ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜು ಕರಗುವ ಸಮಯ

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಕಣ್ಸೆಳೆವ ಕೆಂಪು ಬಣ್ಣ. ಆ ಬಣ್ಣದಲ್ಲೇ ವಿವಿಧ ವಿನ್ಯಾಸದ ರೂಪು ಪಡೆದ ಮಣಿಗಳು. ಅಂದವಾಗಿ ಜೋಡಿಸಿದ ಆ ಮಣಿಗಳನ್ನು ಒಪ್ಪವಾಗಿ ಪೋಣಿಸಿ ಹೆಣೆದ ಮಣಿಹಾರ.

ಅಭಿರುಚಿಯನ್ನೇ ವೃತ್ತಿಯಾಗಿಸಿಕೊಂಡಿರುವ ಕಲಾವಿದೆ ನಂದಿತಾ ವೈ ಅವರ ರಚನೆಯಲ್ಲಿ ನಿರ್ಮಾಣವಾದ ಆಭರಣಗಳು ಮನ ಸೆಳೆಯುವುದು ಮಣಿಗಳಿಂದ, ಅವುಗಳ ವಿಭಿನ್ನ ಆಕಾರದಿಂದ.

ಕಾಲೇಜು ದಿನಗಳಿಂದಲೇ ಮಣಿಗಳ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡವರು ನಂದಿತಾ. ವಿವಿಧ ಬಗೆಯ ಸರಗಳನ್ನು ಕಂಡಾಗ ಮನಸ್ಸು ಅವುಗಳ ಬಗ್ಗೆ ತುಡಿಯಲು ಪ್ರಾರಂಭಿಸುತ್ತಿತ್ತಂತೆ. ಈ ಕಲೆಯನ್ನು ನಾನೂ ಸಿದ್ಧಿಸಿಕೊಳ್ಳಬೇಕು ಎಂಬ ಹಂಬಲ ಇವರಿಗೆ ಕಾಡುತ್ತಿತ್ತು. ಹೀಗಾಗಿಯೇ ಸಿಕ್ಕ ಸಿಕ್ಕ ಮಣಿಗಳನ್ನು ಪೋಣಿಸಿ ಹಾರ ತಯಾರಿಸುತ್ತಿದ್ದರು. ಆಯಾ ಉಡುಗೆಗೆ ಮ್ಯಾಚ್ ಆಗುವಂತೆ ಧರಿಸುತ್ತಿದ್ದರು.

ವಿಭಿನ್ನ ಆಭರಣಗಳೆಡೆಗೆ ಹೆಣ್ಣುಮಕ್ಕಳ ಮನಸ್ಸು ಆಕರ್ಷಿತವಾಗುವುದು ಸಹಜ. ನಂದಿತಾ ತೊಟ್ಟ ಆಭರಣಗಳ ಬಗ್ಗೆ ಗೆಳತಿಯರು ಕುತೂಹಲದಿಂದ ಕೇಳಲು ಪ್ರಾರಂಭಿಸಿದರು. ಅದನ್ನು ಇವರೇ ಪೋಣಿಸಿ ಹೆಣೆದದ್ದು ಎಂದು ತಿಳಿದದ್ದೇ ನಂಗೊಂದು ನಂಗೊಂದು ಎಂದು ಬೇಡಿಕೆ ಇಡಲು ಪ್ರಾರಂಭಿಸಿದರು. ಇದೇ ಇವರ ಕಲೆಗೆ ಮೊದಲ ಸ್ಫೂರ್ತಿಯಾಯಿತು.

ಯೋಚಿಸುತ್ತಾ ಯೋಚಿಸುತ್ತಾ ಮಣಿಗಳಿಗೆ ರೂಪ ನೀಡುವ ಇವರು ಗಾಜಿನಿಂದ ಸರ, ಕಿವಿಯೋಲೆಗಳನ್ನು ನಿರ್ಮಾಣ ಮಾಡುತ್ತಾರೆ. ಮರದಿಂದ ಹಾಗೂ ಪ್ಲಾಸ್ಟಿಕ್‌ನಿಂದಲೂ ಇವರು ಆಭರಣಗಳನ್ನು ತಯಾರಿಸುತ್ತಾರೆ. ಮೊದಲ ನೋಟಕ್ಕೇ ಅವು ಇಷ್ಟವಾಗುತ್ತವೆ.
ಬ್ಯಾಟರಿಯಂಥ ಟೂಲ್‌ನಿಂದ ಬರುವ ಬೆಂಕಿಯಿಂದಲೇ ಗ್ಲಾಸ್ ರಾಡ್‌ಗಳನ್ನು ಕರಗಿಸಿ ಅವರು ಮಣಿಗಳನ್ನಾಗಿಸುತ್ತಾರೆ. ಅತ್ಯಂತ ಉಷ್ಣವಾದ ಬೆಂಕಿಯಲ್ಲಿ ಕರಗಿಸಿ ಇವುಗಳನ್ನು ನಿರ್ಮಾಣ ಮಾಡುವುದು ತುಸು ಕಷ್ಟ ಸಾಧ್ಯ. ಆದರೂ ಆಸೆ ಬಿದ್ದು ಕಲಿತ ಕಲೆ ಸಿದ್ಧಿಸಿರುವ ಬಗ್ಗೆ ಖುಷಿ ವ್ಯಕ್ತಪಡಿಸುವ ಅವರು ಸುಟ್ಟ ಗಾಯಗಳನ್ನು ನಗುತ್ತಲೇ ತೋರಿಸುತ್ತಾರೆ.

ಗಾಜಿನಿಂದ ಆಭರಣ ತಯಾರಿಸುವ ಕಲೆಯನ್ನು ಅವರು ಕಲಿತಿದ್ದು ಇಟಲಿಯಲ್ಲಿ. ಇದಕ್ಕೆ ಲ್ಯಾಂಪ್ ವರ್ಕ್ ಎಂದು ಹೆಸರು. ರಜಾ ಸಮಯದಲ್ಲಿ ಇಟಲಿ ಪ್ರಯಾಣ ಬೆಳೆಸಿದ್ದ ನಂದಿತಾ ಆ ಲ್ಯಾಂಪ್ ವರ್ಕ್‌ಗೆ ಮನಸೋತರಂತೆ. ಕಲಿಯುವ ಬಯಕೆ ತಡೆಯಲಾಗದೆ ಮತ್ತೆ ಇಟಲಿಗೆ ತೆರಳಿ 10 ದಿನಗಳ ತರಬೇತಿ ಪಡೆದರು.

ಕೌಶಲಗಳ ಬಗ್ಗೆ ಅರಿತು ನಂತರ ನಿರಂತರ ಅಭ್ಯಾಸದಲ್ಲಿ ತೊಡಗಿದರು. ಬೆಂಕಿ ಹಾಗೂ ಗಾಜಿನ ಜೊತೆಗಿನ ಸರಸ ಇದಾಗಿದ್ದರಿಂದ ಹೆಚ್ಚಿನ ಪರಿಶ್ರಮ ಬೇಡುತ್ತದೆ ಈ ಕಾರ್ಯ. ಮಣಿಗಳನ್ನು ನಿರ್ಮಿಸಲು ಇವರಲ್ಲಿ ಬೇರೆ ಯಾವುದೇ ಟೂಲ್‌ಗಳಿಲ್ಲ. ಗಾಜನ್ನು ಹಾಗೂ ಪ್ಲಾಸ್ಟಿಕ್‌ಅನ್ನು ಬೆಂಕಿಯಲ್ಲಿ ಕರಗಿಸಿ ಕೌಶಲ ಬಳಸಿ ಕೈಯಿಂದಲೇ ವಿವಿಧ ರೂಪ ನೀಡುತ್ತಾರೆ. ಮೂರು ವರ್ಷದಿಂದ ಇದನ್ನೇ ವೃತ್ತಿಯಾಗಿಸಿಕೊಂಡ ಇವರ ಆಭರಣಗಳನ್ನು ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುವ ಮಹಿಳೆಯರು ಅತಿಯಾಗಿ ಇಷ್ಟಪಡುತ್ತಾರಂತೆ.

`ಪ್ರೀತಿಯಿಂದ ಕಲಿತ ಕಲೆ ಇದು. ಇದೇ ಈಗ ನನ್ನ ವೃತ್ತಿ. ಪ್ರಾರಂಭದಲ್ಲಿ ಅತ್ಯಂತ ಕಷ್ಟವಾಗುತ್ತಿತ್ತು. ಈಗ ಜನ ನನ್ನ ಕಲೆಯನ್ನು ಮೆಚ್ಚಿದ್ದಾರೆ. ಗಾಜಿನ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಸಿಗುತ್ತಿರುವುದು ಖುಷಿ ನೀಡಿದೆ. ಒಂದೇ ದಿನದಲ್ಲಿ 100 ಆಭರಣಗಳಲ್ಲಿ 70 ಆಭರಣಗಳನ್ನು ಮಾರಾಟ ಮಾಡ್ದ್ದಿದಿದೆ. ಮಣಿಗಳನ್ನು ತಯಾರಿಸಿದ ನಂತರ `ಕ್ಲಿನ್' ಎಂಬ ಉಪಕರಣದಿಂದ ಅವುಗಳನ್ನು ಗಟ್ಟಿಯಾಗಿಸುತ್ತೇನೆ. ಹೀಗಾಗಿ ಬಿದ್ದರೂ ಒಡೆಯುವ ಸಂದರ್ಭಗಳು ತೀರಾ ಕಡಿಮೆ. ಉನ್ನತ ಸ್ಥರದವರು ಅದರಲ್ಲೂ ಭಾರತೀಯ ಸಂಪ್ರದಾಯ ಬಿಂಬಿಸುವ ಸೀರೆ, ದುಪಟ್ಟಾ ತೊಡುವವರು ನಾನು ತಯಾರಿಸುವ ಆಭರಣಗಳನ್ನು ಅತಿಯಾಗಿ ಮೆಚ್ಚುತ್ತಾರೆ

 ವೈದ್ಯರನೇಕರು ಟೀವಿ ಸಂದರ್ಶನದ ವೇಳೆ ನಾನು ತಯಾರಿಸಿದ ಆಭರಣ ತೊಟ್ಟಿದ್ದರು. ಅದನ್ನು ನೋಡಿದಾಗ ಖುಷಿ ಆಗುತ್ತದೆ. ನಾನು ಒಬ್ಬಳೇ ಎಲ್ಲಾ ಕೆಲಸ ಮಾಡಿಕೊಳ್ಳಬೇಕಾಗಿರುವುದರಿಂದ ಮಾರುಕಟ್ಟೆ ವಿಸ್ತರಿಸುವುದು ಸಾಧ್ಯವಾಗಿಲ್ಲ. ತಯಾರಿಕೆ ಮಾರಾಟ ಮನೆಯಲ್ಲೇ. ಇನ್ನೂ ಕೆಲವೊಮ್ಮೆ ಪ್ರದರ್ಶನಗಳಲ್ಲಿ ಭಾಗವಹಿಸುತ್ತೇನೆ. ಅಲ್ಲಿಯೂ ಮಾರಾಟವಾಗುತ್ತದೆ' ಎಂದು ನಡೆಯ ಬಗ್ಗೆ ನುಡಿಯುತ್ತಾರೆ ನಂದಿತಾ.

ಆಭರಣ ತಯಾರಿಕೆ ಸಂದರ್ಭದಲ್ಲಿ ನಿಯಮಿತ ಥೀಮ್ ಒಂದಕ್ಕೆ ಅಂಟಿಕೊಳ್ಳುವವರಲ್ಲ ಇವರು. ಕಲ್ಪನೆ ಹೆಣೆವ ಚಿತ್ರಕ್ಕೆ ರೂಪ ಕೊಡುತ್ತಾ ಸಾಗುವುದು ಇವರ ನಿಲುವು. ಮೆನೆಯವರ ತುಂಬು ಸಹಕಾರ ಇವರಿಗಿದೆ. ಬೆಳಗಿನ ಸಮಯ ಮನೆಗೆಲಸದಲ್ಲೇ ಕಾಲಕಳೆಯುತ್ತದೆ. ಮಧ್ಯಾಹ್ನ 3ರ ನಂತರ ಗಾಜಿನೊಂದಿಗೆ ಸರಸ ಪ್ರಾರಂಭವಾದರೆ ಮುಗಿಯುವುದು ಮಧ್ಯರಾತ್ರಿ ಹನ್ನೆರಡು ಇಲ್ಲವೇ ಒಂದು ಗಂಟೆಗೆ! ಮನಃಶಾಸ್ತ್ರದಲ್ಲಿ ಪದವಿ ಪಡೆದಿರುವ ಇವರಿಗೆ ತಾನು ಸಿದ್ಧಿಸಿಕೊಂಡಿರುವ ಕಲೆಯನ್ನು ಪಸರಿಸುವ ಹಂಬಲವಿದೆ.

ಆದರೆ ಬೆಂಕಿಯೊಂದಿಗೆ ಗುದ್ದಾಡಬೇಕಿರುವುದರಿಂದ `ನಾನು ಅಡ್ವಾನ್ಸ್ಡ್ ತರಬೇತಿ ಪಡೆದು ಬರುತ್ತೇನೆ. ಆ ನಂತರವೇ ಕಲಿಸುತ್ತೇನೆ. ಕೈಸುಟ್ಟುಕೊಳ್ಳುವ ಸಂದರ್ಭ ಸಾಕಷ್ಟಿರುವುದರಿಂದ ಇನ್ನಷ್ಟು ಪರಿಣಿತಿ ಬೆಳೆಸಿಕೊಳ್ಳಬೇಕಿದೆ. ನಾಜೂಕಿನಿಂದ ಹೇಳಿಕೊಡುವ ಕಲೆ ಸಿದ್ಧಿಸಿದ ನಂತರ ತರಬೇತಿ ಪ್ರಾರಂಭಿಸುತ್ತೇನೆ' ಎನ್ನುತ್ತಾರೆ ಇವರು.

ಅಂದಹಾಗೆ ಇವರು ತಯಾರಿಸುವ ಆಭರಣಗಳು ರೂ.700ರಿಂದ 2500 ರೂಪಾಯಿವರೆಗೆ ಲಭ್ಯ. ಮಾಹಿತಿಗೆ: 95911 05708
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT