ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತೆ-ಗಾಂಧಿ-ಅಂಬೇಡ್ಕರ್

Last Updated 4 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ|
ಶುನಿ ಚೈವ ಶ್ವಪಾಕೇ ಚ ಪಂಡಿತಾ ಸ್ಸಮದರ್ಶಿನ||  
(ಭಗವದ್ಗೀತೆ)
ನಮ್ರರಾದ ಜ್ಞಾನಿಗಳು, ನಿಜವಾದ ಜ್ಞಾನವನ್ನು ಪಡೆದವರಾದುದರಿಂದ ವಿದ್ಯಾ ವಿನಯ ಸಂಪನ್ನನಾದ ಬ್ರಾಹ್ಮಣನನ್ನೂ, ಹಸುವನ್ನೂ, ಆನೆಯನ್ನೂ, ನಾಯಿಯನ್ನೂ, ನಾಯಿಯ ಮಾಂಸ ತಿನ್ನುವವನನ್ನೂ (ಅಂತ್ಯಜನನ್ನೂ) ಒಂದೇ ರೀತಿ ಕಾಣುತ್ತಾರೆ.

ಭಗವದ್ಗೀತೆಯ ಶ್ಲೋಕವಿದು. ಆದರೆ ಸದಾ ಗೀತೆಯನ್ನು ಪೂಜಿಸುವ, ಆರಾಧಿಸುವ, ಗೌರವಿಸುವ ಈ ಸಮಾಜದಲ್ಲಿ ಆ ನಮ್ರರಾದ ಜ್ಞಾನಿಗಳು ಮಾತ್ರ ಕಾಣುತ್ತಿಲ್ಲ. ವೇದಾಂತಗಳು ಓದಲು ಚೆನ್ನಾಗಿರುತ್ತವೆ. ಆದರೆ ಅನುಷ್ಠಾನದಲ್ಲಿ ಮಾತ್ರ ಅವು ದಿಗಂತವಾಗಿರುತ್ತವೆ.

ದೇಶದಲ್ಲಿ ಮೂರು ವಿಷಯಗಳು ಸದಾ ಚರ್ಚೆಗೆ ಒಳಪಡುತ್ತಲೇ ಇರುತ್ತವೆ. ಅವೇ  ಗೀತೆಯ ಪ್ರಸ್ತುತತೆ, ಗಾಂಧಿವಾದ ಮತ್ತು ಅಂಬೇಡ್ಕರ್‌ ವಾದ. ಇದರಲ್ಲಿ ಗಾಂಧಿ ಗೀತೆಗೆ ಹತ್ತಿರವಾಗಿದ್ದರೆ, ಅಂಬೇಡ್ಕರ್ ಮೈಲಿಗಳ ದೂರದಲ್ಲಿ ನಿಲ್ಲುತ್ತಾರೆ. ಗೀತೆ ಏಕಕಾಲಕ್ಕೆ ಎರಡು ಬಗೆಯಲ್ಲಿ ಕಣ್ಣ ಎದುರಿಗೆ ನಿಲ್ಲುತ್ತದೆ. ಅದು ಭಾರತದಲ್ಲಿ ಬಹುಚರ್ಚಿತವಾಗುವುದರ ಜೊತೆಗೆ, ಅದನ್ನು ಸುಡಬೇಕು ಎಂಬ ಕಾಲಘಟ್ಟದಲ್ಲೇ ಅದು ಮಂಗಳಯಾನ ಮಾಡಿದ (ಸುನೀತಾ ವಿಲಿಯಮ್ಸ್ ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದರು) ಮೊದಲ ಧಾರ್ಮಿಕ ಗ್ರಂಥವಾಗಿ ಗಮನ ಸೆಳೆಯುತ್ತದೆ.

ಅಮೆರಿಕದ ಸೆನೆಟರ್ ತುಳಸಿ ಗಬ್ಬಾರ್ಡ್ ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸುತ್ತಾರೆ. ಅಲ್ಲಿಗೆ ಗೀತೆ ಏಕಕಾಲಕ್ಕೆ ವಿಮರ್ಶೆಗೂ, ಪ್ರಶಂಸೆಗೂ ಒಳಪಡುತ್ತದೆ. ಯಾವುದು ವಿಮರ್ಶೆಗೆ ಹೆಚ್ಚು ಹೆಚ್ಚು ಒಳಪಡುತ್ತದೋ ಅದು ಜೀವಂತವಾಗಿರುವುದಕ್ಕೆ ಸಾಕ್ಷಿ. ಅಲ್ಲಿಗೆ ಗೀತೆಗೆ ಜೀವಂತಿಕೆ ಇದೆ! ಹಾಗೇ ಗಾಂಧಿವಾದ, ಅಂಬೇಡ್ಕರ್‌ ವಾದಗಳು ಜೀವಂತವಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಅವು ನಿರಂತರ ವಿಮರ್ಶೆಗೆ ಒಳಪಡುತ್ತಿರುವುದು.

ಗಾಂಧಿ- ಅಂಬೇಡ್ಕರ್ ಒಂದೇ (ದೀನ ದಲಿತರ) ವಿಚಾರವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಕಂಡವರು. ಇಬ್ಬರನ್ನೂ ಪ್ರೀತಿಸುವವರೂ ಇದ್ದಾರೆ, ಟೀಕಿಸುವವರೂ ಇದ್ದಾರೆ. ಪ್ರೀತಿ, ಟೀಕೆ ಎರಡೂ ಇದ್ದರೆ ಮಾತ್ರವೇ ವಾದಕ್ಕೆ ಮೌಲ್ಯ ದಕ್ಕುವುದು. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಗಾಂಧೀಜಿ ಬಗ್ಗೆ ನಿರ್ಭಯವಾಗಿ ಬರೆಯುವ ವಾತಾವರಣವಿದೆ, ಆದರೆ ಇದೇ ವಾತಾವರಣ ಅಂಬೇಡ್ಕರ್ ವಿಷಯದಲ್ಲಿ ಇದೆ ಎಂದು ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.

ಯಾಕೆಂದರೆ ಗಾಂಧೀಜಿ  ಜಾತಿಯ ಸಂಕೋಲೆಯಲ್ಲಿ ಬಂದಿಯಾಗಿಲ್ಲ. ಗಾಂಧಿವಾದದ ವಾರಸುದಾರಿಕೆ ಯಾವುದೋ ಒಂದು ವರ್ಗ, ಜಾತಿ, ಧರ್ಮದವರ ಕೈಯಲ್ಲಿಲ್ಲ. ಹೀಗಾಗಿ ಗಾಂಧಿ, ಗಾಂಧಿವಾದ ದೇಶ, ಕಾಲಗಳ ಆಚೆಗೂ ವಿಸ್ತರಿಸಿ ನಿಂತಿದೆ. ಗಾಂಧಿ ‘ಮುನ್ನಾಭಾಯಿ ಎಂಬಿಬಿಎಸ್‌’ಗೂ ಸಿಗುತ್ತಾನೆ, ಸಾರ್ವಜನಿಕವಾಗಿ ಮೆಚ್ಚುಗೆಗೂ ಟೀಕೆಗೂ ಮುಕ್ತವಾಗಿ ಒಳಪಡುತ್ತಾನೆ. ಗಾಂಧಿವಾದದ ವಿಸ್ತರಣೆಯಲ್ಲಿ ಈ ಸಹಿಷ್ಣುತೆ  ಪ್ರಮುಖ ಪಾತ್ರ ವಹಿಸುತ್ತದೆ.

ಅದೇ ಅಂಬೇಡ್ಕರ್‌ ವಾದಕ್ಕೆ ಬಂದಾಗ ಅದು ಕೇವಲ ಒಂದು ವರ್ಗದವರ ಕೈಯಲ್ಲಿ ಬಂದಿಯಾಗಿದೆ ಮತ್ತು ಅವರಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಹೌದು, ಅಂಬೇಡ್ಕರ್ ಅವರು ಬದುಕಿನ ಕೊನೇ ಕ್ಷಣದವರೆಗೂ ಅಸಮಾನತೆಯ ವಿರುದ್ಧ ಹೋರಾಡಿ ಹೋರಾಡಿ ಅವರೂ ದಲಿತರಾಗಿಯೇ ವಿಧಿವಶರಾದರು.

ವಿಪರ್ಯಾಸವೆಂದರೆ ಅಂಬೇಡ್ಕರ್‌ ವಾದ ಕೂಡ ದಲಿತೀಕರಣವಾಗುತ್ತಿದೆ ಹೊರತು ಮುಕ್ತ ಸಾಮಾಜಿಕ ಚಿಂತನೆಯಾಗಿ ಸಮಾಜದ ಮಧ್ಯೆ ಸ್ಥಾನ ಪಡೆಯುತ್ತಿಲ್ಲ. ಅಂಬೇಡ್ಕರ್ ಜೀವಂತವಾಗಿದ್ದಾಗ ತಮ್ಮ ಚಿಂತನೆ ಮತ್ತು ವಾದಕ್ಕೆ ಅವರು ಮುಕ್ತರಾಗಿದ್ದರು. ಆದರೆ ಅವರ ಕಾಲಾನಂತರ ಅಂಬೇಡ್ಕರ್‌ ವಾದವು ಅಂಬೇಡ್ಕರ್‌ ವಾದಿಗಳ ಕೈಯಲ್ಲಿ ಸಿಕ್ಕಿ ಅವರ ಸಾಮಾಜಿಕ, ನವ ಸಮಾಜ ನಿರ್ಮಾಣದ ಆಶಯ ಇವೆಲ್ಲ ದಲಿತೀಕರಣವಾಗಿ ಹೋಗಿವೆ.

ಗಾಂಧಿವಾದಕ್ಕೆ ಸಿಕ್ಕ ವಿಶ್ವಮಾನ್ಯತೆ ಯಾಕೆ ಅಂಬೇಡ್ಕರ್‌ ವಾದಕ್ಕೆ ಸಿಗುತ್ತಿಲ್ಲ? ಉತ್ತರ, ಗಾಂಧಿ ಎಂಬ ಪಾತ್ರಧಾರಿ ಸಮಾಜದ ಮುಂದೆ ಮುಕ್ತರೂಪದಲ್ಲಿ ನಿಂತಿದ್ದಾನೆ, ಅವನನ್ನು ನೀವು ಹೇಗೆ ಬೇಕಾದರೂ ಸ್ವೀಕರಿಸಬಹುದು. ಆದರೆ ಅಂಬೇಡ್ಕರ್ ಪಾತ್ರಕ್ಕೆ ‘ದಲಿತ’ ಎಂಬ ಮೂರು ಅಕ್ಷರಗಳನ್ನು ಜೋಡಿಸಿ ನಿಲ್ಲಿಸಲಾಗಿದೆ. ಹೀಗಾಗಿ ಅಂಬೇಡ್ಕರ್‌ ವಾದವೆಂದರೆ ಅದು ದಲಿತರಿಗೆ ಮಾತ್ರ ಎಂಬಂತಾಗಿದೆ. ಅಂಬೇಡ್ಕರ್ ಹೆಸರಿನ ದುರ್ಬಳಕೆ  ಕೂಡ ನಡೆಯುತ್ತಿದೆ.

ನನ್ನ ಗೆಳೆಯನೊಬ್ಬ ನಮ್ಮ ಮತ್ತೊಬ್ಬ ದಲಿತ ಗೆಳೆಯ ‘ಕೆಲಸ ಬಿಟ್ಟು ಬೇರೆ ಏನಾದರೂ ಮಾಡಬೇಕು’ ಅಂದ ತಕ್ಷಣ ‘ನಿಮ್ಗೇನೋ ಫುಟ್‌ಪಾತ್ ಮೇಲೊಂದು ಪೆಟ್ಟಿಗೆ ಅಂಗಡಿ ಹಾಕಿ, ಅಂಬೇಡ್ಕರ್ ಫೋಟೊ ಹಾಕ್ಬಿಟ್ರೆ ಯಾವ ಪೋಲಿಸ್ರೂ ಮುಟ್ಟೋ ಧೈರ್ಯ  ತೋರಲ್ಲ’ ಎಂದು ಅಣಕಿಸಿದ.

ಎಷ್ಟು ಮಂದಿ ಅಂಬೇಡ್ಕರ್ ಹೆಸರು, ಫೋಟೊ  ಮುಂದಿಟ್ಟುಕೊಂಡು ಹೋರಾಟ ಮಾಡಿ ಕೊನೆಗೆ ರಾಜಕೀಯ ಪಕ್ಷಗಳ ದಾಳಗಳಾಗಿ ಪರಿವರ್ತನೆಯಾಗಿಲ್ಲ? ತಮ್ಮ ಸ್ವಾರ್ಥ, ವೈಯಕ್ತಿಕ ಹಿತಾಸಕ್ತಿಗೆ ಅಂಬೇಡ್ಕರ್ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವುದು ನಿಲ್ಲದೇ ಹೋದರೆ ಅಂಬೇಡ್ಕರ್‌ ವಾದ ಸಾಮಾಜಿಕ ಚಿಂತನಾ ರೂಪದಿಂದ ಹಿತಾಸಕ್ತಿಗಳ ರಕ್ಷಣೆಯ ಕೋಟೆಯಾಗಿ ಪರಿವರ್ತನೆಯಾಗುತ್ತದೆ.

ಕೆಲವು ದಲಿತೇತರರು ಖಾಸಗಿಯಾಗಿ ಮಾತ್ರ ಅಂಬೇಡ್ಕರ್ ಬಗ್ಗೆ ಅಸಹನೀಯವಾಗಿ ಮಾತನಾಡುತ್ತಾರೆ. ಆದರೆ ಅದೇ ಸಾರ್ವಜನಿಕವಾಗಿ ಅವರ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಹೌದು ದಲಿತ ಸೂರ್ಯ, ದಲಿತ ದೇವರು ಹೀಗೆ ಅಂಬೇಡ್ಕರ್ ಜೊತೆ ಪ್ರತಿಯೊಂದಕ್ಕೂ ದಲಿತ ಎಂಬುದನ್ನು ಸೇರಿಸಿ ಅಂಬೇಡ್ಕರ್‌ ವಾದವನ್ನು ದಲಿತನನ್ನಾಗಿಸಲಾಗಿದೆ. ವಿಶ್ವಮಾನ್ಯವಾಗಬೇಕಿದ್ದ ಅಂಬೇಡ್ಕರ್‌ ವಾದ ಕೂಡ ದಲಿತನಾಗಿದೆ. ಅದೇ ಗಾಂಧಿವಾದ ಗಡಿಗಳನ್ನು ದಾಟಿ ನಿಂತಿದೆ. ಇನ್ನು ಗೀತೆಯು ಯೋಗದಂತೆ ವಿದೇಶಗಳಲ್ಲಿ ಬಹು ದೊಡ್ಡ ಆಧ್ಯಾತ್ಮಿಕ ಸಾಧನವಾಗಿ ಬೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT