ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನಕಮಲ ಪ್ರಶಸ್ತಿ ಪ್ರದಾನ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಕೃಷ್ಣರಾಜಪುರದ್ಲ್ಲಲಿರುವ ಮಹಾಗಣಪತಿ ಸಂಗೀತ ಸಭಾ ಕಳೆದ ಐದು ವರ್ಷಗಳಿಂದ ನಿಯಮಿತವಾಗಿ ಪ್ರತಿ ತಿಂಗಳೂ ಸಂಗೀತ ಕಛೇರಿಗಳನ್ನು ಆಯೋಜಿಸುತ್ತಿದೆ. ಆಗಾಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸುತ್ತದೆ.
 
ಇಲ್ಲಿ ಪ್ರತಿವರ್ಷ ಪುರಂದರದಾಸರ ಮತ್ತು ತ್ಯಾಗರಾಜರ ಆರಾಧನೆಗಳನ್ನು ಶ್ರದ್ಧೆ-ಉತ್ಸಾಹಗಳಿಂದ ಆಚರಿಸಲಾಗುತ್ತಿದೆ. ಆ ಸಂದರ್ಭದಲ್ಲಿ ಮಧುಕರ ವೃತ್ತಿ (ವಾಂಛ ವೃತ್ತಿ), ದಾಸರ ನವರತ್ನ ಮಾಲಿಕೆ ಹಾಗೂ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಮಾಡಿ ವಾಗ್ಗೇಯಕಾರರಿಗೆ ನಾದನಮನ ಸಲ್ಲಿಸಲಾಗುವುದು. ಅಲ್ಲದೆ ಹಿರಿಯ ಸಂಗೀತ ಕಲಾವಿದರಿಗೆ  ಗಾನಕಮಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
 
ಪ್ರಶಸ್ತಿ ಪತ್ರ, ಫಲಕ, ಶಾಲು, ಫಲ-ತಾಂಬೂಲಗಳಲ್ಲದೆ ಸನ್ಮಾನಿತರಿಗೆ ಹಮ್ಮಿಣಿಯನ್ನೂ ನೀಡಲಾಗುವುದು. ಕಮಲಮ್ಮ ಮತ್ತು ಗಂಜಿಗುಂಟೆ ನರಸಿಂಹಮೂರ್ತಿ ಸ್ಮಾರಕವಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ವರ್ಷ ವಿದ್ವಾನ್ ನಾರಾಯಣಾಚಾರ್ ಅವರಿಗೆ ಪ್ರದಾನ ಮಾಡಲಾಗಿತ್ತು. 

ರಾಜ್ಯದ ಹಿರಿಯ ಗಾಯಕರಲ್ಲಿ ಒಬ್ಬರಾಗಿರುವ ಎಚ್.ರಾಮಚಂದ್ರರಾವ್ ಈ ವರ್ಷದ ಗಾನಕಮಲ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸುಬ್ಬರಾಯ ಶಾಸ್ತ್ರಿ, ಆನೂರು ಸೂರ್ಯನಾರಾಯಣ ಅವರಲ್ಲಿ ವ್ಯಾಸಂಗ ಮಾಡಿದ ರಾಯರು, ಆನೂರು ರಾಮಕೃಷ್ಣ ಅವರಲ್ಲಿ ಪ್ರೌಢ ಶಿಕ್ಷಣ ಪಡೆದರು.

ತಮ್ಮ 16ನೆಯ ವಯಸ್ಸಿನಲ್ಲೇ ಸಂಗೀತ ಕಛೇರಿ ಮಾಡಲು ಪ್ರಾರಂಭಿಸಿದ ರಾಮಚಂದ್ರರಾವ್ ರಾಜ್ಯದ ಪ್ರಮುಖ ಸಭೆ- ಸಮ್ಮೇಳನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕೆಲ ಕಾಲ ಎಂ.ಎಸ್. ಗೋವಿಂದರಾವ್ ಅವರೊಂದಿಗೆ ಯುಗಳ ಕಛೇರಿಗಳನ್ನು ಮಾಡಿದ್ದೂ ಉಂಟು. ಡಿ.ಎನ್. ಗುರುದತ್ ಅವರೊಂದಿಗೆ ಅವರು ಮಾಡುತ್ತಿದ್ದ ದ್ವಂದ್ವ ಗಾಯನ ಆಕಾಶವಾಣಿಯಿಂದಲೂ ಬಿತ್ತರವಾಗುತ್ತಿತ್ತು.

ಅಲ್ಲದೆ ಬಾನುಲಿ ಗೀತನಾಟಕಗಳಲ್ಲೂ ಪಾತ್ರ ವಹಿಸಿದ್ದಾರೆ.  ಅವರ ಸೇವೆ ಗಮನಿಸಿ ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್, ತ್ಯಾಗರಾಜ ಗಾನಸಭಾ ಮುಂತಾದ ಸಂಸ್ಥೆಗಳು ಕಲಾಭೂಷಣ, ಗಾನಸರಸ್ವತಿ ಮುಂತಾದ ಬಿರುದು-ಸನ್ಮಾನಗಳನ್ನು ನೀಡಿವೆ.

ಇಂದು ನಡೆಯಲಿರುವ ಮಹಾಗಣಪತಿ ಸಂಗೀತ ಸಭಾದಲ್ಲಿ ಗಾನಕಮಲ ಪ್ರಶಸ್ತಿಯನ್ನು ಎಚ್. ರಾಮಚಂದ್ರರಾವ್ (87) ಸ್ವೀಕರಿಸಲಿದ್ದಾರೆ.

ಕೃಷ್ಣರಾಜಪುರದಲ್ಲಿ ಆರಾಧನೆ

ಶ್ರಿ ಮಹಾಗಣಪತಿ ಸಂಗೀತ ಸಭಾ: ಭಾನುವಾರ ಕೃಷ್ಣರಾಜಪುರದ ದೇವಸಂದ್ರದ ಶ್ರಿ ಮಹಾಗಣಪತಿ ದೇವಸ್ಥಾನದಲ್ಲಿ ಪುರಂದರದಾಸ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ.

ಬೆ. 8ಕ್ಕೆ ಊಂಛ ವೃತ್ತಿ; 10ಕ್ಕೆ ನವರತ್ನ ಮಾಲಿಕೆ ಹಾಗೂ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ; ಮ. 12-30ಕ್ಕೆ ವಿದ್ವಾನ್ ಎಚ್. ರಾಮಚಂದ್ರರಾವ್ ಅವರಿಗೆ ಗಾನಕಮಲ ಪ್ರಶಸ್ತಿ ಪ್ರದಾನ. ಮ. 1-00ರಿಂದ ಆಹ್ವಾನಿತ ಕಲಾವಿದರಿಂದ ಸಂಗೀತ ಸೇವೆ.

ಹಿರಿಯ ಗಾಯಕಿಗೆ ಸನ್ಮಾನ

ರಾಜಾಮಹಲ್ ವಿಲಾಸ ಸಂಗೀತ ಸಭೆ ಪ್ರತಿ ವರ್ಷ ಆರಾಧನಾ ಮಹೋತ್ಸವವನ್ನೂ ಆಚರಿಸುತ್ತದೆ. ಹಿರಿಯ ಕಲಾವಿದರೊಂದಿಗೆ ಯುವ ಕಲಾವಿದರಿಗೂ ಉತ್ತೇಜನ ನೀಡುತ್ತದೆ.
ಈ ವರ್ಷದ ಆರಾಧನೆಯಲ್ಲಿ ಭಾನುವಾರ ವಿದುಷಿ ಟಿ.ಎಸ್. ವಸಂತಮಾಧವಿ ಅವರನ್ನು ಸನ್ಮಾನಿಸಲಾಗುವುದು. ಗಾನಕಲಾಸಿಂಧು ಡಿ.ಸುಬ್ಬರಾಮಯ್ಯ ಅವರಲ್ಲಿ ಶಿಕ್ಷಣ ಪಡೆದು ತಮ್ಮ ಸಂಗೀತ ಪಥವನ್ನು ರೂಪಿಸಿಕೊಂಡ ವಸಂತ ಮಾಧವಿ ರಾಜ್ಯದ ಹಿರಿಯ ಗಾಯಕಿ.
 
ರಾಗ ತಾಳ ವಾಗ್ಗೇಯಕಾರ ಕುರಿತು ಸಭೆ ಸಮ್ಮೇಳನಗಳಲ್ಲಿ ಪ್ರಾತ್ಯಕ್ಷಿಕೆಗಳನ್ನೂ ನೀಡಿದ್ದಾರೆ. ರಾಗಶ್ರೀ ಕಾಲೇಜನ್ನೂ ನಡೆಸುತ್ತಿರುವ ಅವರು ಸುಗಮ ಸಂಗೀತ ಸಂಯೋಜನೆಯಲ್ಲೂ ಪರಿಣತರು.

ಮೂರು ಭಾಷೆಗಳಲ್ಲಿ (ಕನ್ನಡ, ತೆಲುಗು, ಸಂಸ್ಕೃತ) ವರ್ಣ, ನವಗ್ರಹ ಕೃತಿ, ಅಷ್ಟದಿಕ್ಪಾಲಕ ಕೃತಿ, ವೆಂಕಟೇಶ ನವರತ್ನಮಾಲಿಕಾ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಡಿ. ಸುಬ್ಬರಾಮಯ್ಯ ಮೆಮೋರಿಯಲ್ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಸಂಗೀತ ಉತ್ಸವ, ಸ್ಪರ್ಧೆ, ಶಿಷ್ಯವೇತನ, ಅಶಕ್ತರಿಗೆ ನೆರವು ನೀಡುತ್ತಿದ್ದಾರೆ.

 ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ (ಕರ್ನಾಟಕ ಕಲಾಶ್ರಿ), ತ್ಯಾಗರಾಜ ಗಾನಸಭೆ (ಕಲಾಜ್ಯೋತಿ), ಅನನ್ಯ (ಶಾಸ್ತ್ರಕೌಸ್ತುಭ), ಆರಾಧನಾ (ಕಲಾರಾಧನಾ ಶ್ರಿ) ಮೊದಲಾದ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.

ಸಮನ್ವಯ ಕಲಾ ಸಂಘ: ಕಾರಂಜಿ ಆಂಜನೇಯಸ್ವಾಮಿ ದೇಸ್ಥಾನದ ಆವರಣ, ಬಸವನಗುಡಿ. ಸದ್ಗುರು ತ್ಯಾಗರಾಜರ ಆರಾಧನಾ ಮಹೋತ್ಸವ.

ಆಹ್ವಾನಿತ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಸಂಗೀತ ಸೇವೆ, ಶನಿವಾರ ಸಂಜೆ 4.
ಸನ್ಮಾನ ಹಾಗೂ ಗೌರವ ಸಮರ್ಪಣೆ- ಸಂಗೀತ ವಿದ್ವಾಂಸ ಬೆಳಕವಾಡಿ ರಂಗಸ್ವಾಮಿ ಅಂಯ್ಯಾಂಗಾರ್ ಅವರಿಗೆ. ಅತಿಥಿ- ವಿಮರ್ಶಕ ಡಾ.ಎಂ.ಸೂರ್ಯಪ್ರಸಾದ್. 

ಭಾನುವಾರ 11. ಪಂಚರತ್ನ ಕೃತಿಗಳ ಗೋಷ್ಠಿಗಾನ ಮಧ್ಯಾಹ್ನ 12. ಸಂಗೀತ ಕಾರ್ಯಕ್ರಮ. ಯುಗಳ ಗಾಯನ- ಪಿ. ರಮಾ, ಆರ್.ಚಂದ್ರಿಕಾ, ಪಿಟೀಲು- ಸಂಧ್ಯಾ ಶ್ರೀನಾಥ್, ಮೃದಂಗ- ರಂಜನಿ ಸಿದ್ಧಾಂತಿ, ಘಟ- ಸುಕನ್ಯಾ ರಾಮ್ ಗೋಪಾಲ್. ಸಂಜೆ 6.30.

ರಾಜಮಹಲ್‌ವಿಲಾಸ ಸಂಗೀತ ಸಭಾ: ರಘೋತ್ತಮ್ ಸ್ಮಾರಕ ಸಭಾಭವನ, ಅಂಚೆಕಚೇರಿ ಮೇಲೆ, ಸಂಜಯ ನಗರ. ಪುರಂದರ ದಾಸ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವ, ವಾರ್ಷಿಕ ಸಂಗೀತೋತ್ಸವ ಉದ್ಘಾಟನೆ- ಡಿಆರ್‌ಡಿಒದ ನಿವೃತ್ತ ಮಹಾನಿರ್ದೇಶಕ ಡಾ.ಕೆ.ವಿ.ಆತ್ರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ.
 
ಗಾಯನ- ಕಸ್ತೂರಿ ರಂಗನ್, ಪಿಟೀಲು- ಸಿ.ಎನ್.ತ್ಯಾಗರಾಜು, ಮೃದಂಗ- ಸಿ.ಚೆಲುವರಾಜು. ಶನಿವಾರ ಸಂಜೆ 5.ಪಂಚರತ್ನ ಕೃತಿಗಳ ಗೋಷ್ಠಿಗಾನ. ಭಾನುವಾರ ಬೆಳಿಗ್ಗೆ 10. ಕಲಾವಿದರಿಂದ ಸಂಗೀತ ಸೇವೆ ಹಾಗೂ ಸಂಗೀತ ವಿದ್ವಾಂಸರಾದ ಟಿ.ವಸಂತ ಮಾಧವಿ ಅವರಿಗೆ  ಗೌರವಾರ್ಪಣೆ.
 
ಅಧ್ಯಕ್ಷತೆ- ಪ್ರೊ. ಮೈಸೂರು ವಿ.ಸುಬ್ರಹ್ಮಣ್ಯ, ಅತಿಥಿಗಳು- ಇಸ್ರೋ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್. ಶಿಕ್ಷಣ ತಜ್ಞ ಡಾ.ಎ.ಎಚ್.ರಾಮರಾವ್. ಮಧ್ಯಾಹ್ನ 12. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ. ಗಾಯನ- ಪ್ರೊ.ನಾಗಮಣಿ ಶ್ರೀನಾಥ್, ಪಿಟೀಲು- ನಳಿನಾ ಮೋಹನ್, ಮೃದಂಗ- ಅನೂರು ಅನಂತಕೃಷ್ಣ ಶರ್ಮ, ಖಂಜರಿ- ಸಿ.ಪಿ.ವ್ಯಾಸ ವಿಠಲ. ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT