ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಜೂರು ಹನುಮನಿಗೆ ಬಣ್ಣದ ಮಜ್ಜನ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ರಾಮ ಭಂಟ ಹನುಮಂತನನ್ನು ಆರಾಧಿಸುವ ತಾಣಗಳು ಹತ್ತು ಹಲವು. ಉದ್ಯಾನನಗರಿಯಾದ ಬೆಂಗಳೂರಿನಲ್ಲಿ ರಾಗೀಗುಡ್ಡ ಆಂಜನೇಯ ಕೋಟೆ ಆಂಜನೇಯ, ಮಹಾಲಕ್ಷ್ಮೀಪುರದ ಆಂಜನೇಯ, ಗರಕಾನುಮಂತ ತಿಪ್ಪಸಂದ್ರ ಹನುಮ ಹೀಗೆ ಅದು ಆಂಜನೇಯನ ಬಾಲ ಬೆಳೆದಂತೆ ಬೆಳೆಯುತ್ತ ಹೋಗುವುದು ಖಚಿತ. ಇಂತಹ ಬಾಲಕ್ಕೆ ಇತ್ತೀಚಿನ ಸೇರ್ಪಡೆ ಗುಂಜೂರಿನ ವೀರಾಂಜನೆಯ.

ಮಾಹಿತಿ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದ ವೈಟ್‌ಫೀಲ್ಡ್‌ನಿಂದ ಸರ್ಜಾಪುರಕ್ಕೆ ಹೋಗುವ ಹಾದಿಯಲ್ಲಿ ವರ್ತೂರು ಕೆರೆಯ ಸನಿಹದಲ್ಲೇ ಇರುವ ಗುಂಜೂರು ಮಾವಿನಕೆರೆ ಅಂಚಿನಲ್ಲಿ ತಲೆಎತ್ತಿರುವ ವೀರಾಂಜನೇಯನ ಎತ್ತರ ಬರೋಬರಿ 28 ಅಡಿ.

ಸದಾ ನೀರು ತುಂಬಿಕೊಂಡ ಮಾವಿನಕೆರೆ, ಸುತ್ತಲೂ ಆವರಿಸಿದ ತೋಪುಗಳ ಸಾಲು. ಕಣ್ಣು ಹಾಯಿಸಿದ ಕಡೆಗೆಲ್ಲಾ ಹಸಿರು ತುಂಬಿದ್ದ ಈ ಪ್ರಶಾಂತ ತಾಣವನ್ನು ಈಗ ಹೆದ್ದಾರಿ ಸೀಳಿಕೊಂಡು ಸಾಗಿದೆ. ಈ ಹೆದ್ದಾರಿಯ ಅಂಚಿನಲ್ಲಿರುವ ಆಲಯ ಸಂಕೀರ್ಣದಲ್ಲಿ ಬೃಹತ್ ಹನುಮಂತನೇ ಮುಖ್ಯ ಆಕರ್ಷಣೆ.

ಶನಿದೇವ, ಅನ್ನಪೂರ್ಣ, ದಂಪತಿ ಸಮೇತ ನವಗ್ರಹ ವಿಗ್ರಹಗಳಿರುವ ಕ್ಷೇತ್ರ ವಾರವಿಡಿ ಭಕ್ತರನ್ನು ಆಕರ್ಷಿಸುತ್ತದೆ. ಪ್ರತಿ ಶನಿವಾರ ಶ್ರಿ ವೀರಾಂಜನೇಯ ಸ್ವಾಮಿ ಸೆಳೆಯುವ ಭಕ್ತರ ಸಂಖ್ಯೆ ಅಪರಿಮಿತ. ಇದಕ್ಕೊಂದು ವಿಶೇಷವೂ ಇದೆ. ಅದೇ ಪ್ರತಿವಾರ ಜರುಗುವ ಕ್ಷೀರಾಭಿಷೇಕ.

ಒಮ್ಮೆಗೆ ಕನಿಷ್ಠ 50 ಲೀಟರ್ ಹಾಲು ಅಭಿಷೇಕ ಗುಂಜೂರು ವೀರಾಂಜನೇಯನ ವಿಶೇಷ. ಹನುಮನ ಶಿರದಿಂದ ಹಾಲು ಸುರಿಯಲು ಮೆಟ್ಟಿಲುಗಳು ಇವೆಯಾದರೂ ಕೆಲಸ ಸಲೀಸಾಗಲೆಂದೂ ಶೀಘ್ರವಾಗಲೆಂದೂ ಪಂಪ್ ಅಳವಡಿಸಿದ್ದಾರೆ ಭಕ್ತ ಮಹಾಜನರು.

ಹೀಗಾಗಿ ಪ್ರತಿ ಶನಿವಾರ ವಾಯುಪುತ್ರನಿಗೆ ಕಾಯಂ ಕ್ಷೀರಾಭಿಷೇಕ. ವಿಶೇಷ ಸಂದರ್ಭಗಳಲ್ಲಿ ಚಂದನ, ಅರಿಷಿಣ, ಕುಂಕುಮದಿಂದಲೂ ಆಂಜನೇಯನಿಗೆ ಮಜ್ಜನ. ವಿವಿಧ ಬಗೆಯ ಬಣ್ಣಗಳಿಂದ ಶೋಭಿಸುವ ಹನುಮನನ್ನು ಸಜ್ಜುಗೊಳಿಸಲು ತುಳಸಿರಾಮರೆಡ್ಡಿ, ರಾಮಲಿಂಗಂ ಸೇರಿದಂತೆ ದೊಡ್ಡ ದಂಡೇ ಇಲ್ಲಿ ಹಾಜರಿರುತ್ತದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT