾಗಿ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಸಿಗದ ಕಾರಣ ಚಿತಾಭಸ್ಮ ಮರುಸ್ಥಾಪನೆ ವಿಳಂಬವಾಗಿತ್ತು.

ಕರ್ಜಗಿ ಶಾಲೆ ಎದುರಿನ ಗಾಂಧಿ ಕಟ್ಟೆ ಅಭಿವೃದ್ಧಿಗೊಳಿಸಲು ಸಂಸದ ಶಿವಕುಮಾರ ಉದಾಸಿ ತಮ್ಮ ಅನುದಾನದಲ್ಲಿ ರೂ. 10 ಲಕ್ಷ  ನೀಡಿದರು. ಅದೇ ಅನುದಾನದಲ್ಲಿ ರೂ. ನಾಲ್ಕು ಲಕ್ಷ ಬಳಸಿ ದೆಹಲಿಯ ರಾಜಘಾಟ್ ಮಾದರಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಚಿತಾಭಸ್ಮ ಸ್ಮಾರಕ ನಿರ್ಮಿಸಲಾಗಿದೆ.
 
ಹುತಾತ್ಮ ಮೈಲಾರ ಮಹದೇವಪ್ಪ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ರೂ. 4 ಲಕ್ಷ ಹಾಗೂ ಸಂಸದರ ಉಳಿದ ರೂ. 6 ಲಕ್ಷ  ಅನುದಾನದಲ್ಲಿ 4.5 ಅಡಿ ಆಳೆತ್ತರದ ಕುಳಿತ ಭಂಗಿಯಲ್ಲಿರುವ ಕಂಚಿನ ಗಾಂಧಿ ಪ್ರತಿಮೆ ತಯಾರಿಸಲಾಗಿದೆ. ಇದೇ ಅ.2 ರಂದು ಸ್ಮಾರಕದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಲಾಗುತ್ತದೆ.

ಕೊನೆಗೂ ಮುಕ್ತಿ: ಜಿಲ್ಲಾ ಖಜಾನೆಯಲ್ಲಿ ಇಡಲಾದ ಚಿತಾಭಸ್ಮವನ್ನು ಮರು ಸ್ಥಾಪನೆ ಮಾಡಬೇಕು. ಅದಕ್ಕಾಗಿ ಕರ್ಜಗಿ ಗ್ರಾಮದಲ್ಲಿರುವ ಗಾಂಧೀಜಿ ಕಟ್ಟೆಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮಸ್ಥರು ಹಾಗೂ ಗಾಂಧಿ ಅನುಯಾಯಿಗಳು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಲೇ ಬಂದಿದ್ದರು.
 
ಜಿಲ್ಲಾಡಳಿತದ ಎರಡೂವರೆ ವರ್ಷಗಳ ಸತತ ಪ್ರಯತ್ನದಿಂದ ಕರ್ಜಗಿ ಗಾಂಧಿ ಕಟ್ಟೆ ಕೊನೆಗೂ ಸ್ಮಾರಕವಾಗಿ ಪರಿವರ್ತನೆಯಾಗಿದೆ. ಜಿಲ್ಲಾ ಖಜಾನೆಯಲ್ಲಿದ್ದ ಚಿತಾಭಸ್ಮವನ್ನು ಅದೇ ಸ್ಮಾರಕದಲ್ಲಿ ಮರು ಸ್ಥಾಪಿನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ತಿಳಿಸುತ್ತಾರೆ.

ಬಹುದಿನಗಳ ನಂತರ ಗಾಂಧೀಜಿ ಚಿತಾಭಸ್ಮ, ಇದ್ದ ಸ್ಥಳದಲ್ಲಿ ಮರು ಸ್ಥಾಪನೆಗೊಳ್ಳುವುದರ ಜತೆ ಸ್ಮಾರಕ ಭವನ, ಗಾಂಧಿ ಪ್ರತಿಮೆ ಅನಾವರಣಸಂತಸ ತಂದಿದೆ ಎನ್ನುತ್ತಾರೆ ಕರ್ಜಗಿ ಗ್ರಾ.ಪಂ. ಸದಸ್ಯ ನಾರಾಯಣ ಕಾಳೆ.

ಗಾಂಧೀಜಿ ತೀರಿ ಹೋದ ನಂತರ ಅವರ ಅನುಯಾಯಿಗಳಾದ ಹೊಸಮನಿ ಸಿದ್ಧಪ್ಪ, ಗುದ್ಲೆಪ್ಪ ಹಳ್ಳಿಕೇರಿ ಅವರು ಅವರ ಚಿತಾಭಸ್ಮವನ್ನು ಜಿಲ್ಲೆಗೆ ತಂದು ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದ ವರದಾ ನದಿ ದಂಡೆಯ ಮೇಲೆ ಇಟ್ಟು ಸ್ಮಾರಕ ಮಾಡಿರುವುದು ಜಿಲ್ಲೆಯಲ್ಲಿರುವ ಗಾಂಧೀಜಿ ಕುರುಹು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT