ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಾಳುವಿನ ಚೇತರಿಕೆಯೇ ನನ್ನ ಹಾರೈಕೆ

ವಿಂಡೀಸ್ ತಂಡದ ಮಹಿಳಾ ಫಿಸಿಯೋ ಬೆವರ್ಲಿ
Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ‘ಮೈದಾನದಲ್ಲಿ ಆಡುವಾಗ ಗಾಯಗೊಂಡು ಬರುವ ಆಟಗಾರ ನನ್ನ ಚಿಕಿತ್ಸೆಯ ನೆರವಿನಿಂದ ಮತ್ತೆ ಕಣಕ್ಕೆ ಇಳಿದು ಉತ್ತಮ ಪ್ರದರ್ಶನ ನೀಡಿದಾಗ ಸಿಗುವ ಸಂತೃಪ್ತಿ ಅಸಾಧಾರಣ­ವಾ­ದುದು. ನನ್ನ ವೃತ್ತಿಯಲ್ಲಿ ಮತ್ತಷ್ಟು ಸಾಧಿ­ಸಲು ಅದು ಪ್ರೇರಣೆಯೂ ಹೌದು’–

ಗಂಗೋತ್ರಿ ಗ್ಲೇಡ್ಸ್ ನಲ್ಲಿ ಬುಧವಾರ ಆರಂಭವಾಗುವ  ‘ಎ’ ಟೆಸ್ಟ್ ಕ್ರಿಕೆಟ್‌ ಪಂದ್ಯ ಆಡಲಿರುವ ವೆಸ್ಟ್ ಇಂಡೀಸ್ ‘ಎ’ ತಂಡದ ಏಕಮಾತ್ರ ಮಹಿಳಾ ಸದಸ್ಯೆ ಮತ್ತು ಫಿಸಿಯೋ ಬೆವರ್ಲಿ ನೆಲ್ಸನ್ ಅವರ ಮನದಾಳದಿಂದ ಬಂದ ಮಾತುಗಳಿವು. ಮಂಗಳವಾರ ತಂಡದ ಅಭ್ಯಾಸದ ಸಂದರ್ಭದಲ್ಲಿ ಕಾಲಿಗೆ ಚೆಂಡಿನ ಪೆಟ್ಟು ತಿಂದ ಮಿಗೆಲ್ ಕಮ್ಮಿನ್ಸ್ ಅವರಿಗೆ ‘ಐಸ್ ಥೆರಪಿ’ ನೀಡಿ ಮತ್ತೆ ಅಭ್ಯಾಸಕ್ಕೆ ಅಣಿ ಮಾಡಿ ಕಳಿಸಿದ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ­ದರು.

‘ತಂಡದ ಗೆಲುವಿಗಾಗಿ ಶ್ರಮಿಸುವ ಆಟಗಾರರು ಆಕಸ್ಮಿಕವಾಗಿ ಗಾಯ­ಗೊಳ್ಳು­ತ್ತಾರೆ. ಇದು ಅವರ ಭವಿಷ್ಯಕ್ಕೆ ಮಾರಕವಾಗಬಾರದು. ಎಷ್ಟು ಸಾಧ್ಯವೋ ಅಷ್ಟು ಬೇಗ ಚೇತರಿಸಿ­ಕೊಂಡು ಮತ್ತೆ ಪ್ರದರ್ಶನ ನೀಡಲು ಸಿದ್ಧರಾಗಬೇಕು. ಅದನ್ನು ಸಾಧಿಸು­ವುದು ಪ್ರತಿಯೊಬ್ಬ ಫಿಸಿಯೋ ಮತ್ತು ಕ್ರೀಡಾ ವೈದ್ಯನ ಮುಖ್ಯ ಗುರಿ. ಪೆಟ್ಟು ತಿಂದು ಬರುವ ಆಟಗಾರ ಮತ್ತೆ ಗಟ್ಟಿ­ಯಾಗಿ ಆತ್ಮವಿಶ್ವಾಸದಿಂದ ಮೈದಾನಕ್ಕೆ ಮರಳಿ ಆಡುವುದನ್ನು ನೋಡುವಾಗ ಬಹಳಷ್ಟು ಸಂತೋಷವಾಗುತ್ತದೆ. ತಂಡವು ಸತತವಾಗಿ ಪಂದ್ಯಗಳಲ್ಲಿ ಸೋಲನುಭವಿಸುತ್ತಿದ್ದರೆ, ನಮಗೆ ದೊಡ್ಡ ಸವಾಲು. ಆಟಗಾರರ ದೈಹಿಕ ಸಾಮರ್ಥ್ಯ ಮತ್ತು ಮನೋಬಲವನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮದಾಗಿ­ರುತ್ತದೆ’ ಎಂದು 53ರ ಹರೆಯದ ಬೆವರ್ಲಿ ಹೇಳುತ್ತಾರೆ.

‘ನಾನು ಕೆರಿಬಿಯನ್ ವಿಶ್ವವಿದ್ಯಾ­ಲಯ­ದಿಂದ ಕ್ರೀಡಾ ಫಿಸಿಯೋಥೆರಪಿ­ಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಇತ್ತು. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗಾಗಿ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳು ಸಾಕಷ್ಟು ಇವೆ. ಸುಮಾರು ಎರಡು ದಶಕಗಳಿಂದ ಕ್ರಿಕೆಟ್‌ ತಂಡದೊಂದಿಗೆ ಇದ್ದೇನೆ. ಸ್ಥಳೀಯ ತಂಡಗಳಿಗೂ ಕಾರ್ಯನಿರ್ವ­ಹಿಸಿದ್ದು,  ‘ಎ’ ತಂಡದೊಂದಿಗೆ ಬಹಳ ವರ್ಷಗಳಿಂದ ಇದ್ದೇನೆ. ಕಳೆದ ಬಾರಿ ತಂಡವು ಬಾಂಗ್ಲಾ ದೇಶಕ್ಕೆ ಹೋದಾಗಲೂ ನಾನು ಫಿಸಿಯೋ ಆಗಿದ್ದೆ’ ಎಂದು ಹೇಳುತ್ತಾರೆ.

‘ಒಂದು ಕಾಲದಲ್ಲಿ ವಿಂಡೀಸ್ ತಂಡವು ಅತ್ಯಂತ ಬಲಿಷ್ಠವಾಗಿತ್ತು. ಏರಿಳಿತಗಳು ಎಲ್ಲ ತಂಡಗಳು ಮತ್ತು ಎಲ್ಲರ ಜೀವನದಲ್ಲಿಯೂ ಬರುತ್ತದೆ. ಅದೇ ರೀತಿ ನಮ್ಮ ತಂಡವೂ ಕೆಲವು ವರ್ಷಗಳಿಂದ ಲಯ ಕಳೆದುಕೊಂಡಿತ್ತು. ಆದರೆ ಈಗ ಮತ್ತೆ ತನ್ನ  ಹಳೆಯ ಶಕ್ತಿಯನ್ನು ಮರಳಿ ಗಳಿಸಿಕೊಳ್ಳುತ್ತಿದೆ’ ಎಂದರು.

‘ನನಗೆ ಇಬ್ಬರು ಪುತ್ರರಿದ್ದು, ಕಾಲೇಜುಮಟ್ಟದ ಕ್ರಿಕೆಟ್‌ ಆಡುತ್ತಾರೆ. ತಮ್ಮ ಕೆಲಸವನ್ನು ತಾವೇ ಮಾಡಿ­ಕೊಳ್ಳುವುದರಿಂದ ನನಗೆ ಪ್ರವಾಸ ಮಾಡಲು ಯಾವುದೇ ತೊಂದರೆಯಿಲ್ಲ. ಕುಟುಂಬದ ಪ್ರೋತ್ಸಾಹ ಅಪಾರ­ವಾಗಿದೆ. ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇನೆ. ಕಪಿಲ್ ದೇವ್ ನನ್ನ ನೆಚ್ಚಿನ ಕ್ರಿಕೆಟಿಗ. ಸದ್ಯ ಇಲ್ಲಿಗೆ ಆಗಮಿಸಿರುವ ಭಾರತ ಎ ತಂಡದ ವೈದ್ಯಕೀಯ ತಂಡ ಮತ್ತು ಆಡಳಿತ ವರ್ಗವು ನಮಗೆ ಬಹಳಷ್ಟು ಸಹಾಯ ಮಾಡುತ್ತಿದೆ’ ಎಂದು ಕೃತಜ್ಞತೆ ಸಲ್ಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT