ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿಗೆ ಕ್ರೈಸ್ತ ಧರ್ಮದೀಕ್ಷೆ: ಟೀಕೆ

Last Updated 28 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಸಾಲ್ಟ್‌ಲೇಕ್ ನಗರದ ಎಲ್‌ಡಿಎಸ್ (ಮೊರ್‌ಮಾನ್) ಚರ್ಚ್ ಸುಮಾರು 16 ವರ್ಷಗಳ ಹಿಂದೆ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಪರೋಕ್ಷವಾಗಿ (ಮರಣೋತ್ತರವಾಗಿ) ಕ್ರೈಸ್ತ ಧರ್ಮಕ್ಕೆ ಸೇರಿಸಿಕೊಂಡ ಹೊಸ ವಿವಾದ ಬೆಳಕಿಗೆ ಬರುತ್ತಲೇ, ಗಾಂಧಿ ಅವರ ಮೊಮ್ಮಗ ಹಾಗೂ ಇತರ ವಲಯಗಳಿಂದ ಟೀಕೆಗಳು ವ್ಯಕ್ತವಾಗಿವೆ.

ಗಾಂಧಿ ಅವರನ್ನು 1996ರ ಮಾರ್ಚ್ 27ರಂದು `ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಆಫ್ ಲೇಟರ್ ಡೇ ಸೇಂಟ್ಸ್~ (ಎಲ್‌ಡಿಎಸ್) ಚರ್ಚ್ ಕ್ರೈಸ್ತ ಧರ್ಮಕ್ಕೆ ಸೇರಿಸಿದ ಕ್ರಮಕ್ಕೆ ಸಾವೋ ಪೌಲೊ ಬ್ರೆಜಿಲ್ ಚರ್ಚ್ 2007ರ ನವೆಂಬರ್ 17ರಂದು ಅಧಿಕೃತ ಮುದ್ರೆ ಒತ್ತಿತ್ತು. ಗಾಂಧೀಜಿ ಅವರನ್ನು ಕ್ರೈಸ್ತ ಧರ್ಮಕ್ಕೆ ಸೇರಿಸಿದ ದಾಖಲೆಗಳನ್ನು ತಾವು ಇದೇ ಫೆ. 16ರಂದು ನೋಡಿದ್ದಾಗಿ ಮೊರ್‌ಮಾನ್ ಚರ್ಚ್‌ನಿಂದ ಬಹಿಷ್ಕಾರಕ್ಕೆ ಒಳಗಾಗಿರುವ ರಾಡ್‌ಕೀ, ಅಮೆರಿಕದಲ್ಲಿ ನೆಲೆಸಿರುವ ಹಿಂದೂ ಕಾರ್ಯಕರ್ತ ರಾಜನ್ ಅವರಿಗೆ ಕಳುಹಿಸಿದ ಇ-ಮೇಲ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಈ ವಿಷಯ ತಮ್ಮ ಗಮನಕ್ಕೆ ಬರುತ್ತಲೇ ಆ ದಾಖಲೆ ಚರ್ಚ್‌ನಿಂದ ಕಣ್ಮರೆಯಾಗಿವೆ ಎಂದು ರಾಡ್‌ಕೀ ಆರೋಪಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಗಾಂಧಿ ಅವರ ಮೊಮ್ಮಗ ಅರುಣ್ ಗಾಂಧಿ ಈ ಕುರಿತು ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಮ್ಮ ಅಜ್ಜನಿಗೆ ಕ್ರೈಸ್ತ ಧರ್ಮ ದೀಕ್ಷೆ ನೀಡಿರುವುದು ಸರಿಯಲ್ಲ. ಹಿಂದೂ ಧರ್ಮ ಸೇರಿದಂತೆ ಯಾವುದೇ ಧರ್ಮದವರು ನಡೆಸುವ ಮತಾಂತರವನ್ನು ಅವರು ವಿರೋಧಿಸುತ್ತಿದ್ದರು. ಧರ್ಮದ ಆಯ್ಕೆಯ ಹಕ್ಕನ್ನು ಜನರಿಗೆ ನೀಡಬೇಕು ಎನ್ನುವುದು ಅವರ ಸಿದ್ಧಾಂತವಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಹಿಂದೂ ಅಮೆರಿಕ ಪ್ರತಿಷ್ಠಾನದ ಸುಹಾಗ್ ಶುಕ್ಲಾ ಕೂಡಾ ವಿರೋಧಿಸಿದ್ದಾರೆ. ಈ ಕುರಿತು ವಿವರಣೆ ಕೋರಿ ರಾಜನ್ ಚರ್ಚ್‌ಗೆ ಪತ್ರ ಬರೆದು, ಕ್ಷಮೆ  ಕೋರುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT