ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನ ಗೌರವ

Last Updated 21 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಅಪರೂಪಕ್ಕೆಂಬಂತೆ ಕನ್ನಡದ ಒಂದಷ್ಟು ಗಾಯಕ, ಗಾಯಕಿಯರು ವೇದಿಕೆಯ ಪಕ್ಕಕ್ಕೆ ಬಂದರು. ಅಪೂರ್ವ ಶ್ರೀಧರ್, ಲಕ್ಷ್ಮಿ ಮನಮೋಹನ್, ಆಕಾಂಕ್ಷಾ, ಹರ್ಷ ಸದಾನಂದ, ಸಂತೋಷ್ ವೆಂಕಿ ಎಲ್ಲರೂ ತುಸು ಸಂಕೋಚ, ಒಂದಿಷ್ಟು ಹೆಮ್ಮೆ ಬೆರೆಸಿದ ಭಾವದಲ್ಲಿ ಮುದುರಿಕೊಂಡು ನಿಂತಿದ್ದರು. ಅವರನ್ನು ಕರೆಸಿ, ಪರಿಚಯ ಮಾಡಿಕೊಡುವ ಸೌಜನ್ಯ ತೋರಿದ್ದು ಸಂಗೀತ ನಿರ್ದೇಶಕ ವಿ.ಶ್ರೀಧರ್. ಮೈಕು ಕೈಗೆ ಬಂದಾಗ ಏನು ಮಾತನಾಡಬೇಕು ಎಂದೇ ತೋಚದಷ್ಟು ಖುಷಿ ಗಾಯಕ, ಗಾಯಕಿಯರಿಗೆ ಆದದ್ದು ಸ್ಪಷ್ಟ. 

ಎಷ್ಟೋ ಆಡಿಯೋ ಬಿಡುಗಡೆ ಸಮಾರಂಭಗಳಲ್ಲಿ ಗಾಯಕ, ಗಾಯಕಿಯರು ಹಾಗಿರಲಿ; ಸಂಗೀತ ನಿರ್ದೇಶಕರೇ ಅವಗಣನೆಗೆ ಈಡಾಗುವುದಿದೆ. ಆದರೆ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹಾಗಾಗಲಿಲ್ಲ. ಅಲ್ಲಿ ಸಂಗೀತ ಕಟ್ಟಿಕೊಟ್ಟವರಿಗೇ ಆದ್ಯತೆ ಸಿಕ್ಕಿದ್ದು ಮೆಚ್ಚತಕ್ಕ ಅಂಶ.

ಗಡ್ಡಧಾರಿ ನಿರ್ದೇಶಕ ನೂತನ್ ಉಮೇಶ್ ಅವರ ಹೆಸರಲ್ಲೇ ಇರುವಂತೆ ಇದು ಅವರಿಗೆ ನೂತನ ಚಿತ್ರ. ಅದಕ್ಕೂ ಮಿಗಿಲಾಗಿ ಮೊದಲ ಚಿತ್ರ. ಹಾಗಾಗಿ ಅವರಲ್ಲೂ ಸಂಕೋಚ ತುಳುಕುತ್ತಿತ್ತು. ಇನ್ನೊಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದ್ದು, ಅಂದುಕೊಂಡಂತೆ ಶೂಟಿಂಗ್ ಮುಗಿಸಿರುವ ತೃಪ್ತಿ ಅವರಿಗಿದೆ.

‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ಗೆ ‘ಕೃಷ್ಣನ್ ಲವ್ ಸ್ಟೋರಿ’ಯಲ್ಲಿದ್ದ ತಾಂತ್ರಿಕ ತಂಡವನ್ನು ಮತ್ತೆ ಒಂದುಗೂಡಿಸಿದ್ದು ನಾಯಕ ಅಜಯ್. ಇದು ಆ ಚಿತ್ರದ ಎರಡನೇ ಭಾಗವಲ್ಲ ಎಂದು ಸ್ಪಷ್ಟಪಡಿಸಿಯೇ ಅವರು ಮಾತಿಗಿಳಿದದ್ದು. ಸಂಗೀತ ನಿರ್ದೇಶಕ ಶ್ರೀಧರ್, ಲವ್ ಸ್ಟೋರಿಯಲ್ಲಿನ ತಮ್ಮ ದಾಖಲೆಯನ್ನು ಈಗ ಮ್ಯಾರೇಜ್ ಸ್ಟೋರಿಯಲ್ಲಿ ತಾವೇ ಮುರಿಯಲಿದ್ದಾರೆ ಎಂದು ಅಜಯ್ ಬೆನ್ನುತಟ್ಟಿದರು. ಇದು ತಾವು ಇದುವರೆಗೆ ನಟಿಸುವ ಚಿತ್ರಗಳಲ್ಲೆಲ್ಲಾ ಅತಿ ಹೆಚ್ಚು ಬಜೆಟ್‌ನದ್ದು ಎಂದು ಹೇಳಿದರು.
ಅಜಯ್ ಸ್ನೇಹಿತರಾದ ವಿಜಯ್‌ಕುಮಾರ್ ಒಳ್ಳೆಯ ಕಥೆ ತನ್ನಿ ಎಂದು ಎಂದೋ ಬೇಡಿಕೆ ಇಟ್ಟಿದ್ದರಂತೆ. ಈ ಕಥೆ ಅವರಿಗೆ ಹಿಡಿಸಿದ್ದೇ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಕಲಾ ನಿರ್ದೇಶಕರ ಕೈಚಳಕದಿಂದಲೇ ಹಾಡುಗಳು ಚೆನ್ನಾಗಿ ಬಂದಿವೆ ಎಂದು ವಿನಯದಿಂದ ಹೇಳಿದವರು ಛಾಯಾಗ್ರಾಹಕ ಶೇಖರ್ ಚಂದ್ರು.

ಚಿತ್ರದ ಐದು ಹಾಡುಗಳನ್ನು ಪ್ರದರ್ಶಿಸಲಾಯಿತು. ಈ ಚಿತ್ರದ ಮೂಲಕ ತಮ್ಮ ಬದುಕಿನ 3000ನೇ ಹಾಡನ್ನು ಹಾಡಿರುವ ರಾಜೇಶ್ ಕೃಷ್ಣ ಮಾತ್ರ ಅವರ ಸಾಲಿನಲ್ಲಿ ಇರಲಿಲ್ಲ. ಅಂದಹಾಗೆ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ಯ ಹಾಡುಗಳನ್ನು ಆನಂದ್ ಆಡಿಯೋ ಹೊರತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT