ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ ಮರಗಳ ಮಾರಣಹೋಮ

Last Updated 14 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಕಾರವಾರ: ‘ಕಾಡು ಉಳಿಸಿ ನಾಡು ಬೆಳೆಸಿ’, ‘ಹಸಿರು ನಮ್ಮೆಲ್ಲರ ಉಸಿರು’. ‘ಕಾಡಿದ್ದರೆ ನಾಡು’ ಹೀಗೆ ಅರಣ್ಯ ರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ನಾಮಫಲಕಗಳನ್ನು ಅಳವಡಿಸಿರು ವುದು ನಾಮಮಾತ್ರ ಎನ್ನುವಂತಾಗಿದೆ. ಏಕೆಂದರೆ ಸಾಮಾಜಿಕ ಅರಣ್ಯ ಇಲಾಖೆ ಕಚೇರಿಯಿಂದ ಕೂಗಳೆತೆಯ ದೂರದಲ್ಲಿರುವ ಪ್ರದೇಶದಲ್ಲಿ ಸಾಲುಸಾಲು ಗಾಳಿ ಮರ (ಕ್ಯಾಸುರಿನಾ)ಗಳು ದಿನನಿತ್ಯ ಕಳ್ಳರ ಪಾಲಾಗುತ್ತಿದೆ.

ಕೋಡಿಬಾಗ್‌ದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಅಧ್ಯಯನ ಕೇಂದ್ರ ಹಿಂಭಾಗದಲ್ಲಿರುವ ಕಡಲತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಾಳಿ ಮರಗಳಿವೆ. ಇವುಗಳಿಗೆ ಸೂಕ್ತ ರಕ್ಷಣೆ ಇಲ್ಲದೇ ಇರುವುದರಿಂದ ಒಂದೊಂದಾಗಿ ಕಳ್ಳರ ಪಾಲಾಗುತ್ತಿವೆ. ಈಗಾಗಲೇ ನೂರಾರು ಗಾಳಿ ಮರಗಳನ್ನು ಕಡಿದು ಸಾಗಿಸಲಾಗಿದೆ.

ಈ ಪ್ರದೇಶದಲ್ಲಿರುವ ಗಾಳಿ ಮರಗಳನ್ನು ಕಡಿದು ಸಾಗಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿರುವುದು ಅರಣ್ಯ ಇಲಾಖೆಯ ಗಮನಕ್ಕೆ ಬಂದಿರಲಿಕ್ಕಿಲ್ಲ. ಏಕೆಂದರೆ ಈ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುವುದು ತೀರಾ ಕಡಿಮೆ. ಹೀಗಾಗಿ ಯಾರ ಭಯವಿಲ್ಲದೆ ಇಲ್ಲಿರುವ ಮರಗಳನ್ನು ಕಡಿದು ಸಾಗಿಸುವ ಕಾಯಕ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ.

ಇದು ನಿರ್ಜನ ಪ್ರದೇಶವಾಗಿರುವುದರಿಂದ ಇಲ್ಲಿ ಜನ ಸಂಚಾರವೂ ಕಡಿಮೆ. ರಾತ್ರಿ ಮರಗಳನ್ನು ಕಡಿಯುವ ಕಳ್ಳರು ಹಗಲು ಹೊತ್ತಿನಲ್ಲಿ ಅವುಗಳನ್ನು ಚಿಕ್ಕಚಿಕ್ಕ ತುಂಡುಗಳನ್ನಾಗಿ ಮಾಡಿ ಸಾಗಿಸುತ್ತಾರೆ.ಕೇರಳ ರಾಜ್ಯದಿಂದ ಬರುವ ಮೀನುಗಾರು ಸುರ್ಮಾ ಮೀನು ಬೇಟೆಯಾಡಲು ಗಾಳಿ ಮರಗಳನ್ನು ಬಳಸುವುದರಿಂದ ಅವರಿಗೆ ಮರಗಳನ್ನು ಸಾಗಿಸುವ ಏಜೆಂಟರು ನಗರದಲ್ಲಿ ಹುಟ್ಟಿಕೊಂಡಿದ್ದಾರೆ.

ದೋಣಿಯಲ್ಲಿ ಮರದ ಟೊಂಗೆಗಳನ್ನು ಹೇರಿಕೊಂಡು ಆಳ ಸಮುದ್ರಕ್ಕೆ ಸಾಗಿಸುವ ಮೀನುಗಾರರು ಮರದ ಟೊಂಗೆಗಳನ್ನು ನೀರಿನಲ್ಲಿ ಕೊಳೆಯಲು ಬಿಡುತ್ತಾರೆ. ಮರದ ಟೊಂಗೆ ಹಾಗೂ ಎಲೆ ಕೊಳತೆ ವಾಸನೆಗೆ ಮೀನುಗಳು ಅಲ್ಲಿ ಬರುವುದರಿಂದ ಮೀನಿನ ಬೇಟೆ ಸುಲಭವಾಗುತ್ತದೆ. ಈ ಕಾರಣಕ್ಕಾಗಿ ನೂರಾರು ಮರಗಳನ್ನು ಕಡಿಯಲಾಗುತ್ತಿದೆ. ಅರಣ್ಯ ಇಲಾಖೆ ಅಕ್ಕಪಕ್ಕದಲ್ಲೇ ಇವು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT