ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ-ಮಳೆ: ಸಿಡಿಲಿಗೆ ಮಹಿಳೆ ಬಲಿ, ಮನೆಗಳಿಗೆ ಹಾನಿ

Last Updated 10 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಬುಧವಾರ ಮಧ್ಯರಾತ್ರಿ ಮತ್ತು ಗುರುವಾರ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ಗುಲ್ಬರ್ಗ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮತ್ತು ವಿಜಾಪುರ ಜಿಲ್ಲೆಯ ಧೂಳಖೇಡ ಗ್ರಾಮದಲ್ಲಿ ಮತ್ತು ಬಳ್ಳಾರಿ ತಾಲ್ಲೂಕಿನಲ್ಲಿ ಅನೇಕ ಮನೆಗಳ ಛಾವಣಿಗಳು ಹಾರಿ ಹೋಗಿವೆ.

ಗುಲ್ಬರ್ಗ ವರದಿ: ಹೈದರಾಬಾದ್ ಕರ್ನಾಟಕ ಭಾಗದ ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಯ ಲಿಂಗಸುಗೂರು ಮೊದಲಾದ ಕಡೆ ಗುರುವಾರ ಮಳೆಯಾಗಿದೆ.

ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನ ಮದನ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಿಡಿಲು ಬಡಿದು ಅಮೀನ್ ಸಾಹೇಬ ತುಗನೂರ ಎಂಬುವವರ ಪತ್ನಿ ಆಸ್ಮಾ (48) ಮೃತಪಟ್ಟಿದ್ದಾರೆ. ಶೇಂಗಾ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆ ಬಂದಿದ್ದು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ.

ಗುಲ್ಬರ್ಗ ನಗರದಲ್ಲಿ ಮಧ್ಯಾಹ್ನ ಸಣ್ಣದಾಗಿ ಮಳೆ ಸುರಿಯಿತು. ಬೀದರ್ ನಗರದಲ್ಲಿ ಸಂಜೆ ಸುಮಾರು ಒಂದೂವರೆ ಗಂಟೆ ಕಾಲ ಧಾರಾಕಾರವಾಗಿ ಮಳೆ ಸುರಿದು ಉರಿ ಬಿಸಿಲು ಮತ್ತು ತೀವ್ರ ಧಗೆಯಿಂದ ಬಸವಳಿದ್ದ ಜನತೆಗೆ ತಂಪಿನ ವಾತಾವರಣ ನೀಡಿತು.

ಬೀದರ್ ಜಿಲ್ಲೆಯ ಔರಾದ್, ಬಸವಕಲ್ಯಾಣ, ಹುಮ್ನಾಬಾದ್ ತಾಲ್ಲೂಕಿನ ವಿವಿಧೆಡೆಯೂ ಮಳೆ ಸುರಿಯಿತು.

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ) ವರದಿ: ತಾಲ್ಲೂಕಿನಾದ್ಯಂತ ಬುಧವಾರ ಮಧ್ಯರಾತ್ರಿ ಗುಡುಗು- ಸಿಡಿಲು ಮತ್ತು ಆಲಿಕಲ್ಲು ಸಹಿತ ಭಾರೀ ಮಳೆ ಬಿದ್ದಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದೆ.

ಬೆಳಗಿನ ಜಾವ 3ಕ್ಕೆ ಆರಂಭವಾದ ಮಳೆ ಸುಮಾರು 3 ಗಂಟೆ ಕಾಲ ಸತತವಾಗಿ ಸುರಿದಿದೆ. ತಾಲ್ಲೂಕು ಆಡಳಿತದ ಪ್ರಕಾರ ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 57.4 ಮಿ.ಮೀ, ರಾಯಾಪುರ - 46.3 ಮಿ.ಮೀ, ಬಿ.ಜಿ.ಕೆರೆ - 80.1 ಮಿ.ಮೀ, ರಾಂಪುರ -75.2 ಮಿಮೀ ಹಾಗೂ ದೇವಸಮುದ್ರ ಕೇಂದ್ರದಲ್ಲಿ 47.4 ಮಿಮೀ ಮಳೆ ದಾಖಲಾಗಿದೆ.

ದೇವಸಮುದ್ರ ಹೋಬಳಿಯ ದಡಗೂರಿನಲ್ಲಿ 2, ರಾಂಪುರ, ಬೊಮ್ಮಲಿಂಗೇನಹಳ್ಳಿ, ಕೆ.ಕೆ. ಪುರದಲ್ಲಿ ತಲಾ ಒಂದು ಮನೆಗಳು ಭಾಗಶಃ ಹಾನಿಗೀಡಾಗಿವೆ. ಓಬಳಾಪುರದಲ್ಲಿ ಒಂದೂವರೆ ಎಕರೆ ಬಾಳೆತೋಟ ಹಾನಿಗೀಡಾಗಿದೆ. ಇಲ್ಲಿ ಮರ ಬಿದ್ದು ಟ್ರ್ಯಾಕ್ಟರ್ ಜಖಂಗೊಂಡಿದೆ.

ಬಿ.ಜಿ. ಕೆರೆ ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ಬಾಬು ಜಗಜೀವನ್‌ರಾಂ ವಸತಿ ಯೋಜನೆ ಅಡಿ ನಿರ್ಮಿಸಿರುವ ಮಹಾಂತೇಶ್, ಜಿ. ಮಾರಣ್ಣ, ಬಸವರಾಜ್, ಮಾರಣ್ಣ, ಉಮೇಶ್ ಎಂಬುವವರಿಗೆ ಸೇರಿದ ಒಟ್ಟು ಐದು ಮನೆಗಳ ಛಾವಣಿ ಗಾಳಿ-ಮಳೆಗೆ ಹಾರಿಹೋಗಿವೆ. ಈ ಪೈಕಿ ಮಹಾಂತೇಶ್ ಅವರ ಮನೆಯಲ್ಲಿದ್ದ 40 ಚೀಲದಷ್ಟು ಜೋಳ ಮಳೆ ನೀರಿನಲ್ಲಿ ನೆನೆದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಇದೇ ಬಡಾವಣೆಯಲ್ಲಿ ಬಂಜೆಮ್ಮ ಅವರ ಮನೆ ಮೇಲೆ ಬೇವಿನಮರ ಬಿದ್ದು ಛಾವಣಿಗೆ ಹಾನಿಯಾಗಿದೆ.

ಬಿ.ಜಿ. ಕೆರೆ ಮಧ್ಯಭಾಗದ ಹಳ್ಳದಿಂದ ಸಮೀಪದ ತೋಟಗಳಿಗೆ ನೀರು ನುಗ್ಗಿ ಹಲವಾರು ಎಕರೆ ತೋಟ ಜಲಾವೃತವಾಗಿದೆ. ಇಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆ ಬಳಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಈ ಭಾಗದಲ್ಲಿ ನೀರಾವರಿ ಜಮೀನುಗಳಲ್ಲಿ ನಾಟಿ ಮಾಡಿದ್ದ ಬೇಸಗೆ ಈರುಳ್ಳಿ ಸಸಿಗಳು ಹಲವೆಡೆ ಕೊಚ್ಚಿ ಹೋಗಿದೆ.

ರ‌್ಯಾವಲಕುಂಟೆಯಲ್ಲಿ ಸಣ್ಣಬೋರಮ್ಮ ಅವರಿಗೆ ಸೇರಿದ ರೇಷ್ಮೆಶೆಡ್ ಪೂರ್ಣ ಹಾನಿಗೊಳಗಾಗಿದೆ. ಈ ಭಾಗದ ಹಳ್ಳಗಳು ತುಂಬಿ ಹರಿದಿದ್ದು, ದುಪ್ಪಿ ಕೆರೆ ಕೋಡಿ ಬಿದ್ದಿದೆ, ಮುತ್ತಿಗಾರಹಳ್ಳಿ ಕೆರೆಗೆ ವ್ಯಾಪಕ ನೀರು ಹರಿದು ಬಂದಿದೆ.

ರಾಂಪುರ ಭಾಗದಲ್ಲಿ 34, ಮೊಳಕಾಲ್ಮುರಿನಲ್ಲಿ 6 ಮತ್ತು ಬಿ.ಜಿ. ಕೆರೆಯಲ್ಲಿ 10 ಸೇರಿದಂತೆ ಒಟ್ಟು 49 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ತಿಳಿಸಿದ್ದಾರೆ.
 

ಚಡಚಣ (ವಿಜಾಪುರ ಜಿಲ್ಲೆ) ವರದಿ: ಧೂಳಖೇಡ  ಗ್ರಾಮದಲ್ಲಿ ಗುರುವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ಒಂದು ಮೊಬೈಲ್ ಟವರ್ ನೆಲಕ್ಕುರುಳಿದೆ. ಇದಲ್ಲದೇ  ಕೆಲವು ಮನೆಗಳ ಮೇಲ್ಛಾವಣಿ (ತಗಡು)ಗಳು ಹಾರಿ ಹೋಗಿವೆ. ಅನೇಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಅಪಾರ ನಷ್ಟ ಉಂಟಾಗಿದೆ.

ಯಾವುದೇ ಜೀವಹಾನಿಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಕಾರ್ಮಿಕರಿಗೆ ತಗಡು ತಗುಲಿ ಚಿಕ್ಕಪುಟ್ಟ ಗಾಯಗಳಾಗಿವೆ.

ಧೂಳಖೇಡ, ಭೀಮಾಶಂಕರನಗರ, ಚಣೆಗಾಂವ, ಅಣಚಿ, ಹಲಸಂಗಿ, ಮರಗೂರ ಮತ್ತಿತರರ ಕಡೆ ಬೀಸಿದ ಭಾರಿ ದೂಳು ಮಿಶ್ರಿತ್ ಗಾಳಿ ಒಮ್ಮಿದೊಂಮ್ಮೆಲೇ ಗ್ರಾಮಗಳನ್ನು ವ್ಯಾಪಿಸಿಕೊಂಡಾಗ ಜನ ಭಯಭೀತರಾಗಿ ಆಶ್ರಯ ಪಡೆಯಲು ಹರಸಾಹಸ ಪಡಬೇಕಾಯಿತು.

ಬಳ್ಳಾರಿ ವರದಿ: ಬಳ್ಳಾರಿ ತಾಲ್ಲೂಕಿನಾದ್ಯಂತ ಬುಧವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಒಟ್ಟು 3 ಸೆಂ.ಮೀ. ಮಳೆಯಾಗಿದೆ.

ಸೋಮಸಮುದ್ರ ಗ್ರಾಮದಲ್ಲಿ ಆಶ್ರಯ ಮನೆಗಳ ಹೆಂಚು ಮತ್ತು ಗುಡಿಸಲುಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಗ್ರಾಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT