ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನ ಕಲಿಕೆಯ ಜೊತೆಗೆ ಸಂಸ್ಕಾರ ಪಾಠ

ನಾದದ ಬೆನ್ನೇರಿ...
Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ಮುಸ್ಸಂಜೆಯ ಸುಂದರ ಸಮಯ. ಆ ಸಂಗೀತ ಶಾಲೆಯೊಳಗೆ ಕಾಲಿಟ್ಟಾಗ ದೊಡ್ಡ ಹಾಲ್‌ನೊಳಗಿಂದ ತಂಬೂರಿಯ ಸುಮಧುರ ನಾದ ಕೇಳುತ್ತಿತ್ತು. ಸಂಗೀತ ಗುರು ಕಣ್ಣು ಮುಚ್ಚಿಕೊಂಡು ಆ ನಾದದಲ್ಲಿ ತನ್ಮಯರಾಗಿದ್ದರು. ಮಕ್ಕಳೆಲ್ಲ ಸುತ್ತಲೂ ಕುಳಿತು ರಾಗದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅದು ಆದಿತಾಳದಲ್ಲಿದ್ದ ಮೇಳಕರ್ತ ರಾಗ `ಶಂಕರಾಭರಣ'ದ ಕೀರ್ತನೆ. ಆಗತಾನೆ ಬೋರ್ಡ್ ಮೇಲೆ ರಾಗದ ಸ್ವರ ಸಹಿತ ಸಾಹಿತ್ಯವನ್ನು ಬರೆದು ಮಕ್ಕಳಿಗೆ ಪಾಠ ಹೇಳಿ ಆಗಿತ್ತು. ಪಾಠದ ನಂತರ ಸಂಗೀತದ ಬಗ್ಗೆ ಪುಟ್ಟದೊಂದು ಚರ್ಚೆ.

ಜೆಪಿ ನಗರದಲ್ಲಿರುವ ಶಾರದಾ ಕಲಾ ಕೇಂದ್ರದಲ್ಲಿ ಅಂದು ನಡೆದ ಸಂಗೀತ ಪಾಠದ ಸನ್ನಿವೇಶವಿದು. ಸಂಗೀತ ಗುರು, ಕರ್ನಾಟಕ ಸಂಗೀತದ ಮೇರು ಗಾಯಕ ವಿದ್ವಾನ್ ಆರ್.ಕೆ. ಪದ್ಮನಾಭ ಶಿಷ್ಯಂದಿರಿಗೆ ಪಾಠ ಮಾಡುವ ಶೈಲಿ ಇದು. ಇಲ್ಲಿನ ಮಕ್ಕಳು ಸಂಗೀತ ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಸನದ ಪಾಠವನ್ನೂ ಕಲಿಯುತ್ತಾರೆ. ಹೀಗಾಗಿ ಈ ಸಂಗೀತ ಸಂಸ್ಥೆ ಉಳಿದೆಲ್ಲ ಸಂಸ್ಥೆಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ.

ಜೆ.ಪಿ.ನಗರದಲ್ಲಿ 1990ರಲ್ಲಿ ಶಾರದಾ ಕಲಾ ಕೇಂದ್ರ ಆರಂಭವಾಯಿತು. ಈ ಸಂಗೀತ ಶಾಲೆಯಲ್ಲಿ ವಿದ್ವತ್ ಮುಗಿಸಿದ ಮತ್ತು ಒಂದು ಹಂತದ ಅಭ್ಯಾಸ ಮುಗಿಸಿ ಹೆಚ್ಚಿನ ಅಭ್ಯಾಸ ಬಯಸುವ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳೂ ಕಲಿಯುತ್ತಾರೆ.

`ಸಂಗೀತ ಪಾಠವೆಂದರೆ ಬರೀ ನಾಲ್ಕು ಗೋಡೆಗಳ ಮಧ್ಯೆ ತಂಬೂರಿ ನುಡಿಸುತ್ತಾ ಹಾಡು ಕಲಿಸುವುದಲ್ಲ. ಸಂಗೀತದಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕು, ಮಗುವಿನ ಸರ್ವತೋಮುಖ ವಿಕಾಸವಾಗಬೇಕು, ಸಾತ್ವಿಕ ಮನೋಭಾವನೆ, ಸದ್ಭಾವನೆ ಬೆಳೆಯಬೇಕು, ಮಾನವೀಯ ಮೌಲ್ಯದ ಅರಿವು ಮೂಡಿಸಬೇಕು, ಜೀವನಶೈಲಿಯಲ್ಲಿ ಶಿಸ್ತು ಮೂಡಬೇಕು. ಈ ಎಲ್ಲ ಉತ್ತಮ ಅಂಶಗಳನ್ನು ಶಿಷ್ಯ ರೂಢಿಸಿಕೊಂಡರೆ ಆತ ಪರಿಪೂರ್ಣ ಸಂಗೀತಗಾರನಾಗುತ್ತಾನೆ' ಎನ್ನುತ್ತಲೇ ತಮ್ಮ ಸಂಗೀತ ಪಾಠದ ಶೈಲಿಯನ್ನು ವಿವರಿಸತೊಡಗಿದರು ವಿದ್ವಾನ್ ಆರ್‌ಕೆಪಿ.

`ಯಾರಿಗೆ ಸಂಗೀತ ಪಾಠದ ಅವಶ್ಯಕತೆ ಇದೆಯೋ ಅವರು ಸಂಗೀತವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕ್ಲಾಸಿಗೆ ಚಕ್ಕರ್ ಹೊಡೆಯುವಂತಿಲ್ಲ, ಅವರಿಗೆ ಇಷ್ಟಬಂದ ಸಮಯಕ್ಕೆ ಬರುವ ಹಾಗಿಲ್ಲ. ಕಲಿಸಿದ ಪಾಠವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಕಠಿಣ ಪರಿಶ್ರಮ ಇರಬೇಕು. ಅಂಥವರಿಗೆ ಮಾತ್ರ ನಾನು ಪಾಠ ಹೇಳಿಕೊಡುತ್ತೇನೆ' ಎನ್ನುತ್ತಾರೆ.

ಶಾರದಾ ಕಲಾ ಕೇಂದ್ರದಲ್ಲಿ ಇಪ್ಪತ್ತೈದು ವರ್ಷಗಳಿಂದ ಸಂಗೀತ ಕಲಿಸಿಕೊಡುವ ಈ ವಿದ್ವಾಂಸರು ಸಂಗೀತವನ್ನು ಕಲಿಸುವ ಶೈಲಿ  ವಿಭಿನ್ನ. ಕ್ಲಾಸಿನಲ್ಲಿ ಪಾಠ ಹೇಳಿಕೊಡುವ ಮಕ್ಕಳು ಹೊರಗಿನ ಪ್ರಪಂಚವನ್ನು ಚೆನ್ನಾಗಿ ತಿಳಿದಿರಬೇಕು. ಅದಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಅವರನ್ನು ಬೇರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗಿ ಸಂಗೀತ ಶಿಬಿರ ನಡೆಸುತ್ತಾರೆ. ಸಂಗೀತದ ರಾಗಗಳ ಬಗ್ಗೆ ಒಂದು `ಥೀಮ್' ಕೊಟ್ಟು ಮಕ್ಕಳು ಒಂದು ಕೃತಿ ಹೇಳಬೇಕು, ಆ ರಾಗದ ಲಕ್ಷಣ ವಿವರಿಸಬೇಕು, ಚರ್ಚೆ ಮಾಡಬೇಕು. ಅಷ್ಟೇ ಅಲ್ಲದೆ ಶಿಬಿರದ ಕೊನೆಗೆ ಒಂದು ಟಿಪ್ಪಣಿಯನ್ನೂ ಕೊಡಬೇಕು. ಈ ಪದ್ಧತಿ ಒಳ್ಳೆಯ ಫಲಿತಾಂಶ ಕೊಟ್ಟಿದೆಯಂತೆ.

ಇಲ್ಲಿ `ಕಮ್ಯುನಿಟಿ ಟೀಚಿಂಗ್' ಪದ್ಧತಿಯಲ್ಲಿ ಎಂಟರಿಂದ 17 ವರ್ಷದ 25 ಮಕ್ಕಳು ಅಭ್ಯಾಸ ಮಾಡುತ್ತಾರೆ. ವಾರಕ್ಕೆ ಎರಡು ದಿನ ಪಾಠ. ಉಳಿದ ದಿನಗಳಲ್ಲಿ ಆದ ಪಾಠಗಳ ಮನನ. `ಗುರು-ಶಿಷ್ಯರ ಬಾಂಧವ್ಯ ಗಟ್ಟಿಯಾಗಬೇಕು. ಮಕ್ಕಳಿಗೆ ಗುರುವಿನ ಮೇಲೆ ಗೌರವ ಇರುವಷ್ಟೇ ಕಲೆಯ ಮೇಲೆ ಗುರುಗಳ ಮೇಲೆ ಪ್ರೀತಿ ಇರಬೇಕು. ಇದಕ್ಕಾಗಿ ಮಕ್ಕಳನ್ನು ಸಂಗೀತ ಕಛೇರಿಗಳಿಗೆ, ಸಾಹಿತ್ಯಕ ಕಾರ್ಯಕ್ರಮಗಳಿಗೆ, ಸಿನಿಮಾ, ನಾಟಕಗಳಿಗೂ ಕರೆದುಕೊಂಡು ಹೋಗುತ್ತೇನೆ. ಅವರವರ ಮನೆಗಳಲ್ಲೂ ಸಂಗೀತ ಕಛೇರಿ ಏರ್ಪಡಿಸಿ ಮಕ್ಕಳ ಸಂಗೀತ ಅಭಿರುಚಿಯನ್ನು ಮನೆಯವರು, ಬಂಧುಗಳು ಅರಿಯಲು ವೇದಿಕೆ ಏರ್ಪಡಿಸಿ ಕೊಡುತ್ತೇನೆ. ಇದರಿಂದ ಮಕ್ಕಳು ಮಾನಸಿಕವಾಗಿ, ಸಾಮಾಜಿಕವಾಗಿ ಬೆಳೆಯುತ್ತಾರೆ' ಎಂದು ತಮ್ಮ ಪಾಠ ಶೈಲಿಯನ್ನು ಅವರು ಬಿಚ್ಚಿಡುತ್ತಾರೆ.

ಗೋಷ್ಠಿ ಗಾಯನ
ಶಾರದಾ ಕಲಾಕೇಂದ್ರದ ಮತ್ತೊಂದು ವೈಶಿಷ್ಟ್ಯ ಗೋಷ್ಠಿಗಾಯನ. ಆರ್.ಕೆ.ಪದ್ಮನಾಭ ಅವರ ನೇತೃತ್ವದಲ್ಲಿ ನೂರಾರು ಜನರು ಒಂದೇ ದನಿಯಲ್ಲಿ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶಾಮಾಶಾಸ್ತ್ರಿಗಳು, ಮೈಸೂರು ವಾಸುದೇವಾಚಾರ್ಯರು, ಪುರಂದರದಾಸರು, ವಾದಿರಾಜರು ಮುಂತಾದ ವಾಗ್ಗೇಯಕಾರರ ಜನಪ್ರಿಯ ಕೃತಿಗಳನ್ನು ಹಾಡುತ್ತಾರೆ. ಈ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲು ಆರ್‌ಕೆಪಿ ಬೆಂಗಳೂರಿನ ಮಲ್ಲೇಶ್ವರ, ಬಸವನಗುಡಿ, ತ್ಯಾಗರಾಜನಗರ, ವಿಜಯನಗರ, ಪದ್ಮನಾಭನಗರ, ಜಯನಗರಗಳಲ್ಲಿ ಆಗಾಗ ಗೋಷ್ಠಿ ಗಾಯನ ಮಾಡುತ್ತಾರೆ.

ಬರೀ ಸಂಗೀತ ಪಾಠಗಳಲ್ಲದೆ ಈ ಸಂಗೀತ ಶಾಲೆ ವ್ಗಾಗೇಯಕಾರರ ಪ್ರಮುಖ ಕೃತಿಗಳನ್ನು ಪ್ರಕಟಿಸುವುದು, ಕ್ಯಾಸೆಟ್ ಮತ್ತು ಸೀಡಿಗಳನ್ನು ಹೊರ ತರುವಂತಹ ಕೆಲಸವನ್ನೂ ಮಾಡುತ್ತಿದೆ. ಸುಮಾರು 200 ಸೀಡಿಗಳನ್ನು ಈವರೆಗೆ ಹೊರತಂದಿದೆ. ವಾದಿರಾಜರ 90 ಕೃತಿಗಳನ್ನು ವಿವಿಧ ಕಲಾವಿದರು ಹಾಡಿರುವ ಸೀಡಿ, ಸಂಗೀತಕ್ಕೆ ಈ ಕಲಾ ಸಂಸ್ಥೆ ನೀಡಿದ ಅನನ್ಯ ಕೊಡುಗೆ ಎನ್ನಬಹುದು. ಸ್ವತಃ ಆರ್‌ಕೆಪಿ 70 ಕೃತಿಗಳನ್ನು ಬರೆದಿದ್ದಾರೆ. ಪದ್ಮನಾಭದಾಸ ಹೆಸರಿನಲ್ಲಿರುವ ಈ ರಚನೆಗಳು ಗುರು ವಾದಿರಾಜರ ಪ್ರೇರಣೆಯಿಂದ ಬರೆದ ಕೃತಿಗಳಾಗಿವೆ. ಇವೆಲ್ಲವೂ ಒಟ್ಟು 13 ಕ್ಯಾಸೆಟ್‌ಗಳಲ್ಲಿ ಬಿಡುಗಡೆಯಾಗಿವೆ.

ಗಾನ ಚಕ್ರ
ಆರ್‌ಕೆಪಿ ನೂರಾರು ಶಿಷ್ಯರನ್ನು ತಯಾರು ಮಾಡಿದ್ದು, ಅವರಲ್ಲಿ ಸುಮಾರು 15 ವಿದ್ಯಾರ್ಥಿಗಳು ಇಂದು ದೇಶದ, ರಾಜ್ಯದ ನಾನಾ ವೇದಿಕೆಗಳಲ್ಲಿ ಅನೇಕ ಕಛೇರಿಗಳನ್ನು ನೀಡಿ ಹೆಸರುವಾಸಿಯಾಗಿದ್ದಾರೆ. ಮಾನಸಿ ಪ್ರಸಾದ್, ಸಹನಾ ರಾಮಚಂದ್ರ, ಕಾರ್ತೀಕ್ ಹೆಬ್ಬಾರ್, ಕೃಷ್ಣಪ್ರಸಾದ್, ದೀಪಕ್, ವಿನಯ್ ಮುಂತಾದವರು ಇಂದು ಬಹು ಬೇಡಿಕೆಯ ಕಲಾವಿದರಾಗಿ ರೂಪುಗೊಂಡಿದ್ದಾರೆ. ಗಾನ ಚಕ್ರ ಎಂಬ ಪರಿಕಲ್ಪನೆಯಲ್ಲಿ ಈ ಕಲಾಕೇಂದ್ರದ ಸಂಗೀತ ವಿದ್ಯಾರ್ಥಿಗಳಿಗೆ ಹಾಡಲು ವೇದಿಕೆ ಒದಗಿಸಿಕೊಟ್ಟು ಕಛೇರಿ ಕೊಡುವ ವಿಧಾನವನ್ನು ವಿವರಿಸಿ ಮಕ್ಕಳಲ್ಲಿ ಸಭಾ ಗಾಂಭೀರ‌್ಯದ ಬಗ್ಗೆ ಮಾರ್ಗದರ್ಶನ ಮಾಡುವುದು ಈ ಗಾನ ಚಕ್ರದ ಉದ್ದೇಶ.

ಈಗಾಗಲೇ ಗಾನ ಚಕ್ರ ಕಾರ್ಯಕ್ರಮವನ್ನು ಬೆಂಗಳೂರು ಅಲ್ಲದೆ ಮೈಸೂರು, ಮಾಲೂರು, ಶನಿವಾರ ಸಂತೆ, ಮೇಲುಕೋಟೆ, ಕೋಲಾರಗಳಲ್ಲಿ ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ ಬೇರೆ ಬೇರೆ ಊರುಗಳಲ್ಲಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಅವಕಾಶ ಸಿಗುವಂತಾಗಿದೆ. ಈ ನಿಟ್ಟಿನಲ್ಲಿ ಶಾರದಾ ಕಲಾ ಕೇಂದ್ರ ಸಂಸ್ಥೆ ಉಳಿದ ಸಂಗೀತ ಸಂಸ್ಥೆಗಳಿಗಿಂತ ವಿಭಿನ್ನವಾಗಿ ನಿಲುತ್ತದೆ.

ವಿಳಾಸ: ಶಾರದಾ ಕಲಾ ಕೇಂದ್ರ, ಜೆ.ಪಿ. ನಗರ, ಬೆಂಗಳೂರು. ಫೋನ್: 9448574894
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT