ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಕಿರಿಕಿರಿ ಪೊಲೀಸ್‌ ಪಿರಿಪಿರಿ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಿಶ್ವಮಟ್ಟದಲ್ಲಿ ಬೆಂಗಳೂರು ಸಿಲಿಕಾನ್‌ ವ್ಯಾಲಿ, ಉದ್ಯಾನ ನಗರಿ. ಆದರೆ, ನಗರದ ಜನರ ಮಟ್ಟಿಗೆ ಬೆಂಗಳೂರು ಹಳ್ಳಗುಂಡಿಯ ರಸ್ತೆಗಳ ವ್ಯಾಲಿ, ದೂಳು– ಹೊಗೆಯ ನಗರಿ. ನಗರದಲ್ಲಿ ಗುಂಡಿಗಳಿಲ್ಲದ ರಸ್ತೆಗಳನ್ನು ಹುಡುಕುವುದು ಸಾವಿಲ್ಲದ ಮನೆಯಲ್ಲಿ ಸಾಸಿವೆಯನ್ನು ಹುಡುಕಿದಂತೆ!

ನಗರದ ರಸ್ತೆಗಳ ಪಾಲಿಗೆ ಗುಂಡಿಗಳು ಸ್ನೇಹಿತರಿದ್ದಂತೆ. ಇಲ್ಲಿನ ರಸ್ತೆಗಳಿಗೆ ಗುಂಡಿಗಳೇ ಭೂಷಣ! ಅದು ಎಷ್ಟರ ಮಟ್ಟಿಗೆಂದರೆ ರಸ್ತೆ ಸುಸ್ಥಿತಿಯಲ್ಲಿದ್ದರೆ ಜಲಮಂಡಳಿ­ಯವರೋ, ವಿದ್ಯುತ್‌ ಇಲಾಖೆಯವರೋ ಕೊನೆಗೆ ಆಪ್ಟಿಕಲ್ ಫೈಬರ್‌ ಕೇಬಲ್‌ ಗುತ್ತಿಗೆದಾರರೋ ರಸ್ತೆಗಳನ್ನು ಅಗೆದು ಗುಂಡಿಗಳ ನಿರ್ಮಾತೃಗಳಾಗುತ್ತಾರೆ.

ನಗರದ ಬಡಾವಣೆಗಳಲ್ಲಿನ ಸಣ್ಣ ರಸ್ತೆಗಳ ಮಾತು ಒತ್ತಟ್ಟಿಗಿರಲಿ, ಪ್ರಮುಖ ರಸ್ತೆಗಳೂ ಹಾಳಾಗಿ ಗುಂಡಿ ಬಿದ್ದಿವೆ. ವಿಜಯನಗರ ಟೋಲ್‌ಗೇಟ್‌ನಿಂದ ಕೆ.ಆರ್‌.ಮಾರುಕಟ್ಟೆ­ವರೆಗಿನ ರಸ್ತೆಯಲ್ಲಿ  ದೊಡ್ಡದಾದ ನೂರಾರು ಗುಂಡಿಗಳು ಎದುರಾಗುತ್ತವೆ. ರೆಸಿಡೆನ್ಸಿ ರಸ್ತೆಯಲ್ಲಿ ಅಲ್ಲಲ್ಲಿ ರಸ್ತೆ ಹಾಳಾಗಿದೆ. ಕೆಂಗಲ್‌ ಹನುಮಂತಯ್ಯ ಜೋಡಿ ರಸ್ತೆಯಲ್ಲಿ ಇತ್ತೀಚೆಗೆ ಹಾಕಿರುವ ತೇಪೆಗಳೂ ಕಿತ್ತು ಬರುತ್ತಿವೆ.

ಗುಂಡಿ ಬೀಳುವುದು ರಸ್ತೆಗಳಲ್ಲಿ ಮಾತ್ರವಲ್ಲ. ಮೇಲ್ಸೇತುವೆಗಳಲ್ಲೂ ಗುಂಡಿಗಳ ದರ್ಶನವಾ ಗುತ್ತದೆ. ಮಿಷನ್‌ ರಸ್ತೆಯಿಂದ ರಿಚ್‌ಮಂಡ್‌ ವೃತ್ತದ ಕಡೆಗೆ ಹೋಗುವ ಮೇಲ್ಸೇ­ತು­ವೆಯಲ್ಲಿ ಹಲವು ಗುಂಡಿಗಳಿವೆ. ಹಲವು ಬಾರಿ ಮುಚ್ಚುತ್ತಿದ್ದರೂ ಮೇಲ್ಸೇತುವೆಯಲ್ಲಿ ಪದೇ ಪದೇ ಗುಂಡಿಗಳು ನಿರ್ಮಾಣವಾಗುತ್ತಿವೆ. ಕಳಪೆ ಕಾಮಗಾರಿಯಲ್ಲದೆ ಇದಕ್ಕೆ ಬೇರೆ ಕಾರಣವಿಲ್ಲ.

ಹೀಗೆ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳಲ್ಲಿ ಸಾಗುವ ಪ್ರಯಾಸಕರ ಪ್ರಯಾಣ ಒಂದೆಡೆಯಾದರೆ ರಸ್ತೆಯ ಮೂಲೆಗಳಲ್ಲಿ, ತಿರುವುಗಳಲ್ಲಿ ಕಾಣದಂತೆ ನಿಂತು, ಗಬಕ್ಕನೆ ಹಿಡಿದು ದಂಡದ ಹೆಸರಿನಲ್ಲಿ ವಸೂಲಿಗಿಳಿಯುವ ಸಂಚಾರ ಪೊಲೀಸರ ಕಾಟ ಮತ್ತೊಂದದೆಡೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸು­ವವರಿಗೆ ದಂಡ ಹಾಕಬೇಕಾದ್ದು ಸಂಚಾರ ಪೊಲೀಸರ ಕರ್ತವ್ಯ. ಆದರೆ, ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಲಿ, ದಂಡದ ಕಾರಣದಿಂದ ನಾವು ಒಂದಿಷ್ಟು ಜೇಬಿಗಿಳಿಸಿ­ಕೊಳ್ಳೋಣ ಎಂಬ ಧೋರಣೆ ಹಲವು ಸಂಚಾರ ಪೊಲೀಸ­ರದ್ದು. ಸಿಗ್ನಲ್‌ ಜಂಪ್‌, ಹೆಲ್ಮೆಟ್‌ ಇಲ್ಲದ ಚಾಲನೆ, ಸೀಟ್‌ ಬೆಲ್ಟ್‌ ಹಾಕದಿರುವುದಕ್ಕೆ ಮೊದಲೆಲ್ಲ ₨ 50 ಕೊಟ್ಟರೆ ಬಿಟ್ಟು ಬಿಡು­ತ್ತಿ­ದ್ದ ಸಂಚಾರ ಪೊಲೀಸರು ಈಗ ₨ 100ಕ್ಕೆ ಕಮ್ಮಿ ಮುಟ್ಟುವುದಿಲ್ಲ.

ಹಲವು ಬಾರಿ ನೂರು ಕೊಟ್ಟವರಿಗೆ ದಂಡದ ರಸೀದಿಯೇನೂ ಸಿಗುವುದಿಲ್ಲ. ಬದಲಿಗೆ, ‘ರಸೀದಿ ಬಿಲ್ಲು ಅಂತ ಸಾಯೇಬರ ಹತ್ರ ಹೋದ್ರೆ ಅದೂ ಇದೂ ಪೆಂಡಿಂಗ್‌ ಕೇಸೆಲ್ಲಾ ಬೀಳುತ್ತೆ, ಅದೆಲ್ಲಾ ಬೇಕಾ’ ಎಂಬ ಪುಕ್ಕಟೆ ಸಲಹೆ ಅರ್ಧ ಮಡಚಿದ ಖಾಕಿ ಟೋಪಿಯ ಶ್ವೇತವಸ್ತ್ರಧಾರಿಯಿಂದ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT