ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಆಟಕ್ಕೆ ಕ್ರೀಡಾ ವೈದ್ಯರ ಪಾಠ!

Last Updated 17 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

‘ಗಾಯ’ ಎಂಬ ಶಬ್ದ ಕೇಳಿದ ಕೂಡಲೇ ಕ್ರೀಡಾ ವಲಯದಲ್ಲಿ ಆತಂಕದ ಅಲೆಗಳು ಏಳುತ್ತವೆ. ಒಬ್ಬ ಪ್ರಮುಖ ಆಟಗಾರ ಗಾಯಗೊಂಡರೆ ಇಡೀ ತಂಡವೇ ಪರದಾಡಬೇಕಾಗುತ್ತದೆ. ಮೊನ್ನೆ ಮುಗಿದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂತಹ ಹಲವು ಉದಾಹರಣೆಗಳನ್ನು ನೋಡಿರಬಹುದು.

ಕ್ರೀಡಾಪಟುಗಳು ಗಾಯಕ್ಕೆ ಮದ್ದು ನೀಡಲು ಅದಕ್ಕಾಗಿಯೇ ಇರುವ ವಿಶೇಷ ವೈದ್ಯರು ಬೇಕು. ಕರ್ನಾಟಕದಲ್ಲಿ ಬೆರಳೆಣಿಕೆಯಷ್ಟು ಇರುವ ಕ್ರೀಡಾ ವೈದ್ಯರಲ್ಲಿ ಧಾರವಾಡದ ಡಾ. ಕಿರಣ ಕುಲಕರ್ಣಿ ಕೂಡ ಒಬ್ಬರು. ಕೌಲಾಲಂಪುರದಲ್ಲಿ ನಡೆದ ಎಎಫ್‌ಸಿ ಚಾಲೆಂಜ್ -2012 ಕಪ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ  ಭಾರತ ಫುಟ್‌ಬಾಲ್ ತಂಡಕ್ಕೆ ಕ್ರೀಡಾ ವೈದ್ಯರಾಗಿ ತೆರಳಿದ್ದರು.  ಜನವರಿಯಲ್ಲಿ ದೋಹಾದಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದೊಂದಿಗೆ ಹೋಗಿದ್ದ ಅವರು, ಬಹಳ ದಿನಗಳಿಂದ ಎಡಗಾಲಿನ ಮೀನಖಂಡದ ಗಾಯದಿಂದ ಬಳಲುತ್ತಿದ್ದ ಬೈಚುಂಗ್ ಭುಟಿಯಾಗೆ ಚಿಕಿತ್ಸೆ ನೀಡಿ ಸೈ ಎನಿಸಿಕೊಂಡು ಬಂದಿದ್ದರು.

ಭಾರತೀಯ ಜಿಮ್ನಾಸ್ಟಿಕ್ಸ್ ಫೆಡರೇಷನ್ ವೈದ್ಯಕೀಯ ಮತ್ತು ಉದ್ದೀಪನ ಮದ್ದು ನಿಯಂತ್ರಣ ಘಟಕದ ನಿಮಂತ್ರಕರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಕೌಲಾಲಂಪುರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಫುಟ್‌ಬಾಲ್ ಆಟಗಾರರಲ್ಲಿ ಉದ್ದೀಪನ ಮದ್ದಿನ ಸೇವನೆಯ ಅಪಾಯಗಳ ಕುರಿತು ಜಾಗೃತಿ ವಿಷಯದ ಬಗ್ಗೆ ಪರಿಣಾಮಕಾರಿಯಾಗಿ ವಿಚಾರ ಮಂಡಿಸಿ ಬಂದಿದ್ದಾರೆ. ಸ್ವತಃ ಕ್ರೀಡಾಪಟುವೂ ಆಗಿರುವ ಡಾ. ಕಿರಣ, ಭಾರತದಲ್ಲಿ ತೀರಾ ಹಿಂದುಳಿದಿರುವ ಫುಟ್‌ಬಾಲ್ ಆಟದ ಬೆಳವಣಿಗೆಯಲ್ಲಿ  ವೈದ್ಯಕೀಯ ನೆರವು ಮತ್ತು ತಿಳಿವಳಿಕೆಯ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

‘ಫುಟ್‌ಬಾಲ್ ಆಟದಲ್ಲಿ ಗಾಯಗೊಳ್ಳುವ ಸಾಧ್ಯತೆ ಹೆಚ್ಚು.  ಪಂದ್ಯದ ಸಂದರ್ಭದಲ್ಲಿಯೇ ಮರಣಗಳು ಸಂಭವಿಸಿರುವ ಉದಾಹರಣೆಗಳೂ ಇಲ್ಲಿ ಸಾಕಷ್ಟಿವೆ. ಉದ್ದೀಪನ ಮದ್ದು ಸೇವನೆಯ ಪ್ರಕರಣಗಳೂ ವರದಿಯಾಗಿವೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಭಾರತದಲ್ಲಿ ಫುಟ್‌ಬಾಲ್ ಬೆಳೆಯುವುದು ಹೇಗೆ. ಸಬ್ ಜೂನಿಯರ್, ಜೂನಿಯರ್, ಯೂತ್,  ಸೀನಿಯರ್ ವಯೋಮಿತಿಯ ವಿಭಾಗಗಳಲ್ಲಿ ಗಾಯ, ಮದ್ದು ಸೇವನೆಗಳ ಕುರಿತ ಸೂಕ್ತ ತಿಳಿವಳಿಕೆ ನೀಡುವ ಕೆಲಸಗಳಾಗಬೇಕು.

ವಿಶ್ವ ಭೂಪಟದಲ್ಲಿ ಭಾರತದ ಫುಟ್‌ಬಾಲ್ ಒಂದು ಸಣ್ಣ ಬಿಂದು ಅಷ್ಟೇ. ವಿಶ್ವಕಪ್‌ಗೆ ಅರ್ಹತೆ ಗಳಿಸಲು ಸಾಗಬೇಕಾದ ಹಾದಿ ಬಹು ದೂರ. ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗಿದ್ದೇ 28 ವರ್ಷಗಳ ನಂತರ. ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಗೆ ತಕ್ಕಂತೆ ಸೌಲಭ್ಯಗಳ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ವಿಶೇಷ ಮುತುವರ್ಜಿಯ ಅವಶ್ಯಕತೆ ಇದೆ. ಇದು ತಳಮಟ್ಟದಿಂದಲೇ ಆರಂಭವಾಗಬೇಕು.

ವೈದ್ಯಕೀಯ ನೆರವು ಮತ್ತು ತಿಳಿವಳಿಕೆಯೂ ಅಷ್ಟೇ. ಕನಿಷ್ಠ ಪಕ್ಷ ರಾಜ್ಯ, ವಲಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಇದು ಸಿಗಬೇಕು. ರಾಜ್ಯ ಸಂಸ್ಥೆಗಳು ತಮ್ಮ ಆಟಗಾರರ ಗಾಯದ ಸಮಸ್ಯೆ, ಉದ್ದೀಪನ ಮದ್ದು ಸೇವನೆಯ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ಮೂಡಿಸಲು ತಜ್ಞ ವೈದ್ಯರೊಬ್ಬರ ನೆರವು ಪಡೆಯವುದು ಅವಶ್ಯಕ.

ಕ್ರಿಕೆಟ್‌ನಲ್ಲಿ ರಾಜ್ಯ ತಂಡಕ್ಕೆ ಪ್ರತ್ಯೇಕ ವೈದ್ಯಕೀಯ ತಂಡ ಇರುವ ಮಾದರಿಯಲ್ಲಿಯೇ ಉಳಿದ ಆಟಗಳಲ್ಲಿಯೂ ಈ ಪದ್ಧತಿ ಅಳವಡಿಸಬೇಕು. ಪಂದ್ಯಗಳಲ್ಲಿ ಅತ್ಯಂತ ಸಣ್ಣ ತಪ್ಪೂ ಸೋಲಿಗೆ ಕಾರಣವಾಗುತ್ತವೆ. ಅಂತಹ ತಪ್ಪುಗಳಿಗೆ ಬಹುತೇಕ ಬಾರಿ ಗಾಯಗಳೇ ಕಾರಣವಾಗುತ್ತವೆ. ಪ್ರಮುಖ ಆಟಗಾರ ಗಂಭೀರ ಗಾಯದಿಂದ ಹೊರನಡೆದರೆ, ಇಡೀ ತಂಡದ ಮಾನಸಿಕ ಬಲವನ್ನು ಕುಂದಿಸುತ್ತದೆ. ಇಂತಹ ಸಂದರ್ಭದಲ್ಲಿ ನುರಿತ ವೈದ್ಯರ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ’

‘ಏಷ್ಯಾ ಕಪ್ ಟೂರ್ನಿಗೂ ಮುನ್ನ ಬೈಚುಂಗ್ ಭುಟಿಯಾ ತಮ್ಮ ಮೀನಖಂಡದ ಸ್ನಾಯು ಸೆಳೆತಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು.ಆದರೂ ಸಂಪೂರ್ಣ ಗುಣಮುಖರಾಗಿರಲಿಲ್ಲ. ನನ್ನ ವೈದ್ಯಕೀಯ ತಂಡದ ಹಿರಿಯ ವೈದ್ಯರೂ ಎಲ್ಲ ಥೆರಪಿಗಳನ್ನು ಪ್ರಯೋಗಿಸಿದ್ದರು. ಆದರೂ ಫಲ ನೀಡಿರಲಿಲ್ಲ. ನಾನು ಅವರ ಮೀನಖಂಡದ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದೆ.
 
ಈ ಸಂದರ್ಭದಲ್ಲಿ ಅವರ ಖಂಡದಲ್ಲಿ ದ್ರವ ತುಂಬಿಕೊಂಡಿದ್ದು ಕಂಡುಬಂತು. ನಂತರ 20-25 ಮಿಲಿಲೀಟರ್ ದ್ರವವನ್ನು ತೆಗೆಯಲಾಯಿತು. ನಂತರ ಔಷಧಿ ಮತ್ತು ಫಿಜಿಯೋಥೆರಪಿ ಚಿಕಿತ್ಸೆ ಒದಗಿಸಲಾಯಿತು. ಇದರಿಂದ ನೋವು ಕಡಿಮೆಯಾಗಿ ದಕ್ಷಿಣ ಕೊರಿಯಾ ತಂಡದ ವಿರುದ್ಧದ ಪಂದ್ಯದಲ್ಲಿ ಅವರು 20 ನಿಮಿಷ ಆಡಲು ಸಾಧ್ಯವಾಯಿತು.
 
ಸ್ನಾಯು ಸೆಳೆತ, ಎಲುವಿನ ಉರಿಯೂತ, ನೋವುಗಳಿಗೆ ಸಾಮಾನ್ಯ ಚಿಕಿತ್ಸೆಗಿಂತ ಅದರ ಮೂಲವನ್ನು ಕಂಡುಕೊಂಡು ಉಪಚರಿಸಿದರೆ ಬೇಗನೆ ಉತ್ತಮ ಫಲಿತಾಂಶ ಪಡೆಯಬಹುದು. ಈ ಟೂರ್ನಿಯಲ್ಲಿ ಭಾರತ ತಂಡ ಗೆಲ್ಲಲಿಲ್ಲ. ಜಪಾನ್ ಕಪ್ ಗೆದ್ದುಕೊಂಡಿತು. ಆದರೆ ಉಳಿದ ರಾಷ್ಟ್ರಗಳು ಮತ್ತು ನಮ್ಮ ತಂಡದ ಪ್ರದರ್ಶನ ಮಟ್ಟವನ್ನು ವಿಶ್ಲೇಷಿಸಲು ಇಲ್ಲಿ ಸಾಧ್ಯವಾಯಿತು’
‘ಪ್ರದರ್ಶನ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಲು ಅಥವಾ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯಾವ್ಯಾವುದೋ ಔಷಧಿಗಳನ್ನು ಸೇವಿಸುವುದು ಸರಿಯಲ್ಲ. ಹಲವು ಔಷಧಿಗಳನ್ನು ವಿಶ್ವ ಉದ್ದೀಪನ ಮದ್ದು ನಿಯಂತ್ರಣ ಘಟಕ (ವಾಡಾ) ನಿಷೇಧಿಸಿದೆ.

ಅಪಾಯಕಾರಿಯಲ್ಲದ ಔಷಧಿಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ. ಇದಕ್ಕೆ ಕ್ರೀಡಾ ವೈದ್ಯರ ಮಾರ್ಗದರ್ಶನ ಅಗತ್ಯ. ಯಾವುದೇ ಕ್ರೀಡೆಯಿರಲಿ, ಜೀವನದ ಒಂದು ವಯಸ್ಸಿನವರೆಗೆ ಆಡಲು ಮಾತ್ರ ಸಾಧ್ಯ. ಅದರ ನಂತರ ಸುಂದರವಾದ ಜೀವನ ಸಾಗಿಸುವ ಗುರಿಯಿರಬೇಕು. ಆದರೆ ಆಡುವ ಸಮಯದಲ್ಲಿ ವಿಪರೀತವಾಗಿ ಉದ್ದೀಪನ ಮದ್ದುಗಳನ್ನು ಸೇವಿಸಿಬಿಟ್ಟರೆ ನಂತರದ ಜೀವನ ನರಕವಾಗುವುದು ಖಚಿತ.
 
ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಬಲ ಕ್ರೀಡಾಪಟುಗಳಲ್ಲಿ ಬೆಳೆಯಬೇಕು. ಗಾಯಗೊಂಡಾಗಲೂ ಅಷ್ಟೇ. ಅವೈಜ್ಞಾನಿಕವಾದ ಚಿಕಿತ್ಸೆಯತ್ತ ವಾಲದೇ, ನುರಿತ ತಜ್ಞ ವೈದ್ಯರ ಬಳಿಯೇ ಹೋಗಬೇಕು. ಇದರಿಂದ ಕ್ರೀಡಾಪಟುವಿನ ಪ್ರದರ್ಶನ ಸಾಮರ್ಥ್ಯ ಮತ್ತು ಜೀವನದ ಗುಣಮಟ್ಟ ಎರಡೂ ಉಳಿಯುತ್ತವೆ’

ಯಾವುದೇ ಕ್ರೀಡೆಯಿರಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಹಾದಿಯಾಗಬೇಕು. ಮುಂದಿನ ಬದುಕಿಗೆ ಮಾರ್ಗದರ್ಶನವಾಗಬೇಕು. ಕ್ಷಣಿಕ ಯಶಸ್ಸಿಗಾಗಿ ಉದ್ದೀಪನ ಮದ್ದು ಸೇವನೆ ಮಾಡಿ ಅಥವಾ ಗಾಯಗಳನ್ನು ನಿರ್ಲಕ್ಷಿಸಿ ಇಡೀ ಬದುಕಿನ ಆರೋಗ್ಯವನ್ನೇ ಹಾಳು ಮಾಡಿಕೊಳ್ಳುವತ್ತ ಯುವಕರು ಹೋಗಬಾರದು ಎಂಬ ಕಳಕಳಿಯನ್ನು ಡಾ. ಕಿರಣ್ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT