ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತೋತ್ಸವದಲ್ಲಿ ಸಮ್ಮೇಳನಾಧ್ಯಕ್ಷೆ ಡಾ.ಶ್ಯಾಮಲಾ ಭಾವೆ ಅಭಿಮತ

Last Updated 13 ಫೆಬ್ರುವರಿ 2012, 6:05 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ಕವಿಗಳು, ಸಂಗೀತಗಾರರು, ವಾದ್ಯಕಲಾವಿದರು ಸೇರಿ ಸುಗಮ ಸಂಗೀತವನ್ನು ಒಂದು ಆದರ್ಶ ಸಂಗೀತ ಪ್ರಕಾರವಾಗಿ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಉಭಯಗಾನ ವಿದುಷಿ ಡಾ.ಶ್ಯಾಮಲಾ ಜಿ. ಭಾವೆ ಕರೆ ನೀಡಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಜಿಲ್ಲಾಡಳಿತದ ವತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ 9ನೇ ಸುಗಮ ಸಂಗೀತ ಸಮ್ಮೇಳನ `ಗೀತೋತ್ಸವ-2012~ದಲ್ಲಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಸಾಂಗ್ಲಿಯಿಂದ ಬೆಂಗಳೂರಿಗೆ ಬಂದು ನೆಲೆಸಿದ ತಮ್ಮ ಬದುಕಿನ ಹಿನ್ನೆಲೆಯನ್ನು ಮೆಲುಕುಹಾಕಿದ ಅವರು, ಕನ್ನಡ ಮನೆ ಭಾಷೆಯಾಗದಿದ್ದರೂ, ಬೆಳೆದ ಪರಿಸರ, ಪರಂಪರೆಯ ಸ್ಫೂರ್ತಿ, ಪಿ. ಕಾಳಿಂಗರಾವ್, ಅಮೀರ್ ಬಾಯಿ ಕರ್ನಾಟಕಿ, ಬಾಳಪ್ಪ ಹುಕ್ಕೇರಿ ಅವರಿಂದ ಕನ್ನಡ ಸಾಹಿತ್ಯ-ಸಂಗೀತದ ಅಭಿರುಚಿ ಬೆಳೆಸಿಕೊಂಡಿದ್ದಾಗಿ ಸ್ಮರಿಸಿದರು.

ಭಾರತದ ವಿವಿಧ ರಾಜ್ಯಗಳು ಹಾಗೂ ಹೊರ ದೇಶಗಳಲ್ಲಿ ಸಂಗಿತ ಕಛೇರಿ ನಡೆಸುವ ಹೆಚ್ಚಿನ ಅವಕಾಶ ದೊರೆತರೂ, ಪ್ರತಿ ಕಛೇರಿಯಲ್ಲೂ ಕನ್ನಡದ ಒಂದು ಭಕ್ತಿಗೀತೆ, ಭಾವಗೀತೆಯನ್ನು ಕಡ್ಡಾಯವಾಗಿ ಹಾಡುವ ಪರಿಪಾಠ ಬೆಳೆಸಿಕೊಂಡ ಧೋರಣೆ ಹಾಗೂ ಅದರಿಂದ ಶಾಸ್ತ್ರೀಯ ಸಂಗೀತದ ವಲಯಗಳಲ್ಲಿ ಹಿಂಜರಿಕೆ ಕಂಡ ಬಗೆಯನ್ನು ಬಿಡಿಸಿಟ್ಟರು.

ಸಮ್ಮೇಳನ ಉದ್ಘಾಟಿಸಿದ ಹಿರಿಯ ಕವಿ ಚನ್ನವೀರ ಕಣವಿ ಮಾತನಾಡಿ, ಸುಗಮ ಸಂಗೀತ ಆಧುನಿಕ ಕನ್ನಡ ಕಾವ್ಯದ ಅವಿಭಾಜ್ಯ ಅಂಗ. ಅದು ವಾಣಿಜ್ಯ ಉದ್ದೇಶದ ಕ್ಯಾಸೆಟ್ ಸಂಸ್ಕೃತಿಗೆ ಸೀಮಿತವಾಗದೆ, ಸಾಂಸ್ಕೃತಿಕ ಜವಾಬ್ದಾರಿ ಅರಿತು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು ಎಂದು ಸಲಹೆ ನೀಡಿದರು.

ನಾಡಿನ ಸುಗಮ ಸಂಗೀತದ ಕಲಾವಿದರನ್ನು ಒಂದೇ ವೇದಿಕೆಗೆ ತರುವ ಪರಿಷತ್ ಪ್ರಯತ್ನ ಶ್ಲಾಘನೀಯ. ದಾವಣಗೆರೆಯಲ್ಲಿ ಈ ಹಿಂದೆ ಜಿ.ಎಸ್. ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪು ಈ ಸಮ್ಮೇಳನದ ಮೂಲಕ ಮರುಕಳಿಸಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಹಾಗೂ ಡಾ.ರಾಮೇಶ್ವರಪ್ಪ ಅವರ ಸ್ನೇಹ ಹಾಗೂ ನೀರು ಮಲ್ಲಿಗೆ ಬಳ್ಳಿ ಧ್ವನಿಮುದ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.

ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಸಾಹಿತಿ ಚಂದ್ರಶೇಖರ ಪಾಟೀಲ, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಸ್ವಾಗತ ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ಕೆ. ರಾಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.
 
ಅನುರಣಿಸಿದ ದಾವಣಗೆರೆ ಧ್ವನಿ, ಹೆಜ್ಜೆ-ಗೆಜ್ಜೆಯ ಸಮ್ಮಿಲನ

ದಾವಣಗೆರೆ: ಜಿಲ್ಲಾ ಉತ್ಸವದಲ್ಲಿ ಭಾನುವಾರ ಕಲಾ ಲೋಕ ಅನಾವರಣಗೊಂಡಿತು. ಸಂಜೆ ವೇಳೆಗೆ ಬಾನಂಗಳದ ಸೂರ್ಯ ಮರೆಯಾಗುತ್ತಿದ್ದಂತೆಯೇ ಹೈಸ್ಕೂಲ್ ಮೈದಾನದ ತುಂಗಭದ್ರಾ ವೇದಿಕೆಯಲ್ಲಿ ವರ್ಣರಂಜಿತ ಬೆಳಕು ಝಗ್ಗನೆ ಹರಡಿತು.

ಸಂಜೆ ವೇಳೆಗೆ ಜಿಲ್ಲೆಯ 200 ಕಲಾವಿದರಿಂದ ಸಮೂಹಗಾನ ನಡೆದರೆ, ಬಳಿಕ ನಡೆದ ಪ್ರಹ್ಲಾದ ಭಟ್, ಮಾನಸಾ, ಮೈತ್ರಿ, ಮುರುಗೇಶ್ ಬಾಬು, ಯಶಾ ದಿನೇಶ್, ವಿಜಯಲಕ್ಷ್ಮೀ ಅವರ `ದಾವಣಗೆರೆ ಧ್ವನಿ~ ಮೈದಾನದಲ್ಲಿ ಅನುರಣಿಸಿತು. ಸಾವಿರಾರು ಶ್ರೋತೃಗಳು ಮನದಣಿಯೇ ಸವಿದರು. ಭಾನುವಾರವಾದ್ದರಿಂದ ಪ್ರೇಕ್ಷಕರ ಸಂಖ್ಯೆ ಸ್ವಲ್ಪ ಹೆಚ್ಚಾಗಿಯೇ ಇತ್ತು. ಬಳಿಕ  ಬೆಂಗಳೂರಿನ ನಾಟ್ಯೇಶ್ವರ ನೃತ್ಯ ಶಾಲೆಯ ತಂಡದಿಂದ `ಗೊಂಬೆ ವೈಭವ~ ನೃತ್ಯ ಪ್ರದರ್ಶನಗೊಂಡಿತು.

ದಕ್ಷಿಣ ಭಾರತದ ಮದುವೆಯನ್ನು ರೂಪಕದಲ್ಲಿ ಪ್ರದರ್ಶಿಸಲಾಯಿತು. ಬಳಿಕ ವೈಜಯಂತಿ ಕಾಶಿ ನಿರ್ದೇಶನದ ನೃತ್ಯ ನಮನದಲ್ಲಿ ನಾಡಿನ 8 ಮಂದಿ ಜ್ಞಾನಪೀಠ ಪುರಸ್ಕೃತ ಕವಿಗಳಿಗೆ ನೃತ್ಯಗೌರವ ಸಲ್ಲಿಸಲಾಯಿತು. ಪಂಚನೃತ್ಯಗಳ (ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ, ಜಾನಪದ, ಯಕ್ಷಗಾನ) ಸಮ್ಮಿಲನದ ನೃತ್ಯ ಮನಸೂರೆಗೊಂಡಿತು. ಬಳಿಕ ಅಸ್ಸಾಂನ ಬಿಹು ನೃತ್ಯಕ್ಕೂ ಪ್ರೇಕ್ಷಕರು ತಲೆದೂಗಿದರು. ಪಂಜಾಬಿನ ತಂಡದಿಂದ ಪಂಜಾಬಿ ನೃತ್ಯ ಪ್ರದರ್ಶನಗೊಂಡಿತು.ರಾತ್ರಿ ವೇಳೆಗೆ ನಾಡಿತ ಖ್ಯಾತ ಗಾಯಕರಿಂದ ಗೀತ ಸಂಗೀತ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT