ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಣ್ಣದ ಹಾಲು; ಕರುಗಳಿಗೆ ಸಂಜೀವಿನಿ

Last Updated 20 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಇಂದಿನ ಕರು ನಾಳಿನ ಹಸು. ಕರು ಆರೋಗ್ಯವಂತ ಹಸುವಾಗಿ ಬೆಳೆಯಲು ಗಿಣ್ಣದ ಹಾಲು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಗಿಣ್ಣದ ಹಾಲು ಕರು ಹುಟ್ಟುವ ಮೊದಲೇ ಹಸುವಿನ ಕೆಚ್ಚಲಲ್ಲಿ ಶೇಖರಣೆಯಾಗಿರುತ್ತದೆ.   ಆಗತಾನೇ ಹುಟ್ಟಿದ ಕರುವಿನ ಪಾಲಿಗೆ ಗಿಣ್ಣದ ಹಾಲು ನಿಸರ್ಗದತ್ತ ಸಂಜೀವಿನಿ.

ಗಿಣ್ಣು ಹಾಲು ಯಥೇಚ್ಚವಾಗಿ ಕುಡಿದ ಕರುಗಳು ಆರೋಗ್ಯವಾಗಿ ಮತ್ತು ಸಮೃದ್ಧವಾಗಿ ಬೆಳೆಯುತ್ತವೆ. ಹೆಚ್ಚಿನ ತೂಕ ಕೂಡ ಪಡೆಯುತ್ತವೆ. ಇಂತಹ ಕರುಗಳು ಮುಂದೆ ಬೇಗ ಬೆದೆಗೆ ಬರುತ್ತವೆ. ಬೇಗ ಗರ್ಭ ಕಟ್ಟುತ್ತವೆ. ಕರು ಹಾಕಿದ ನಂತರ ಅವು ಹೆಚ್ಚು ಹಾಲು ಕೊಡುತ್ತವೆ.

ಹಸು ಕರು ಹಾಕಿದ ನಂತರ ಕಸ ಅಥವಾ ಮಾಸ ಹಾಕುವುದನ್ನು ಕಾಯದೆ ಕರು ಜನಿಸಿದ 30 ನಿಮಿಷದೊಳಗೆ ಗಿಣ್ಣದ ಹಾಲನ್ನು ಅದಕ್ಕೆ ಕುಡಿಸಬೇಕು. ಹಾಲನ್ನು ಕರುಗಳಿಗೆ ಕುಡಿಸುವ ಮೊದಲು, ಸ್ವಲ್ಪ ಬೆಚ್ಚನೆಯ ನೀರಿನಲ್ಲಿ  ಹಸುವಿನ  ಕೆಚ್ಚಲನ್ನು ಸ್ವಚ್ಚಗೊಳಿಸಿ, ಮೊದಲ ಒಂದೆರಡು ಹನಿ ಹಾಲನ್ನು ಕರೆದು ಚೆಲ್ಲಿ ನಂತರ ಕರುವಿಗೆ ಕುಡಿಯಲು ಬಿಡಬೇಕು.

ಕರು ಹಾಕಿದ ತಕ್ಷಣ ಹಾಲು ಕುಡಿಸುವುದರಿಂದ ಹಸು ಬೇಗ ಮಾಸನ್ನು ದೇಹದಿಂದ ಹೊರಹಾಕುತ್ತದೆ. ಗಿಣ್ಣದ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ನೀಡುವ ಇಮ್ಯೂನೋಗ್ಲೋಬಿನ್ಸ್ ಹಾಗೂ ಹೆಚ್ಚಿನ ಪೌಷ್ಟಿಕಾಂಶಗಳಿವೆ. ಮೂರು ದಿನಗಳ ನಂತರ ಬರುವ ಹಾಲಿನಲ್ಲಿ ಅವುಗಳ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.

ನವಜಾತ ಕರುಗಳ ಕರುಳಿನ ಲೋಳೆ ಪದರದಲ್ಲಿ ಚಿಕ್ಕ,ಚಿಕ್ಕ ರಂಧ್ರಗಳಿದ್ದು ಅವುಗಳ ಮೂಲಕ ಗಿಣ್ಣದ ಹಾಲಿನಲ್ಲಿ ಯಥೇಚ್ಛವಾಗಿರುವ ಇಮ್ಯೂನೋಗ್ಲೋಬಿನ್ಸ್  ಮತ್ತು ಇತರ ಪೌಷ್ಟಿಕಾಂಶಗಳು ನೇರವಾಗಿ ರಕ್ತಕ್ಕೆ ಸೇರುತ್ತವೆ. ಈ ರಂಧ್ರಗಳು ಹುಟ್ಟಿದ ಮೊದಲ 12 ಗಂಟೆಗಳ ಕಾಲ ಮಾತ್ರ ತೆರೆದಿದ್ದು ನಂತರ ಮುಚ್ಚಿ ಹೋಗುತ್ತವೆ. ಕರು ಹುಟ್ಟಿದ ಅರ್ಧ ಗಂಟೆಯಿಂದ ಹನ್ನೆರಡು ಗಂಟೆ ಅವಧಿಯಲ್ಲಿ ಸಾಕಷ್ಟು ಗಿಣ್ಣದ ಹಾಲು ಕುಡಿಸುವುದು ತುಂಬ ಮುಖ್ಯ.

ಗಿಣ್ಣದ ಹಾಲು, ಕರುಗಳಿಗೆ ರೋಗ ನಿರೋಧಕ ಶಕ್ತಿಯನ್ನು ಕೊಡುವುದರ ಜೊತೆಗೆ ಕಬ್ಬಿಣಾಂಶ ಮತ್ತು ಲ್ಯಾಕ್ಟೋಸನ್ನು ಹೊಂದಿದೆ. ಆಗ ತಾನೆ ಹುಟ್ಟಿದ ಕರುಗಳಿಗೆ ಶಕ್ತಿ ಒದಗಿಸಿ ದೇಹದ ಉಷ್ಣತೆಯನ್ನು ಕಾಪಾಡುತ್ತವೆ. ಹಾಗೇ ಹೇರಳವಾಗಿ ಲಭ್ಯವಾಗಿರುವ ವಿಟಮಿನ್ ಮತ್ತು ಖನಿಜಾಂಶಗಳು ಪಚನ ಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಜೀರ್ಣಾಂಗಗಳ ಬೆಳವಣಿಗೆಗೆ ಸಹಾಯಮಾಡುತ್ತವೆ. ಇದಲ್ಲದೆ ಕರುಗಳು ಹಾಕುವ ಮೊದಲ ಸಗಣಿಯನ್ನು ಮೃದುವಾಗಿ ಮಾಡಿ, ಅದು ಸರಾಗವಾಗಿ ಹೊರಬರಲು ಸಹಾಯ ಮಾಡುತ್ತದೆ.

ಎಮ್ಮೆಗಳಲ್ಲಿ ಮತ್ತು ನಾಟಿ ಹಸುಗಳಲ್ಲಿ ಗಿಣ್ಣದ ಹಾಲಿನ ಪ್ರಮಾಣ ಕಡಿಮೆ ಇರುವುದರಿಂದ ಕರುಗಳಿಗೆ ಮೊದಲ ಮೂರು ದಿನ ಗಿಣ್ಣದ ಹಾಲನ್ನು ಕುಡಿಯಲು ಬಿಡಬೇಕು. ಮಿಶ್ರತಳಿ ರಾಸುಗಳಲ್ಲಿ ಮೊದಲು ಕರು ಕುಡಿಯಲು ಬಿಟ್ಟು ನಂತರ ಹಾಲು ಕರೆಯುವುದು ಉತ್ತಮ. ಹಾಗೇ ಕರು ಕುಡಿದ ನಂತರ ಕರೆದ ಹಾಲನ್ನು   ಉಪಯೋಗಿಸಬಹುದು.

ಕರು ಹುಟ್ಟಿದ 30 ನಿಮಿಷದಿಂದ ಒಂದು ಗಂಟೆಯೊಳಗೆ ಸುಮಾರು 1 ರಿಂದ 2 ಲೀಟರ್ ಗಿಣ್ಣದ ಹಾಲು ಕುಡಿಸಬೇಕು, ನಂತರ 6 ರಿಂದ 12 ಗಂಟೆಯೊಳಗೆ ಮತ್ತೆ 1 ರಿಂದ 2 ಲೀಟರ್ ಹಾಲು ಕುಡಿಸುವುದು ಉತ್ತಮ.   ಗಂಡು, ಹೆಣ್ಣು ಕರುಗಳೆಂಬ ಬೇಧ ಮಾಡದೆ ಗಿಣ್ಣದ ಹಾಲು ಕುಡಿಸಬೇಕು. ಮೂರು ದಿನಗಳ ನಂತರ  ಕರುವಿನ ತೂಕದ ಹತ್ತನೆ 1/10 ಭಾಗದಷ್ಟು ಹಾಲನ್ನು ಕುಡಿಸಬೇಕು.

ಕರುಗಳು ಸ್ವತಃ ತಾವೇ ನಿಂತು ಹಾಲು ಕುಡಿಯಲು ಸಾಧ್ಯವಾಗದಿದ್ದರೆ ಅಂತಹ ಸಮಯದಲ್ಲಿ ಕರು ಎದ್ದು ನಿಲ್ಲಲು ಸಹಾಯ ಮಾಡಬೇಕು. ನಂತರ ಮೊಲೆ ತೊಟ್ಟನ್ನು ಕರುವಿನ ಬಾಯಿಯೊಳಗೆ ಇಟ್ಟು ಹಾಲು ಕುಡಿಯಲು ಸಹಾಯಮಾಡಬೇಕು. ಕೆಲವು ಕರುಗಳು ಬೆಳವಣಿಗೆ ತುಂಬಾ ಕಡಿಮೆ ಇದ್ದು ಎದ್ದು ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿ   ಗಿಣ್ಣದ ಹಾಲನ್ನು ಕರೆದು ನಿಪ್ಪಲ್‌ಇರುವ ಬಾಟಲಿಗೆ ಹಾಕಿ ಕುಡಿಸಬೇಕು. ಒಂದೆರಡು ದಿನಗಳಲ್ಲಿ ಕರುಗಳು ಎದ್ದು ನಿಂತು ಹಾಲು ಕುಡಿಯುತ್ತವೆ.

ಕಡಿಮೆ ಗಿಣ್ಣದ ಹಾಲನ್ನು ಕುಡಿಯುವ ಕರುಗಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು, ಹಲವಾರು ರೋಗಗಳಿಗೆ ಎಡೆ  ಮಾಡಿಕೊಡುತ್ತದೆ. ಇಂತಹ ಕರುಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ತಡವಾಗಿ ಬೆದೆಗೆ ಬರುತ್ತವೆ. ನಿಧಾನವಾಗಿ ಗರ್ಭಕಟ್ಟುತ್ತವೆ.

 ರೈತ ಬಾಂಧವರು ಮೇಲ್ಕಂಡ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು, ಗಿಣ್ಣದ ಹಾಲನ್ನು ಕರುಗಳು ಹೆಚ್ಚಾಗಿ ಕುಡಿಯುವಂತೆ ನೋಡಿಕೊಳ್ಳಬೇಕು. ಗಿಣ್ಣದ ಹಾಲು ಕರುಗಳಿಗೆ ಒಳ್ಳೆಯದಲ್ಲ ಎಂಬ ನಂಬಿಕೆ ಕೆಲವರಲ್ಲಿದೆ. ಅದು ಸುಳ್ಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT