ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ, ಮಳೆಗೆ ಮರಗಳು ಧರೆಗೆ

Last Updated 16 ಜುಲೈ 2013, 21:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಹಲವೆಡೆ ಮಂಗಳವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಮರಗಳು ಧರೆಗುರುಳಿವೆ. ಹದಗೆಟ್ಟ ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾದರೆ, ಮತ್ತೊಂದೆಡೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನ ತೀವ್ರ ತೊಂದರೆ ಅನುಭವಿಸಿದರು.

ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ವಿಜಯನಗರ 18ನೇ ಅಡ್ಡರಸ್ತೆ, ಇಂದಿರಾನಗರ ಇಎಸ್‌ಐ ಆಸ್ಪತ್ರೆ, ಬಿಟಿಎಂ ಬಡಾವಣೆ, ಜೆ.ಪಿನಗರ ಮೊದಲ ಹಂತ, ವಿಜಯನಗರ ಎನ್.ಸಿ.ಲೇಔಟ್, ಮಲ್ಲೇಶ್ವರ 7ನೇ ಅಡ್ಡರಸ್ತೆ, ಪದ್ಮನಾಭನಗರ, ನಾಗರಭಾವಿ ಎಂಜಿಎಫ್ ಲೇಔಟ್, ದೊಮ್ಮಲೂರು 4ನೇ ಅಡ್ಡರಸ್ತೆ ಸೇರಿದಂತೆ ಹಲವೆಡೆ 11ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ನಿಯಂತ್ರಣಾ ಕಚೇರಿಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.

ನಗರದಲ್ಲಿ 8 ಮಿ.ಮೀ ಮಳೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ 2.5 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದೇ ಸಮನೆ ಸುರಿದ ಮಳೆಗೆ ನಗರದ ವಿವಿಧ ರಸ್ತೆಗಳು ಜಲಾವೃತಗೊಂಡವು. ಕಬ್ಬನ್ ಉದ್ಯಾನ ರಸ್ತೆ, ಬಸವೇಶ್ವರ ವೃತ್ತ, ಟ್ರಿನಿಟಿ ವೃತ್ತ, ಫ್ರೇಜರ್ ಟೌನ್, ರಿಚ್ಮಂಡ್, ಬನಶಂಕರಿ, ನಾಯಂಡಹಳ್ಳಿ, ವಿಜಯನಗರ, ಮೈಸೂರು ರಸ್ತೆ  ಸೇರಿದಂತೆ ಹಲವೆಡೆ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದ ಕೆಲ ಕಾಲ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಯಿತು.

ಜೀವನಹಳ್ಳಿಯ ಮೇಲು ಸೇತುವೆಯ ಕೆಳಭಾಗದಲ್ಲಿ ನೀರು ನಿಂತ ಪರಿಣಾಮ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಆನಂತರ ಪಾಲಿಕೆ ಮತ್ತು ಜಲಮಂಡಳಿಯ ಎಂಜಿನಿಯರ್‌ಗಳು ಕಾರ್ಯಾಚರಣೆ ನಡೆಸಿ ಸಂಚಾರ ಸುಗಮಗೊಳಿಸಿದರು. ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ತೀವ್ರ  ತೊಂದರೆ ಅನುಭವಿಸುವಂತಾಯಿತು. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT