ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯತ್ರಿ ಮಂತ್ರಕ್ಕೆ ಭೇದ ಬೇಡ

Last Updated 16 ಫೆಬ್ರುವರಿ 2011, 11:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಗಾಯತ್ರಿ ಮಂತ್ರವನ್ನು ಹೇಳಲು ಎಲ್ಲರಿಗೂ ಹಕ್ಕಿದೆ’ ಎಂದು ಹರಿದ್ವಾರದ ಪತಂಜಲಿ ಯೋಗ ಪೀಠ ಟ್ರಸ್ಟಿನ ಮಹಾರಾಜ ಯೋಗಿರಾಜ ಆಚಾರ್ಯ ಬಾಲಕೃಷ್ಣಾಜಿ ಪ್ರತಿಪಾದಿಸಿದರು.ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ತಡಸದ ಗಾಯತ್ರಿ ತಪೋಭೂಮಿಯ 11ನೇ ವಾರ್ಷಿಕೋತ್ಸವದ ಎರಡನೆ ದಿನವಾದ ಮಂಗಳವಾರ ಏರ್ಪಡಿಸಿದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗಾಯತ್ರಿ ಮಂತ್ರವನ್ನು ಜಪಿಸಲು ಜಾತಿ, ವರ್ಗ ಭೇದವಿಲ್ಲ. ಜೊತೆಗೆ ಪುರುಷರಿಗಷ್ಟೇ ಅಲ್ಲ, ಮಹಿಳೆಯರೂ ಗಾಯತ್ರಿ ಮಂತ್ರವನ್ನು ಜಪಿಸಬಹುದು’ ಎಂದು ಅವರ ಕರೆ ನೀಡಿದರು.‘ಗಾಯತ್ರಿ ಮಂತ್ರದ ಜೊತೆಗೆ ಯೋಗ, ಪ್ರಾಣಾಯಾಮದಿಂದ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಜೀವನ ಉನ್ನತವಾಗುತ್ತದೆ’ ಎಂದು ಅವರು ಹೇಳಿದರು.

‘ತುಳಸಿ ಎಂದರೆ ಸಾಕ್ಷಾತ್ ವಿಷ್ಣು ಸ್ವರೂಪಿ ಎಂಬ ಪ್ರತೀತಿಯಿದೆ. ತುಳಸಿ ಬಳಸುವುದರಲ್ಲೂ ವೈಜ್ಞಾನಿಕ ಅಂಶವಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ತುಳಸಿಯನ್ನು ಮನೆಯಲ್ಲಿ ಬಳಸುತ್ತಾರೆ. ಮನೆಯ ಮುಂದೆ ತುಳಸಿ ಗಿಡವಿದ್ದರೆ 24 ಗಂಟೆಯೂ ಆಕ್ಸಿಜನ್ ಸಿಗುತ್ತದೆ. ನೀರಿನಲ್ಲಿ ತುಳಸಿ ಹಾಕಿ ಕುಡಿಯುವುದರಿಂದ ಬ್ಯಾಕ್ಟೀರಿಯಾಗಳು ಸಾಯುತ್ತವೆ.ಜೊತೆಗೆ ಔಷಧಿಯಾಗಿಯೂ ಅದನ್ನು ಬಳಸುತ್ತಾರೆ. ಮುಖ್ಯವಾಗಿ ಕ್ಯಾನ್ಸರ್ ತಡೆಯುವ ಶಕ್ತಿ ತುಳಸಿಗಿದೆ. ಇದಕ್ಕಾಗಿ ಆಗಾಗ ತುಳಸಿ ತಿನ್ನಿರಿ’ ಎಂದು ಅವರು ಸಲಹೆ ನೀಡಿದರು.

ಉಪಾಧ್ಯಾಯ ಬಂಧುಗಳಿಂದ ವೇದಘೋಷ ನಡೆಯಿತು. ಇದೇ ಸಂದರ್ಭದಲ್ಲಿ ಬಾಲಕೃಷ್ಣಾಜಿ ಹಾಗೂ ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು.ಶಿರಹಟ್ಟಿಯ ಸಿದ್ಧರಾಮ ಸ್ವಾಮೀಜಿ, ವಿಶ್ವೇಶ್ವರಾನಂದ ಸ್ವಾಮೀಜಿ, ಪ್ರೇಮಾನಂದ ಸರಸ್ವತಿಜಿ ಮಹಾರಾಜ, ಸುಭದ್ರ ಮಾತಾಜಿ, ರಾಮಸ್ವರೂಪಾನಂದಜಿ ಮಹಾರಾಜ, ಗಂಭೀರಾನಂದ ಸರಸ್ವತಿಜಿ ಮಹಾರಾಜ, ಪ್ರಣವಾನಂದ ತೀರ್ಥಜಿ ಮಹಾರಾಜ, ಧರಣೀದಾಸ್‌ಜಿ ಮಹಾರಾಜ ಹಾಗೂ ಕೇಶವದಾಸ್‌ಜಿ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಶಿರಹಟ್ಟಿಯ ಬೆಳ್ಳಟ್ಟಿ ಮಾಸ್ತರ ಮಾನಪತ್ರ ಓದಿದರು. ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ ಅಧ್ಯಕ್ಷ ಕೆ.ಎಲ್. ಕುಲಕರ್ಣಿ ಮೊದಲಾದ ಟ್ರಸ್ಟಿಗಳು ಹಾಜರಿದ್ದರು.
ಬಿ.ಆರ್. ಪದಕಿ ಕಾರ್ಯಕ್ರಮ ನಿರ್ವಹಿಸಿದರು.

ಧಾರ್ಮಿಕ ಕಾರ್ಯಕ್ರಮಗಳು
ಮಂಗಳವಾರ ಬೆಳಿಗ್ಗೆ ಎಂಟು ಗಂಟೆಯಿಂದ ಗಾಯತ್ರಿ ಹೋಮ, ಗಣ ಹೋಮ, ಲಕ್ಷ್ಮೀ ಹೋಮ ಹಾಗೂ ಸುಬ್ರಹ್ಮಣ್ಯ ಹೋಮ ನಡೆದವು. ನಂತರ ಉಡುಪಿ ಪೇಜಾವರ ಶ್ರೀಗಳಿಂದ ಕೃಷ್ಣ ಪೂಜೆ ನಡೆಯಿತು. ಆಮೇಲೆ ಅವರು ಕೃಷ್ಣೇಂದ್ರ ಗುಡಿಯ ಭೂಮಿಪೂಜೆ ನೆರವೇರಿಸಿದರು. ಇದಾದ ಮೇಲೆ ಅವರ ತುಲಾಭಾರ ನಡೆಯಿತು.

ಮಧ್ಯಾಹ್ನ ಶ್ರೀ ಗಾಯತ್ರಿ ದೇವಿಗೆ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿತರಣೆ ಜರುಗಿತು. ನಗರದ ಮಯೂರಿ ನೃತ್ಯ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT