ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್: ಮುನ್ನಡೆಯಲ್ಲಿ ಮಾರಿಸನ್, ರಾಮ್ಸೆ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಂಗ್ಲೆಂಡ್‌ನ ಜೇಮ್ಸ ಮಾರಿಸನ್ ಮತ್ತು ಸ್ಕಾಟ್ಲೆಂಡ್‌ನ ರಿಚೀ ರಾಮ್ಸೆ ಇಲ್ಲಿ ಆರಂಭವಾದ `ಹೀರೊ ಇಂಡಿಯನ್ ಓಪನ್~ ಗಾಲ್ಫ್ ಟೂರ್ನಿಯ ಮೊದಲ ಸುತ್ತಿನ ಬಳಿಕ ಜಂಟಿ ಮುನ್ನಡೆ ಸಾಧಿಸಿದ್ದಾರೆ.

ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಗುರುವಾರ ನಡೆದ ಮೊದಲ ಸುತ್ತಿನ ಕೊನೆಯಲ್ಲಿ ಇಬ್ಬರೂ 66 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಭಾರತದ ಭರವಸೆ ಎನಿಸಿರುವ ಶಿವ ಕಪೂರ್ (67) ಇತರ ಆರು ಸ್ಪರ್ಧಿಗಳ ಜೊತೆ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

`ಉತ್ತಮ ಆರಂಭ ಪಡೆಯಲು ಸಾಧ್ಯವಾಗಿರುವುದು ಸಂತಸದ ವಿಚಾರ. ಗಾಳಿ ಬೀಸುತ್ತಿದ್ದ ಕಾರಣ ಅಲ್ಪ ಸಮಸ್ಯೆ ಎದುರಾಯಿತು. ಆದರೂ ಮುನ್ನಡೆ ಸಾಧಿಸಿದ್ದೇನೆ. ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸನನ್ನದು~ ಎಂದು ರಾಮ್ಸೆ ಪ್ರತಿಕ್ರಿಯಿಸಿದರು.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಯುವ ಆಟಗಾರ ಗಗನ್‌ಜೀತ್ ಭುಲ್ಲರ್ (68) ಮತ್ತು ಭಾರತದ ಇನ್ನೊಬ್ಬ ಸ್ಪರ್ಧಿ ಶಂಕರ್ ದಾಸ್ (68) ಜಂಟಿ ಹತ್ತನೇ ಸ್ಥಾನದಲ್ಲಿದ್ದಾರೆ.

ಸ್ಥಳೀಯ ಸ್ಪರ್ಧಿಗಳಾದ ಅನಿರ್ಬನ್ ಲಾಹಿರಿ ಮತ್ತು ಸಿ. ಮುನಿಯಪ್ಪ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ಲಾಹಿರಿ ಬಹಳ ಪ್ರಯಾಸದಿಂದ 71 ಅವಕಾಶಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು. ಆದರೆ 2009ರ ಚಾಂಪಿಯನ್ ಮುನಿಯಪ್ಪ ಅವರಿಗೆ 78 ಸ್ಟ್ರೋಕ್‌ಗಳು ಬೇಕಾದವು.

ಮುಂದಿನ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಲಾಹಿರಿಗೆ ಪ್ರಶಸ್ತಿಯ ಕನಸು ಕಾಣಲು ಸಾಧ್ಯ. ಆದರೆ ಮುನಿಯಪ್ಪ ಅವರ ಪ್ರಶಸ್ತಿಯ ಕನಸು ಮೊದಲ ಸುತ್ತಿನಲ್ಲೇ ಹೆಚ್ಚುಕಡಿಮೆ ಅಸ್ತಮಿಸಿದೆ. ಬೆನ್ನುನೋವಿನಿಂದ ಬಳಲಿದ ಅವರು ನಿಖರ ಪ್ರದರ್ಶನ ನೀಡಲು ವಿಫಲರಾದರು.

ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ತುರುಸಿನ ಪೈಪೋಟಿ ಕಂಡುಬಂತು.

ಅಗ್ರ 13 ಆಟಗಾರರು ಕೇವಲ ಎರಡು ಸ್ಟ್ರೋಕ್‌ಗಳ ವ್ಯತ್ಯಾಸದಲ್ಲಿದ್ದಾರೆ. ಮಾತ್ರವಲ್ಲ, ಇತರ ಎಂಟು ಆಟಗಾರರು ಇವರಿಗಿಂತ ಒಂದು ಸ್ಟ್ರೋಕ್‌ನಿಂದ ಹಿಂದಿದ್ದಾರೆ. ಇದನ್ನು ಗಮನಿಸಿದರೆ ಮುಂದಿನ ಸುತ್ತುಗಳಲ್ಲಿ ಹೋರಾಟದ ಕಾವು ಮತ್ತಷ್ಟು ಹೆಚ್ಚಲಿದೆ.

`ಇಂಡಿಯನ್ ಓಪನ್ ಟೂರ್ನಿ ದೆಹಲಿಯಲ್ಲಿ ನಡೆದರೆ ಒತ್ತಡದಲ್ಲಿ ಆಡಬೇಕಾಗುತ್ತದೆ. ಏಕೆಂದರೆ ಹುಟ್ಟೂರಿನ ಕೋರ್ಸ್‌ನಲ್ಲಿ ಆಡುವಾಗ ಒತ್ತಡ ಸಹಜ. ಆದರೆ ಇಲ್ಲಿ ಒತ್ತಡವಿಲ್ಲದೆ ಆಡಬಹುದು~ ಎಂದು ಶಿವ ಕಪೂರ್ ಎರಡು ದಿನಗಳ ಹಿಂದೆ ಹೇಳಿದ್ದರು.

ಮೊದಲ ದಿನದಲ್ಲಿ ಅವರ ಪ್ರದರ್ಶನ ನೋಡಿದಾಗ ಈ ಮಾತು ನಿಜ ಎನಿಸಿತು. ಕೆಜಿಎ ಕೋರ್ಸ್‌ನಲ್ಲಿ ಕಪೂರ್ ದಿನದ ಆರಂಭದಿಂದ ಕೊನೆಯವರೆಗೂ ನಿರಾಳವಾಗಿ ಆಡಿದರು. ಭುಲ್ಲರ್ ಕೂಡಾ ಮೊದಲ ಸುತ್ತಿನ ಉದ್ದಕ್ಕೂ ಒಂದೇ ಲಯ ಕಾಪಾಡಿಕೊಂಡರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT