ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಮೇಲೆ ಉಪ್ಪು ಸವರಿದ ಆಂಗ್ಲರು

ಕ್ರಿಕೆಟ್: ತವರಿನಲ್ಲೇ ಕುಸಿದು ಹೋದ ದೋನಿ ಬಳಗ; ಸರಣಿ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಾಗಪುರ: ಸೋಲನ್ನೇ ಮೈಯಲ್ಲಿ ತುಂಬಿಕೊಂಡು ಕಣಕ್ಕಿಳಿದವರಂತಿದ್ದ ಈ ಆಟಗಾರರಿಂದ ಏನನ್ನು ನಿರೀಕ್ಷಿಸಬಹುದು? ಅಂಗಳದಲ್ಲಿ ಸ್ವಲ್ಪವೂ ಬದ್ಧತೆ ತೋರದ ಈ ಮನಸ್ಸುಗಳಿಗೆ ಸವಾಲು ಎದುರಿಸಲು ಸಾಧ್ಯವೇ? ಇಂತಹ ದೌರ್ಬಲ್ಯ ಹೊಂದಿರುವ ಹೃದಯಗಳಿಗೆ ಗೆಲುವು ತಾನೇ ಹೇಗೆ ಒಲಿದಿತು?

ಭಾರತ ತಂಡದ ಆಟಗಾರರ ಇಂತಹ ಮನಸ್ಥಿತಿಯನ್ನು ಚೆನ್ನಾಗಿಯೇ ಬಳಸಿಕೊಂಡ ಇಂಗ್ಲೆಂಡ್ ತಂಡದವರು ಅಪೂರ್ವ ಸಾಧನೆಯೊಂದಕ್ಕೆ ಕಾರಣರಾಗಿದ್ದಾರೆ. ಅದು 28 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಸರಣಿ ಗೆಲುವಿನ ಚುಂಬನ.

ಈ ಮೂಲಕ `ಸ್ವದೇಶದ ಹುಲಿ' ಭಾರತ ತಂಡದ ಗರ್ಜನೆಗೆ ಆಂಗ್ಲರು ಬಲವಾದ ಪೆಟ್ಟು ನೀಡಿದ್ದಾರೆ. ಏಕೆಂದರೆ 8 ವರ್ಷಗಳ ಬಳಿಕ ತವರೂರಿನಲ್ಲಿಯೇ ಈ ತಂಡದವರು ಸರಣಿ ಸೋಲನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಸೇಡು ತೀರಿಸಿಕೊಳ್ಳುವ ಹಟದಲ್ಲಿ ತಾವೇ ತೋಡಿಕೊಂಡ ಗುಂಡಿಗೆ ಉರುಳಿ ಬ್ದ್ದಿದಿದ್ದಾರೆ.

ಜಾಮ್ತಾ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದು, ಇಂಗ್ಲೆಂಡ್ ತಂಡಕ್ಕೆ ಅತಿ ದೊಡ್ಡ ಉಡುಗೊರೆ ತಂದುಕೊಟ್ಟಿತು. ಅದು 2-1ರಲ್ಲಿ ಸರಣಿ ಗೆಲುವಿನ ಉಡುಗೊರೆ.

ಪಂದ್ಯದ ಕೊನೆಯ ದಿನವಾದ ಸೋಮವಾರ ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 154 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 356 ರನ್‌ಗಳ ಮುನ್ನಡೆ ಸಾಧಿಸಿತು. ಆದರೆ ಭಾರತ ಎರಡನೇ ಇನಿಂಗ್ಸ್ ಆರಂಭಿಸಲಿಲ್ಲ. ಏಕೆಂದರೆ ಪಂದ್ಯ ಮುಗಿಯಲು ಇನ್ನೂ ಒಂದು ಗಂಟೆ ಇರುವಾಗ ಉಭಯ ತಂಡಗಳು ಡ್ರಾ ಮಾಡಿಕೊಳ್ಳಲು ಸಮ್ಮತಿ ಸೂಚಿಸಿದವು. ಅದಕ್ಕಾಗಿ ಮಧ್ಯಾಹ್ನ 3.20ರವರೆಗೆ ಕಾಯಬೇಕಾಯಿತು.

`ನಾವೀಗ ಹುಲಿಯ ಗುಹೆಗೆ ನುಗ್ಗಿದ್ದೇವೆ. ಆ ಹುಲಿಯನ್ನು ಯಶಸ್ವಿಯಾಗಿ ಬೇಟೆಯಾಡುವ ಸಾಮರ್ಥ್ಯ ನಮ್ಮಲ್ಲಿದೆ' ಎಂದು ಭಾರತದ ನೆಲಕ್ಕೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ತಂಡದವರು ಸರಣಿ ಜಯಿಸುವ ಮೂಲಕ ಆ ಮಾತನ್ನು ನಿಜ ಮಾಡಿದ್ದಾರೆ. ಕ್ರಿಸ್‌ಮಸ್ ಸಡಗರಕ್ಕೆ ಆಂಗ್ಲರಿಗೆ ಇದಕ್ಕಿಂತ ಉತ್ತಮ ಉಡುಗೊರೆ ಮತ್ತೊಂದು ಸಿಗಲಾರದು.

ಆದರೆ ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ದೋನಿ ಬಳಗದವರ ಪಾಲಿಗೆ ಸರಣಿ ಪರಾಭವದ ಆಘಾತ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಇಂತಹ ಪಿಚ್ ಬೇಕು ಎಂದು ದೋನಿ ಮತ್ತೊಮ್ಮೆ ಕನಸಿನಲ್ಲೂ ಕೇಳಲಾರರೇನೊ?

ಟ್ರಾಟ್-ಬೆಲ್ ಆಟಕ್ಕೆ ಆತಿಥೇಯರು ಸುಸ್ತು: ವಿಚಿತ್ರವಾಗಿ ವರ್ತಿಸುತ್ತಿದ್ದ ಈ ಪಿಚ್‌ನಲ್ಲಿ ಅಂತಿಮ ದಿನ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿ ನಿಂತಿದ್ದು ಟ್ರಾಟ್ ಹಾಗೂ ಬೆಲ್. ಅವರ ಆಟಕ್ಕೆ ಭಾರತದ ಆಟಗಾರರು ಮಾತ್ರ ಸುಸ್ತಾಗಲಿಲ್ಲ; ಪ್ರೇಕ್ಷಕರೂ ಸುಸ್ತೆದ್ದು ಹೋದವರಂತಿತ್ತು.

ಅಂಪೈರ್‌ಗಳ ಅಸಮರ್ಪಕ ತೀರ್ಪು, ಕಳಪೆ ಫೀಲ್ಡಿಂಗ್, ಕೈಕೊಟ್ಟ ದೋನಿ ತಂತ್ರಗಳು, ಸುಸ್ತಾದ ಮನಗಳ ಪ್ರಯೋಜನ ಪಡೆದ ಇವರಿಬ್ಬರ ಜೊತೆಯಾಟ ಸರಣಿ ಸಮಬಲ ಮಾಡಿಕೊಳ್ಳುವ ಭಾರತದ ಸಣ್ಣ ಆಸೆಯನ್ನು ಕಿತ್ತುಕೊಂಡಿತು. ಇಡೀ ದಿನ ಬಿದ್ದದ್ದು ಒಂದೇ ವಿಕೆಟ್. ಆತಿಥೇಯರು ಆಕ್ರಮಣಕಾರಿ ಮನೋವೃತ್ತಿಯನ್ನೇ ತೋರಲಿಲ್ಲ. ದೋನಿ ಅವರ ಫೀಲ್ಡಿಂಗ್ ಯೋಜನೆಗಳೂ ಸರಿ ಇರಲಿಲ್ಲ.

ಟ್ರಾಟ್ ಹಾಗೂ ಬೆಲ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 208 ರನ್ (474 ಎಸೆತ) ಸೇರಿಸಿದರು. ಈ ಜೋಡಿಯನ್ನು ಬೇರ್ಪಡಿಸಿದ್ದೇ ದೋನಿ ಬಳಗದ ಅತಿ ದೊಡ್ಡ ಸಾಧನೆ. ಜೀವದಾನವನ್ನು ಸದುಪಯೋಗಪಡಿಸಿಕೊಂಡ ಟ್ರಾಟ್ (143; 405 ನಿ, 310 ಎ, 18 ಬೌಂ.) ಎಂಟನೇ ಶತಕ ಗಳಿಸಿದರು. ಬೆಲ್ (ಅಜೇಯ 116; 403 ನಿ, 306 ಎ. 16 ಬೌಂ, 1 ಸಿ.) ತುಂಬಾ ದಿನಗಳ ಬಳಿಕ ಉತ್ತಮ ಆಟವಾಡಿದರು. ಅವರಿಗೂ ಜೀವದಾನ ಲಭಿಸಿತ್ತು.

ಈ ಪಿಚ್‌ನಲ್ಲಿ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದ್ದ ದೋನಿ ಉದ್ದೇಶ ಅರ್ಥವಾಗದು. ಇಬ್ಬರು ವೇಗಿಗಳನ್ನು ಆಡಿಸದೆ ಅವರು ತಪ್ಪು ಮಾಡಿದರೇನೊ? ಏಕೆಂದರೆ ಈ ಪಿಚ್‌ನಲ್ಲಿ ನಾಲ್ವರು ಸ್ಪಿನ್ನರ್‌ಗಳು ಅಪಾಯಕಾರಿ ಎನಿಸಲೇ ಇಲ್ಲ. ನಾಯಕ ದೋನಿ ಒಮ್ಮೆ ಬೌಲ್ ಮಾಡಲು ಗಂಭೀರ್‌ಗೆ ಚೆಂಡು ನೀಡಿದರು. ಈ ಬೌಲರ್‌ಗಳ ವೈಫಲ್ಯದಿಂದ ಫಾರ್ಮ್ ಇ್ಲ್ಲಲದವರೂ ಫಾರ್ಮ್ ಕಂಡುಕೊಂಡರು. ಬೆಲ್ ಆಟವೇ ಅದಕ್ಕೆ ಸಾಕ್ಷಿ.

ಆದರೆ ಪ್ರವಾಸಿ ತಂಡದವರು ಬೇಗನೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಗೆಲುವಿಗಾಗಿ ಪ್ರಯತ್ನಿಸಬಹುದಾಗಿತ್ತು. ಬದಲಾಗಿ ಅವರು ತಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದರು. 2001ರ ಬಳಿಕ ಅತಿ ಕಡಿಮೆ ರನ್‌ರೇಟ್ ಕಂಡ ಟೆಸ್ಟ್ ಪಂದ್ಯವಿದು. ಈ ಪಂದ್ಯದಲ್ಲಿ ಕೇವಲ 2.27 ರನ್‌ರೇಟ್ ದಾಖಲಾಯಿತು.

ಬಹುದಿನಗಳ ಆ ಕನಸು: ಭಾರತದ ನೆಲದಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿ ಗೆದ್ದು 28 ವರ್ಷಗಳಾಗಿತ್ತು. 1984-85ರಲ್ಲಿ ಡೇವಿಡ್ ಗ್ರೋವರ್ ಸಾರಥ್ಯದ ತಂಡ 2-1ರಲ್ಲಿ ಸರಣಿ ಜಯಿಸಿತ್ತು. ಈಗ ನಾಯಕರಾಗಿರುವ ಕುಕ್ ಆಗ ಕೇವಲ 44 ದಿನಗಳ ಮಗು. ವಿಶೇಷವೆಂದರೆ ಕುಕ್ ಸಾರಥ್ಯದಲ್ಲಿ ಆಂಗ್ಲರ ಬಳಗ ಕೂಡ ಅಂತಹ ಸಾಧನೆ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ವಿದೇಶಿ ತಂಡಗಳು ವಿರಳ. ಏಕೆಂದರೆ ಹಿಂದಿನ 8 ವರ್ಷಗಳಲ್ಲಿ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿದ್ದು ಆಸ್ಟ್ರೇಲಿಯಾ ಮಾತ್ರ. 2004ರಲ್ಲಿ ಕಾಂಗರೂ ಪಡೆ 2-1ರಲ್ಲಿ ಸರಣಿ ಗೆದ್ದಿತ್ತು.

ವಿರಾಮದ ನಂತರ ಅಂಗಳಕ್ಕಿಳಿಯದ ಸಚಿನ್
ಅಂತಿಮ ದಿನ ಎಲ್ಲರ ಚಿತ್ತ ಸಚಿನ್ ತೆಂಡೂಲ್ಕರ್ ಅವರತ್ತ ಹರಿದಿತ್ತು. ಕಾರಣ ಈ ಪಂದ್ಯದ ಅಂತ್ಯಕ್ಕೆ ಸಚಿನ್ ವಿದಾಯ ಹೇಳಬಹುದು ಎಂಬ ವದಂತಿ. ಪತ್ನಿ ಅಂಜಲಿ ಕೂಡ ಇಲ್ಲಿಗೆ ಬಂದಿದ್ದು ಆ ವದಂತಿಗೆ ರೆಕ್ಕೆಪುಕ್ಕ ನೀಡಿದ್ದವು. ಸುದ್ದಿ ವಾಹಿನಿಗಳ ಮುಂಬೈನ ಕೆಲ ವರದಿಗಾರರೂ ಇಲ್ಲಿಗೆ ಆಗಮಿಸಿದ್ದರು.

ಆದರೆ ಸಚಿನ್ ಇಲ್ಲಿ ಅಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಅವರು ಈ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಸೋಮವಾರ ಸ್ವಲ್ಪ ಹೊತ್ತು ಮಾತ್ರ ಅಂಗಳದಲ್ಲಿದ್ದರು. ಫೀಲ್ಡಿಂಗ್ ವೇಳೆ ಬಿದ್ದಿದ್ದ ಕಾರಣ ಕುತ್ತಿಗೆ ನೋವಿಗೆ ಒಳಗಾಗಿದ್ದರು. ಹಾಗಾಗಿ ಅವರು ಡ್ರೆಸ್ಸಿಂಗ್ ಕೊಠಡಿಯಲ್ಲಿ ವಿಶ್ರಾಂತಿ ಪಡೆದರು.

ಸ್ಕೋರ್ ವಿವರ:
ಇಂಗ್ಲೆಂಡ್ ಮೊದಲ ಇನಿಂಗ್ಸ್ 145.5 ಓವರ್‌ಗಳಲ್ಲಿ 330

ಭಾರತ ಮೊದಲ ಇನಿಂಗ್ಸ್ 143 ಓವರ್‌ಗಳಲ್ಲಿ
9 ವಿಕೆಟ್ ನಷ್ಟಕ್ಕೆ 326 ಡಿಕ್ಲೇರ್ಡ್
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 154 ಓವರ್‌ಗಳಲ್ಲಿ
4 ವಿಕೆಟ್ ನಷ್ಟಕ್ಕೆ 352 ಡಿಕ್ಲೇರ್ಡ್
(ಭಾನುವಾರ 79 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161)
ಜೊನಾಥನ್ ಟ್ರಾಟ್ ಸಿ ವಿರಾಟ್ ಕೊಹ್ಲಿ ಬಿ ಆರ್.ಅಶ್ವಿನ್  143
ಇಯಾನ್ ಬೆಲ್ ಔಟಾಗದೆ  116
ಜೋ ರೂಟ್ ಔಟಾಗದೆ  20
ಇತರೆ (ಬೈ-8, ಲೆಗ್‌ಬೈ-6, ನೋಬಾಲ್ -6)  20
ವಿಕೆಟ್ ಪತನ: 1-48 (ಕುಕ್; 29.5); 2-81 (ಕಾಂಪ್ಟನ್; 46.4); 3-94 (ಪೀಟರ್ಸನ್; 55.5); 4-302 (ಟ್ರಾಟ್; 134.1).
ಬೌಲಿಂಗ್: ಇಶಾಂತ್ ಶರ್ಮ 15-3-42-0 (ನೋಬಾಲ್-3), ಪ್ರಗ್ಯಾನ್ ಓಜಾ 40-14-70-1, ಆರ್.ಅಶ್ವಿನ್ 38-11-99-2, ಪಿಯೂಷ್ ಚಾವ್ಲಾ 26-6-64-0 (ನೋಬಾಲ್-2), ರವೀಂದ್ರ ಜಡೇಜಾ 33-17-59-1 (ನೋಬಾಲ್-1), ಗೌತಮ್ ಗಂಭೀರ್ 2-0-4-0
ಫಲಿತಾಂಶ: ಪಂದ್ಯ ಡ್ರಾ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ಗೆ 2-1ರಲ್ಲಿ ಜಯ. ಪಂದ್ಯ ಶ್ರೇಷ್ಠ: ಜೇಮ್ಸ ಆ್ಯಂಡರ್ಸನ್. ಸರಣಿ ಶ್ರೇಷ್ಠ: ಅಲಸ್ಟೇರ್ ಕುಕ್. ಟ್ವೆಂಟಿ-20 ಸರಣಿಯ ಮೊದಲ ಪಂದ್ಯ: ಪುಣೆ (ಡಿ.20)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT