ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡವು ಬುಡ ಮೇಲಾಗಿದೆ

Last Updated 27 ಜುಲೈ 2012, 19:30 IST
ಅಕ್ಷರ ಗಾತ್ರ

`ಛಡಿ ಛಂ ಛಂ; ವಿದ್ಯೆ ಘಂ ಘಂ~ ಅನ್ನುವುದು ನಾವು ಶಾಲೆ ಓದುತ್ತಿದ್ದಾಗ ಚಾಲ್ತಿಯಲ್ಲಿದ್ದ ಮಾತು. `ಮೇಸ್ಟ್ರೆ ಇವನದು ಅತಿಯಾಗಿದೆ. ಒಂದು ನಾಲ್ಕು ಹೆಚ್ಚಿಗೆ ಬಾರಿಸಿ~ ಅಂತ ಹೇಳೋದಕ್ಕೆ ಮಾತ್ರ ಶಾಲೆ ಕಡೆ ತಲೆ ಹಾಕುತ್ತಿದ್ದ ಪಾಲಕರು, ಈಗ ಶಿಕ್ಷಕರು ಬೈದಿದ್ದು ಗೊತ್ತಾದರೂ ಸಾಕು `ನಾವೇ ನಮ್ಮ ಮಕ್ಳಿಗೆ ಏನೂ ಅನ್ನೊಲ್ಲ.
 
ನಿಮ್ಮದೇನ್ರಿ? ಅವನು ಕಲೀಲಿಲ್ಲ ಅಂದ್ರೆ ಕತ್ತೆ ಬಾಲ ಕುದುರೆ ಜುಟ್ಟು. ನೀವು ನಿಮ್ಮ ಪಾಡಿಗಿರಿ ಅಷ್ಟೇ~ ಅಂತ ದಬಾಯಿಸೋಕೆ ಶಾಲೆಗೆ ಬರ‌್ತಿದಾರೆ. ಸಾಯೋ ಹಾಗೆ ಹೊಡೆದರೂ ಶಾಲೆ ಬಿಡುತ್ತಿದ್ದರೇ ಹೊರತು ಸಾಯುತ್ತಿರಲಿಲ್ಲ ಆಗಿನ ಮಕ್ಕಳು. ಅವಮಾನ ತಾಳದೆ ಶಿಕ್ಷಕನ ಹೆಸರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತಿವೆ ಇವತ್ತಿನ ಮಕ್ಕಳು. ಕಾಲ ಸೂಕ್ಷ್ಮವಾಗಿದೆ. ಹೊಂದಿಕೊಳ್ಳೋದಿಕ್ಕೂ ಕಾಲ ಬೇಕಾಗಿದೆ.

ಕೈಕಾಲು ಕಟ್ಟಿ ಜಂತಿಗೆ ತೂಗು ಹಾಕುವುದು; ಜಂತಿಯಿಂದ ಇಳಿಬಿದ್ದ ಹಗ್ಗಕ್ಕೆ ಜೋತು ಬೀಳಿಸಿ ಕೆಳಗೆ ಡಬಗೊಳ್ಳಿ ಮುಳ್ಳುಗಳನ್ನು ಹಾಸುವುದು; ತೊಗರಿ ಕಟಿಗೆಯಿಂದ ಬಾಸುಂಡೆ ಬರುವಂತೆ ಬಾರಿಸುವುದು; ಕಣ್ಣಲ್ಲಿ ಖಾರಪುಡಿ ಹಾಕುವುದು; ಬಟ್ಟೆ ಬಿಚ್ಚಿ ಬಿಸಿಲಲ್ಲಿ ನಿಲ್ಲಿಸುವುದು. ಎಷ್ಟೊಂದು ಶಿಕ್ಷೆಗಳಿದ್ದವು ಮುಂಚೆ. ಪುಣ್ಯವಶಾತ್ ನಮ್ಮ ಕಾಲಕ್ಕೆ ಬೇರೆಯವು ಚಾಲ್ತಿಗೆ ಬಂದಿದ್ದವು. ನಮಗೆ ಪ್ರೈಮರಿಯಲ್ಲಿ ಒಬ್ರು ಡ್ರಿಲ್ ಮಾಸ್ಟರ್ ಇದ್ದರು.

ಒಂದೋ ಅವರ ಕೈಯಲ್ಲಿ ಬೆತ್ತ ಮುರಿಬೇಕು ಇಲ್ಲಾ ಹುಡುಗನ ತೊಡೆಗುಂಟ ಕಾಲುವೆ ಹರೀಬೇಕು. `ಭಯದ ಮಗಳೇ ಭಕ್ತಿ, ಭಕ್ತಿಯ ಮಗಳೇ ಶ್ರದ್ಧೆ; ಶ್ರದ್ಧೆಯ ಮಗಳೇ ವಿದ್ಯೆ~ ಅನ್ನುತ್ತಿದ್ದರವರು. ಹೈಸ್ಕೂಲಲ್ಲಿ ಒಬ್ಬರು ಗಣಿತ ಶಿಕ್ಷಕರಿದ್ದರು. ಅವರು ಯಾರಿಗೂ ಹೊಡೆಯುತ್ತಿರಲಿಲ್ಲ.

ಹುಡುಗರು ಅವರ ಹೆಸರು ಕೇಳಿದರೇನೇ ಉಚ್ಚೆ ಹೊಯ್ದುಕೊಳ್ಳುತಿದ್ದರು. ಕಾರಣ ಅವರು ತುಂಬಿದ ತರಗತಿಯಲ್ಲಿ ಕಣ್ಣೀರು ಕೆನ್ನೆಗಿಳಿಯುವಂತೆ ಅವಮಾನ ಮಾಡುತ್ತಿದ್ದರು. ಪ್ರೈಮರಿಯಲ್ಲಿ ಮತ್ತೊಬ್ಬ ಮೇಷ್ಟರಿದ್ದರು. ಅಪಾರ ಮಾತೃಹದಯಿ.

ಮಕ್ಕಳ ಪ್ರೇಮಿ. ಅವರ ಪ್ರೀತಿಯನ್ನು ಸಲಿಗೆಯಾಗಿ ಸ್ವೀಕರಿಸಿದ ಮಕ್ಕಳು ಅವರ ಕ್ಲಾಸಿನಲ್ಲಿ ಹೋ ಅಂತ ಗಲಾಟೆ ಮಾಡುತ್ತಿದ್ದರು, ಅವರ ಧೋತ್ರ ಹಿಡಿದೆಳೆಯುತ್ತಿದ್ದರು. ಶಿಕ್ಷೆ-ಅವಮಾನ-ಪ್ರೀತಿಗಳನ್ನು ಬಿಂಬಿಸುವ ಈ ಮೂರು ಮಾದರಿಗಳಿವೆ. ಯಾವುದೂ ಅತಿಯಾಗಬಾರದಷ್ಟೇ.

ಎಲ್ಲವನ್ನೂ ಶಿಕ್ಷೆ ಮತ್ತು ಅವಮಾನದಿಂದ ಸಾಧಿಸಬಹುದೆಂದು ನಂಬಿಕೆ ಒಂದು ಅತಿಯಾದರೆ; ಬರೀ ಪ್ರೀತಿಯಿಂದಲೇ ಮಗುವನ್ನು ಗೆದ್ದು ಕಲಿಸಬೇಕು ಎಂಬ ಹೇರಿಕೆಯೂ ಮತ್ತೊಂದು ಅತಿಯಾಗಿದೆ. ನಾವಿಂದು ಸಮಯ ಮತ್ತು ಸಮುದಾಯಗಳ ನಾಡಿಮಿಡಿತಕ್ಕನುಗುನವಾಗಿ ಬೋಧನೆ ಬಯಸುವ ಕಾರ್ಯತಂತ್ರವನ್ನು ರೂಪಿಸಿಕೊಳ್ಳುವ ಜಾಣ್ಮೆ ರೂಢಿಸಿಕೊಳ್ಳಬೇಕಾಗಿದೆ.

ಇತ್ತೀಚೆಗೆ ಶಾಂತಿನಿಕೇತನದಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿದಳೆಂದು ಒದ್ದೆ ಹಾಸಿಗೆಯನ್ನು ಅವಳ ಬಾಯಲ್ಲಿ ಹಿಂಡಿದ ಶಿಕ್ಷಕಿಯ ಪ್ರಕರಣ ದೇಶದಲ್ಲಿ ಕಲ್ಲೋಲವನ್ನೆಬ್ಬಿಸಿತ್ತು. ಇತ್ತ ಚೆನ್ನೈನಲ್ಲಿ  ನಿಮ್ಮ ಹುಡುಗ ಶಾಲೆಗೆ ಸರಿಯಾಗಿ ಬರ‌್ತಿಲ್ಲ  ಅಂತ ಪಾಲಕರಿಗೆ ದೂರಿದ್ದಕ್ಕೆ ಆ ಹುಡುಗ ತನ್ನ ಶಿಕ್ಷಕಿಯನ್ನು ಶಾಲಾ ಕೊಠಡಿಯಲ್ಲೆ ಇರಿದು ಸಾಯಿಸಿದ ಘಟನೆ ವರದಿಯಾಯಿತು.

ಇವೆರಡೂ ಘಟನೆಗಳ ಹಿಂದೆ ಬದಲಾದ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಂದರ್ಭಗಳ ಸ್ಥಿತ್ಯಂತರದ ನೆರಳಿರುವುದನ್ನು ನಾವು ಗುರುತಿಸಬಹುದು.

ಮುಂಚೆ ಕೂಡು ಕುಟುಂಬಗಳು; ವರ್ಷಕ್ಕೊಂದು ಬಾಣಂತನಗಳು; ಮನೆ ತುಂಬಾ ಮಕ್ಕಳು, ಅಜ್ಜ-ಅಜ್ಜಿಯ ಯಜಮಾನಿಕೆ ಹಾಗೂ ಶಿಕ್ಷಣವು ಸನ್ನಡತೆಯ ಸಂಸ್ಕಾರವನ್ನು ಕಲಿಸುವ ಸಂಸ್ಥೆ ಎಂಬ ನಂಬಿಕೆಯ ವಾತಾವರಣವಿತ್ತು. ಶಿಕ್ಷಕರು ಕೂಡ  ತಮ್ಮ ಅತ್ಯಂತ ಕಡಿಮೆ ಸಂಬಳದಲ್ಲೂ- ತಮ್ಮ ವೃತ್ತಿಯನ್ನು ಒಂದು ಮನೋಧರ್ಮವಾಗಿ ಪಾಲಿಸುತ್ತ ತಮ್ಮ ನೈತಿಕ ವ್ಯಕ್ತಿತ್ವವನ್ನು ಅತ್ಯಂತ ಎತ್ತರದ ಸ್ಥಿತಿಯಲ್ಲಿ ಕಾಪಾಡಿಕೊಂಡು ಬರುತ್ತಿದ್ದರು.

ತಮ್ಮ ಮಕ್ಕಳನ್ನೂ ಸರ್ಕಾರಿ ಶಾಲೆಗೆ ಕರೆದೊಯ್ದು ಇತರ ಮಕ್ಕಳಿಗಿಂತ ಅವು ಒಂದು ಗುಲಗುಂಜಿ ಕೂಡ ಹೆಚ್ಚಲ್ಲ ಎಂಬ ಭಾವದಲ್ಲಿ ಅವಕ್ಕೂ ಹಿಗ್ಗಾ ಮುಗ್ಗಾ ಬಾರಿಸುತ್ತ ಕಲಿಸುತ್ತಿದ್ದರು. 

 ನಂತರ ಕೂಡು ಕುಟುಂಬಗಳ ಕಾಲ ಕರಗಿ ಬಿಡಿ ಕುಟುಂಬಗಳು ಬಂದವು. ಮನೆ ತುಂಬ ಮಕ್ಕಳು ಹೋಗಿ ಮನೆಯಲ್ಲಿ ಮೂರು ನಾಲ್ಕು ಮಕ್ಕಳು ಉಳಿದವು. ಮನೆಯ ಯಜಮಾನಿಕೆ ಅಜ್ಜನಿಂದ ಅಪ್ಪನ ಕೈಗೆ ಬಂತು. ಅಪ್ಪ ಸಂಸಾರದ ಬಂಡಿಯನ್ನು ಏಕಾಂಗಿಯಾಗಿ ಎಳೆಯುತ್ತ ಸುಸ್ತಾಗತೊಡಗಿದ.
 
ಮಗ/ಮಗಳಿಗೆ ಎಂಥದೋ ಒಂದು ಸರ್ಕಾರಿ ನೌಕರಿ ಅಂತಾದರೆ ತನ್ನ ಹೊರೆ ಕಡಿಮೆಯಾಗುವುದರಿಂದ ಶಿಕ್ಷಣವನ್ನು ಕೌಟುಂಬಿಕ ಅಗತ್ಯ ಪೂರೈಸಲು ನೆರವಾಗುವ ಸಾಧನದಂತೆ ನೋಡುವುದು ಶುರುವಾಯಿತು. ಆದರೆ ಶಿಕ್ಷಕರು ಹಳ್ಳಿಗಳಿಂದ ದೂರ ಸರಿದರು. ನಿಧಾನ ವಾಗಿ ಮನೆಪಾಠದ ಸಂಸ್ಕೃತಿ ಆರಂಭವಾಯಿತು. ವಿದ್ಯಾಥಿ-ಶಿಕ್ಷಕ ಮತ್ತು ಪಾಲಕರ ನಡುವೆ ಮೊದಲಿನಷ್ಟಲ್ಲದಿದ್ದರೂ ಗೌರವಯುತ ಸಂಬಂಧವಂತೂ ಇದ್ದೇ ಇತ್ತು.

ಈಗ ಆ ಸ್ಥಿತಿಯೂ ಬದಲಾಗಿ ಅತ್ಯಂತ ಚಿಕ್ಕ ಕುಟುಂಬಗಳು ಬಂದಿವೆ. ಅದರಲ್ಲಿ ಅಜ್ಜ-ಅಜ್ಜಿಯೇ ಇಲ್ಲ. ಅಪ್ಪ-ಅಮ್ಮ ಹೆಚ್ಚೆಂದರೆ ಇಬ್ಬರು ಮಕ್ಕಳು. ಬೆಳಿಗ್ಗೆ ತಿಂಡಿಗೆ ಏನ್ ಮಾಡ್ಲಿ ಪುಟ್ಟಾ ಎನ್ನುವ ಅಮ್ಮ, ನಿಂಗೆ ಯಾವ ಕಲರ್ ಡ್ರೆಸ್ ಬೇಕು ನೀನೇ ಹೇಳು ಅನ್ನುವ ಅಪ್ಪ, ಐಸ್‌ಕ್ರೀಮಿನ ಹೊದಿಕೆ ಹಾಳೆಯನ್ನು ತೆಗೆದುಕೊಟ್ಟದ್ದಕ್ಕೇ ಅದು ಬೇಡ ನಂಗೆ ಬೇರೆಯದೇ ಬೇಕು ರಚ್ಚೆ ಹಿಡಿಯುವ ಮಗು- ಹೀಗೆ ಚಿತ್ರ ಬದಲಾಗಿದೆ.
 
ಇಬ್ಬರೂ ದುಡಿದು ದಣಿದು ಮನೆ ಸೇರುವ ಈಗಿನ ಅಪ್ಪ-ಅಮ್ಮಂದಿರಿಗೆ ಮಗುವೇ ಸರ್ವಸ್ವ. ಯಾವ ಮನೆ ಹೊಕ್ಕರೂ ಡಾಕ್ಟರ್, ಇಂಜಿನಿಯರ್, ಐಎಎಸ್, ಕೆಎಎಸ್ ಜಪವೇ ಕೇಳಿಸುತ್ತಿದೆ. ಶಿಕ್ಷಕರೂ ಈ ಟ್ರೆಂಡ್‌ಗೆ ಹೊರತಾಗಿಲ್ಲ.

ಅವರೆಲ್ಲ ಬಹುಪಾಲು ನಗರವಾಸಿಗಳಾಗಿದ್ದಾರೆ. ಮಗುವಿಗೂ ಮನವರಿಕೆಯಾಗಿದೆ ನಾನೇ ಮನೆಯ ಯಜಮಾನ ಅಂತ. ಹಾಗಾಗಿ ಮುಂಚಿನ ಮಕ್ಕಳಲ್ಲಿದ್ದ ಭಯ, ನಂತರದ ಮಕ್ಕಳಲ್ಲಿದ್ದ ವಿನಯ ಮಾಯವಾಗಿ ಈಗಿನ ಮಕ್ಕಳಲ್ಲಿ ಅಹಂಭಾವ ತುಂಬಿಕೊಳ್ಳತೊಡಗಿದೆ.
 
ಶಿಕ್ಷಣವು ಉದ್ಯಮ ಸ್ವರೂಪ ಪಡೆದ ಪರಿಣಾಮವಾಗಿ ಪಾಲಕ-ಬಾಲಕರೆಂಬ ಗ್ರಾಹಕರನ್ನು ಶತಾಯಗತಾಯ ತಮ್ಮ ಅಂಗಡಿಗೆ ಸೆಳೆದು ಲಾಭ ಮಾಡಿಕೊಳ್ಳುವ ದಂಧೆ ಶುರುವಾಗಿದೆ. ಉದ್ಯಮವಾದ್ದರಿಂದಲೇ ಶಿಕ್ಷಣದ ಬಗ್ಗೆ ಸಾರ್ವಜನಿಕ ಚರ್ಚೆ ಶುರುವಾಗಿದೆ. ಪರಿಣಾಮವಾಗಿ ಮಗು ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ.

ನಗ್ತಾ ನಗ್ತಾ ಕಲಿಸಬೇಕಾದ್ದರಿಂದ ಆಡ್ತಾ ಕುಣೀತಾ ಕಲೀಬೇಕಾದ್ದರಿಂದ ಯಾವ ಕಲಿಕೆಯೂ ಸ್ಥಿರಗೊಳ್ಳುತಿಲ್ಲ. ಅಂದು ತಾವು ಓದಿದ ಪಾಠ-ಪದ್ಯಗಳನ್ನು ಇಂದಿನ ಅಜ್ಜಂದಿರು ಬಾಯಿ ಚಪ್ಪರಿಸುತ್ತ ನೆನಪಿಸಿಕೊಂಡರೆ; ಇಂದಿನ ಮಕ್ಕಳು ತಮ್ಮ ಹಿಂದಿನ ತರಗತಿಯ ಪಾಠದ ಬಗ್ಗೆ ಕೇಳಿದರೂ ತಲೆಕೆರೆಯುತ್ತ ನಿಲ್ಲುತ್ತಿವೆ. ಮುಂದೆ ಮುಂದೆ ಪಾಠ; ಹಿಂದಿನಿಂದ ಸಪಾಟ ಅನ್ನುವಂತಾಗಿದೆ.

ಶೈಕ್ಷಣಿಕ ಮನೋವಿಜ್ಞಾನದಲ್ಲಿ ಎರಡು ವಿಧದ ಪುನರ್ಬಲನಗಳ ಪ್ರಸ್ತಾಪವಿದೆ. ಹೊಗಳಿಕೆ, ಬಹುಮಾನಗಳ ಧನಾತ್ಮಕ ಪುನರ್ಬಲನ; ತೆಗಳಿಕೆ, ದಂಡನೆಗಳ ಋಣಾತ್ಮಕ ಪುನರ್ಬಲನ. ಬೋಧನೆಯಲ್ಲಿ ಎರಡಕ್ಕೂ ಅದರದ್ದೇ ಆದ ಮಹತ್ವವಿದೆ.
 
ಈಗ ದಂಡನೆ, ಶಿಕ್ಷೆ ಬಿಡಿ ಅವಮಾನಿಸಲೂ ಅವಕಾಶವಿಲ್ಲವಾಗಿ ಶಿಕ್ಷಕರೇ ಪರ್ಯಾಯವಾದ ಋಣಾತ್ಮಕ ಪುನರ್ಬಲನ ಮಾರ್ಗಗಳ ಬಗ್ಗೆ ಯೋಚಿಸಬೇಕಾಗಿದೆ. ಬರೀ ಹೊಗಳಿಕೆ, ಪ್ರೀತಿ, ವಿಶ್ವಾಸದ ನಡೆಗಳಿಂದ ಪಾಲಕರ ನಿರೀಕ್ಷೆ ಮತ್ತು ಮಗುವಿನ ಅಹಂಭಾವಗಳನ್ನು ಸಮತೋಲಿತವಾಗಿ ನಿರ್ವಹಿಸುವುದು, ಬೋಧನೆಯ ಪರಿಣಾಮವನ್ನು ಉದ್ದೇಶಿತ ಎತ್ತರದಲ್ಲಿ ಸಾಧಿಸುವುದು ಕಷ್ಟವಾಗುತ್ತದೆ.

ತರಗತಿ ಅರಾಜಕವಾಗುವ ಮೊದಲೇ ಈ ಕಾಲಕ್ಕೆ ಹೊಂದುವ ನಿಯಂತ್ರಣ ಮಾರ್ಗಗಳನ್ನು ಶಿಕ್ಷಣ ತಜ್ಞರು, ಶಿಕ್ಷಕರು ಆಲೋಚಿಸಬೇಕಾಗಿದೆ. ಶಿಕ್ಷೆ-ಅವಮಾನದ ಸಾಂಪ್ರದಾಯಿಕ ಬೋಧನಾಪದ್ಧತಿ ಅಭ್ಯಾಸವಾದ ಮನಸ್ಸಿಗೆ, ಈ ಪ್ರೀತಿಯ ಹೊಸ ಬೋಧನಾಪದ್ಧತಿ ರೂಢಿಯಾಗಲು ತುಸು ಕಾಲ ಹಿಡಿಯುತ್ತದೆ.

ಅಸಮಾಧಾನ, ಅಸಹನೆ, ಸಂಘರ್ಷಗಳಿಲ್ಲದೆ ಯಾವ ಬದಲಾವಣೆಯೂ ರಾತ್ರೋರಾತ್ರಿ ತನ್ನಂತಾನೇ ಸಂಭವಿಸುವುದಿಲ್ಲ ಮತ್ತು ಹುಡುಕದೆ ಹೊಸ ಮಾರ್ಗ ಸಿಕ್ಕವುದಿಲ್ಲವೆಂಬ ಸತ್ಯವನ್ನು ನಾವು ತಿಳಿಯಬೇಕಾಗಿದೆ.

-ಲೇಖಕರು, ಶಿಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT