ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಲಾನಿ ಪಟ್ಟಕ್ಕೆ ಕುತ್ತು

Last Updated 19 ಜೂನ್ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ):  ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವುದರಿಂದ ಯುಸೂಫ್ ರಜಾ ಗಿಲಾನಿ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್, ಪ್ರಧಾನಿ ಹುದ್ದೆಗೆ ಬೇರೆಯವರನ್ನು ನೇಮಿಸಲು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರಿಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ನೀಡಿರುವ ಈ ತೀರ್ಪಿನಿಂದ ಪಾಕಿಸ್ತಾನದಲ್ಲಿ ಹೊಸ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಆಘಾತಗೊಂಡಿರುವ ಗಿಲಾನಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸರಣಿ ಸಭೆಗಳನ್ನು ನಡೆಸಿದೆ. ಜಾಗತಿಕ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಧವಾರ ರಷ್ಯಾಕ್ಕೆ ತೆರಳಬೇಕಿದ್ದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪ್ರವಾಸ ರದ್ದುಗೊಳಿಸಿದ್ದಾರೆ.

`ಗಿಲಾನಿ ತಪ್ಪಿತಸ್ಥರೆಂದು ಏಪ್ರಿಲ್ 26ರಂದು ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲವಾದ್ದರಿಂದ, ಗಿಲಾನಿ ಅಪರಾಧಿ ಎಂಬ ತೀರ್ಪು ಅಂತಿಮವಾಗಿದೆ. ಆದ್ದರಿಂದ ಗಿಲಾನಿ ಅವರ ಸಂಸತ್ ಸದಸ್ಯತ್ವ ಅನರ್ಹಗೊಂಡಿದೆ. ಏ.26ರಂದು  30 ಸೆಕೆಂಡುಗಳ ಕಾಲ ಕಟಕಟೆಯಲ್ಲಿ ನಿಲ್ಲಿಸಿ ಅವರಿಗೆ ಸಾಂಕೇತಿಕ ಶಿಕ್ಷೆ ನೀಡಿದ ದಿನದಿಂದಲೇ  ಈ ಅನರ್ಹತೆ ಅನ್ವಯವಾಗುತ್ತದೆ. ಹೀಗಾಗಿ ಅಂದಿ ನಿಂದಲೇ ಪ್ರಧಾನಿ ಹುದ್ದೆ ತೆರವಾಗಿದೆ~ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೀಗಾಗಿ ಏ.26ರ ನಂತರ ಪಾಕಿಸ್ತಾನದ ಸಂಪುಟ ಅಥವಾ ಪ್ರಧಾನಿಯಾಗಿದ್ದ ಗಿಲಾನಿ ಅವರು ತೆಗೆದುಕೊಂಡ ನಿರ್ಧಾರಗಳು ಸಿಂಧುವಾಗುತ್ತವೆಯೇ ಎಂಬ ಜಟಿಲ ಪ್ರಶ್ನೆ ಕೂಡ ಈಗ ಉದ್ಭವವಾಗಿದೆ.

ಗಿಲಾನಿ ಅವರ ಸಂಸತ್ ಸದಸ್ಯತ್ವ ರದ್ದಾಗಿರುವ ಬಗ್ಗೆ ಅಧಿಸೂಚನೆ ಹೊರಡಿಸಬೇಕು ಎಂದು ನ್ಯಾಯಪೀಠವು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಗಿಲಾನಿ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿರುವುದರಿಂದ ಅಧ್ಯಕ್ಷ ಜರ್ದಾರಿ ಅವರು ಸಂವಿಧಾನದ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.

ಶಿಕ್ಷೆಗೆ ಒಳಗಾದ ವ್ಯಕ್ತಿಯೊಬ್ಬ ಪ್ರಧಾನಿಯಾಗಿ ರಾಷ್ಟ್ರವನ್ನು ಮುನ್ನಡೆಸಲು ಹಾಗೂ ರಾಷ್ಟ್ರದ 18 ಕೋಟಿ ಜನರನ್ನು ಪ್ರತಿನಿಧಿಸಲು ಅರ್ಹರಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠ ನೀಡಿದ ತೀರ್ಪನ್ನು ಸ್ಪೀಕರ್ ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಕೂಡ ಇಫ್ತಿಕಾರ್ ಚೌಧರಿ ಚಾಟಿ ಬೀಸಿದರು.

ಹಿನ್ನೆಲೆ: ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಪ್ ತಮ್ಮ ಅಧಿಕಾರಾವಧಿಯಲ್ಲಿ ನೀಡಿದ್ದ ಸಾರ್ವತ್ರಿಕ ಕ್ಷಮಾದಾನದಿಂದ ಭ್ರಷ್ಟಾಚಾರ ಆರೋಪಗಳಿಗೆ ಸಿಲುಕಿದ್ದ ಜರ್ದಾರಿ ಹಾಗೂ ಇತರ 8000 ಜನರಿಗೆ ಲಾಭವಾಗಿತ್ತು. ಇದನ್ನು ಸುಪ್ರೀಂಕೋರ್ಟ್ 2009ರ    ಡಿಸೆಂಬರ್‌ನಲ್ಲಿ ಅನೂರ್ಜಿತಗೊಳಿಸಿತ್ತು. ಆಗಿನಿಂದ ರಾಷ್ಟ್ರದಲ್ಲಿ ನ್ಯಾಯಾಂಗ ಹಾಗೂ ಶಾಸಕಾಂಗದ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ.

ಅಧ್ಯಕ್ಷ ಜರ್ದಾರಿ ಅವರ ವಿರುದ್ಧದ ದಶಲಕ್ಷ ಡಾಲರ್ ಭ್ರಷ್ಟಾಚಾರ ಹಗರಣಗಳ ಮರುತನಿಖೆಗಾಗಿ ಸ್ವಿಟ್ಜರ್‌ಲೆಂಡ್ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬೇಕೆಂದು ಕೋರ್ಟ್ ಸೂಚಿಸಿತ್ತು. ಆದರೆ ಪ್ರಧಾನಿ ಗಿಲಾನಿ ಅವರು ಇದಕ್ಕೆ ನಿರಾಕರಿಸಿದ್ದರು. ಪಾಕಿಸ್ತಾನ ಮಾತ್ರವಲ್ಲ, ವಿದೇಶಗಳಲ್ಲಿ ಕೂಡ ಅಧ್ಯಕ್ಷರಾದವರಿಗೆ ನ್ಯಾಯಾಲಯದ ವಿಚಾರಣೆಯಿಂದ ರಕ್ಷಣೆ ಇದೆ ಎಂಬುದು ಸರ್ಕಾರದ ವಾದವಾಗಿತ್ತು.

ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಗಿಲಾನಿ ಅವರು ನ್ಯಾಯಾಂಗ ಆದೇಶ ಉಲ್ಲಂಘಿಸಿದ್ದಾರೆ ಎಂದು ಎರಡು ತಿಂಗಳ ಹಿಂದೆ ತೀರ್ಪು ನೀಡಿತ್ತು. ಈ ತಪ್ಪಿಗಾಗಿ ಏ.26ರಂದು ಸುಮಾರು 30 ಸೆಕೆಂಡುಗಳ ಕಾಲ ಕಟಕಟೆಯಲ್ಲಿ ನಿಲ್ಲಿಸಿ ಸಾಂಕೇತಿಕ ಶಿಕ್ಷೆ ವಿಧಿಸಿತ್ತು. ಅಲ್ಲದೇ, ಪ್ರಧಾನಿ ತಪ್ಪಿತಸ್ಥ ಎಂಬ ತೀರ್ಪು, ಅನರ್ಹತೆಗೆ ದಾರಿ ಮಾಡಿಕೊಡಬಹುದು ಎಂದೂ ಕೋರ್ಟ್ ಹೇಳಿತ್ತು. ಆದರೂ ಗಿಲಾನಿ ರಾಜೀನಾಮೆ ನೀಡಲು ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT