ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾರ್ಮೆಂಟ್ಸ್ ಉದ್ಯಮ ನಡೆಗೆ ಬಂಡವಾಳ ತಡೆ

ಅಧಿಕಾರಿಗಳ, ಬ್ಯಾಂಕುಗಳ ಸಹಕಾರದ ನಿರೀಕ್ಷೆಯಲ್ಲಿ ಉದ್ದಿಮೆಗಳು
Last Updated 26 ಜುಲೈ 2013, 4:45 IST
ಅಕ್ಷರ ಗಾತ್ರ

ದಾವಣಗೆರೆ: ದೇಶದಲ್ಲಿ ಗಾರ್ಮೆಂಟ್ಸ್ ಉದ್ಯಮಕ್ಕೆ ಅನುಕೂಲಕರ ವಾತಾವರಣವಿದ್ದರೂ, ಜಿಲ್ಲೆಯಲ್ಲಿ ಈ ಉದ್ಯಮ ತೆವಳುತ್ತ ಸಾಗುತ್ತಿದೆ.

ನಗರದ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಜವಳಿ ಉದ್ಯಾನದಲ್ಲಿ ಪ್ರಸ್ತುತ 3 ಗಾರ್ಮೆಂಟ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಘಟಕಗಳು ಪ್ರಾರಂಭವಾದರೆ ಸುಮಾರು 3 ಸಾವಿರ ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಆದರೆ, ಪ್ರಮುಖ ಸಮಸ್ಯೆಯಾಗಿರುವ ಹಣಕಾಸಿನ ವ್ಯವಸ್ಥೆಯನ್ನು ಬ್ಯಾಂಕುಗಳು ಪೂರೈಸಬೇಕಿದೆ.

`ಬ್ಯಾಂಕ್‌ಗಳಿಂದ ಗಾರ್ಮೆಂಟ್ಸ್ ಉದ್ಯಮಕ್ಕೆ ನಿರೀಕ್ಷಿತ ಸಾಲಸೌಲಭ್ಯ ದೊರೆತಿಲ್ಲ. ಅನೇಕ ಬಾರಿ ಬ್ಯಾಂಕುಗಳ ಸಭೆ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ' ಉದ್ಯಮಿ ಕರಿಬಸಪ್ಪ.

ನುರಿತ ಕಾರ್ಮಿಕರ ಕೊರತೆ: ದಾವಣಗೆರೆ ಕೈಮಗ್ಗ ಕ್ಷೇತ್ರದಲ್ಲಿ ಹೆಸರು ಮಾಡಿದ್ದರೂ, ನುರಿತ ಕಾರ್ಮಿಕರ ಕೊರತೆ ಕಾಣುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಅವುಗಳಲ್ಲಿ ಬಹತೇಕ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೊಸ ತಂತ್ರಜ್ಞಾನ ಹೊಂದಿರುವ ಗಾರ್ಮೆಂಟ್ಸ್‌ಗಳಲ್ಲಿ ತಾಂತ್ರಿಕ ನಿರ್ವಹಣೆಗೆ ಬೇರೆಡೆಯಿಂದ ಅಧಿಕ ಸಂಬಳ ನೀಡಿ ಕಾರ್ಮಿಕರನ್ನು ಕರೆತರಬೇಕು ಇದು ಕೂಡ ನಮಗೆ ಹೊರೆಯಾಗುತ್ತದೆ ಎನ್ನುತ್ತಾರೆ ಇಲ್ಲಿನ ಗಾರ್ಮೆಂಟ್ಸ್ ಮಾಲೀಕರು.

ವಾಷಿಂಗ್, ಪ್ರೆಸ್ಸಿಂಗ್ ಘಟಕ ಇಲ್ಲ: `ಗಾರ್ಮೆಂಟ್ಸ್ ಘಟಕಗಳಿಗೆ ಅವಶ್ಯಕವಾಗಿರುವ ವಾಷಿಂಗ್, ಪ್ರೆಸ್ಸಿಂಗ್ ಘಟಕ ಇಲ್ಲ. ಇದಕ್ಕಾಗಿ ನಾವು ಬೆಂಗಳೂರನ್ನು ಅವಲಂಬಿಸಿದ್ದೇವೆ. ಇದರಿಂದ ಹೆಚ್ಚುವರಿ  ಹೊರೆಯಾಗುತ್ತಿವೆ. ಸಂಬಂಧಪಟ್ಟ ಇಲಾಖೆ ಈ ಸಮಸ್ಯೆ ನಿವಾರಣೆಗೆ ಮುಂದಾಗಬೇಕು' ಎನ್ನುತ್ತಾರೆ ಇಲ್ಲಿನ ಗಾರ್ಮೆಂಟ್ಸ್ ಮಾಲೀಕರು.

ಗಾರ್ಮೆಂಟ್ಸ್ ಮಹಿಳೆಯರ ಸಮಸ್ಯೆ: ನಾವು ಸಾಮಾನ್ಯ ಹೋಲಿಗೆ ಯಂತ್ರಗಳಲ್ಲಿ ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದೆವು. ಇಲ್ಲಿನ ಆಧುನಿಕ ಯಂತ್ರಗಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಇಲ್ಲಿ ಬಹುತೇಕ ಮಹಿಳಾ ಉದ್ಯೋಗಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಬೀದಿ ದೀಪಗಳಿಲ್ಲದೇ ಇಲ್ಲಿ ಸಂಜೆ ಹೊತ್ತು ಮನೆಗೆ ತೆರಳಲು ಭಯದ ವಾತಾವರಣವಿದೆ. ಇಲ್ಲಿನ ಬಹುತೇಕ ಮಹಿಳೆಯರು 15 ಕಿ.ಮೀ ದೂರ ಊರುಗಳಿಂದ ಬರುವವರು ಇದ್ದಾರೆ. ಇವರಿಗೆಲ್ಲಾ ಸೂಕ್ತ ವಾಹನದ ಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ಉದ್ಯೋಗಿ ಜಯಮಾಲಾ.

ತ್ಯಾಜ್ಯ ವಿಲೇವಾರಿಗೆ ಕಸದ ತೊಟ್ಟಿಗಳಿಲ್ಲ. ಜತೆಗೆ, ಶೌಚಾಲಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಒಳಚರಂಡಿ ನಿರ್ಮಾಣ ಆಗದಿದ್ದರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.

ಉದ್ಯಮಿಗಳಿಗೂ ಕಾರ್ಯಾಗಾರ
ಕೌಶಲಪೂರ್ಣ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ. ಸದ್ಯ ನಾಲ್ಕು ತರಬೇತಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜವಳಿ ಉದ್ಯಮಿಗಳಿಗೂ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
- ಸುರೇಶ್ ಎನ್. ತಡಕನಹಳ್ಳಿ, ಸಹಾಯಕ ನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ.

ಸಾಲ ನೀಡದಿರುವುದು ಖಂಡನೀಯ
ದಶಕಗಳ ಹಿಂದೆ ದಾವಣಗೆರೆಯ ಗಾರ್ಮೆಂಟ್ಸ್ ಉದ್ಯಮ ಸ್ಥಗಿತಗೊಂಡ ನಂತರ ಇಲ್ಲಿನ ನುರಿತ ಕಾರ್ಮಿಕರು ಮಹಾರಾಷ್ಟ್ರಕ್ಕೆ ವಲಸೆ ಹೋದರು. ಹಾಗಾಗಿ, ಮಹಾರಾಷ್ಟ್ರದಲ್ಲಿ ಗಾರ್ಮೆಂಟ್ಸ್ ಉದ್ಯಮ ಯಶಸ್ವಿಯಾಯಿತು.

ಜಿಲ್ಲೆಯ ಗಾರ್ಮೆಂಟ್ಸ್‌ಗಳಿಗೆ ಬ್ಯಾಂಕುಗಳು ಹಣಕಾಸಿನ ನೆರವು ನೀಡುತ್ತಿಲ್ಲ ಎಂಬ ಮಾಹಿತಿ ಆಶ್ಚರ್ಯ ತರಿಸಿದೆ. ಕೇಂದ್ರ ಸರ್ಕಾರ ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ರೂ 1 ಕೋಟಿವರೆಗೂ ಧನಸಹಾಯ ನೀಡಲು ಆದೇಶ ನೀಡಿದೆ. ಆದರೂ, ಬ್ಯಾಂಕುಗಳು ಪಾಲಿಸುತ್ತಿಲ್ಲ ಎಂಬುದು ಖಂಡನೀಯ. 
-ಸುನೀಲ್ ಪಾಟೀಲ್ ಸದಸ್ಯ, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ,ರಫ್ತು ಉತ್ತೇಜನ ಮಂಡಳಿ.

ಇಲ್ಲಿನ ಜವಳಿ ಉದ್ಯಮಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಎಲ್ಲರೂ ಕೂಡ ಉತ್ಸುಕರಾಗಿರುವುದು ಉತ್ತಮ ಬೆಳವಣಿಗೆ. ಇಲ್ಲಿನ ಉದ್ಯಮಿಗಳ ಪ್ರಮುಖ ಬೇಡಿಕೆಯಾಗಿರುವ ಹಣಕಾಸಿನ ಬೇಡಿಕೆ ಈಡೇರಿಸಲು ಶೀಘ್ರ ಸಭೆ ಕರೆಯಲಾಗುವುದು. ಹೊಸ ಜವಳಿ ನೀತಿಯು ಉತ್ತಮ ಅಂಶಗಳನ್ನು ಒಳಗೊಂಡಿದೆ. ಸಂಪುಟದಲ್ಲಿ ಅನುಮೋದನೆ ನಂತರ ಹೊಸ ನೀತಿ ಅನುಷ್ಠಾನಕ್ಕೆ ಬರುತ್ತದೆ.
- ವಿಜಯ್‌ಕುಮಾರ್ ಬಿ.ನಿರಾಳೆ
ಯೋಜನಾ ನಿರ್ದೇಶಕ, ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT