ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಾಳು ಕಾಲಿಸ್‌ಗೂ ಸ್ಥಾನ

Last Updated 19 ಜನವರಿ 2011, 18:30 IST
ಅಕ್ಷರ ಗಾತ್ರ

ಕೇಪ್‌ಟೌನ್ (ಪಿಟಿಐ): ಗಾಯಗೊಂಡಿದ್ದರೂ ಆಲ್‌ರೌಂಡರ್ ಜಾಕ್ ಕಾಲಿಸ್ ಅವರು ದಕ್ಷಿಣ ಆಫ್ರಿಕಾದ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.ದಕ್ಷಿಣ ಆಫ್ರಿಕಾ ಕ್ರಿಕೆಟ್ ರಾಷ್ಟ್ರೀಯ ಆಯ್ಕೆ ಸಮಿತಿಯು ಬುಧವಾರ ವಿಶ್ವಕಪ್‌ಗಾಗಿ ಹದಿನೈದು ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿತು. ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ಫೆಬ್ರುವರಿ 19ರಿಂದ ನಡೆಯಲಿರುವ ಏಕದಿನ ಪಂದ್ಯಗಳ ವಿಶ್ವ ಮಹಾ ಸಮರದಲ್ಲಿ ಆಡುವ ದಕ್ಷಿಣ ಆಫ್ರಿಕಾ ತಂಡಕ್ಕೆ ಕಾಲಿಸ್ ನೆರವು ಅಗತ್ಯವೆಂದು ಆಯ್ಕೆಗಾರರು ನಿರ್ಧರಿಸಿದ್ದಾರೆ.

ಗಾಯದ ಕಾರಣ 35 ವರ್ಷ ವಯಸ್ಸಿನ ಕಾಲಿಸ್ ಅವರು ಭಾರತ ವಿರುದ್ಧದ ಏಕದಿನ ಪಂದ್ಯಗಳ ಸರಣಿಯಿಂದ ಹೊರಗೆ ಉಳಿದಿದ್ದಾರೆ. ಆದರೆ ವಿಶ್ವಕಪ್ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎನ್ನುವ ಆಶಯವನ್ನು ಆಯ್ಕೆ ಸಮಿತಿ ಹೊಂದಿದೆ. ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಈ ಆಲ್‌ರೌಂಡರ್ ತಂಡಕ್ಕೆ ಪ್ರಯೋಜನಕಾರಿ ಆಗುತ್ತಾರೆ ಎನ್ನುವ ವಿಶ್ವಾಸವನ್ನು  ವ್ಯಕ್ತಪಡಿಸಲಾಗಿದೆ.

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದ ಪೌರತ್ವ ಪಡೆದುಕೊಂಡಿರುವ ಪಾಕಿಸ್ತಾನದ ಮೂಲದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರನ್ನೂ ಹದಿನೈದರ ಪಟ್ಟಿಗೆ ಸೇರಿಸಲಾಗಿದೆ. ಭಾರತ ವಿರುದ್ಧದ ಮೂರನೇ ಪಂದ್ಯದಲ್ಲಿ ಆಡುವ ಮೂಲಕ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಫಾಫ್ ಡು ಪ್ಲೆಸ್ಸಿಸ್ ಅವರನ್ನೂ ತಂಡಕ್ಕೆ ಆಯ್ಕೆ ಮಾಡಿದ್ದು ಅಚ್ಚರಿಯೇನಲ್ಲ. ಚೊಚ್ಚಲ ಪಂದ್ಯದಲ್ಲಿಯೇ ಪ್ಲೆಸ್ಸಿಸ್ ಅವರು ಅರ್ಧ ಶತಕ ಗಳಿಸಿ ಗಮನ ಸೆಳೆದಿದ್ದಾರೆ.

ವೇಗದ ದಾಳಿಗೆ ಬಲ ನೀಡಲು ತಂಡದಲ್ಲಿ ಡೆಲ್ ಸ್ಟೇನ್, ಮಾರ್ನ್ ಮಾರ್ಕೆಲ್, ವಯ್ನೆ ಪರ್ನೆಲ್ ಹಾಗೂ ಲಾನ್‌ವಾಬೊ ತ್ಸೊತ್ಸೊಬೆ ಇದ್ದಾರೆ. ಏಳು ಪರಿಣತ ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡಲಾಗಿದೆ. ನಾಯಕ ಗ್ರೇಮ್ ಸ್ಮಿತ್, ಹಾಶೀಮ್ ಆಮ್ಲಾ, ಅಬ್ರಹಾಮ್ ಡಿ ವೀಲಿಯರ್ಸ್, ಜೆನ್ ಪಾಲ್ ಡುಮಿನಿ, ಪ್ಲೆಸ್ಸಿಸ್, ಕಾಲಿನ್ ಇನ್‌ಗ್ರಾಮ್ ಹಾಗೂ ಕಾಲಿಸ್ ಅವರು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬಲವಾಗಿದ್ದಾರೆ.

ತಂಡ ಇಂತಿದೆ: ಗ್ರೇಮ್ ಸ್ಮಿತ್ (ನಾಯಕ), ಹಾಶೀಮ್ ಆಮ್ಲಾ, ಜಾನ್ ಬೊಥಾ, ಅಬ್ರಹಾಮ್ ಡಿ ವೀಲಿಯರ್ಸ್, ಜೆನ್ ಪಾಲ್ ಡುಮಿನಿ, ಫಾಫ್ ಡು ಪ್ಲೆಸ್ಸಿಸ್, ಕಾಲಿನ್ ಇನ್‌ಗ್ರಾಮ್, ಜಾಕ್ ಕಾಲಿಸ್, ಮಾರ್ನ್ ಮಾರ್ಕೆಲ್, ವಯ್ನೆ ಪರ್ನೆಲ್, ರಾಬಿನ್ ಪೀಟರ್ಸನ್, ಡೆಲ್ ಸ್ಟೇನ್, ಇಮ್ರಾನ್ ತಾಹೀರ್, ಲಾನ್‌ವಾಬೊ ತ್ಸೊತ್ಸೊಬೆ ಮತ್ತು   ಮಾರ್ನ್ ವಾನ್ ವಿಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT